ಬುದ್ಧಿವಂತರಾಗುತ್ತಿರುವ ಯಂತ್ರಗಳೂ ಮನುಷ್ಯರ ಮಾರ್ಗದರ್ಶನದಲ್ಲೇ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ
ಬುದ್ಧಿವಂತರಾಗುತ್ತಿರುವ ಯಂತ್ರಗಳೂ ಮನುಷ್ಯರ ಮಾರ್ಗದರ್ಶನದಲ್ಲೇ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆImage by Gerd Altmann from Pixabay

ಆರ್ಟಿಫಿಶಿಯಲ್ ಅಲ್ಲ, ಇದು ಆಗ್‌ಮೆಂಟೆಡ್ ಇಂಟೆಲಿಜೆನ್ಸ್!

ಯಂತ್ರಗಳ ಶಕ್ತಿಯನ್ನು ಮನುಷ್ಯನ ಬುದ್ಧಿಶಕ್ತಿಯ ಜೊತೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವೇ?

ಈಚೆಗೆ ಎಲ್ಲೆಲ್ಲಿ ನೋಡಿದರೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ್ದೇ ಸುದ್ದಿ. ಯಂತ್ರಗಳಲ್ಲಿ ಮನುಷ್ಯನ ಬುದ್ಧಿಶಕ್ತಿಯನ್ನೂ ವಿವೇಚನೆಯನ್ನೂ ಬೆಳೆಸಲು ಪ್ರಯತ್ನಿಸುತ್ತಿರುವ ಈ ಕ್ಷೇತ್ರ ಅನೇಕ ಹೊಸ ಸಾಧ್ಯತೆಗಳನ್ನು ನಮಗೆ ಪರಿಚಯಿಸಿದೆ. ಇಮೇಲ್‌ನಲ್ಲಿ ಬರುವ ರದ್ದಿ ಸಂದೇಶಗಳನ್ನು (ಸ್ಪಾಮ್) ಪತ್ತೆಹಚ್ಚಿ ಪ್ರತ್ಯೇಕಿಸುವುದಿರಲಿ, ಆನ್‌ಲೈನ್ ಹಣಕಾಸು ವ್ಯವಹಾರಗಳಲ್ಲಿ ವಂಚನೆಯ ಸಂಭವನೀಯತೆಯನ್ನು ಗುರುತಿಸುವುದೇ ಇರಲಿ, ಹಲವು ಕ್ಷೇತ್ರಗಳಲ್ಲಿ ಎಐ ಈಗಾಗಲೇ ನಮ್ಮ ನೆರವಿಗೆ ಬರುತ್ತಿದೆ.

ಅಮೆಜಾನ್ ಸಂಸ್ಥೆಯ ಅಲೆಕ್ಸಾ, ಆಪಲ್‌ನ ಸಿರಿ, ಗೂಗಲ್ ಅಸಿಸ್ಟೆಂಟ್ ಮುಂತಾದ ಸವಲತ್ತುಗಳು ಧ್ವನಿಯನ್ನು ಗುರುತಿಸುವ ಮೂಲಕ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವುದನ್ನು ನಾವು ಕೇಳಿದ್ದೇವೆ - ನೋಡಿದ್ದೇವೆ. ಇಂತಹ 'ಸ್ಮಾರ್ಟ್ ಸಹಾಯಕ'ರ ಕಾರ್ಯಾಚರಣೆಯೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನದೇ ಉದಾಹರಣೆ. ಬೆಳಿಗ್ಗೆ ಬೇಗ ಏಳಲು ಅಲಾರಂ ಇಡುವುದು, ನಾವು ಹೇಳಿದವರಿಗೆ ದೂರವಾಣಿ ಕರೆಮಾಡುವುದು, ಎಸ್ಸೆಮ್ಮೆಸ್ ಕಳುಹಿಸುವುದು, ಬೇಕಾದ ಹಾಡನ್ನು ಹುಡುಕಿ ಕೇಳಿಸುವುದು, ಹೊಸ ಸುದ್ದಿಗಳ ಬಗ್ಗೆ ತಿಳಿಸುವುದು ಸೇರಿದಂತೆ ಈ ಸಹಾಯಕರು ಅನೇಕ ಕೆಲಸಗಳನ್ನು ಮಾಡಬಲ್ಲವು.

