ಆಧುನಿಕ ರೋಬಾಟ್‌ಗಳು ವೈವಿಧ್ಯಮಯ ಕೆಲಸಗಳನ್ನು ಸಾಧಿಸಬಲ್ಲವು
ಆಧುನಿಕ ರೋಬಾಟ್‌ಗಳು ವೈವಿಧ್ಯಮಯ ಕೆಲಸಗಳನ್ನು ಸಾಧಿಸಬಲ್ಲವುBanner vector created by macrovector - www.freepik.com

ರೋಬಾಟ್‌ ಜಗತ್ತಿನಲ್ಲಿ ಒಂದು ಸುತ್ತು

ರೋಬಾಟ್‌ಗಳು ಮನುಷ್ಯರ ಕೆಲಸಗಳನ್ನು ಮನುಷ್ಯರಷ್ಟೇ ಸಮರ್ಥವಾಗಿ ಮಾಡುವ ದಿನ ಬರಬಹುದೇ?

ಯಂತ್ರಮಾನವ, ಅಂದರೆ ರೋಬಾಟ್‌ಗಳ ಕುರಿತು ನಮಗೆ ಎಲ್ಲಿಲ್ಲದ ಕುತೂಹಲ. ಮೊದಲಿಗೆ ವೈಜ್ಞಾನಿಕ ಕತೆ ಹಾಗೂ ಚಲನಚಿತ್ರಗಳ ಮೂಲಕ ನಮಗೆ ಪರಿಚಯವಾದ ಈ ಪರಿಕಲ್ಪನೆ ಇಂದು ಹಲವು ಕ್ಷೇತ್ರಗಳಲ್ಲಿ ತನ್ನ ಪ್ರಭಾವ ತೋರಿಸುತ್ತಿದೆ. ಕಾರ್ಖಾನೆಯಲ್ಲಿ ಕೆಲಸಮಾಡುವುದರಿಂದ ಪ್ರಾರಂಭಿಸಿ ಮನೆಯ ಕಸ ಗುಡಿಸುವವರೆಗೆ ರೋಬಾಟ್‌ಗಳ ಕಾರ್ಯಕ್ಷೇತ್ರ ಇದೀಗ ಬಹಳ ವಿಸ್ತಾರವಾಗಿ ಬೆಳೆದಿದೆ.

ಈ ಯಂತ್ರಮಾನವರ ಬಗ್ಗೆ ಕುತೂಹಲ ಇರುವಂತೆಯೇ ಅವುಗಳನ್ನು ಕುರಿತ ಭೀತಿಯೂ ನಮ್ಮಲ್ಲಿದೆ. ಮನುಷ್ಯರನ್ನು ಅವು ಆಳಬಹುದು ಎನ್ನುವುದಕ್ಕಿಂತ ನಮ್ಮ ಕೆಲಸಗಳನ್ನು ರೋಬಾಟ್‌ಗಳು ಕಿತ್ತುಕೊಳ್ಳಬಹುದು ಎನ್ನುವುದು ಈ ಭೀತಿಗೆ ಪ್ರಮುಖ ಕಾರಣ. ಈ ಭೀತಿ ಇರಬೇಕೇ ಬೇಡವೇ ಎಂದು ತೀರ್ಮಾನಿಸುವ ಮೊದಲು ರೋಬಾಟ್‌ಗಳ ಬಗ್ಗೆ, ಅವುಗಳ ಕೆಲಸದ ಬಗ್ಗೆ ಕೊಂಚ ತಿಳಿದುಕೊಳ್ಳುವುದು ಒಳ್ಳೆಯದು.

ನೋಡಲು ನಮ್ಮಂತೆ ಕಾಣುವ, ನಮ್ಮಂತೆಯೇ ಕೆಲಸಮಾಡುವ, ನಮಗಿಂತ ಶಕ್ತಿಶಾಲಿಯಾದ ಯಂತ್ರಗಳ ಪರಿಕಲ್ಪನೆ ಬಹಳ ಹಳೆಯದು. ಈ ಯಂತ್ರಗಳಿಗೆ ರೋಬಾಟ್ ಎಂಬ ಹೆಸರು ಸಿಕ್ಕಿದ್ದು ೧೯೨೧ರಲ್ಲಿ, ಕರೆಲ್ ಚಪೆಕ್ ಎಂಬ ಜ಼ೆಕ್ ಲೇಖಕ ಬರೆದ ನಾಟಕದಲ್ಲಿ. ಅಂದಿನಿಂದ ಈವರೆಗೆ ಈ ಪರಿಕಲ್ಪನೆ ಸಾಕಷ್ಟು ಬೆಳೆದಿದೆ, ಕಲ್ಪನೆಯಲ್ಲಷ್ಟೇ ಸಾಧ್ಯವೆನಿಸಿದ್ದ ಹಲವು ಸಂಗತಿಗಳನ್ನು ನಿಜಜೀವನದಲ್ಲೂ ಸಾಧ್ಯವಾಗಿಸಿದೆ.

