ಮೊದಲ ಡಾಟ್ ಕಾಮ್‌ಗೆ ಮೂವತ್ತೈದು!
೧೯೮೫ರಿಂದ ಇಂದಿನವರೆಗೆ .com ಅಂತ್ಯಪ್ರತ್ಯಯ ಬಳಸುವ ೧೪ ಕೋಟಿಗೂ ಹೆಚ್ಚು ವಿಳಾಸಗಳು ನೋಂದಣಿಯಾಗಿವೆಯಂತೆ!By Verisign, Nkagrawal@enwiki - w:File:DotCom Logo OnWhite.jpg, Public Domain, https://commons.wikimedia.org/w/index.php?curid=59363982

ಮೊದಲ ಡಾಟ್ ಕಾಮ್‌ಗೆ ಮೂವತ್ತೈದು!

ಡೊಮೈನ್ ನೇಮ್ ಸಿಸ್ಟಂ ಮೂಲಕ ನೋಂದಾಯಿಸಲಾದ ಪ್ರಪಂಚದ ಮೊತ್ತಮೊದಲ ಡೊಮೈನ್ ನೇಮ್ Symbolics.comಗೆ ಇದೀಗ ಮೂವತ್ತೈದರ ಹರೆಯ!
ಡಿಎನ್‌ಎಸ್ ಪ್ರಕ್ರಿಯೆಯ ಮೂಲಕ ನೋಂದಾಯಿಸಲಾದ ಪ್ರಪಂಚದ ಮೊತ್ತಮೊದಲ ಡೊಮೈನ್ ನೇಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು Symbolics.com ಎಂಬ ವಿಳಾಸ. ಅದು ನೋಂದಣಿಯಾಗಿದ್ದು ೧೯೮೫ರ ಮಾರ್ಚ್ ೧೫ರಂದು. ಆಗಿನ್ನೂ ಅಂತರಜಾಲಕ್ಕೆ ಇಂದಿನ ರೂಪ ಇರಲಿಲ್ಲ, ವಿಶ್ವವ್ಯಾಪಿ ಜಾಲ ಅಸ್ತಿತ್ವದಲ್ಲೇ ಇರಲಿಲ್ಲ!ಅಂದಹಾಗೆ ಈ ವಿಳಾಸಕ್ಕೆ ನಾವು ಈಗಲೂ ಭೇಟಿನೀಡುವುದು ಸಾಧ್ಯ - Symbolics.com ತಾಣವನ್ನು ಅದರ ಮೂಲ ಮಾಲೀಕರಿಂದ ಖರೀದಿಸಿರುವ ಆಸಕ್ತರೊಬ್ಬರು ಅಲ್ಲಿ 'ದ ಬಿಗ್ ಇಂಟರ್‌ನೆಟ್ ಮ್ಯೂಸಿಯಂ' ಎಂಬ ಆನ್‌ಲೈನ್ ಮಾಹಿತಿಕೋಶವನ್ನು ರೂಪಿಸಿದ್ದಾರೆ.

ಜಾಲತಾಣ, ಅಂದರೆ ವೆಬ್‌ಸೈಟ್ ಯಾರಿಗೆ ತಾನೇ ಗೊತ್ತಿಲ್ಲ? ಹಲವಾರು ಬಗೆಯ ಮಾಹಿತಿಯನ್ನೂ ಸೇವೆಗಳನ್ನೂ ಒದಗಿಸುವ ಜಾಲತಾಣಗಳನ್ನು ನಾವು ಅವುಗಳ ವಿಳಾಸದ ಮೂಲಕ ಗುರುತಿಸುತ್ತೇವೆ. ಇಜ್ಞಾನ ಡಾಟ್ ಕಾಮ್‌, ಗೂಗಲ್ ಡಾಟ್ ಕಾಮ್ ಮುಂತಾದವೆಲ್ಲ ಇದಕ್ಕೆ ಉದಾಹರಣೆಗಳು.

