ರಿಮೋಟ್ ಸೆನ್ಸಿಂಗ್ ಅಂದರೇನು?
ರಿಮೋಟ್ ಸೆನ್ಸಿಂಗ್ ಅಂದರೆ ಒಂದು ವಸ್ತುವಿನ ಬಗ್ಗೆ, ಆ ವಸ್ತುವನ್ನು ಸ್ಪರ್ಶಿಸದೆ ದೂರದಿಂದಲೇ ಮಾಹಿತಿ ಸಂಗ್ರಹಿಸುವ ಕ್ರಿಯೆImage by Free-Photos from Pixabay

ರಿಮೋಟ್ ಸೆನ್ಸಿಂಗ್ ಅಂದರೇನು?

ರಿಮೋಟ್ ಸೆನ್ಸಿಂಗ್ (ದೂರ ಸಂವೇದನೆ) ತಂತ್ರಜ್ಞಾನ ಹಾಗೂ ಅದರಲ್ಲಿ ನಮ್ಮ ದೇಶದ ಸಾಧನೆಗಳ ಬಗ್ಗೆ ತಿಳಿದುಕೊಳ್ಳಲು ಪ್ರೊ. ಹೆಜಮಾಡಿ ಗಂಗಾಧರ ಭಟ್ ಅವರ ಈ ಲೇಖನ ಓದಿ!

ರಿಮೋಟ್ ಸೆನ್ಸಿಂಗ್ ಅಂದರೆ ದೂರ ಸಂವೇದನೆ. ಒಂದು ವಸ್ತುವಿನ ಬಗ್ಗೆ, ಆ ವಸ್ತುವನ್ನು ಸ್ಪರ್ಶಿಸದೆ ದೂರದಿಂದಲೇ ಮಾಹಿತಿ ಸಂಗ್ರಹಿಸುವ ಕ್ರಿಯೆ ಇದು. ನಮ್ಮ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ, ಭೂಮಿಯ ಮೇಲ್ಮೈಯಲ್ಲಾಗುವ ನೈಸರ್ಗಿಕ ಪ್ರಕೋಪಗಳ ಬಗ್ಗೆ ವಿಮಾನ ಅಥವಾ ಉಪಗ್ರಹಗಳ ಸಹಾಯದಿಂದ ಮಾಹಿತಿ ಸಂಗ್ರಹಿಸುವುದನ್ನು ಇದು ಸಾಧ್ಯವಾಗಿಸುತ್ತದೆ.

ಇಲ್ಲಿ ಸೂರ್ಯನ ಬೆಳಕು ಮಹತ್ತರ ಪಾತ್ರ ವಹಿಸುತ್ತದೆ. ಸೂರ್ಯನ ಬೆಳಕು ಹಾಗೂ ವಸ್ತುಗಳ ಜೊತೆಗೆ ಸೂರ್ಯನ ಬೆಳಕಿನ ಪರಿಣಾಮ, ಮತ್ತೆ ಕೊನೆಗೆ ಅವು ದತ್ತಾಂಶವಾಗಿಯೋ, ಛಾಯಾಚಿತ್ರಗಳಾಗಿಯೋ ಶೇಖರಿಸಲ್ಪಡುತ್ತವೆ. ಅಂದರೆ ಭೂಮಿಯ ಮೇಲೆ ಬಿದ್ದ ಸೂರ್ಯನ ಬೆಳಕಿನ ಸ್ವಲ್ಪ ಭಾಗ ಪ್ರತಿಫಲಿಸಲ್ಪಡುತ್ತದೆ, ಸ್ವಲ್ಪ ಭಾಗ ಹೀರಲ್ಪಡುತ್ತದೆ ಮತ್ತು ಸ್ವಲ್ಪ ಭಾಗ ವಸ್ತುವಿನ ಮುಖಾಂತರ ಹಾದು ಹೋಗುತ್ತದೆ. ಪ್ರತಿಫಲಿಸುವಿಕೆ, ಹೀರುವಿಕೆ ಹಾಗೂ ಹಾದುಹೋಗುವಿಕೆ ಇವು ವಸ್ತುವಿನ ಗುಣ ಧರ್ಮ ವನ್ನು ಅವಲಂಬಿಸಿವೆ. ಇದರ ಆದಾರದ ಮೇಲೆ ನಾವು ಭೂಮಿಯ ಮೇಲಿನ ವಸ್ತುಗಳನ್ನು ದೂರ ಸಂವೇದನೆ ತಂತ್ರ ಜ್ಞಾನದಿಂದ ಪತ್ತೆ ಹಚ್ಚುತ್ತೇವೆ.

