ದೃಷ್ಟಿ ಸವಾಲು ಎದುರಿಸುವವರು ಅಂತರಜಾಲ ಬಳಸುವಾದ ಎದುರಾಗುವ ಪ್ರಮುಖ ಸಮಸ್ಯೆ ಸುಗಮ್ಯತೆ ಅಥವಾ accessibilityಯದ್ದು.
ದೃಷ್ಟಿ ಸವಾಲು ಎದುರಿಸುವವರು ಅಂತರಜಾಲ ಬಳಸುವಾದ ಎದುರಾಗುವ ಪ್ರಮುಖ ಸಮಸ್ಯೆ ಸುಗಮ್ಯತೆ ಅಥವಾ accessibilityಯದ್ದು.Image by Free-Photos from Pixabay

ಡಿಜಿಟಲ್ ಜಗತ್ತಿನ ನಿರ್ಲಕ್ಷಿತರು!

ಮಾಹಿತಿಯನ್ನು ಅರಸುವುದು, ಪಡೆಯುವುದು, ಇತರರೊಡನೆ ಹಂಚಿಕೊಳ್ಳುವುದು ಎಲ್ಲರಿಗೂ ಸುಲಭವೇ? 'ಕನ್ನಡ ತಂತ್ರಾಂಶ'ವೆಂಬ ವಿಶಿಷ್ಟ ಆನ್‌ಲೈನ್ ಸಮುದಾಯದ ನಿರ್ವಾಹಕರು ಏನು ಹೇಳುತ್ತಾರೆ, ಓದಿನೋಡಿ!

ಪ್ರತಿವರ್ಷ ಸೆಪ್ಟೆಂಬರ್ ೨೮ನೇ ದಿನಾಂಕವನ್ನು ವಿಶ್ವಸಂಸ್ಥೆಯು International Day for Universal Access to Information ಎಂದು ಆಚರಿಸುತ್ತದೆ. ಮಾಹಿತಿಯನ್ನು ಅರಸುವ, ಪಡೆಯುವ ಹಾಗೂ ಇತರರಿಗೂ ಮುಟ್ಟಿಸುವ ಹಕ್ಕು ಎಲ್ಲರಿಗೂ ಎಲ್ಲ ಸಮಯಗಳಲ್ಲೂ ಇರಬೇಕು ಎನ್ನುವುದು ಈ ದಿನಾಚರಣೆಯ ಉದ್ದೇಶ. ಅಂತರಜಾಲದ ಅಗಾಧ ಸಾಧ್ಯತೆಗಳನ್ನು ನೋಡಿದಾಗ ಈ ಹಕ್ಕು ಈಗಾಗಲೇ ಎಲ್ಲರಿಗೂ ಇದೆ ಎನ್ನಿಸುವುದು ಸಹಜ. ಆದರೆ ಪರಿಸ್ಥಿತಿ ನಿಜಕ್ಕೂ ಹಾಗಿದೆಯೇ? ಮಾಹಿತಿಯನ್ನು ಅರಸುವುದು, ಪಡೆಯುವುದು, ಇತರರೊಡನೆ ಹಂಚಿಕೊಳ್ಳುವುದು ಎಲ್ಲರಿಗೂ ಅಷ್ಟು ಸುಲಭವೇ? 'ಕನ್ನಡ ತಂತ್ರಾಂಶ'ವೆಂಬ ವಿಶಿಷ್ಟ ಆನ್‌ಲೈನ್ ಸಮುದಾಯದ ನಿರ್ವಾಹಕರು ಏನು ಹೇಳುತ್ತಾರೆ, ಓದಿನೋಡಿ!

ಇಜ್ಞಾನ ತಂಡ

ಆಧುನಿಕ ಜಗತ್ತನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹುದು - ಭೌತಿಕ ಜಗತ್ತು ಹಾಗೂ ಡಿಜಿಟಲ್ ಜಗತ್ತು. 21ನೇ ಶತಮಾನವು ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮವಾದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಜಾಗತಿಕ ಸೋಂಕು ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರವನ್ನು ಮುಂದಿನ ಒಂದು ದಶಕದಷ್ಟು ತ್ವರಿತಗೊಳಿಸಿದೆ. ಈ ಮೊದಲು ನಡೆಸುತ್ತಿದ್ದ ರೀತಿಯಲ್ಲಿ ಎಲ್ಲರೂ ಒಂದೆಡೆ ಸೇರಿ ತರಗತಿಗಳು, ಕಚೇರಿಯ ಕೆಲಸಗಳು, ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗದೆ ಇರುವ ಕಾರಣದಿಂದಾಗಿ ಇವೆಲ್ಲವೂ ಅಂತರ್ಜಾಲದ ಸಹಾಯದಿಂದಲೇ ನಡೆಯುತ್ತಿವೆ.