ಜಾಲತಾಣಗಳನ್ನು ಗುರುತಿಸಲು ಬಳಕೆಯಾಗುವ ಇಂತಹ ವಿಳಾಸಗಳಿಗೆ 'ಡೊಮೈನ್ ನೇಮ್'ಗಳೆಂದು ಹೆಸರು. ಡಾಟ್ ಕಾಮ್, ಡಾಟ್ ನೆಟ್, ಡಾಟ್ ಇನ್ ಮುಂತಾದ ಹಲವಾರು ಬಾಲಂಗೋಚಿಗಳಿಂದ ಕೊನೆಯಾಗುವ, ನಾವು ಪ್ರತಿನಿತ್ಯ ನೋಡುವ - ಬಳಸುವ ಜಾಲತಾಣಗಳ ವಿಳಾಸಗಳೆಲ್ಲವೂ ಡೊಮೈನ್ ನೇಮ್‌ಗಳೇ.

ಇದೀಗ ಅಸ್ತಿತ್ವದಲ್ಲಿರುವ ಅಪಾರ ಸಂಖ್ಯೆಯ ಜಾಲತಾಣಗಳನ್ನೆಲ್ಲ ಪ್ರತ್ಯೇಕವಾಗಿ ಗುರುತಿಸಲು ನೆರವಾಗುವುದು ಡೊಮೈನ್ ನೇಮ್‌ನ ಕೆಲಸ. ಇದನ್ನು 'ಡೊಮೈನ್' ಎಂದಷ್ಟೇ ಕರೆಯುವ ಅಭ್ಯಾಸವೂ ಇದೆ.

ಅದುಸರಿ, ಜಾಲತಾಣಗಳನ್ನೆಲ್ಲ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗುವುದು ಹೇಗೆ?

ನಾವು ಭೇಟಿಕೊಡುವ ವೆಬ್‌ಸೈಟುಗಳು ಅಂತರಜಾಲದ ಮೂಲೆಯಲ್ಲೆಲ್ಲೋ ಇರುವ ಒಂದು ಸರ್ವರಿನಲ್ಲಿ ಶೇಖರವಾಗಿರುತ್ತವೆ. ಅಂತರಜಾಲ ಸಂಪರ್ಕದಲ್ಲಿರುವ ಸಾಧನಗಳನ್ನು ಪ್ರತ್ಯೇಕವಾಗಿ ಗುರುತಿಸಲು ಐಪಿ ವಿಳಾಸ ಬಳಸುತ್ತಾರಲ್ಲ, ಪ್ರತಿ ಜಾಲತಾಣದ ಸರ್ವರ್‌ಗೂ ಇಂತಹುದೇ ಒಂದು ಐಪಿ ವಿಳಾಸ ಇರುತ್ತದೆ.

ಐಪಿ ವಿಳಾಸವೆಂದರೆ ಅಂಕಿಗಳ ಒಂದು ಸರಣಿ - ೭೪.೧೨೫.೭೦.೧೨೧ ಎನ್ನುವ ರೀತಿಯದು. ನಮಗೆ ಬೇಕಾದ ಜಾಲತಾಣಗಳನ್ನು ಗೂಗಲ್ ಡಾಟ್ ಕಾಮ್ ಎಂದೋ ಇಜ್ಞಾನ ಡಾಟ್ ಕಾಮ್ ಎಂದೋ ಗುರುತಿಟ್ಟುಕೊಳ್ಳುವ ಬದಲಿಗೆ ಇಷ್ಟೆಲ್ಲ ಅಂಕಿಗಳನ್ನು ಯಾರು ತಾನೇ ನೆನಪಿಟ್ಟುಕೊಳ್ಳುತ್ತಾರೆ? ಇದನ್ನು ನೆನಪಿಟ್ಟುಕೊಳ್ಳುವ ಕೆಲಸ ನಮಗೆ ಬೇಡ ಎಂದು ರೂಪಿಸಲಾಗಿರುವ ವ್ಯವಸ್ಥೆಯೇ ಡಿಎನ್‌ಎಸ್, ಅಂದರೆ ಡೊಮೈನ್ ನೇಮ್ ಸಿಸ್ಟಂ.

