ಮನುಷ್ಯರಂತೆಯೇ ತನ್ನ ಸುತ್ತಮುತ್ತಲಿನ ವಾತಾವರಣವನ್ನು ಅರ್ಥೈಸಿಕೊಳ್ಳಬಲ್ಲ, ಮನುಷ್ಯರಂತೆಯೇ ನಿರ್ಧಾರಗಳನ್ನು ತಳೆಯಬಲ್ಲ ತಂತ್ರಜ್ಞಾನವನ್ನು ಎ. ಐ. ಎಂದು ಕರೆಯುತ್ತೇವೆ
ಮನುಷ್ಯರಂತೆಯೇ ತನ್ನ ಸುತ್ತಮುತ್ತಲಿನ ವಾತಾವರಣವನ್ನು ಅರ್ಥೈಸಿಕೊಳ್ಳಬಲ್ಲ, ಮನುಷ್ಯರಂತೆಯೇ ನಿರ್ಧಾರಗಳನ್ನು ತಳೆಯಬಲ್ಲ ತಂತ್ರಜ್ಞಾನವನ್ನು ಎ. ಐ. ಎಂದು ಕರೆಯುತ್ತೇವೆImage by Gerd Altmann from Pixabay

ಕೃತಕ ಬುದ್ಧಿಮತ್ತೆ ಮತ್ತು ಸಮಾಜ

ಮನುಷ್ಯನ ಮೆದುಳನ್ನು ಮತ್ತು ಅದು ಮಾಡುವ ಕೆಲಸವನ್ನೂ ನಾವು ಕೃತಕವಾಗಿ ವಿನ್ಯಾಸಗೊಳಿಸಬಹುದೇ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಅನೇಕ ವರ್ಷಗಳಿಂದ ಕಾಡಿದೆ

ನಮ್ಮ ಸುತ್ತಲಿರುವ ಅನೇಕ ಉತ್ಪನ್ನಗಳನ್ನು ನೋಡಿದಾಗ ಅವುಗಳು ಮಾಡುವ ಕ್ರಿಯೆ ಮನುಷ್ಯ ಅಥವಾ ಪ್ರಾಣಿಗಳು ಮಾಡುವ ಕೆಲಸದಂತೆ ತೋರುತ್ತವೆ. ಮಣ್ಣನ್ನು ಅಗೆಯುತ್ತಿರುವ ಜೆಸಿಬಿ ಯಂತ್ರ, ಅಡಿಗೆ ಮನೆಯಲ್ಲಿ ಬಳಸುವ ಇಕ್ಕಳ ಮತ್ತು ಮಿಕ್ಸಿ, ಗೋಡೆ ಹತ್ತುವ ರೋಬೋಟ್ ಇವೆಲ್ಲ ಪ್ರಾಣಿಗಳ ಕ್ರಿಯೆಯಿಂದ (ಮನುಷ್ಯನನ್ನೂ ಒಳಗೊಂಡು) ಸ್ಪೂರ್ತಿ ಪಡೆದ ವಿನ್ಯಾಸಗಳು. ಇತಿಹಾಸದುದ್ದಕ್ಕೂ ವಿಜ್ಞಾನಿ ಮತ್ತು ತಂತ್ರಜ್ಞಾನಿಗಳು ಇಂತಹ ಶೋಧನೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದನ್ನು ಕಾಣಬಹುದು. ವಿಜ್ಞಾನದ ಒಂದು ಶಾಖೆ ಬಯೋ ಎಂಜಿಯರಿಂಗ್ ಒಂದು ಪ್ರಮುಖ ಅಧ್ಯಯನದ ಹಾದಿ.

