ಓದಿ+ನೋಡಿ: ಕ್ಲೌಡ್ ಅಂದರೆ ಏನು?

ಇದರಲ್ಲಿ ಬಳಕೆಯಾಗುವ ಸಾಧನಗಳೆಲ್ಲ ನಮ್ಮಿಂದ ದೂರದಲ್ಲಿ ಎಲ್ಲೋ ಇರುತ್ತವೆ, ಆಕಾಶದಲ್ಲಿ ಮೋಡ ಇದ್ದಹಾಗೆ!

ಮಾಹಿತಿ ತಂತ್ರಜ್ಞಾನ, ಅಂದರೆ ಇನ್ಫರ್ಮೇಶನ್ ಟೆಕ್ನಾಲಜಿಯ ಬಗ್ಗೆ ಮಾತಾಡುವಾಗ ಹಲವು ವಿಶೇಷ ಹೆಸರುಗಳನ್ನು ನಾವು ಕೇಳುತ್ತೇವೆ. ಕಳೆದ ಕೆಲವು ವರ್ಷಗಳಲ್ಲಿ ಹೀಗೆ ಕೇಳಲು ಸಿಗುತ್ತಿರುವ ಹೆಸರುಗಳಲ್ಲಿ 'ಕ್ಲೌಡ್' ಕೂಡ ಒಂದು. ಈ ಕ್ಲೌಡ್ ಅಂದರೆ ಏನು? ನೋಡೋಣ ಬನ್ನಿ.

ಈಗ, ನಮ್ಮ ಮನೆಗಳಲ್ಲಿ ಬಳಸೋದಿಕ್ಕೆ ನಮಗೆ ವಿದ್ಯುತ್ತು, ಅಂದರೆ ಎಲೆಕ್ಟ್ರಿಸಿಟಿ, ಬೇಕು. ಅದಕ್ಕೆ ನಾವೇನು ಮಾಡ್ತೀವಿ? ವಿದ್ಯುತ್ ಪೂರೈಸುವ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡು ನಮ್ಮ ಮನೆಗೆ ಸಂಪರ್ಕ ತೊಗೋತೀವಿ, ವಿದ್ಯುತ್ತನ್ನ ಬಳಸಿಕೊಳ್ತೀವಿ. ತಿಂಗಳು ಮುಗೀತಾ ಇದ್ದ ಹಾಗೆ ಎಷ್ಟು ವಿದ್ಯುತ್ ಬಳಸಿರ್ತೀವೋ ಅಷ್ಟಕ್ಕೆ ದುಡ್ಡು ಕೊಡ್ತೀವಿ.

ಇದರ ಬದಲು ವಿದ್ಯುತ್ತನ್ನು ನೀವೇ ಉತ್ಪಾದನೆ ಮಾಡಿಕೊಳ್ಳಿ. ಅದಕ್ಕೆ ಬೇಕಾದ ಯಂತ್ರಗಳನ್ನೆಲ್ಲ ನೀವೇ ನಿರ್ವಹಣೆ ಮಾಡಿ, ಏನಾದರೂ ತೊಂದರೆ ಬಂದರೆ ಅದನ್ನೂ ನೀವೇ ಸರಿಮಾಡಿಕೊಳ್ಳಿ ಅಂತ ಯಾರಾದರೂ ಹೇಳಿದ್ರೆ?

ಕಷ್ಟ ಆಗ್ತಿತ್ತು ಅಲ್ವಾ? ಐಟಿ ಕ್ಷೇತ್ರದಲ್ಲಿ ಮುಂಚೆ ಅಂಥದ್ದೇ ಪರಿಸ್ಥಿತಿ ಇತ್ತು. ಅದು ವಿದ್ಯುತ್ ಉತ್ಪಾದನೆಗೆ ಸಂಬಂಧಪಟ್ಟಿದ್ದಲ್ಲ, ಕಂಪ್ಯೂಟಿಂಗ್ ಸಂಪನ್ಮೂಲಗಳಿಗೆ ಸಂಬಂಧಿಸಿದ್ದು ಅಷ್ಟೇ.

ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಬೇಕು ಅಂದರೆ ನಮ್ಮ ಹತ್ತಿರ ಒಂದಷ್ಟು ವ್ಯವಸ್ಥೆಗಳು ಇರಬೇಕಾಗುತ್ತೆ. ನಮ್ಮಂಥ ಸಾಮಾನ್ಯ ಬಳಕೆದಾರರ ಹತ್ತಿರ ಒಂದು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಇದ್ದರೆ ಸಾಕಾಗುತ್ತೆ. ಆದರೆ ದೊಡ್ಡ ಸಂಸ್ಥೆಗಳಿಗೆ ಸರ್ವರ್‌ಗಳು, ಹೆಚ್ಚು ಸಾಮರ್ಥ್ಯದ ಸ್ಟೋರೇಜ್ ಸಾಧನಗಳು, ಬೇರೆಬೇರೆ ರೀತಿಯ ತಂತ್ರಾಂಶ - ಅಂದರೆ ಸಾಫ್ಟ್‌ವೇರ್-ಗಳೆಲ್ಲ ಬೇಕಾಗುತ್ತವೆ. ಮುಂಚೆ ಇದನ್ನೆಲ್ಲ ಬಳಸಬೇಕು ಅನ್ನುವವರು ಅದನ್ನೆಲ್ಲ ಸ್ವತಃ ತಾವೇ ತಂದಿಟ್ಟುಕೊಂಡು ಕೆಲಸ ಮಾಡಬೇಕಾಗಿತ್ತು, ಅದರ ನಿರ್ವಹಣೆ - ಅಂದರೆ ಮೇಂಟೆನೆನ್ಸನ್ನೂ ನೋಡಿಕೊಳ್ಳಬೇಕಿತ್ತು.

