ಕೃತಕ ಬುದ್ಧಿಮತ್ತೆಯ ಅನ್ವಯದಿಂದ ಕಾನೂನು ವಲಯ ಬದಲಾಗುವ ಎಲ್ಲ ಸೂಚನೆಗಳೂ ಕಂಡು ಬರುತ್ತಿವೆ.
ಕೃತಕ ಬುದ್ಧಿಮತ್ತೆಯ ಅನ್ವಯದಿಂದ ಕಾನೂನು ವಲಯ ಬದಲಾಗುವ ಎಲ್ಲ ಸೂಚನೆಗಳೂ ಕಂಡು ಬರುತ್ತಿವೆ.flickr.com/photos/arselectronica

ಕೃತಕ ಬುದ್ಧಿಮತ್ತೆ ಮತ್ತು ಕಾನೂನು

ಕೃತಕ ಬುದ್ಧಿಮತ್ತೆಯ ಕೈವಾಡ ಎಲ್ಲ ಕ್ಷೇತ್ರಗಳನ್ನೂ ಬದಲಿಸುತ್ತಿದೆ. ಕಾನೂನು ವಲಯದಲ್ಲಿ ಇದರ ಪರಿಣಾಮಗಳು ಏನು?

ಹೊಸ ತಂತ್ರಜ್ಞಾನದ ಅಳವಡಿಕೆ ಯಾವ ಉದ್ದಿಮೆಗಳಲ್ಲಿ ಕಡಿಮೆ ಗತಿಯನ್ನು ತೋರುತ್ತಿದೆ ಮತ್ತು ಏಕೆ? - ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಹಾದಿಯಲ್ಲಿ ಹಲವಾರು ಅಧ್ಯಯನಗಳು ನಿರಂತರವಾಗಿ ನಡೆದಿವೆ. ಆಯಾ ಉದ್ದಿಮೆಗಳನ್ನು ನಡೆಸುವವರಿಗೆ ಇಂಥ ಅಧ್ಯಯನಗಳು ದಿಕ್ಸೂಚಿಯಂತೆ ಕೆಲಸ ಮಾಡಬಲ್ಲುವು. ಕಳೆದ ಇಪ್ಪತ್ತೈದು ವರ್ಷಗಳಲ್ಲಿ, ತಂತ್ರಜ್ಞಾನದ ಹೊಸ ಸಾಧ್ಯತೆಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಹಿಂಜರಿಕೆ ತೋರಿಸುತ್ತಿರುವ ಎರಡು ಮುಖ್ಯ ಧಾರೆಗಳು - ಕಾನೂನು ಮತ್ತು ಕೃಷಿ ವಲಯ - ಎಂದು ಗುರುತಿಸಲಾಗಿದೆ. ವಕೀಲರ ಆಫೀಸ್, ಕೋರ್ಟ್ ಮತ್ತು ಕಾನೂನಿಗೆ ಸಂಬಂಧಪಟ್ಟ ವಹಿವಾಟುಗಳು ನಡೆಯುವ ಸ್ಥಳಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ನಮ್ಮ ಅರಿವಿಗೂ ಬರುತ್ತದೆ. ದಾಖಲೆಗಳನ್ನು ಸೃಷ್ಟಿಸುವಾಗ, ಕೈ ಬರಹದ ಬದಲು, ಇತ್ತೀಚೆಗೆ ಕಂಪ್ಯೂಟರ್ ಬಳಸುತ್ತಾರೆ ಎನ್ನುವುದನ್ನು ಬಿಟ್ಟರೆ, ಗಮನಾರ್ಹ ಎನ್ನಬಹುದಾದ ತಂತ್ರಜ್ಞಾನದ ಅಳವಡಿಕೆ ಕಂಡು ಬರುವುದಿಲ್ಲ. ಆದರೆ ಕೃತಕ ಬುದ್ಧಿಮತ್ತೆಯ ಅನ್ವಯದಿಂದ ಈ ಪರಿಸ್ಥಿತಿ ಬದಲಾಗುವ ಎಲ್ಲ ಸೂಚನೆಗಳೂ ಕಂಡು ಬರುತ್ತಿವೆ.

