ಗಾಳಿಯಲ್ಲಿ ಹಾರುವ ವಿಮಾನದ ವೇಗ, ಗಾಳಿಯ ಮೂಲಕ ಶಬ್ದ ಸಾಗುವ ವೇಗಕ್ಕೆ ಸಮಾನವಾಗಿದ್ದರೆ ಅದು ಮಾಕ್ ೧
ಗಾಳಿಯಲ್ಲಿ ಹಾರುವ ವಿಮಾನದ ವೇಗ, ಗಾಳಿಯ ಮೂಲಕ ಶಬ್ದ ಸಾಗುವ ವೇಗಕ್ಕೆ ಸಮಾನವಾಗಿದ್ದರೆ ಅದು ಮಾಕ್ ೧|Image by Robert Waghorn from Pixabay
ಪ್ರಶ್ನೆ-ಉತ್ತರ

ಏನಿದು ಸಾನಿಕ್ ಬೂಮ್?

ಬುಧವಾರ ಬೆಂಗಳೂರಿನಲ್ಲಿ ಕೇಳಿಬಂದ ಶಬ್ದಕ್ಕೆ ಕಾರಣ ಸೂಪರ್‌ಸಾನಿಕ್ ವೇಗದಲ್ಲಿ ಹಾರಿದ ವಿಮಾನದಿಂದ ಉಂಟಾದ 'ಸಾನಿಕ್ ಬೂಮ್' ಎಂದು ರಕ್ಷಣಾ ಇಲಾಖೆ ಹೇಳಿದೆ. ಹಾಗೆಂದರೆ ಏನು?

ಇಜ್ಞಾನ ತಂಡ

ಕೆರೆಯ ನೀರಿಗೆ ಕಲ್ಲೆಸೆದರೆ ಏನಾಗುತ್ತದೆ? ಏಕಕೇಂದ್ರೀಯ ವೃತ್ತಗಳ ರೂಪದಲ್ಲಿ ಅಲೆಗಳು ಏಳುತ್ತವೆ, ಮತ್ತು ಕಲ್ಲು ಎಲ್ಲಿ ಬಿದ್ದಿತ್ತೋ ಅಲ್ಲಿಂದ ಪ್ರಾರಂಭಿಸಿ ದೂರಕ್ಕೆ ಹರಡುತ್ತವೆ. ಅದೇ ಕೆರೆಯಲ್ಲೊಂದು ದೋಣಿ ನಿಧಾನಕ್ಕೆ ಚಲಿಸುತ್ತಿದ್ದರೆ, ಇಂತಹವೇ ಸಣ್ಣ ಅಲೆಗಳು ದೋಣಿಯ ಮುಂದೆ ಮತ್ತು ಹಿಂದೆ ಹರಡುತ್ತವೆ ಮತ್ತು ಆ ದೋಣಿ ಅಲೆಗಳ ಮೂಲಕವೇ ಪ್ರಯಾಣಿಸುತ್ತದೆ.

ಅಲೆಗಳು ಹರಡುವ ವೇಗಕ್ಕಿಂತ ದೋಣಿಯ ವೇಗ ಜಾಸ್ತಿಯಿದ್ದರೆ? ಅಲೆಗಳು ದೋಣಿಯ ಹಾದಿಯಿಂದ ಮುಂದಕ್ಕೆ ಹರಡುವುದು ಸಾಧ್ಯವಾಗುವುದಿಲ್ಲ. ಹೀಗೆ ದೂರ ಹೋಗಲಾರದ ಅಲೆಗಳೆಲ್ಲ ಸೇರಿ ದೊಡ್ಡದೊಂದು ಅಲೆ ರೂಪುಗೊಳ್ಳುತ್ತದೆ ಮತ್ತು ದೋಣಿಯ ಹಿಂದೆ ತಲೆಕೆಳಗಾದ V ಅಕ್ಷರದ ರೀತಿಯಲ್ಲಿ ಅದು ಕಾಣಿಸಿಕೊಳ್ಳುತ್ತದೆ. ಈ ವಿದ್ಯಮಾನಕ್ಕೆ 'ವೇಕ್' ಎಂದು ಹೆಸರು. ಕನ್ನಡದಲ್ಲಿ ಇದನ್ನು ಚಲಿಸುವ ದೋಣಿಯ ಜಾಡು ಎಂದು ಕರೆಯಬಹುದು.