ಈ ಮೇಲಿನ ಉದಾಹರಣೆಗಳೆಲ್ಲ ಮನುಷ್ಯನ ಆಂಗಿಕ ಕ್ರಿಯೆಯನ್ನು ಉಪಕರಣಗಳ ಮೂಲಕ ಮಾಡುವಂಥದಾದರೆ, ಮನುಷ್ಯನ ಮೆದುಳನ್ನು ಮತ್ತು ಅದು ಮಾಡುವ ಕೆಲಸವನ್ನೂ ನಾವು ಕೃತಕವಾಗಿ ವಿನ್ಯಾಸಗೊಳಿಸಬಹುದೇ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಅನೇಕ ವರ್ಷಗಳಿಂದ ಕಾಡಿದೆ. ಇದರ ಮೂಲ ಆಶಯವನ್ನು ಬೇರೆ ಬೇರೆ ನಾಗರಿಕತೆಗಳ ವಿಜ್ಞಾನದ ಇತಿಹಾಸದಲ್ಲಿ ಗುರುತಿಸಬಹುದಾದರೂ, ಅದಕ್ಕೆ ಒಂದು ಸ್ಪಷ್ಟ ರೂಪ ಸಿಕ್ಕಿದ್ದು 1950 ರಿಂದ ಈಚೆಗೆ. ಮೂರ್ಸ್ ಲಾ ಎಂದು ಪ್ರಸಿದ್ಧವಾಗಿರುವ ನಿಯಮದ ಆಧಾರದಿಂದ ಗಣಕ ಯಂತ್ರಗಳ ಕ್ಷಮತೆ ಹೆಚ್ಚುತ್ತಾ ಹೋದಂತೆ, ಕೃತಕ ಬುದ್ಧಿಮತ್ತೆಯ ಆಳ ಮತ್ತು ಹರವು ಹೆಚ್ಚುತ್ತಾ ಹೋಯಿತು. 2000 ದಿಂದ ಈಚೆಗೆ ನಡೆದಿರುವ ಸಂಶೋಧನೆ ಮತ್ತು ಆವಿಷ್ಕಾರಗಳಿಂದ ಈ ಶಾಖೆಯಲ್ಲಿ ಆಗಿರುವ ಪ್ರಗತಿ ಹಿಂದೆಂದೂ ಆಗಿರದ ಮಟ್ಟದಲ್ಲಿ ಆಗಿದೆ ಎಂದು ಎಲ್ಲರೂ ಗುರುತಿಸುತ್ತಾರೆ. ಇದರಿಂದಲೇ, ಮನುಷ್ಯನ ಇತಿಹಾಸದಲ್ಲಿ ಬೆಂಕಿ, ವಿದ್ಯುಚ್ಛಕ್ತಿ ಮತ್ತು ಇಂಟರ್ ನೆಟ್ ಮಾಡಿರುವ ಪ್ರಭಾವದಂತೆ, ಕೃತಕ ಬುದ್ಢಿಮತ್ತೆಯೂ ಎಲ್ಲರನ್ನೂ, ಎಲ್ಲದನ್ನೂ ಆವರಿಸಿಕೊಳ್ಳುತ್ತದೆ ಎಂದೂ ಭವಿಷ್ಯ ನುಡಿಯಲಾಗಿದೆ. ಪ್ರಾಣಿಗಳು ಯೋಚಿಸುವ ಹಾದಿಯಲ್ಲಿ ಎರಡು ಮುಖ್ಯ ಅಂಶಗಳನ್ನು ಗುರುತಿಸಬಹುದು. ಒಂದು ತಮ್ಮ ಅನುಭವಗಳನ್ನು ಅವುಗಳ ನೆನಪಿನಲ್ಲಿ ಸಂಗ್ರಹವಾಗಿ ಹಿಡಿದಿಡುವ ಕ್ಷಮತೆ; ಇನ್ನೊಂದು ಈ ನೆನಪುಗಳ ಬಿಂದುಗಳನ್ನು ಜೋಡಿಸುತ್ತಾ ಮುಂದಿರುವ ಸಮಸ್ಯೆಗಳಿಗೆ ಉತ್ತರಗಳನ್ನು ಹುಡುಕುವ ರೀತಿ. ಗಣಕ ಯಂತ್ರಗಳು ಈ ಎರಡೂ ನಿಟ್ಟಿನಲ್ಲಿ ಅಗಾಧವಾದ ಪ್ರಗತಿಯನ್ನು ಸಾಧಿಸಿರುವುದರಿಂದ ಕೃತಕ ಬುದ್ಧಿಮತ್ತೆಯ ಸಂಶೋಧನೆಗಳು ದಾಪುಗಾಲು ಹಾಕುತ್ತಿವೆ. ಇಷ್ಟಾದರೂ ಮನುಷ್ಯನ ಮೆದುಳಿನ ಕಾರ್ಯವನ್ನು ಅರಿಯುವಲ್ಲಿ ಇನ್ನೂ ಅಂಬೆಗಾಲು ಕೂಡ ಇಟ್ಟಿಲ್ಲ ಎಂದೂ ಹೇಳಲಾಗುತ್ತಿದೆ.