ಹೊಸ ತಂತ್ರಜ್ಞಾನಗಳು, ಅದರಲ್ಲೂ ಮನುಷ್ಯ ಪ್ರಯತ್ನವನ್ನು ಕಡಿಮೆ ಮಾಡುವ, ಅರೆ/ಪೂರ್ಣ ಸ್ವಯಂ ಚಾಲಿತ ವ್ಯವಸ್ಥೆಗಳು, ಎರಡೂ ಕಡೆಯ ಭಾವನೆಗಳನ್ನು ಕೆರಳಿಸುತ್ತವೆ. ಸ್ಥೂಲವಾಗಿ ನೋಡಿದಾಗ, ಕಾನೂನಿನ ಕ್ರಿಯೆಗಳಲ್ಲಿ ಮೂರು ರೀತಿಯ ಕ್ರಿಯೆಗಳನ್ನು ನೋಡುತ್ತೇವೆ. ವ್ಯಕ್ತಿಯೊಬ್ಬ ನಾಗರಿಕ ಸಮಾಜದಲ್ಲಿ ಜೀವಿಸಲು ಬೇಕಾದ ವ್ಯವಸ್ಥೆಗಳು. ಕಾನೂನನ್ನು ಪ್ರಜೆಗಳಿಗೆ ಎಟಕುವಂತೆ ಮಾಡುವ ವಕೀಲರು ಮತ್ತು ಆಯಾ ದೇಶದ ಮತ್ತು ವಲಯದ ಕಾನೂನುಗಳನ್ನು ನಿಷ್ಕರ್ಷಿಸಿ, ನ್ಯಾಯ ಒದಗುವಂತೆ ಮಾಡುವ ನ್ಯಾಯಾಧೀಶರ ಮುಂದಾಳತ್ವದಲ್ಲಿ ನಡೆಯುವ ಪ್ರಕ್ರಿಯೆ. ಈ ಮೂರರಲ್ಲೂ, ಹೊಸ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬ ದಿಸೆಯಲ್ಲಿ ಮಹತ್ವದ ಪ್ರಯತ್ನಗಳ ಜೊತೆಗೆ , ಒಳಿತು ಕೆಡಕುಗಳ ಬಿಸಿ ಬಿಸಿ ಚರ್ಚೆ ಜಾರಿಯಲ್ಲಿದೆ.

ಆಸ್ತಿ, ಮದುವೆ ಮತ್ತು ವಿಲ್ ಪತ್ರವನ್ನು ರಿಜಿಸ್ಟರ್ ಮಾಡಿಸುವ ಕೆಲಸದಲ್ಲಿ ವಕೀಲರನ್ನು ಹಿಡಿದು ಪತ್ರದ 'ಶರಾ' ಎಲ್ಲ ರೀತಿಯಿಂದಲೂ ಸರಿಯಿರುವಂತೆ ಬರೆಯಿಸುವ ಪ್ರಕ್ರಿಯೆಯಲ್ಲಿ ಸರಿಸುಮಾರು ನಾವೆಲ್ಲರೂ ಭಾಗವಹಿಸಿದ್ದೇವೆ. ಭ್ರಷ್ಟಾಚಾರ ಕಡಿಮೆ ಪ್ರಮಾಣದಲ್ಲಿರುವ ದೇಶ ಮತ್ತು ವ್ಯವಸ್ಥೆಗಳಲ್ಲಿ, ಪ್ರತಿಶತ ೯೫ ಕ್ಕಿಂತಲೂ ಹೆಚ್ಚು ರಿಜಿಸ್ಟ್ರೇಷನ್ ಗಳು ಸ್ವಯಂಚಾಲಿತ ವ್ಯವಸ್ಥೆಯಾಗಿ ಮಾರ್ಪಾಡಾಗುವುದರಲ್ಲಿ ಹೆಚ್ಚಿನ ತೊಂದರೆ ಕಾಣಿಸುವುದಿಲ್ಲ. ಆದ್ದರಿಂದಲೇ, ವಿಶ್ವದ ಅನೇಕ ಮುಂದುವರೆದ ದೇಶಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದೆ. donotpay.comನಂಥ ವ್ಯವಸ್ಥೆಗಳು ಈ ಸೌಲಭ್ಯವನ್ನು ಕಲ್ಪಿಸುವಲ್ಲಿ ಹೆಜ್ಜೆಯಿಟ್ಟಿವೆ. ಇಂಥಹ ಹಲವು ಸಾಧನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸುವುದು ಅಷ್ಟು ಕಷ್ಟವೇನಲ್ಲ. ವಕೀಲ ಸಮುದಾಯ ಇಂತಹ ವ್ಯವಸ್ಥೆಗಳನ್ನು ತಮ್ಮ ಕೆಲಸವನ್ನು ಕಸಿದುಕೊಳ್ಳುವ ರೀತಿ ಎಂದುಕೊಂಡರೂ, ಯಾವ ಕೆಲಸದಲ್ಲಿ ತನ್ನ ವ್ಯಕ್ತಿಗತ ಕೊಡುಗೆಯನ್ನು ಕಾಣುವುದಿಲ್ಲವೋ, ಅಂಥ ಕೆಲಸಗಳೆಲ್ಲವೂ ಒಂದಲ್ಲ ಒಂದು ದಿನ ಯಾಂತ್ರೀಕರಣಗೊಳ್ಳುತ್ತದೆ ಎನ್ನುವುದೂ ಸತ್ಯ.