ಇದು ದೈಹಿಕ ಅಂಗವೈಕಲ್ಯತೆಯನ್ನು ಹೊಂದಿರುವ ಹಲವಾರು ಜನರಿಗೆ ಇತರರಂತೆ ಕೆಲಸ ಮಾಡಲು ಸಹಾಯವಾಗಿದೆ ಎನ್ನುವುದು ಗಮನಿಸಬೇಕಾದ ವಿಷಯ. ಹಾಗೆಂದು ದೈಹಿಕ ಅಂಗವೈಕಲ್ಯತೆಯನ್ನು ಹೊಂದಿರುವವರ ಎಲ್ಲ ಸವಾಲುಗಳಿಗೆ ಪರಿಹಾರ ಸಿಕ್ಕಿದೆ ಅಥವಾ ಎಲ್ಲರಂತೆ ಅವರನ್ನು ಪರಿಗಣಿಸಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವರಿಗೆ ಇದರಿಂದ ಸಾಕಷ್ಟು ಒಳಿತಾದರೆ, ಇನ್ನು ಕೆಲವು ಸಂದರ್ಭಗಳಲ್ಲಿ ಊಹೆಗೂ ನಿಲುಕದಂತೆ ಸವಾಲುಗಳು ಎದುರಾಗುತ್ತಿವೆ. ಬಹುಮುಖ್ಯವಾಗಿ ದೃಷ್ಟಿ ಸವಾಲು ಎದುರಿಸುವವರು, ಶ್ರವಣ ದೋಷವುಳ್ಳವರು ಹಾಗೂ ಇನ್ನಿತರ ದೈಹಿಕ ಅಂಗವೈಕಲ್ಯತೆಯನ್ನು ಹೊಂದಿರುವವರು ಇಂತಹ ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಈಗ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಬಹುದು. ದೃಷ್ಟಿ ಸವಾಲು ಎದುರಿಸುವವರು ಯಾವ ರೀತಿ ತಂತ್ರಜ್ಞಾನವನ್ನು ಬಳಸುತ್ತಾರೆ? ದೃಷ್ಟಿಯೇ ಇಲ್ಲದಿದ್ದರೆ ತಂತ್ರಜ್ಞಾನವನ್ನು ಬಳಸಲು ಸಾಧ್ಯವೇ?

ದೃಷ್ಟಿ ಸವಾಲು ಎದುರಿಸುವವರು ಕೂಡ ಸಾಮಾನ್ಯ ಜನರ ವೇಗದಲ್ಲಿಯೇ ತಂತ್ರಜ್ಞಾನವನ್ನು ಬಳಸುತ್ತಾರೆ. ಹಾಗಾದರೆ ಇದು ಸಂತೋಷದ ವಿಷಯ ಅಲ್ಲವೇ? ಅವರಿಗೆ ಇನ್ನೂ ಏನಾದರೂ ಸವಾಲುಗಳಿವೆಯೇ?

ಈ ಕುರಿತು ಗಮನ ಹರಿಸುವುದಾದರೆ ಮುಖ್ಯವಾದ ಸವಾಲು ಸುಗಮ್ಯತೆ ಅಥವಾ accessibilityಯದ್ದಾಗಿದೆ.