ಇದೆಲ್ಲ ತಲೆನೋವನ್ನು ಬೇರೆ ಯಾರಾದರೋ ಇಟ್ಟುಕೊಂಡು ಸರ್ವರೋ, ಸ್ಟೋರೇಜೋ, ಸಾಫ್ಟ್‌ವೇರೋ ನಮಗೆ ಬೇಕಾದ್ದನ್ನು ಬೇಕಾದಾಗ ಬಳಸಿಕೊಳ್ಳಲು ಕೊಡುವ ಹಾಗಿದ್ದರೆ ಎಷ್ಟು ಸುಲಭ ಅಂತ ಬಹಳ ಜನ ಯೋಚನೆ ಮಾಡ್ತಿದ್ರು. ಕ್ಲೌಡ್ ಅನ್ನುವ ಪರಿಕಲ್ಪನೆ ಹುಟ್ಟಲು ಕಾರಣವಾಗಿದ್ದು ಇದೇ ಯೋಚನೆ.

ನಮಗೆ ಬೇಕಾದ ವ್ಯವಸ್ಥೆಗಳನ್ನೆಲ್ಲ ಬೇರೆ ಯಾರೋ ಸ್ಥಾಪಿಸುವುದು, ನಿರ್ವಹಿಸುವುದು ಮತ್ತು ನಮಗೆ ಬೇಕಾದಾಗ ಬೇಕಾದಷ್ಟನ್ನು ಮಾತ್ರ ಕೊಡುವುದು ಈ ಪರಿಕಲ್ಪನೆಯ ಹೂರಣ. ಅಂದರೆ, ನಮಗೆ ಬೇಕಾದ್ದೆಲ್ಲ ಇಲ್ಲಿ ಒಂದು ಉತ್ಪನ್ನದ ಬದಲು ಸೇವೆ ಅಂದರೆ ಸರ್ವಿಸ್‌ನ ರೂಪದಲ್ಲಿ ಸಿಗುತ್ತದೆ. ಅದನ್ನು ನಾವು ಯಾವಾಗ ಎಷ್ಟು ಬೇಕಾದರೂ ಬಳಸಿಕೊಳ್ಳುವುದು ಸಾಧ್ಯ.

ಅಂತರಜಾಲ, ಅಂದರೆ ಇಂಟರ್‌ನೆಟ್ ಮೂಲಕ ಇದೆಲ್ಲ ನಡೆಯುತ್ತದೆ. ತಿಂಗಳಾದ ಮೇಲೆ ಲೈಟ್ ಬಿಲ್ ಕಟ್ಟಿದ ಹಾಗೆ ಇಲ್ಲಿ ನಾವು ಏನು ಬಳಸುತ್ತೇವೋ ಅದಕ್ಕೆ ಮಾತ್ರ ದುಡ್ಡು ಕೊಟ್ಟರೆ ಆಯಿತು. ಇದರಲ್ಲಿ ಬಳಕೆಯಾಗುವ ಸಾಧನಗಳೆಲ್ಲ ನಮ್ಮಿಂದ ದೂರದಲ್ಲಿ ಎಲ್ಲೋ ಇರುತ್ತವಲ್ಲ, ಆಕಾಶದಲ್ಲಿ ಮೋಡ ಇದ್ದಹಾಗೆ, ಅದಕ್ಕೇ ಇದನ್ನು ಕ್ಲೌಡ್ ಅಂತ ಕರೀತಾರೆ.

ಕ್ಲೌಡ್ ಮೂಲಕ ನಮಗೆ ಸಿಗುವ ಸೇವೆಗಳಲ್ಲಿ ಮೂರು ವಿಧ. ಮೊದಲನೆಯದು, ನಮಗೆ ಬೇಕಾದ ಮೂಲಸೌಕರ್ಯ, ಅಂದರೆ ಇನ್‌ಫ್ರಾ‌ಸ್ಟ್ರಕ್ಚರ್. ಈ ತಿಂಗಳು ನಮ್ಮ ಸಂಸ್ಥೆಗೆ ಹೆಚ್ಚುವರಿಯಾಗಿ ಒಂದು ಸರ್ವರ್ ಬೇಕು ಅಂದರೆ ಅದನ್ನು ಇಲ್ಲಿ ಪಡೆದುಕೊಳ್ಳಬಹುದು. ಇದು IaaS, ಅಂದರೆ Infrastructure as a Service.