ಟಿ. ಎನ್.ಸೀತಾರಾಂ ಅವರ ಧಾರಾವಾಹಿಗಳಲ್ಲಿ ಬರುವ ನ್ಯಾಯಾಲಯದ ದೃಶ್ಯಗಳನ್ನು ಅಥವಾ ಪೆರಿ ಮೇಸನ್ ಅವರ ರೋಚಕ ಕಾದಂಬರಿಗಳನ್ನು ನಾವು ಕಾತರತೆಯಿಂದ ನಿರೀಕ್ಷಿಸಿ ಚಪ್ಪರಿಸಿಕೊಂಡು ಆಸ್ವಾದಿಸುವುದಿಲ್ಲವೇ? ಆ ಒಂದೊಂದು ವಾದ ಮತ್ತು ಪ್ರತಿವಾದದ ಹಿಂದೆಯೂ ಅಗಾಧವಾದ ಅಧ್ಯಯನ ಮತ್ತು ಸಂಶೋಧನೆ ಇರುತ್ತದೆ. ನಮ್ಮ ಮುಂದೆ ವಾದ ಮಂಡಿಸುವ ವಕೀಲ ಸ್ಟಾರ್ ಎನಿಸಿದರೆ, ಅವನ/ಳ ಹಿಂದೆ ವಕೀಲರ ತಂಡದ ಶ್ರಮ ಇರುತ್ತದೆ. ಈ ಶ್ರಮದ ಒಂದು ಭಾಗ, ಹಳೆಯ ಕೇಸ್ ಗಳ ಸಂಶೋಧನೆ. ಹಳೆಯ ವಕೀಲರ ಆಫೀಸಿಗೆ ಹೋದರೆ, ಇಂಥ ಕಡತಗಳ ದೊಡ್ಡ ಸಂಗ್ರಹವೇ ಅವರ ಗೋಡೆಯನ್ನು ಅಲಂಕರಿಸುತ್ತಿರುತ್ತದೆ. ಇಂಥ ಸಂಗ್ರಹವನ್ನು ಅತಿ ಶೀಘ್ರದಲ್ಲಿ ನೋಡಿ ಅದರ ಒಟ್ಟೂ ಸಾರಾಂಶವನ್ನು ವಕೀಲರ ಮುಂದಿಡುವಂತಿದ್ದರೆ? ಇಂಥ ಕ್ಷಮತೆಯನ್ನು ಇಂದಿನ ಕೃತಕ ಬುದ್ಧಿಮತ್ತೆ ಆಧಾರಿತ ಉತ್ಪನ್ನಗಳು ಪಡೆಯುತ್ತಿವೆ.