ಡಿಜಿಟಲ್ ಮಾಧ್ಯಮದ ಮೂಲಕ ನಮ್ಮ ವ್ಯವಹಾರಗಳನ್ನು ನಡೆಸುವ ಅನೇಕರು ಕೃತಕ ಬುದ್ಧಿಮತ್ತೆಯ ಝಲಕುಗಳನ್ನು ಅನುಭವಿಸಿರುತ್ತಾರೆ. ಪ್ರತಿಯೊಂದು ಬಾರಿ ನಾವು ಜಾಲತಾಣದಲ್ಲಿ ಉತ್ಪನ್ನಗಳನ್ನು ಕೊಳ್ಳುವಾಗ, ’ಇದನ್ನೂ ಕೊಳ್ಳಬಹುದು’ ಎನ್ನುವ ಶಿಫಾರಸು, ಮೊಬೈಲ್ ಫೋನಿನಲ್ಲಿ ಮ್ಯಾಪ್ ಬಳಸಿದಾಗ, ’ಇಂಥ ಕಡೆ ಟ್ರಾಫಿಕ್ ಹೆಚ್ಚಿರುವ ಸಂಭವ ಇದೆ’ ಎನ್ನುವ ಸೂಚನೆ – ಇವೆಲ್ಲದರ ಹಿಂದೆ ಕೃತಕ ಬುದ್ಧಿಮತ್ತೆ ಕೆಲಸ ಮಾಡುತ್ತಿರುತ್ತದೆ. ಹಾಗಾಗಿ ಕೃತಕ ಬುದ್ಧಿಮತ್ತೆಯೆಂಬುದು ಸಮಾಜದ ಮೇಲೆ ಪರಿಣಾಮ ಬೀರುತ್ತದೋ ಇಲ್ಲವೋ ಎಂಬ ಹಂತವನ್ನು ಮೀರಿದ್ದೇವೆ. ಈಗ ಕೇಳಬೇಕಾಗಿರುವ ಪ್ರಶ್ನೆಗಳು – ಯಾರ ಮೇಲೆ, ಹೇಗೆ, ಎಲ್ಲಿ ಮತ್ತು ಯಾವಾಗ ಪರಿಣಾಮ ಬೀರುತ್ತದೆ ಎನ್ನುವುದು ಮತ್ತು ಅದರ ದುಷ್ಪರಿಣಾಮಗಳೇನು ಎನ್ನುವುದರ ಬಗ್ಗೆ ಚಿಂತಿಸುವುದು