ರೋಬಾಟ್ ಎಂದಾಕ್ಷಣ ನೋಡಲು ಮನುಷ್ಯನಂತೆಯೋ ಬೇರೊಂದು ಪ್ರಾಣಿಯಂತೆಯೋ ಇರುವ ಯಂತ್ರಗಳೇ ಮೊದಲು ನಮಗೆ ನೆನಪಾಗುತ್ತವೆ. ಒಟ್ಟಾರೆ ರೋಬಾಟ್ ಜಗತ್ತಿನಲ್ಲಿ ಇಂತಹ ಯಂತ್ರಗಳ ಪ್ರಮಾಣ ಕಡಿಮೆ ಎಂದೇ ಹೇಳಬೇಕು. ಏಕೆಂದರೆ ಇದೊಂದು ರೋಬಾಟ್ ಎಂದು ಸುಲಭಕ್ಕೆ ಗೊತ್ತೇ ಆಗದಂತಹ ಅದೆಷ್ಟೋ ಯಂತ್ರಗಳು ಇದೀಗ ವಿಶ್ವದ ಮೂಲೆಮೂಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ರೋಬಾಟ್‌ಗಳ ಪ್ರಮುಖ ವೈಶಿಷ್ಟ್ಯವೆಂದರೆ ಅವು ಯಾವುದೇ ಪರಿಸ್ಥಿತಿಯಲ್ಲಿ ಎಷ್ಟು ಹೊತ್ತು ಬೇಕಾದರೂ ಬೇಸರವಿಲ್ಲದೆ ಕೆಲಸಮಾಡಬಲ್ಲವು. ಹೀಗಾಗಿಯೇ ಇಂದಿನ ಕಾರ್ಖಾನೆಗಳಲ್ಲಿ ಅವುಗಳಿಗೆ ಪ್ರಮುಖ ಸ್ಥಾನ. ಪೂರ್ತಿ ಯಂತ್ರಮಾನವರಷ್ಟೇ ಅಲ್ಲ, 'ರೋಬಾಟಿಕ್ ಆರ್ಮ್' ಎಂದು ಕರೆಸಿಕೊಳ್ಳುವ ರೋಬಾಟ್ ತೋಳುಗಳನ್ನಷ್ಟೇ ಬಳಸಿಕೊಂಡೂ ಇಂದು ಅನೇಕ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ.

ಕಾರ್ಖಾನೆಯಲ್ಲಿ ಸಾಮಾನುಗಳನ್ನು ಎತ್ತಿಡುವುದಿರಲಿ, ಮಂಗಳಗ್ರಹದ ಮೇಲೆ ಇಳಿದಿರುವ ವಾಹನಕ್ಕೆ ಅಲ್ಲಿನ ಮಣ್ಣಿನ ಮಾದರಿಯನ್ನು ಸಂಗ್ರಹಿಸಿಕೊಡುವುದೇ ಇರಲಿ, ರೋಬಾಟ್ ತೋಳುಗಳು ಇಂತಹ ಅನೇಕ ಕೆಲಸಗಳನ್ನು ಮಾಡಬಲ್ಲವು. ಹೇಳಿದ ಕೆಲಸವನ್ನು ತೆಪ್ಪಗೆ ಮಾಡುವುದಷ್ಟೇ ಅಲ್ಲ, ಬೇರೆಬೇರೆ ಸನ್ನಿವೇಶಗಳಿಗೆ ಬೇರೆಬೇರೆ ರೀತಿಯಾಗಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಕೂಡ ಅವುಗಳಿಗೆ ಇರುತ್ತದೆ.

ಬರಿಯ ತೋಳುಗಳೇ ಇಷ್ಟು ಕೆಲಸ ಮಾಡಿದರೆ ಇನ್ನು ಪೂರ್ಣ ರೋಬಾಟ್‌ಗಳ ವಿಷಯ ಕೇಳಬೇಕೇ? ಅವುಗಳ ಇಂದಿನ ಕಾರ್ಯಕ್ಷಮತೆ ಹಿಂದೆಂದೂ ಕಲ್ಪಿಸಿಕೊಳ್ಳಲು ಸಾಧ್ಯವಾಗದಿದ್ದ ಮಟ್ಟಕ್ಕೆ ತಲುಪಿಬಿಟ್ಟಿದೆ. ಈ ಸಾಧನೆಯ ಹಿನ್ನೆಲೆಯಲ್ಲಿ ನಾವು ಸೆನ್ಸರ್ ಹಾಗೂ ಆಕ್ಚುಯೇಟರ್‌ನಂತಹ ಸಾಧನಗಳನ್ನೂ ಕೃತಕ ಬುದ್ಧಿಮತ್ತೆಯಂತಹ ಪರಿಕಲ್ಪನೆಗಳನ್ನೂ ನೋಡಬಹುದು. ಆಧುನಿಕ ರೋಬಾಟ್‌ ಪಾಲಿಗೆ ಇವೇ ಚಾಲಕ ಶಕ್ತಿಗಳು.