ಯಾವುದೇ ದೊಡ್ಡ ವಹಿವಾಟಿನಲ್ಲಿ ಕೊಡು ಕೊಳ್ಳುವವರ ಮಧ್ಯೆ ಕಾಂಟ್ರಾಕ್ಟ್ ಒಂದನ್ನು ಸಹಿ ಮಾಡುವುದು ಸಾಮಾನ್ಯವಷ್ಟೆ. ಇಂಥ ಕಾಂಟ್ರಾಕ್ಟ್ ಗಳ ಸಂಧಾನದ ಸಮಯದಲ್ಲಿ ನಡೆಯುವ ಸೂಕ್ಷ್ಮ ಚರ್ಚೆಗಳ ಸಮಯದಲ್ಲೂ ಆಳವಾದ ಅಧ್ಯಯನದ ಅವಶ್ಯಕತೆ ಇರುತ್ತದೆ. ಇದು ತುಂಬ ಸಮಯ ತೆಗೆದುಕೊಳ್ಳುವಂಥದೂ ಹೌದು. ಭಾರತದ ಪ್ರಸಿದ್ಧ ಸಂಸ್ಥೆ ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ ಸಂಸ್ಥೆಯು ಇಂಥ ಒಪ್ಪಂದಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಕೃತಕ ಬುದ್ಧಿಮತ್ತೆ ಆಧಾರಿತ ಸಾಫ್ಟ್ ವೇರ್ ಒಂದನ್ನು ಬಳಸಿಕೊಳ್ಳುತ್ತಿದೆ. ಕೆನಡಾದ ಕೀರ ಸಿಸ್ಟೆಮ್ಸ್ (kirasystems.com) ಎಂಬ ಕಂಪನಿಯೊಂದಿಗೆ ಕೈ ಜೋಡಿಸಿರುವ ಮಂಗಲ್ ದಾಸ್ ಸಂಸ್ಥೆ, ಇನ್ನೂ ಹಲವಾರು ಆಯಾಮಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಲು ಪ್ರಾರಂಭಿಸಿದೆ. ಆದರೆ ಇವೆಲ್ಲ ಅಧ್ಯಯನಗಳು ಮತ್ತು ಅಲ್ಗಾರಿದಂ ಗಳು ದಾರಿಯನ್ನು ತೋರಿದರೂ, ಕೊನೆಗೂ ತನ್ನ ವಿವೇಚನೆಯನ್ನು ಉಪಯೋಗಿಸಿ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳಬೇಕಾದವರು ಮನುಷ್ಯನೇ ಆಗಿರುತ್ತಾನೆ. ಆದ್ದರಿಂದ, ಇಂಥ ಎಲ್ಲ ಸಲಕರಣೆಗಳು ವಕೀಲನ ಸ್ಥಾನವನ್ನು ಪೂರ್ಣವಾಗಿ ತುಂಬಲು ಸಾಧ್ಯವಿಲ್ಲವೆಂತಲೂ; ಆದರೆ ಅವು ಅವನ/ಳ ಕ್ಷಮತೆಯನ್ನು ಹೆಚ್ಚಿಸಲು ಖಂಡಿತ ಸಹಾಯ ಮಾಡುತ್ತವೆ ಎನ್ನುವುದೂ ವಿಶ್ವದ ವಕೀಲ ಸಮುದಾಯದ ಸ್ಥೂಲ ನಿರ್ಣಯವಾಗಿದೆ.