ನಮಗೆ ಸರ್ವರ್ ಮಾತ್ರ ಸಾಲೋದಿಲ್ಲ, ಅದರಲ್ಲಿ ಒಂದು ಡೇಟಾಬೇಸ್ ಕೂಡ ಇರಬೇಕು. ಅಷ್ಟೇ ಅಲ್ಲ, ಅದರ ನಿರ್ವಹಣೆಯನ್ನೂ ಬೇರೆಯವರೇ ಮಾಡಬೇಕು ಅಂದರೆ ಅದು ಕೂಡ ಸಾಧ್ಯವಿದೆ. ಹೀಗೆ ನಿಮಗೆ ಬೇಕಾದ ವೇದಿಕೆಯನ್ನು - ಪ್ಲಾಟ್‌ಫಾರ್ಮ್ - ಸಿದ್ಧಮಾಡಿಕೊಡುವುದು ಎರಡನೇ ವಿಧ. ಇದಕ್ಕೆ PaaS, ಅಂದರೆ Platform as a Service ಎನ್ನುವ ಹೆಸರಿದೆ.

ಇದೆಲ್ಲ ತಂಟೆಯೇ ಬೇಡ, ನನಗೆ ಈ ಸಾಫ್ಟ್‌ವೇರ್ ಬೇಕು, ಅದನ್ನು ಕೊಡಿ ಅಷ್ಟೇ ಅನ್ನುವವರಿಗೆ ಮೂರನೆಯ ವಿಧ ಕೂಡ ಇದೆ. ಇದು SaaS, ಅಂದರೆ Software as a Service. ಯಾವುದೇ ತಂತ್ರಾಂಶ ಇನ್‌ಸ್ಟಾಲ್ ಮಾಡಿಕೊಳ್ಳದೆ ನಾವು ಅಂತರಜಾಲದ ಮೂಲಕ ಹಲವು ವ್ಯವಸ್ಥೆಗಳನ್ನು ನೇರವಾಗಿ ಬಳಸುತ್ತೇವಲ್ಲ, ಅವೆಲ್ಲ ಇದರದೇ ಉದಾಹರಣೆಗಳು.

ಐಟಿ ಕ್ಷೇತ್ರದ ಕೆಲಸಗಳನ್ನು ಇಷ್ಟೆಲ್ಲ ಸುಲಭ ಮಾಡಿರುವುದರಿಂದಲೇ ಕ್ಲೌಡ್ ಪರಿಕಲ್ಪನೆ ಈಗ ತುಂಬಾ ಜನಪ್ರಿಯವಾಗಿದೆ, ಭಾರೀ ಪ್ರಮಾಣದಲ್ಲಿ ಬಳಕೆಯೂ ಆಗುತ್ತಿದೆ. ನಮ್ಮಂತಹ ಬಳಕೆದಾರರ ಅದೆಷ್ಟೋ ಕೆಲಸಗಳನ್ನು ಇದು ಸುಲಭ ಮಾಡಿಕೊಟ್ಟಿದೆ - ನಮ್ಮ ಮಾಹಿತಿಯನ್ನು ಪೆನ್‌ಡ್ರೈವಿನಲ್ಲೋ ಹಾರ್ಡ್‌ಡಿಸ್ಕ್‌ನಲ್ಲೋ ಹಾಕಿಟ್ಟುಕೊಂಡು ಓಡಾಡುವ ಬದಲು ಅಂತರಜಾಲದಲ್ಲೇ ಇಟ್ಟು ಬೇಕಾದ ಕಡೆ ಪಡೆದುಕೊಳ್ತೀವಲ್ಲ, ಅದು ಕ್ಲೌಡ್‌ನದೇ ಪರಿಣಾಮ. ಇನ್ನು ದೊಡ್ಡ ದೊಡ್ಡ ಸಂಸ್ಥೆಗಳಂತೂ ಕ್ಲೌಡ್ ಸಹಾಯ ಪಡೆದುಕೊಂಡು ಹೆಚ್ಚು ಸಮರ್ಥ ವ್ಯವಸ್ಥೆಗಳನ್ನ ರೂಪಿಸಿಕೊಂಡಿವೆ, ತಾವು ಖರ್ಚುಮಾಡುವ ಹಣದಲ್ಲಿ ಸಾಕಷ್ಟು ಉಳಿತಾಯವನ್ನೂ ಮಾಡುತ್ತಿವೆ. ಇಲ್ಲಿ ಉಪಯೋಗವಾಗುವ ಸಾಧನಗಳು ಬೇರೆ ಎಲ್ಲೋ ಇರುತ್ತವಲ್ಲ, ಅದರಲ್ಲಿಟ್ಟ ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ನಿಟ್ಟಿನಲ್ಲೂ ಸಾಕಷ್ಟು ಕೆಲಸಗಳು ನಡೆಯುತ್ತಿವೆ.

ವೀಡಿಯೊ ಸೌಜನ್ಯ: ಸಂವಾದ

Related Stories

No stories found.
ಇಜ್ಞಾನ Ejnana
www.ejnana.com