ಕಂಪ್ಯೂಟರಿನಲ್ಲಿ ಸಂಸ್ಕರಿಸಲು ಸಾಧ್ಯವಾಗುವ ರೂಪದಲ್ಲಿ ಸಂಗ್ರಹಿಸುವ ವಿವರಗಳಿಗೆ ಐಟಿ ಭಾಷೆಯಲ್ಲಿ ಡೇಟಾ ಎಂದು ಹೆಸರು.
ಕಂಪ್ಯೂಟರಿನಲ್ಲಿ ಸಂಸ್ಕರಿಸಲು ಸಾಧ್ಯವಾಗುವ ರೂಪದಲ್ಲಿ ಸಂಗ್ರಹಿಸುವ ವಿವರಗಳಿಗೆ ಐಟಿ ಭಾಷೆಯಲ್ಲಿ ಡೇಟಾ ಎಂದು ಹೆಸರು.Image by Gerd Altmann from Pixabay

ಡೇಟಾ ಅಂದರೆ ಏನು?

ಮನುಷ್ಯನ ದೇಹದಲ್ಲಿ ರಕ್ತ ಹೇಗೋ ಐಟಿ ಕ್ಷೇತ್ರದಲ್ಲಿ ದತ್ತಾಂಶವೂ ಅಷ್ಟೇ ಮುಖ್ಯ. ಇದನ್ನು ಪ್ರಪಂಚದ ಅತ್ಯಂತ ಮಹತ್ವದ ಸಂಪನ್ಮೂಲ ಎಂದು ಕರೆಯುವವರೂ ಇದ್ದಾರೆ.

ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ ನಾವು ಪ್ರತಿದಿನವೂ ಅನೇಕ ಕೆಲಸಗಳನ್ನು ಮಾಡಿಕೊಳ್ಳುತ್ತೇವೆ. ವಾಟ್ಸ್‌ಆಪ್ ಸಂದೇಶಗಳನ್ನು ಕಳುಹಿಸುವುದು, ