ಮೊಬೈಲ್ ಕ್ರಾಂತಿಯ ಹೊಸ ಅಧ್ಯಾಯ: 5G
Image by torstensimon from Pixabay

ಮೊಬೈಲ್ ಕ್ರಾಂತಿಯ ಹೊಸ ಅಧ್ಯಾಯ: 5G

5G ತಂತ್ರಜ್ಞಾನದಿಂದಾಗಿಯೂ ಅಂತರಜಾಲ ಸಂಪರ್ಕದ ವೇಗ ಜಾಸ್ತಿಯಾಗಿದೆ. ದತ್ತಾಂಶ ವರ್ಗಾವಣೆಯ ವೇಗ ಎಂಬಿಪಿಎಸ್‌ ಲೆಕ್ಕದಿಂದ ಜಿಬಿಪಿಎಸ್ ಲೆಕ್ಕಕ್ಕೆ ಬಡ್ತಿ ಪಡೆದಿದೆ. ಆದರೆ 5G ಎಂದರೆ ಇಷ್ಟೇನೇ?

ಇಪ್ಪತ್ತು ವರ್ಷಗಳ ಹಿಂದೆ, ಅಂತರಜಾಲ ಸಂಪರ್ಕ ಬಳಸಬೇಕೆಂದರೆ ಸೈಬರ್ ಕೆಫೆಗಳಿಗೇ ಹೋಗಬೇಕು - ಭಾರೀ ಶುಲ್ಕವನ್ನೂ ಕೊಡಬೇಕು ಎನ್ನುವಂತಹ ಪರಿಸ್ಥಿತಿ ದೊಡ್ಡ ನಗರಗಳಲ್ಲೇ ಇತ್ತು. ನಂತರದ ವರ್ಷಗಳಲ್ಲಿ ತನ್ನ ವ್ಯಾಪ್ತಿಯನ್ನು ನಿಧಾನಕ್ಕೆ ವಿಸ್ತರಿಸಿಕೊಳ್ಳುತ್ತಾ ಬಂದ ಅಂತರಜಾಲಕ್ಕೆ ಅಗಾಧ ನೂಕುಬಲ ದೊರೆತದ್ದು ಮೊಬೈಲ್ ತಂತ್ರಜ್ಞಾನದಿಂದ. ೪ಜಿ ತಂತ್ರಜ್ಞಾನ ಪರಿಚಯವಾದಾಗಲಂತೂ ಭಾರತ ಏಕಾಏಕಿ ಪ್ರಪಂಚದಲ್ಲೇ ಅತಿ ಹೆಚ್ಚು ಮೊಬೈಲ್ ಡೇಟಾ ಬಳಸುವ ದೇಶಗಳಲ್ಲೊಂದಾಗಿ ಹೊರಹೊಮ್ಮಿತು. ಆನಂತರದ ಮಹತ್ವದ ಹೆಜ್ಜೆಯೇ ೫ಜಿಯ ಪರಿಚಯ. ತಂತ್ರಜ್ಞಾನ ಕ್ಷೇತ್ರದಲ್ಲಿ ೨೦೨೨ರ ಮಹತ್ವದ ಸಾಧನೆಗಳ ಪೈಕಿ ಇದೂ ಒಂದು.

ಮೊಬೈಲ್ ತಂತ್ರಜ್ಞಾನದ ಬೆಳವಣಿಗೆಯ ಕುರಿತು ಮಾತನಾಡುವಾಗ ನಾವು ೨ಜಿ, ೩ಜಿ, ೪ಜಿ ಮುಂತಾದ ಅನೇಕ ಹೆಸರುಗಳನ್ನು ಕೇಳುತ್ತೇವೆ. ಇಲ್ಲಿ 'ಜಿ' ಎಂದರೆ ಜನರೇಶನ್ - ಅರ್ಥಾತ್ ತಲೆಮಾರು. ೫ಜಿ ಎನ್ನುವುದು ಮೊಬೈಲ್ ತಂತ್ರಜ್ಞಾನದ ಐದನೆಯ ತಲೆಮಾರಿನ ಹೆಸರು. ೨೦೨೨ರ ಅಕ್ಟೋಬರ್ ೧ರಿಂದ ಹಲವು ಭಾರತೀಯ ನಗರಗಳಲ್ಲಿ ಈ ಹೊಸ ತಲೆಮಾರಿನ ಮೊಬೈಲ್ ಸೇವೆಯನ್ನು ಒದಗಿಸಲಾಗುತ್ತಿದೆ.

ಹೊಸ ತಲೆಮಾರಿನ ಮೊಬೈಲ್ ಸಂಪರ್ಕ ಎಂದಕೂಡಲೇ ಅದರಲ್ಲಿ ಅಂತರಜಾಲ ಸಂಪರ್ಕದ ವೇಗ ಹಿಂದೆಂದಿಗಿಂತ ಹೆಚ್ಚಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ೨ಜಿಯಿಂದ ೩ಜಿಗೆ, ಅಲ್ಲಿಂದ ೪ಜಿಗೆ ಆಗಿದ್ದು ಅದೇ ತಾನೇ?