ಮನುಷ್ಯರಂತೆಯೇ ಕಾಣುವ ಒಂದು ರೋಬಾಟ್ ಇದೆ ಎಂದುಕೊಂಡರೆ ಅದರ ಕಾರ್ಯಾಚರಣೆಗೆ ಹಲವು ಆವಶ್ಯಕತೆಗಳಿರುತ್ತವೆ. ಅದು ಓಡಾಡುವಾಗ ಸುತ್ತಮುತ್ತಲಿನ ಪರಿಸರವನ್ನು ಗಮನಿಸಿಕೊಳ್ಳಲು ಬೇಕಾದ ನೆರವನ್ನು ಸೆನ್ಸರುಗಳು ಕೊಡುತ್ತವೆ. ಕೈಕಾಲುಗಳನ್ನು ಬೇಕಾದಾಗ ಬೇಕಾದಂತೆ ಚಲಿಸುವ ಶಕ್ತಿ ಆಕ್ಚುಯೇಟರುಗಳಿಂದ ಬರುತ್ತದೆ. ಯಾವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎನ್ನುವುದನ್ನು ಕೃತಕ ಬುದ್ಧಿಮತ್ತೆ ಹೇಳಿಕೊಡುತ್ತದೆ.

ಇವೆಲ್ಲದರ ಸಹಾಯದಿಂದ ಆಧುನಿಕ ರೋಬಾಟ್‌ಗಳು ವೈವಿಧ್ಯಮಯ ಕೆಲಸಗಳನ್ನು ಸಾಧಿಸಬಲ್ಲವು. ಹೋಟಲಿನಲ್ಲಿ ತಿಂಡಿ ತಂದುಕೊಡುವುದು - ಮನೆಯ ಕಸ ಗುಡಿಸುವುದೆಲ್ಲ ಹಾಗಿರಲಿ, ಚಾಲಕನ ಅಗತ್ಯವಿಲ್ಲದೆ ತಾವೇ ಸಂಚರಿಸುವುದನ್ನು ಕಲಿತ ಕಾರು - ಲಾರಿಗಳೂ ಇದೀಗ ರೋಬಾಟ್‌ಗಳಾಗಿವೆ. ಉನ್ನತ ಸಾಮರ್ಥ್ಯದ ಯಂತ್ರಾಂಶಗಳು ಹಾಗೂ ಅತಿವೇಗದ ಅಂತರಜಾಲ ಸಂಪರ್ಕಗಳೂ ಇಂದಿನ ರೋಬಾಟ್‌ಗಳಿಗೆ ಸಹಾಯ ಮಾಡುತ್ತಿವೆ.

ತಂತ್ರಾಂಶ ಲೋಕದ ರೋಬಾಟ್‌ಗಳು
ಭೌತಿಕ ಪ್ರಪಂಚದಲ್ಲಿರುವಂತೆ ತಂತ್ರಾಂಶಗಳ ವರ್ಚುಯಲ್ ವಿಶ್ವದಲ್ಲೂ ರೋಬಾಟ್‌ಗಳಿವೆ. ಇವನ್ನು ಸಾಮಾನ್ಯವಾಗಿ 'ಬಾಟ್'ಗಳೆಂದು ಗುರುತಿಸಲಾಗುತ್ತದೆ. ಮತ್ತೆಮತ್ತೆ ಮಾಡುವ ಯಾವುದೇ ನಿರ್ದಿಷ್ಟ ಕೆಲಸವನ್ನು ಅತ್ಯಂತ ನಿಖರವಾಗಿ, ಕ್ಷಿಪ್ರವಾಗಿ ಮಾಡಿ ಮುಗಿಸುವುದು ಬಾಟ್‌ಗಳ ವೈಶಿಷ್ಟ್ಯ. ಮಾಹಿತಿ ಸಂಗ್ರಹಣೆ ಮತ್ತು ಸಂಸ್ಕರಣೆ, ಗ್ರಾಹಕ ಸೇವೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಬಾಟ್‌ಗಳನ್ನು ಬಳಸಲಾಗುತ್ತಿದೆ.