ಪ್ರಪಂಚದ ಮೊದಲ ದೂರಗ್ರಾಹಿ ಉಪಗ್ರಹ (Remote Sensing Satellite) ಲ್ಯಾಂಡ್‌ಸ್ಯಾಟ್ ಅನ್ನು ಹಾರಿಸಿದ ಕೀರ್ತಿ ಅಮೇರಿಕಾ ದೇಶಕ್ಕೆ ಸಲ್ಲುತ್ತದೆ. 1972ರಲ್ಲಿ ಅವರು Landsat 1 ಹೆಸರಿನ ಉಪಗ್ರಹ ವನ್ನು ಅಂತರಿಕ್ಷಕ್ಕೆ ಹಾರಿಬಿಟ್ಟರು ಹಾಗೂ ಈ ಉಪಗ್ರಹ ಭೂಮಿಯ ಮೇಲಿನ 80 ಮೀಟರ್‌ನಷ್ಟು ಸಣ್ಣ ವಸ್ತುವನ್ನೂ ಗುರುತಿಸಬಲ್ಲ ಸಾಮರ್ಥ್ಯ ಪಡೆದಿತ್ತು. ಭಾರತ ತನ್ನ ಮೊದಲ ದೂರಗ್ರಾಹಿ ಉಪಗ್ರಹ IRS-1 A ಯನ್ನು 1988 ರಲ್ಲಿ ಉಡಾಯಿಸಿತು. ಈ ಉಪಗ್ರಹ LISS-1ಮತ್ತು LISS- II ಸಂವೇದಕಗಳನ್ನು ಹೊಂದಿದ್ದು 72.5 ಮೀಟರ್ ಮತ್ತು 36.25 ಮೀಟರ್ ನಷ್ಟು ಸಣ್ಣ ವಸ್ತುಗಳನ್ನು ಗುರುತಿಸಬಲ್ಲ ಸಾಮರ್ಥ್ಯ ಪಡೆದಿತ್ತು.

ದೂರ ಸಂವೇದನೆ ತಂತ್ರಜ್ಞಾನದಲ್ಲಿ ಭಾರತ ಇವತ್ತು ಪ್ರಪಂಚದ ಯಾವುದೇ ಮುಂದುವರಿದ ದೇಶಗಳಿಗೂ ಸವಾಲು ಹಾಕಬಲ್ಲ ಸಾಮರ್ಥ್ಯ ಪಡೆದಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ 2019 ರ ಕೊನೆಯಲ್ಲಿ ಅಂತರಿಕ್ಷಕ್ಕೆ ಹಾರಿಸಿದ Cartosat -3 ಉಪಗ್ರಹ ಸುಮಾರು 25 cm ನಷ್ಟು ಸಣ್ಣ ಗಾತ್ರದ ವಸ್ತುಗಳನ್ನು ಗುರುತಿಸಬಲ್ಲ ಸಾಮರ್ಥ್ಯ ಪಡೆದಿದ್ದರೆ Risat ಅಂದರೆ Radar Imaging Satellite ಸುಮಾರು 35 cm ನಷ್ಟು ಸಣ್ಣ ಗಾತ್ರದ ವಸ್ತುವನ್ನೂ ಗುರುತಿಸಬಲ್ಲದು. ಅಷ್ಟೇ ಅಲ್ಲ, ಯಾವುದೇ ಹವಾಮಾನ ಸ್ಥಿತಿಯಲ್ಲಿ - ಮಳೆ ಜೋರಾಗಿ ಬರುತ್ತಿರುವ ಸಮಯದಲ್ಲಿ ಅಥವಾ ರಾತ್ರಿಯ ಸಮಯದಲ್ಲೂ - ಈ ಉಪಗ್ರಹ ಮಾಹಿತಿ ಕಲೆ ಹಾಕಬಲ್ಲುದು. ಇದು ಸೈನಿಕ ಕಾರ್ಯಾಚರಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ.

ದೂರ ಸಂವೇದನೆ ಮತ್ತು ಅದರ ಆನ್ವಯಿಕತೆ ಅಂದರೆ applicationsನಲ್ಲಿ ಭಾರತವು ಸಾದಿಸಿದ ಅಭಿವೃದ್ಧಿಯು ಅದನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿಗೆ ಸೇರುವಂತೆ ಮಾಡಿದೆ. ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶ ದೂರ ಸಂವೇದನೆಯ. ಮೂಲಕ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಅವುಗಳನ್ನು ಸಮರ್ಥವಾಗಿ ಕಾರ್ಯಗತಗೊಳಿಸಿದೆ.

- ಪ್ರೊ. ಹೆಜಮಾಡಿ ಗಂಗಾಧರ ಭಟ್ ಸಾಗರ ಭೂವಿಜ್ಞಾನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ

Related Stories

No stories found.