ಹೀಗೆ ದೋಣಿಯೊಂದು ವೇಗವಾಗಿ ಬಂದಾಗ ನೀವು ದಡದಲ್ಲಿ ನಿಂತು ನೋಡುತ್ತಿದ್ದರೆ, ಅದು ಬಂದ ಕ್ಷಣದಲ್ಲಿ ನಿಮಗೆ ನೀರಿನಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಾಣುವುದಿಲ್ಲ. ಆದರೆ ದೊಡ್ಡ ಅಲೆಯೊಂದು ಅದರ ಹಿಂದೆಯೇ ಬಂದು ದಡ ಮುಟ್ಟುವುದನ್ನು ನೀವು ಕಾಣುತ್ತೀರಿ.

ದೋಣಿ ನೀರಿನ ಅಲೆಗಳನ್ನು ರೂಪಿಸಿದ ಹಾಗೆ, ಆಕಾಶದಲ್ಲಿ ಹಾರುವ ವಿಮಾನ ಶಬ್ದದ ಅಲೆಗಳನ್ನು ಸೃಷ್ಟಿಸುತ್ತದೆ. ವಿಮಾನ ಹಾರುತ್ತಿರುವ ವೇಗ ಶಬ್ದದ ವೇಗಕ್ಕಿಂತ ಕಡಿಮೆಯಿದ್ದರೆ, ಆ ಅಲೆಗಳು ವಿಮಾನದ ಸುತ್ತಲೂ ಹರಡುತ್ತವೆ. ವಿಮಾನ ಬರುವ ಸದ್ದು ಕೇಳಿ ಮನೆಯಿಂದಾಚೆ ಓಡುವ ಮಕ್ಕಳಿಗೆ ಸಿಗ್ನಲ್ ಕೊಡುವುದು ಇಂತಹ ಅಲೆಗಳೇ!

ಯಾವುದೇ ಮಾಧ್ಯಮದ ಮೂಲಕ ಒಂದು ವಸ್ತುವಿನ ವೇಗ, ಹಾಗೂ ಅದೇ ಮಾಧ್ಯಮದ ಮೂಲಕ ಶಬ್ದದ ವೇಗದ ನಡುವಿನ ಅನುಪಾತವನ್ನು 'ಮಾಕ್ ಸಂಖ್ಯೆ' ಪ್ರತಿನಿಧಿಸುತ್ತದೆ. ಗಾಳಿಯಲ್ಲಿ ಹಾರುವ ವಿಮಾನದ ವೇಗ, ಗಾಳಿಯ ಮೂಲಕ ಶಬ್ದ ಸಾಗುವ ವೇಗಕ್ಕೆ ಸಮಾನವಾಗಿದ್ದರೆ ಅದು ಮಾಕ್ ೧. ಅದೇರೀತಿ ವಿಮಾನದ ವೇಗ ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚಿದ್ದರೆ ಅದು ಮಾಕ್ ೩.

ವಿಮಾನವು ಶಬ್ದದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಹಾರಿದರೆ (ಮಾಕ್ ಸಂಖ್ಯೆ ೧ಕ್ಕಿಂತ ಹೆಚ್ಚಿದ್ದರೆ), ಶಬ್ದದ ಅಲೆಗಳು ಅದರ ಮುಂದೆ ಹರಡಲು ಸಾಧ್ಯವಾಗುವುದಿಲ್ಲ. ಹೀಗೆ ಹರಡಬಹುದಾಗಿದ್ದ ಅಲೆಗಳೆಲ್ಲ ಒಟ್ಟಾಗಿ ದೊಡ್ಡ ಅಲೆಯಾಗುತ್ತದೆ. ಮತ್ತು ಆ ಅಲೆ ನಮ್ಮ ಕಿವಿಗೆ ದೊಡ್ಡ ಸದ್ದಾಗಿ ಅಪ್ಪಳಿಸುತ್ತದೆ. ಅದೇ ಸಾನಿಕ್ ಬೂಮ್!

ಇಜ್ಞಾನ Ejnana
www.ejnana.com