ಬಳಕೆದಾರರ ಧ್ವನಿಯನ್ನು ಗುರುತಿಸಿ (ಸ್ಪೀಚ್ ರೆಕಗ್ನಿಶನ್) ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳುವುದು, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದು ಇವುಗಳ ಕಾರ್ಯಾಚರಣೆಯ ಮೂಲಮಂತ್ರ. ಇಂತಹ ಬಹಳಷ್ಟು ವ್ಯವಸ್ಥೆಗಳಲ್ಲಿ ಬಳಕೆದಾರರ ಧ್ವನಿಯನ್ನು ಗುರುತಿಸಲು - ಅರ್ಥೈಸಿಕೊಳ್ಳಲು ಬೇಕಾದ ಸಂಸ್ಕರಣಾ ಸಾಮರ್ಥ್ಯ ಅವುಗಳ ಕೇಂದ್ರೀಯ ಸರ್ವರುಗಳಲ್ಲಿರುವುದು ಸಾಮಾನ್ಯ. ನಮ್ಮ ಮನೆಗಳಲ್ಲಿರುವ ಅಮೆಜಾನ್ ಎಕೋದಂತಹ ಸಾಧನಗಳು, ಮೊಬೈಲಿನಲ್ಲಿರುವ ಗೂಗಲ್ ಅಸಿಸ್ಟೆಂಟ್‌ನಂತಹ ತಂತ್ರಾಂಶಗಳು ನಮ್ಮ ಪ್ರಶ್ನೆಗೆ ಪ್ರತಿಯಾಗಿ ನೀಡುವುದು ಇಂತಹ ಸರ್ವರುಗಳಿಂದ ಬಂದ ಉತ್ತರವನ್ನೇ. ಇದಕ್ಕಾಗಿ ಮೊದಲು ರೆಕಾರ್ಡ್ ಮಾಡಿಕೊಂಡ ನಮ್ಮ ಧ್ವನಿಯನ್ನು ಸರ್ವರ್‌ಗೆ ಕಳಿಸಬೇಕಲ್ಲ, ಇಂತಹ ಸ್ಮಾರ್ಟ್ ಸಹಾಯಕರು ಕೆಲಸಮಾಡಲು ಅಂತರಜಾಲ ಸಂಪರ್ಕ ಬೇಕೇಬೇಕು ಎನ್ನುವುದಕ್ಕೆ ಅದೇ ಕಾರಣ.

ಹೀಗೆ ಸರ್ವರುಗಳಿಗೆ ವರ್ಗಾವಣೆಯಾಗುವ ನಮ್ಮ ಮಾಹಿತಿಯ ಸುರಕ್ಷತೆ ಖಾತರಿಪಡಿಸಿಕೊಳ್ಳುವುದು ಹೇಗೆ? ಅದನ್ನು ಕಂಪ್ಯೂಟರುಗಳಷ್ಟೇ ನಿಭಾಯಿಸುವಂತಿದ್ದರೆ ಹೋಗಲಿ ಎನ್ನಬಹುದು, ಬೇರೆ ಯಾರಾದರೂ ಮನುಷ್ಯರು ಕೇಳಿಸಿಕೊಂಡರೆ? ಈಚೆಗೆ ಕೇಳಿಬಂದಿರುವ ಕೆಲ ಸುದ್ದಿಗಳು ಈ ಆತಂಕ ಅಕಾರಣವೇನಲ್ಲ ಎಂದು ದೃಢಪಡಿಸಿವೆ. ಹಲವು ಸ್ಮಾರ್ಟ್ ಸಹಾಯಕರ ಜೊತೆ ಅವುಗಳ ಬಳಕೆದಾರರು ಮಾತಾಡಿದ್ದನ್ನು ಯಂತ್ರಗಳ ಜೊತೆಗೆ ಆಯಾ ಸಂಸ್ಥೆಗಳ ಕೆಲಸಗಾರರೂ ಕೇಳಿಸಿಕೊಂಡಿದ್ದಾರೆ ಎನ್ನುವುದು ಈ ಸುದ್ದಿಗಳ ಹೂರಣ.