ಸಾಮಾನ್ಯವಾಗಿ ಎಲ್ಲ ಸೇವೆಗಳು ಅಥವಾ ವಸ್ತುಗಳು ಅಂಗವಿಕಲರೂ ಸೇರಿದಂತೆ ಎಲ್ಲರೂ ಬಳಸಲು ಸುಲಭವಾಗುವಂತೆ ಇರುವುದೇ ಸುಗಮ್ಯತೆ. ಈಗ ಜಾಲತಾಣಗಳಲ್ಲಿ ಸುಗಮ್ಯತೆಯ ಕುರಿತು ಹಲವಾರು ಲೇಖನಗಳು ಲಭ್ಯವಿವೆ. ಹಾಗೆಯೇ ಇದರ ಕುರಿತು ಹಲವಾರು ತರಬೇತಿಗಳೂ ಸಿಗುತ್ತವೆ. ಈ ಕುರಿತು ವರ್ಲ್ಡ್‌ವೈಡ್ ವೆಬ್ ಕನ್ಸಾರ್ಷಿಯಂ ಪ್ರಕಟಿಸಿರುವ ಮಾಹಿತಿಯನ್ನು ನೀವು ಇಲ್ಲಿ ಓದಬಹುದು.

ಸುಗಮ್ಯತೆಯ ಮಹತ್ವವನ್ನು ಒಂದು ಉದಾಹರಣೆಯೊಂದಿಗೆ ನಿಮಗೆ ತಿಳಿಸುವುದಾದರೆ, ಒಂದು ವೇಳೆ ನೀವು ಯಾವುದಾದರೂ ಒಂದು ಭೋಜನಾಲಯ ಕ್ಕೆ ಹೋದಾಗ ನೀವು ಯಾವುದೋ ಒಂದು ವರ್ಣದವರು, ಜಾತಿಯವರು, ಅಥವಾ ದೇಶದವರು ಎಂದು ನಿಮ್ಮನ್ನು ಅಲ್ಲಿಯ ಸಿಬ್ಬಂದಿಗಳು ಒಳಕ್ಕೆ ಸೇರಿಸಿಕೊಳ್ಳದಿದ್ದರೆ ನಿಮಗೆ ಹೇಗೆ ಅನಿಸುತ್ತದೆ? ದೃಷ್ಟಿ ಸವಾಲನ್ನು ಎದುರಿಸುವವರು ಜಾಲತಾಣಗಳು ಅಥವಾ ತಂತ್ರಾಂಶಗಳಲ್ಲಿ ಇಂತಹುದೇ ಸಮಸ್ಯೆಯನ್ನು ಎದುರಿಸುತ್ತಾರೆ. ಒಂದು ಸಂತೋಷದ ವಿಷಯವೆಂದರೆ ಹಲವಾರು ಕಿರು ತಂತ್ರಾಂಶಗಳು ಅಥವಾ ಸೇವೆಯನ್ನು ನೀಡುತ್ತಿರುವವರು ಅವರ ತಂತ್ರಾಂಶಗಳನ್ನು ಸುಗಮವಾಗಿ ಇರುವಂತೆ ಮಾಡಲು ಪ್ರಯತ್ನಿಸುತ್ತಾರೆ.

ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನ ಸುಮಾರು ಹದಿನೈದು ಶೇಕಡದಷ್ಟು ಜನರು ಒಂದಲ್ಲ ಒಂದು ರೀತಿಯ ಅಂಗವೈಕಲ್ಯತೆಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಭಾರತದಲ್ಲಿ ಸುಮಾರು2.6ರಿಂದ 10 ಶೇಕಡದಷ್ಟು ಜನರು ಅಂಗವೈಕಲ್ಯತೆಯನ್ನು ಹೊಂದಿರುವವರು ಇದ್ದಾರೆ. ಆದ್ದರಿಂದ ಎಲ್ಲ ಸೇವೆಗಳು ಅಥವಾ ವಸ್ತುಗಳು ಸುಗಮವಾಗಿದ್ದರೆ ಈ ಎಲ್ಲರೂ ಅವುಗಳನ್ನು ಅಡೆತಡೆಗಳಿಲ್ಲದೆ ಬಳಸಲು ಸಾಧ್ಯವಾಗುತ್ತದೆ. ಹಾಗಾಗಿ ಎಲ್ಲಾ ಸೇವೆಗಳನ್ನು ನೀಡುತ್ತಿರುವವರು ಅಥವಾ ತಂತ್ರಾಂಶ ಅಭಿವೃದ್ಧಿಪಡಿಸುತ್ತಿರುವವರು ಈ ಕುರಿತು ಸ್ವಲ್ಪ ಗಮನ ವಹಿಸಿದರೆ ಇಂತಹ ಹಲವಾರು ಪ್ರಾಮಾಣಿಕ ಗ್ರಾಹಕರು ನಿಮಗೆ ಸಿಗಬಹುದು.