ಈ ನಡುವೆ ಯಂತ್ರಮಾನವರಲ್ಲೂ ಆಲೋಚನೆಯ ಶಕ್ತಿ ಬೆಳೆಸುವ, ಬೇರೆಬೇರೆ ಸನ್ನಿವೇಶಗಳಿಗೆ ಬೇರೆಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುವಂತೆ ಮಾಡುವ ಪ್ರಯತ್ನಗಳು ಸತತವಾಗಿ ಮುಂದುವರೆದಿವೆ. ರೋಬಾಟ್‌ಗಳು ಮುಂದೊಮ್ಮೆ ಮನುಷ್ಯರ ಕೆಲಸಗಳನ್ನು ಮನುಷ್ಯರಷ್ಟೇ ಸಮರ್ಥವಾಗಿ ಮಾಡುವಂತಾಗಲಿ ಎನ್ನುವುದು ಈ ಪ್ರಯತ್ನಗಳ ಹಿಂದಿನ ಉದ್ದೇಶ. ರೋಬಾಟ್‌ಗಳನ್ನು ಕುರಿತ ಭೀತಿಗೆ ಕಾರಣವಾಗಿರುವುದೂ ಇದೇ ಅಂಶ.

ಆದರೆ ಇಂತಹ ಪ್ರಯತ್ನಗಳು ಸಂಪೂರ್ಣವಾಗಿ ಸಫಲವಾಗಲು ಇನ್ನೂ ಬಹಳ ಸಮಯ ಬೇಕು ಎಂದು ತಜ್ಞರು ಹೇಳುತ್ತಾರೆ. ನಿರ್ದಿಷ್ಟ ಹೆಜ್ಜೆಗಳನ್ನು ಅನುಸರಿಸಿ ಪದೇಪದೇ ಮಾಡುವಂತಹ ಕೆಲಸಗಳನ್ನು ನಮ್ಮ ಬದಲು ರೋಬಾಟ್‌ಗಳೇ ಸುಲಭವಾಗಿ ಮಾಡಬಲ್ಲವು; ಆದರೆ ಆಲೋಚಿಸಿ ಮಾಡಬೇಕಾದ ಕೆಲಸಗಳನ್ನೂ ಕಲಿತು ಅವು ನಮ್ಮ ಪ್ರತಿಸ್ಪರ್ಧಿಗಳಾಗಿ ಬೆಳೆಯುವುದು ಕಷ್ಟ ಎನ್ನುವುದು ಅವರ ಹೇಳಿಕೆ.

ಅಂಥದ್ದೊಂದು ಹಂತ ತಲುಪುವವರೆಗೂ ರೋಬಾಟ್‌ಗಳು ನಮ್ಮೊಡನೆ ಸ್ಪರ್ಧಿಸುವುದಕ್ಕಿಂತ ನಮ್ಮ ಜೊತೆಗಾರರಾಗಿ ಬೆಳೆಯುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ರೋಬಾಟ್‌ಗಳ ಬಗ್ಗೆ ಭೀತಿ ಇಟ್ಟುಕೊಳ್ಳದೆ ಅವನ್ನು ನಮ್ಮ ಸಹಾಯಕರನ್ನಾಗಿ ಬೆಳೆಸಿಕೊಳ್ಳುವುದು, ಬಳಸಿಕೊಳ್ಳುವುದು ಬುದ್ಧಿವಂತಿಕೆ ಆಗಬಲ್ಲದು.

ತಂತ್ರಾಂಶ ಲೋಕದ ರೋಬಾಟ್‌ಗಳು ಭೌತಿಕ ಪ್ರಪಂಚದಲ್ಲಿರುವಂತೆ ತಂತ್ರಾಂಶಗಳ ವರ್ಚುಯಲ್ ವಿಶ್ವದಲ್ಲೂ ರೋಬಾಟ್‌ಗಳಿವೆ. ಇವನ್ನು ಸಾಮಾನ್ಯವಾಗಿ 'ಬಾಟ್'ಗಳೆಂದು ಗುರುತಿಸಲಾಗುತ್ತದೆ. ಮತ್ತೆಮತ್ತೆ ಮಾಡುವ ಯಾವುದೇ ನಿರ್ದಿಷ್ಟ ಕೆಲಸವನ್ನು ಅತ್ಯಂತ ನಿಖರವಾಗಿ, ಕ್ಷಿಪ್ರವಾಗಿ ಮಾಡಿ ಮುಗಿಸುವುದು ಬಾಟ್‌ಗಳ ವೈಶಿಷ್ಟ್ಯ. ಮಾಹಿತಿ ಸಂಗ್ರಹಣೆ ಮತ್ತು ಸಂಸ್ಕರಣೆ, ಗ್ರಾಹಕ ಸೇವೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಬಾಟ್‌ಗಳನ್ನು ಬಳಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ.

ಮೇ ೨೨, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com