೫ಜಿ ತಂತ್ರಜ್ಞಾನದಿಂದಾಗಿಯೂ ಅಂತರಜಾಲ ಸಂಪರ್ಕದ ವೇಗ ಜಾಸ್ತಿಯಾಗಿದೆ. ೪ಜಿಯಲ್ಲಿ ಸೆಕೆಂಡಿಗೆ ಕೆಲವು ಮೆಗಾಬಿಟ್‌ಗಳಷ್ಟಿರುವ (ಎಂಬಿಪಿಎಸ್) ದತ್ತಾಂಶ ವರ್ಗಾವಣೆಯ ವೇಗ ೫ಜಿ ಜಾಲಗಳಲ್ಲಿ ಸೆಕೆಂಡಿಗೆ ಹಲವು ಗಿಗಾಬಿಟ್‌ಗಳವರೆಗೆ (ಜಿಬಿಪಿಎಸ್) ಮುಟ್ಟಿದೆ. ಒಂದು ಜಿಬಿಪಿಎಸ್ ವೇಗ, ಒಂದು ಎಂಬಿಪಿಎಸ್‌ಗಿಂತ ಸಾವಿರ ಪಟ್ಟು ಹೆಚ್ಚು! ದೂರವಾಣಿ ಕರೆಗಳಲ್ಲಿ ಆ ಬದಿಯವರ ಧ್ವನಿಯನ್ನು ಅತ್ಯಂತ ಸ್ಪಷ್ಟವಾಗಿ ಕೇಳುವುದಷ್ಟೇ ಏಕೆ, ವೀಡಿಯೊ ಕರೆಗಳಲ್ಲಿ ಅತ್ಯಂತ ಸ್ಪಷ್ಟ ಚಿತ್ರಗಳನ್ನು ನೋಡುವುದನ್ನೂ ಇದು ಸಾಧ್ಯವಾಗಿಸಲಿದೆ.

ಹೆಚ್ಚು ಹೆಚ್ಚು ಸಾಧನಗಳು ಅಂತರಜಾಲದ ಸಂಪರ್ಕಕ್ಕೆ ಬಂದಂತೆ ಅದನ್ನು ತಾಳಿಕೊಳ್ಳಲು ಬೇಕಾದ ಅಗಾಧ ಸಾಮರ್ಥ್ಯ ೫ಜಿಯಿಂದಾಗಿ ಲಭ್ಯವಾಗಲಿದೆ. ಇದರಿಂದ ವಸ್ತುಗಳ ಅಂತರಜಾಲದಂತಹ (ಐಓಟಿ) ಪರಿಕಲ್ಪನೆಗಳ ಅನುಷ್ಠಾನ ಇನ್ನಷ್ಟು ಸುಲಭವಾಗಲಿದೆ. ಭಾರೀ ಸಂಖ್ಯೆಯ ಯಂತ್ರಗಳನ್ನು ಏಕಕಾಲದಲ್ಲಿ ನಿಯಂತ್ರಿಸುವುದು, ಅವು ರವಾನಿಸುವ ದತ್ತಾಂಶವನ್ನು ಥಟ್ಟನೆ ಸಂಗ್ರಹಿಸಿ ಸಂಸ್ಕರಿಸುವುದು, ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವುದು - ಇಂಥದ್ದನ್ನೆಲ್ಲ ೫ಜಿ ತಂತ್ರಜ್ಞಾನ ಸಾಧ್ಯವಾಗಿಸಲಿದೆ. ಅಂತರಜಾಲ ಆಧಾರಿತ ವೈದ್ಯಕೀಯ ಸೇವೆಗಳನ್ನು ಒದಗಿಸುವಂತಹ ಹೊಸ ಕನಸುಗಳನ್ನೂ ಅದು ನನಸಾಗಿಸಲಿದೆ.

ಅಂತರಜಾಲ ಸಂಪರ್ಕದ ಮೂಲಕ ನಾವು ಅಪೇಕ್ಷಿಸಿದ ಮಾಹಿತಿ ನಮಗೆ ದೊರಕಲು ಕೊಂಚ ಸಮಯ ತೆಗೆದುಕೊಳ್ಳುತ್ತದಲ್ಲ, ಆ ವಿಳಂಬದ ಅವಧಿಯನ್ನು ತಾಂತ್ರಿಕ ಪರಿಭಾಷೆಯಲ್ಲಿ 'ಲೇಟೆನ್ಸಿ' ಎಂದು ಕರೆಯುತ್ತಾರೆ. ಯಾವುದೇ ಜಾಲದಲ್ಲಿ ನಿರ್ದಿಷ್ಟ ಪ್ರಮಾಣದ ದತ್ತಾಂಶ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಲು ತೆಗೆದುಕೊಳ್ಳುವ ಸಮಯ ಇದು. ಸಂಚಾರ ದಟ್ಟಣೆ ಗಮನಿಸಿಕೊಂಡು ವಾಹನ ಸಂಚಾರವನ್ನು ನಿಯಂತ್ರಿಸುವುದು, ಅಂತರಜಾಲದ ಮೂಲಕ ಚಿಕಿತ್ಸೆ ನೀಡುವುದು - ಇವೆಲ್ಲ ಸಾಧ್ಯವಾಗಬೇಕಾದರೆ ಈ ವಿಳಂಬ ಅತ್ಯಂತ ಕಡಿಮೆಯಿರಬೇಕಾದ್ದು ಅತ್ಯಗತ್ಯ. ಇದನ್ನೂ ೫ಜಿ ತಂತ್ರಜ್ಞಾನ ಸಾಧ್ಯವಾಗಿಸುತ್ತದೆ.