ಈಗಾಗಲೇ ಹೇಳಿದ ಹಾಗೆ ಹಲವು ಜಾಲತಾಣಗಳಲ್ಲಿ ನೀವು ಸುಗಮ್ಯತೆಯ ಕುರಿತು ತರಬೇತಿಯನ್ನು ಪಡೆದುಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ ಹಲವಾರು ಕಾಯಿದೆಗಳೂ ಇವೆ. ಉದಾಹರಣೆಗೆ: RPWD(ಅಂಗವಿಕಲರ ಹಕ್ಕು ಅಧಿನಿಯಮ) 2016, United Nation’s Convention on the Rights of Persons with Disabilities, ಇತ್ಯಾದಿ. ಈ ಕಾಯಿದೆಗಳೊಂದಿಗೆ ಸುಗಮ್ಯತೆ, ಸಹಾನುಭೂತಿಯು ಸಮನ್ವಯಗೊಳ್ಳುವ ಮೂಲಕ ಡಿಜಿಟಲ್ ಜಗತ್ತಿನ ನಿರ್ಲಕ್ಷಿತ ವರ್ಗವನ್ನು ಮೇಲಕ್ಕೆತ್ತಿ ಅವರ ಮುಖದಲ್ಲಿ ಖುಷಿ ತರಿಸುವ ಪ್ರಯತ್ನ ಆಗಬಹುದಲ್ಲವೇ?

ಏನಿದು ಕನ್ನಡ ತಂತ್ರಾಂಶ? ಮೊಬೈಲ್‌, ಕಂಪ್ಯೂಟರ್‌, ಇತ್ಯಾದಿ ಆಧುನಿಕ ತಂತ್ರಜ್ಞಾನಗಳನ್ನು ಬಳಸುವಾಗ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಾಗೂ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಜೇಸನ್‌ ಮತ್ತು ಸ್ನೇಹಿತರು 2015ರಲ್ಲಿ ವಾಟ್ಸ್‌ಆಪ್‌ ಸಮೂಹವೊಂದನ್ನು ಹುಟ್ಟು ಹಾಕಿದರು. ಅದುವೇ, ಅಂಧರಿಗಾಗಿ ಮೀಸಲಿರುವ 'ಕನ್ನಡ ತಂತ್ರಾಂಶ'. ಕನ್ನಡಿಗರಿಗೆ ಕನ್ನಡದಲ್ಲೇ ತಾಂತ್ರಿಕ ಮಾಹಿತಿಯನ್ನು ನೀಡುವುದು ಈ ತಂಡದ ಉದ್ದೇಶವಾಗಿದೆ. ಕನ್ನಡ ತಂತ್ರಾಂಶದ ಫೇಸ್ಬುಕ್‌, ವಾಟ್ಸ್‌ಆಪ್‌ ಮತ್ತು ಟೆಲಿಗ್ರಾಂ ಸಮೂಹಗಳಲ್ಲಿ ನೀವು ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದುಕೊಳ್ಳಬಹುದು. ಹಾಗೆಯೇ, ಯೂಟ್ಯೂಬ್‌ ಚಾನಲ್‌ಗೆ ಸಬ್ಸ್‌ಕ್ರೈಬ್‌ ಆಗಿ ಹಲವಾರು ವಿಷಯಗಳಿಗೆ ಸಂಬಂಧಿಸಿದ ಆಡಿಯೋ ಹಾಗೂ ವೀಡಿಯೋ ಟುಟೋರಿಯಲ್‌ಗಳನ್ನೂ ಆಲಿಸಬಹುದು. ಆಸಕ್ತರು ಹೆಚ್ಚಿನ ವಿವರಗಳಿಗೆ ರಾಜೇಶ್ ಕಿಣಿ ಅವರನ್ನು ದೂರವಾಣಿ ಸಂಖ್ಯೆ 9483731428 ಮೂಲಕ ಸಂಪರ್ಕಿಸಬಹುದು.

Related Stories

No stories found.
logo
ಇಜ್ಞಾನ Ejnana
www.ejnana.com