ಬ್ರೌಸರ್ ತಂತ್ರಾಂಶದಲ್ಲಿ ನಾವು ಟೈಪ್ ಮಾಡುವ ವಿಳಾಸವನ್ನು ಆ ತಾಣದ ಐಪಿ ವಿಳಾಸದೊಡನೆ ಹೊಂದಿಸಿಕೊಡುವ ಕೆಲಸ ಈ ವ್ಯವಸ್ಥೆಯದು. ಊರಿನ ಫೋನ್ ನಂಬರುಗಳೆಲ್ಲದರ ವಿವರ ಟೆಲಿಫೋನ್ ಡೈರೆಕ್ಟರಿಯಲ್ಲಿರುವಂತೆಯೇ ಎಲ್ಲ ಜಾಲತಾಣಗಳ ವಿವರವೂ ಡಿಎನ್‌ಎಸ್‌ಗೆ ಲಭ್ಯವಿರುತ್ತದೆ. ಅದು ಸರಿಯಾದ ಐಪಿ ವಿಳಾಸ ಹುಡುಕಿಕೊಟ್ಟರಷ್ಟೇ ನಮಗೆ ಬೇಕಾದ ಜಾಲತಾಣ ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿನ ಪರದೆಯಲ್ಲಿ ತೆರೆದುಕೊಳ್ಳುತ್ತದೆ.

ಅದೇನೋ ಸರಿ, ನಾವೊಂದು ಹೊಸ ಜಾಲತಾಣ ಶುರುಮಾಡಿದರೆ ನಮಗೆ ಡೊಮೈನ್ ನೇಮ್ ಕೊಡುವವರು ಯಾರು? ನಮ್ಮ ಡೊಮೈನ್ ನೇಮ್‌ ಹಾಗೂ ಅದರ ಐಪಿ ವಿಳಾಸ ಡಿಎನ್‌ಎಸ್‌ಗೆ ತಿಳಿಯುವುದು ಹೇಗೆ?

ಹೀಗೆ ಡೊಮೈನ್ ನೇಮ್‌ಗಳನ್ನು ಒದಗಿಸುವ ಹಾಗೂ ಡೊಮೈನ್ ನೇಮ್ ಸಿಸ್ಟಂ ಅನ್ನು ನಿಭಾಯಿಸುವ ಕೆಲಸವನ್ನು 'ಡೊಮೈನ್ ನೇಮ್ ರಿಜಿಸ್ಟ್ರಾರ್'ಗಳೆಂಬ ಸಂಸ್ಥೆಗಳು ಮಾಡುತ್ತವೆ. ನಮಗೆ ಬೇಕಾದ ಹೆಸರು ಮತ್ತು ಬಾಲಂಗೋಚಿಯನ್ನು (ಉದಾ: ಇಜ್ಞಾನ ಮತ್ತು ಡಾಟ್ ಕಾಮ್) ಆರಿಸಿಕೊಂಡರೆ, ಅದು ಲಭ್ಯವಿದ್ದ ಪಕ್ಷದಲ್ಲಿ, ನಿರ್ದಿಷ್ಟ ಬಾಡಿಗೆಗೆ ಪ್ರತಿಯಾಗಿ ಈ ಸಂಸ್ಥೆಗಳು ಅದನ್ನು ನಮಗೆ ನೀಡುತ್ತವೆ.

ಡೊಮೈನ್ ನೇಮ್ ಸಿಸ್ಟಂ ಮೂಲಕ ಪ್ರಪಂಚದ ಮೊತ್ತಮೊದಲ ಡೊಮೈನ್ ನೇಮ್ ನೋಂದಣಿಯಾದದ್ದು ಮಾರ್ಚ್ ತಿಂಗಳಿನಲ್ಲೇ ಎನ್ನುವುದು ವಿಶೇಷ. ೧೯೮೫ರ ಮಾರ್ಚ್ ೧೫ರಂದು ನೋಂದಣಿಯಾದ Symbolics.com ಎಂಬ ಈ ಡೊಮೈನ್ ನೇಮ್‌ಗೆ ಇದೀಗ ಮೂವತ್ತೈದರ ಹರೆಯ!

Symbolics.com ಎನ್ನುವುದೇ ಡೊಮೈನ್ ನೇಮ್ ಆದರೆ, ಬಹುತೇಕ ವಿಳಾಸಗಳ 'www' ಎಂದು ಪ್ರಾರಂಭವಾಗುತ್ತದಲ್ಲ, ಅದೇನು? ಡೊಮೈನ್ ನೇಮ್‌ಗಳ ಲೆಕ್ಕದಲ್ಲಿ ಅದೊಂದು ಪೂರ್ವಪ್ರತ್ಯಯ, ಅಂದರೆ ಪ್ರಿಫಿಕ್ಸ್ ಅಷ್ಟೇ. ಡೊಮೈನ್ ನೇಮ್‌ ಕೊನೆಯಲ್ಲಿರುವ .com, .in, .net ಮುಂತಾದ ಬಾಲಂಗೋಚಿಗಳನ್ನು 'ಡೊಮೈನ್ ಸಫಿಕ್ಸ್' (ಸಫಿಕ್ಸ್ = ಅಂತ್ಯಪ್ರತ್ಯಯ) ಎಂದೂ ಕರೆಯುತ್ತಾರೆ.

ಈ ಪೈಕಿ ಡಾಟ್ ಕಾಮ್ ಎಂಬ ಅಂತ್ಯಪ್ರತ್ಯಯ ಅತ್ಯಂತ ಜನಪ್ರಿಯ. ೧೯೮೫ರಿಂದ ಇಂದಿನವರೆಗೆ ಇದನ್ನು ಬಳಸುವ ೧೪ ಕೋಟಿಗೂ ಹೆಚ್ಚು ವಿಳಾಸಗಳು ನೋಂದಣಿಯಾಗಿವೆಯಂತೆ!

ಡೊಮೈನ್ ಸಫಿಕ್ಸ್‌ಗಳನ್ನು 'ಟಾಪ್ ಲೆವೆಲ್ ಡೊಮೈನ್' (TLD) ಎಂದೂ ಗುರುತಿಸಲಾಗುತ್ತದೆ. ಈ ಪೈಕಿ .com, .net, .org ಮುಂತಾದ ಸಾಮಾನ್ಯ ಉದ್ದೇಶದ ಸಫಿಕ್ಸ್‌ಗಳಿಗೆ 'ಜನರಿಕ್ ಟಾಪ್ ಲೆವೆಲ್ ಡೊಮೈನ್'ಗಳೆಂಬ (gTLD) ಹೆಸರಿದೆ. ನಿರ್ದಿಷ್ಟ ದೇಶದ ತಾಣಗಳನ್ನು ಪ್ರತ್ಯೇಕವಾಗಿ ಗುರುತಿಸುವ .in, .uk, .ae ಮುಂತಾದವುಗಳಿಗೆ 'ಕಂಟ್ರಿ ಕೋಡ್ ಟಾಪ್ ಲೆವೆಲ್ ಡೊಮೈನ್' (ccTLD) ಎಂದು ಹೆಸರು.

ಜಾಲತಾಣದಲ್ಲಿರುವ ಮಾಹಿತಿಯ ಜೊತೆಗೆ ಅದರ ವಿಳಾಸವೂ ನಮ್ಮ ಭಾಷೆಯಲ್ಲೇ ಇರಬೇಕು ಎನ್ನುವವರಿಗಾಗಿ ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್ ಸೌಲಭ್ಯವನ್ನು ಪರಿಚಯಿಸಲಾಗಿದ್ದು, ಜಾಲತಾಣದ ವಿಳಾಸವನ್ನು ಚೈನೀಸ್ - ಅರೇಬಿಕ್ - ದೇವನಾಗರಿ - ತಮಿಳು ಮುಂತಾದ ಬೇರೆಬೇರೆ ಲಿಪಿಗಳಲ್ಲೂ ಇಟ್ಟುಕೊಳ್ಳುವುದನ್ನು ಅದು ಸಾಧ್ಯವಾಗಿಸುತ್ತಿದೆ. ಈ ಸೌಲಭ್ಯ ಬಹಳ ಶೀಘ್ರದಲ್ಲೇ ಕನ್ನಡದಲ್ಲೂ ಲಭ್ಯವಾಗಲಿದೆ ಎನ್ನುವುದು ವಿಶೇಷ.