ಮೊಬೈಲ್ ತಂತ್ರಜ್ಞಾನದ ಈವರೆಗಿನ ತಲೆಮಾರುಗಳ ಅನುಕೂಲವನ್ನು ಮೊಬೈಲ್ ಸೇವೆ ಒದಗಿಸುವ ಸಂಸ್ಥೆಗಳ ಮೂಲಕವೇ ಪಡೆದುಕೊಳ್ಳಬೇಕಿತ್ತು. ೫ಜಿಯೊಂದಿಗೆ ಆ ಪರಿಸ್ಥಿತಿಯೂ ಬದಲಾಗುತ್ತಿದೆ. ಸರಕಾರಿ ಅಥವಾ ಖಾಸಗಿ ಸಂಸ್ಥೆಗಳು ಬಯಸಿದರೆ ತಮ್ಮದೇ ಆದ ೫ಜಿ ಜಾಲವನ್ನು ಸ್ಥಾಪಿಸಿಕೊಳ್ಳುವುದನ್ನು ಸಾಧ್ಯವಾಗಿಸುವುದು ೫ಜಿಯ ವೈಶಿಷ್ಟ್ಯಗಳಲ್ಲೊಂದು. 'ಪ್ರೈವೇಟ್ ೫ಜಿ' ಎಂದು ಕರೆಸಿಕೊಳ್ಳುವ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಅನೇಕ ಸಂಸ್ಥೆಗಳು ಈಗಾಗಲೇ ಮುಂದೆಬಂದಿದ್ದು, ಆಯಾ ಸಂಸ್ಥೆಗಳ ತಾಂತ್ರಿಕ ಮೂಲಸೌಕರ್ಯದಲ್ಲಿ ಇದು ಗಮನಾರ್ಹ ಬದಲಾವಣೆ ತರುವ ನಿರೀಕ್ಷೆಯಿದೆ. ಈಥರ್‌ನೆಟ್‌ನಂತಹ ತಂತಿ-ಆಧಾರಿತ ತಂತ್ರಜ್ಞಾನಗಳು ಇದರಿಂದ ಮೂಲೆಗುಂಪಾಗಬಹುದು ಎನ್ನುವುದು ಸದ್ಯದ ನಿರೀಕ್ಷೆ.

ಭಾರತದಲ್ಲಿ ಮೊಬೈಲ್ ತಂತ್ರಜ್ಞಾನದ ಮುನ್ನಡೆ ಎಂದಾಗ ಅದು ಹೊರದೇಶಗಳಿಂದ ಆಮದಾದ ಸಾಧನ ಮತ್ತು ತಂತ್ರಾಂಶಗಳ ಅಳವಡಿಕೆಗೆ ಮಾತ್ರ ಸೀಮಿತ ಎನ್ನುವ ಅಭಿಪ್ರಾಯ ಬಹಳ ಸಮಯದಿಂದ ಪ್ರಚಲಿತದಲ್ಲಿತ್ತು. ೫ಜಿಯೊಂದಿಗೆ ಆ ಅಭಿಪ್ರಾಯವೂ ಬದಲಾಗುವ ಸಮಯ ಬಂದಿದೆ. ಏಕೆಂದರೆ ೫ಜಿ ವೇದಿಕೆಯನ್ನು ಸಜ್ಜುಗೊಳಿಸುವ ಕೆಲಸದಲ್ಲಿ ಭಾರತೀಯ ತಂತ್ರಜ್ಞರು ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ೫ಜಿ ಸೇವೆಗಳಿಗಾಗಿ ನಮ್ಮ ದೇಶದಲ್ಲೇ ರೂಪಿಸಲಾದ ೫ಜಿಐ ಮಾನಕಕ್ಕೆ (ಸ್ಟಾಂಡರ್ಡ್) ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಮಾನ್ಯತೆ ದೊರೆತಿದ್ದು, ಮುಂದಿನ ದಿನಗಳಲ್ಲಿ ನಾವು ಇಂತಹುದೇ ಇನ್ನಷ್ಟು ಬೆಳವಣಿಗೆಗಳನ್ನು ಕಾಣಬಹುದೆಂಬ ಭರವಸೆಯೂ ಮೂಡಿದೆ.

ಜನವರಿ ೨೦೨೩ರ ಕುತೂಹಲಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com