ಈ ಮೇಲಿನ ಉದಾಹರಣೆಗಳು ಸೂಜಿಮೊನೆಯಷ್ಟಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲ ಕ್ರಿಯೆಗಳ ಮೇಲೂ ಅದರ ಪ್ರಭಾವ ಇರುವ ಸಾಧ್ಯತೆಗಳಿವೆ. ಆದ್ದರಿಂದಲೇ, ವಿಶ್ವದಲ್ಲಿ ಅನೇಕ ಸಂಸ್ಥೆಗಳು ’ಇಡೀ ಸಮಾಜಕ್ಕೆ ಪ್ರಯೋಜನವಾಗುವ ಹಾಗೆ ಕೃತಕ ಬುದ್ಧಿಮತ್ತೆಯನ್ನು ಬಳಸಲು ಬೇಕಾದ ನೈತಿಕ ಅಡಿಪಾಯಗಳು ಯಾವುವು?’ ಎಂಬ ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ. ಯಾವುದೇ ಹೊಸ ತಂತ್ರಜ್ಞಾನವನ್ನು ಸಮಾಜ ಒಪ್ಪಿಕೊಳ್ಳುವ ಹಾದಿಯಲ್ಲಿ ಸಹಜವಾಗಿಯೇ ಆಗುವ ಅತಿರೇಕಗಳನ್ನು ಹದ್ದುಬಸ್ತಿನಲ್ಲಿಡಲು ಕಾನೂನಿನ ಅಥವಾ ಸ್ವಯಂ ನಿಯಂತ್ರಣದ ಅವಶ್ಯಕತೆ ಇರುತ್ತದೆ. ವಿಶ್ವದಾದ್ಯಂತ “ರಾಷ್ಟ್ರ” ಗಳೆಂಬ ವ್ಯವಸ್ಥೆ ಕಾನೂನನ್ನು ರಚಿಸಲು ಮತ್ತು ಜಾರಿಗೆ ತರಲು ಸಾಕಷ್ಟು ವಿಳಂಬ ತೋರುತ್ತವೆ ಎಂಬುದು ಈಗಾಗಲೇ ಸಿದ್ಧವಾಗಿದೆ. ಅದೂ ಅಲ್ಲದೆ ಕಾನೂನನ್ನು ಮಾಡುವವರಿಗೂ ಹೊಸ ತಂತ್ರಜ್ಞಾನಗಳ ಬಗ್ಗೆ, ಅವುಗಳ ಒಳಿತು ಕೆಡುಕುಗಳ ಬಗ್ಗೆ ವಿವರವಾದ ಜ್ಞಾನ ಬೇಕಾಗುತ್ತದೆ. ಇಂತಹ ಜ್ಞಾನವನ್ನು ಒಂದೆಡೆಗೆ ತರಲು ಪ್ರಯತ್ನಗಳು ಜಾರಿಯಲ್ಲಿವೆ. ಇಲ್ಲಿ ಗಮನಿಸಬೇಕಾದ ಒಂದು ಕುತೂಹಲಕಾರಿ ಅಂಶವಿದೆ. ಕೃತಕ ಬುದ್ಧಿಮತ್ತೆಯನ್ನು ಒಳಗೊಂಡಂತೆ ಅನೇಕೆ ಡಿಜಿಟಲ್ ಮಾಧ್ಯಮಗಳನ್ನು ’ದೇಶದ ಕಾನೂನು’ ಎಂಬ ಸಂಕೋಲೆಯೊಳಗೆ ಬಂಧಿಸಲು ಸಾಧ್ಯವೇ ಎಂಬ ಪ್ರಶ್ನೆ. ಆದ್ದರಿಂದಲೇ, ರಾಷ್ಟ್ರಗಳಿಗೂ ಹೊರತಾದ, ಅತಿ ರಾಷ್ಟ್ರೀಯತೆ (Supranational) ಎಂಬ ಕಲ್ಪನೆಯೂ ಚರ್ಚಿಸಲ್ಪಡುತ್ತದೆ. ಈ ನಿಟ್ಟಿನಲ್ಲಿ ಐದು ತತ್ವಗಳನ್ನು ಪ್ರಸ್ತಾಪಿಸಲಾಗಿದೆ. ಅನುಕೂಲಗಳು, ದುರ್ಬಳಕೆ, ನ್ಯಾಯ, ಸ್ವಾಯತ್ತತೆ ಮತ್ತು ವಿವರಣಾತ್ಮಕತೆ. ಇವುಗಳಲ್ಲಿ ಮೊದಲ ನಾಲ್ಕು, ಈಗಾಗಲೇ ಇರುವ ಕಾಯಿದೆಗಳನ್ನೂ ಒಳಗೊಂಡು ಎಲ್ಲ ನಿಯಮಗಳಲ್ಲೂ ಇರುವುದಾದರೂ, ಕೊನೆಯ ತತ್ವ ವಿವರಣಾತ್ಮಕತೆ ಕೃತಕ ಬುದ್ಧಿಮತ್ತೆಗೆ ಮಾತ್ರ ಅನ್ವಯವಾಗುತ್ತದೆ.