ಜಾಲತಾಣದ ಹೆಸರಷ್ಟೇ ಅಲ್ಲ, ಅದರ ಬಾಲಂಗೋಚಿಯೂ ನಮ್ಮ ಆಯ್ಕೆಯದೇ ಇರಬೇಕು ಎಂದು ದೊಡ್ಡ ಸಂಸ್ಥೆಗಳು ಹೇಳಬಹುದಲ್ಲ! ಅಂತಹವರು ತಮ್ಮ ಜಾಲತಾಣಗಳಲ್ಲಿ ತಮ್ಮದೇ ಬ್ರಾಂಡ್‌ ಅನ್ನು ಟಾಪ್ ಲೆವೆಲ್ ಡೊಮೈನ್‌ನಂತೆ ಬಳಸಬಹುದು. ಗೂಗಲ್, ಆಪಲ್, ಎಸ್‌ಬಿಐ, ಏರ್‌ಟೆಲ್ ಮುಂತಾದ ಅನೇಕ ಸಂಸ್ಥೆಗಳು ಈ ಸೌಲಭ್ಯವನ್ನು ಈಗಾಗಲೇ ಬಳಸುತ್ತಿದ್ದಾರೆ.

ಹೀಗೆ ಹತ್ತಾರು ಬೇರೆಬೇರೆ ಆಯ್ಕೆಗಳಿದ್ದರೂ ಕೂಡ ಪೂರ್ಣಪ್ರಮಾಣದ ಪ್ರತಿ ಜಾಲತಾಣಕ್ಕೂ ತನ್ನದೇ ಆದ ವಿಶಿಷ್ಟ ಡೊಮೈನ್ ನೇಮ್ ಇರಬೇಕಾದ್ದು ಅತ್ಯಗತ್ಯ - ಅಂದರೆ ಇಡೀ ಅಂತರಜಾಲದಲ್ಲಿ ಒಂದೇ ಒಂದು google.com ಮಾತ್ರವೇ ಇರಬಹುದು. ಆದರೆ ಒಂದು ಡೊಮೈನ್ ನೇಮ್ ಅಡಿಯಲ್ಲಿ ಇನ್ನಷ್ಟು ಡೊಮೈನ್ ನೇಮ್‌ಗಳನ್ನು ರೂಪಿಸಿಕೊಳ್ಳುವುದು, ಅದನ್ನು ಬೇರೆಬೇರೆ ಜಾಲತಾಣಗಳಿಗೆ - ಪುಟಗಳಿಗೆ ನಿಯೋಜಿಸುವುದು ಸಾಧ್ಯ (google.com ಅಡಿಯಲ್ಲಿ mail.google.com ಇದ್ದಹಾಗೆ).

ಮೂಲ ತಾಣದ ಡೊಮೈನ್ ನೇಮ್ ಅನ್ನು ಅಂತ್ಯಪ್ರತ್ಯಯದಂತೆ ಬಳಸುವ ಇಂತಹ ವಿಳಾಸಗಳಿಗೆ 'ಸಬ್‌ಡೊಮೈನ್'ಗಳೆಂದು ಹೆಸರು. ಉಚಿತ ಜಾಲತಾಣಗಳನ್ನು, ಬ್ಲಾಗ್‌ಗಳನ್ನು ಒದಗಿಸುವ ವ್ಯವಸ್ಥೆಗಳು (ಉದಾ: ಗೂಗಲ್‌ನ ಬ್ಲಾಗರ್) ತಮ್ಮ ಗ್ರಾಹಕರಿಗೆ ಇಂತಹ ಸಬ್‌ಡೊಮೈನ್‌ಗಳನ್ನೇ ನೀಡುತ್ತವೆ.

ಮಾರ್ಚ್ ೨೦೨೦ರ ತುಷಾರದಲ್ಲಿ ಪ್ರಕಟವಾದ ಲೇಖನ

Related Stories

No stories found.
ಇಜ್ಞಾನ Ejnana
www.ejnana.com