ಕಾನೂನಿನ ಆಳವಾದ ಜ್ಞಾನ, ತನ್ನ ಸುತ್ತಲಿನ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾನೂನನ್ನು ವ್ಯಾಖ್ಯಾನಿಸಬೇಕಾದ ದೊಡ್ಡ ಜವಾಬ್ದಾರಿ ನ್ಯಾಯಾಧೀಶರ ಮೇಲಿರುತ್ತದೆ. ಪ್ರತಿಯೊಂದು ಖಟ್ಲೆಯ ನಿರ್ಣಯದ ಕಾಲದಲ್ಲೂ, ಇದೇ ಸಂದರ್ಭದಲ್ಲಿ ಹಿಂದೆ ಯಾವ ರೀತಿಯ ವಾದ ಮಾಡಲಾಗಿತ್ತು ಮತ್ತು ನಿರ್ಣಯ ಏನಾಗಿತ್ತು ಎನ್ನುವುದರ ಐತಿಹಾಸಿಕ ಜ್ಞಾನ ನ್ಯಾಯಾಧೀಶರಿಗೆ ಇರಬೇಕಾಗಿರುತ್ತದೆ. ಒಂದು ಸರಳ ಉದಾಹರಣೆಯೆಂದರೆ, ಕಳ್ಳನಿಗೆ ಎಷ್ಟು ದಿನದ ಜೈಲು ಶಿಕ್ಷೆ ಕೊಡಬಹುದು? ಎಂಬ ಪ್ರಶ್ನೆಗೆ, ಅದು ಯೋಜಿತವಾಗಿದ್ದೇ, ಎಷ್ಟನೇ ಬಾರಿಗೆ ಮಾಡಿದ್ದು, ಆಪಾದಿತ ಇದ್ದ ಪರಿಸರವೇನು? ಜೈಲಿನಿಂದ ಬಿಡುಗಡೆ ಹೊಂದಿದ ಮೇಲೆ ಮತ್ತೆ ಕಳ್ಳತನ ಮಾಡುವ ಸಾಧ್ಯತೆ ಇದೆಯೇ? – ಇವೆಲ್ಲದರ ಆಧಾರದ ಮೇಲೆ ವಿವೇಚನಾಪೂರಿತ ನಿರ್ಣಯವನ್ನು ಕೊಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ನ್ಯಾಯಾಧೀಶರ ಬಳಿಯೂ ಐ ಪ್ಯಾಡ್ ನಂತಹ ಸಾಧನವಿದ್ದು, ಅದು ಇವೆಲ್ಲ ಪ್ರಶ್ನೆಗಳಿಗೆ ಸೂಚಿತ ಉತ್ತರಗಳನ್ನು ಕೊಡುವ ಕಾಲ ಬರಲಿದೆ. ಅಂಥ ಸಮಯದಲ್ಲಿ ಈ ಸೂಚಿತ ಉತ್ತರಗಳು ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ನ್ಯಾಯಾಧೀಶರು ಎಷ್ಟೇ ಉನ್ನತ ಮಟ್ಟದ ವಿವೇಚನೆಯನ್ನು ಹೊಂದಿದ್ದರೂ, ಅವರ ಮುಂದಿರುವ ದತ್ತಾಂಶಗಳು ಆ ವಿವೇಚನೆಯ ಧಾಟಿಯನ್ನು ನಿರ್ಧರಿಸುವ ಸಾಧ್ಯತೆ ಇದ್ದೇ ಇರುತ್ತದೆ. ಈ ಕಾರಣದಿಂದಲೇ, ಕೃತಕ ಬುದ್ಧಿಮತ್ತೆ ಆಧಾರಿತ ಸಾಧನಗಳ ಹಿಂದಿರುವ ದತ್ತಾಂಶ ಮತ್ತು ಅಲ್ಗಾರಿದಂಗಳ ಸೂಕ್ಷ್ಮತೆಯನ್ನು ವಕೀಲ ಸಮುದಾಯವರೂ ಅರ್ಥ ಮಾಡಿಕೊಳ್ಳಬೇಕು ಮತ್ತು ಹಾಗೆ ಅರ್ಥ ಆಗುವ ಹಾಗೆ ತಮ್ಮ ಉತ್ಪನ್ನಗಳನ್ನು ವಿವರಿಸುವ ಬಾಧ್ಯತೆ ವಿನ್ಯಾಸಗೊಳಿಸುವ ಇಂಜಿನಿಯರ್‌ಗಳದ್ದು ಎನ್ನುವ ವಾದ ಹೆಚ್ಚು ಹೆಚ್ಚು ಪುಷ್ಟಿ ಪಡೆದುಕೊಳ್ಳುತ್ತಿದೆ.

'ಆಂದೋಲನ'ದಲ್ಲಿ ಪ್ರಕಟವಾದ ಲೇಖನ, ಲೇಖಕರ ಅನುಮತಿಯೊಂದಿಗೆ ಮರುಪ್ರಕಟಿಸಲಾಗಿದೆ.

Related Stories

No stories found.
ಇಜ್ಞಾನ Ejnana
www.ejnana.com