ಒಂದು ಸಮಾಧಾನದ ಸಂಗತಿಯೆಂದರೆ, ವಿಶ್ವದ ಬೇರೆ ಬೇರೆ ಶಿಸ್ತುಗಳಿಗೆ ಸೇರಿದ ಹಲವಾರು ಮಂದಿ ಈ ನಿಟ್ಟಿನಲ್ಲಿ ಯೋಚಿಸಿ ಕೆಲಸ ಮಾಡುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ತಮ್ಮ ಕಂಪನಿಗಳ ಮುಖ್ಯ ಆಧಾರಗಳಲ್ಲೊಂದು ಎಂದು ಭಾವಿಸಿ ಅದರಲ್ಲಿ ಬಂಡವಾಳ ತೊಡಗಿಸಿರುವ ಉದ್ಯಮಗಳೂ ತಮ್ಮನ್ನೇ ತಾವು ನಿರ್ಬಂಧಿಸುವುದಕ್ಕೆ ನಿಯಮಗಳನ್ನು ಹಾಕಿಕೊಂಡಿದ್ದಾರೆ. ಉದಾಹರಣೆಗೆ, ಗೂಗಲ್ ಸಂಸ್ಥೆ 7 ನಿಯಮಗಳಿಗೆ ಅನುಸಾರವಾಗಿ ತನ್ನ ಸಂಶೋಧನೆಯನ್ನು ಮಾಡುವುದಾಗಿಯೂ, ನಾಲ್ಕು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸುವುದಿಲ್ಲವೆಂದೂ ಹೇಳಿಕೊಂಡಿದೆ. ಇದೇ ರೀತಿ ಕಾರು ತಯಾರಿಸುವ ರೋಲ್ಸ್ ರಾಯ್ಸ್ ಸಂಸ್ಥೆಯು ಕೃತಕ ಬುದ್ಧಿಮತ್ತೆ ಯನ್ನು ನೈತಿಕವಾಗಿ ಅಳವಡಿಸುವ ಬಗ್ಗೆ ನೀತಿ ನಿಯಮಾವಳಿಗಳನ್ನು ರೂಪಿಸಿದ್ದು, ಅದನ್ನು ಎಲ್ಲರಿಗೂ ಸಿಗುವ ಹಾಗೆ ಪ್ರಕಟಿಸಿದೆ.

ಈ ಎಲ್ಲ ಕಾರಣಗಳಿಂದ ಕೃತಕ ಬುದ್ಧಿಮತ್ತೆ ಎನ್ನುವುದು ವಿಜ್ಞಾನಿ ಮತ್ತು ತಂತ್ರಜ್ಞಾನಿಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದ ಎಲ್ಲ ಜನರಲ್ಲೂ ಆಸಕ್ತಿ ಹುಟ್ಟಿಸಿದೆ. ಕಲೆಯ ಲೋಕವೂ ಅದಕ್ಕೆ ಹೊರತಾಗದೆ, ಮೊದಲು ಹಾಲಿವುಡ್ ಚಿತ್ರಗಳಲ್ಲಿ ಮಾತ್ರ ಕಾಣುತ್ತಿದ್ದ ಕೃತಕ ಬುದ್ಧಿಮತ್ತೆಯ ಬಗ್ಗೆ, ಕಲೆಯ ಇತರ ವಿಭಾಗಗಳೂ ಪ್ರತಿಕ್ರಿಯಿಸಲು ಪ್ರಾರಂಭಿಸಿವೆ.

ಜನವರಿ ೬, ೨೦೨೨ರ 'ಆಂದೋಲನ'ದಲ್ಲಿ ಪ್ರಕಟವಾದ ಲೇಖನ, ಲೇಖಕರ ಅನುಮತಿಯೊಂದಿಗೆ ಮರುಪ್ರಕಟಿಸಲಾಗಿದೆ.

ಮನುಷ್ಯರಂತೆಯೇ ತನ್ನ ಸುತ್ತಮುತ್ತಲಿನ ವಾತಾವರಣವನ್ನು ಅರ್ಥೈಸಿಕೊಳ್ಳಬಲ್ಲ, ಮನುಷ್ಯರಂತೆಯೇ ನಿರ್ಧಾರಗಳನ್ನು ತಳೆಯಬಲ್ಲ ತಂತ್ರಜ್ಞಾನವನ್ನು ಎ. ಐ. ಎಂದು ಕರೆಯುತ್ತೇವೆ
ಮಶೀನ್ ಲರ್ನಿಂಗ್ ಅಂದರೇನು?

Related Stories

No stories found.
logo
ಇಜ್ಞಾನ Ejnana
www.ejnana.com