ಬಳಕೆದಾರರ ಖಾಸಗಿತನ ಕಾಪಾಡಿಕೊಳ್ಳುವ ನಿಟ್ಟಿನಿಂದ ನೋಡಿದರೆ ಇದೊಂದು ದೊಡ್ಡ ಸಮಸ್ಯೆ. ಮನೆಯೊಳಗೆ, ಸಹಾಯಕ ಯಂತ್ರದ ಆಸುಪಾಸಿನಲ್ಲಿ ನಾವು ಮಾತಾಡಿದ್ದನ್ನೆಲ್ಲ ಬೇರೆಯವರು ಕೇಳಿಸಿಕೊಂಡಿರಬಹುದು ಎಂಬ ಕಲ್ಪನೆಯೇ ಗಾಬರಿಹುಟ್ಟಿಸುವಂಥದ್ದು. ತಂತ್ರಜ್ಞಾನದ ಸವಲತ್ತುಗಳನ್ನು ಬಳಸುವಾಗ ನಾವು ಎಷ್ಟು ಕಾಳಜಿ ವಹಿಸಬೇಕು ಎನ್ನುವ ನಿಟ್ಟಿನಲ್ಲೂ ಇದೊಂದು ಎಚ್ಚರಿಕೆಯ ಗಂಟೆ.

ಈ ಸಂಗತಿ ಹೆಚ್ಚು ಪ್ರಚಾರ ಪಡೆದುಕೊಂಡಂತೆ ಈ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಸಂಸ್ಥೆಗಳು ಬಳಕೆದಾರರ ಖಾಸಗಿತನ ಕಾಪಾಡುವ ನಿಟ್ಟಿನಲ್ಲಿ ಕೆಲ ಕ್ರಮಗಳನ್ನು ಕೈಗೊಂಡಿವೆ. ಈ ಹಿನ್ನೆಲೆಯಲ್ಲಿ ನಮ್ಮ ಗಾಬರಿಯನ್ನು ತಾತ್ಕಾಲಿಕವಾಗಿ ಬದಿಗಿಟ್ಟು ನೋಡಿದರೂ ಇಲ್ಲಿ ಇನ್ನೊಂದು ಕುತೂಹಲಕರ ಅಂಶ ಇದೆ: ಎಐ ತಂತ್ರಜ್ಞಾನ ಮನುಷ್ಯರಿಗೆ ಸರಿಸಮನಾಗಿ ಬೆಳೆಯುತ್ತಿದೆ, ಅದು ಮುಂದೊಮ್ಮೆ ಮನುಷ್ಯರನ್ನೂ ಮೀರಿ ಬೆಳೆದರೂ ಆಶ್ಚರ್ಯವಿಲ್ಲ ಎನ್ನುವಂತಹ ಮಾತುಗಳು ಪದೇಪದೇ ಕೇಳಸಿಗುತ್ತಿರುವಾಗ ಯಂತ್ರಗಳ ಜೊತೆಗಿನ ನಮ್ಮ ಸಂವಾದದ ನಡುವೆ ಬೇರೆ ಮನುಷ್ಯರು ಏನು ಮಾಡುತ್ತಿದ್ದಾರೆ?

ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ ನಮಗೆ ಸಿಗುವುದು 'ಆಗ್‌ಮೆಂಟೆಡ್ ಇಂಟೆಲಿಜೆನ್ಸ್' ಎಂಬ ಹೊಸ ಪರಿಕಲ್ಪನೆ (ಆಗ್‌ಮೆಂಟೆಡ್ = ಅಧಿಕಗೊಳಿಸಿದ). ಬೇಸರ-ಆಯಾಸಗಳಿಲ್ಲದೆ ಯಾವುದೇ ಕೆಲಸವನ್ನು ಪದೇಪದೇ ಮಾಡಬಲ್ಲ ಯಂತ್ರಗಳ ಶಕ್ತಿಯನ್ನು ಮನುಷ್ಯನ ಬುದ್ಧಿಶಕ್ತಿಯ ಜೊತೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಇದರ ಉದ್ದೇಶ. ಎಐ ಕ್ಷೇತ್ರದಲ್ಲಿ ಯಂತ್ರಗಳದೇ ಆಧಿಪತ್ಯ ಬರಲಿದೆ ಎನ್ನುವುದು ಪೂರ್ತಿ ಸರಿಯಲ್ಲ, ಬುದ್ಧಿವಂತರಾಗುತ್ತಿರುವ ಯಂತ್ರಗಳೂ ಮನುಷ್ಯರ ಮಾರ್ಗದರ್ಶನದಲ್ಲೇ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಈ ಪರಿಕಲ್ಪನೆ ಹೇಳುತ್ತದೆ.

ಸ್ಮಾರ್ಟ್ ಸಹಾಯಕರ ಉದಾಹರಣೆಯಲ್ಲಿ ಆಗುತ್ತಿದ್ದದ್ದೂ ಇದೇ. ಬಳಕೆದಾರರ ಮಾತುಗಳನ್ನೂ ವ್ಯವಸ್ಥೆಯ ಪ್ರತಿಕ್ರಿಯೆಯನ್ನೂ ಗಮನಿಸುತ್ತಿದ್ದ ವ್ಯಕ್ತಿಗಳು ಆ ಪ್ರತಿಕ್ರಿಯೆಯನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಕೆಲಸಮಾಡುತ್ತಿದ್ದರು. ಕೈಗಾಡಿಯಿಂದ ಎತ್ತಿನ ಗಾಡಿಗೆ, ರೈಲುಬಂಡಿಗೆ, ವಿಮಾನಕ್ಕೆ ಸಂಚಾರ ವ್ಯವಸ್ಥೆ ಬೆಳೆದಂತೆಯೇ ಇಂದಿನ ಎಐ ವ್ಯವಸ್ಥೆಗಳೂ ಮುಂದೆ ಮನುಷ್ಯನಿಗೆ ಹೆಚ್ಚು ಉಪಯುಕ್ತವಾಗಿ ಬೆಳೆಯಲಿವೆ, ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡಲಿವೆ ಎಂದು ಆಗ್‌ಮೆಂಟೆಡ್ ಇಂಟೆಲಿಜೆನ್ಸ್ ಹೇಳುತ್ತದೆ. ೨೦೨೧ನೇ ಇಸವಿಯ ವೇಳೆಗೆ ಈ ಪರಿಕಲ್ಪನೆ ವಿಶ್ವದೆಲ್ಲೆಡೆಯ ವ್ಯಾಪಾರೋದ್ಯಮಗಳಿಗೆ ೨.೯ ಟ್ರಿಲಿಯನ್ ಅಮೆರಿಕನ್ ಡಾಲರುಗಳಷ್ಟು ಉದ್ಯಮ ಮೌಲ್ಯವನ್ನು (ಬಿಸಿನೆಸ್ ವ್ಯಾಲ್ಯೂ) ತಂದುಕೊಡಲಿದೆ ಎಂದು ಗಾರ್ಟ್‌ನರ್ ಸಂಸ್ಥೆ ಅಂದಾಜಿಸಿದೆ.

ಸೆಪ್ಟೆಂಬರ್ ೪, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com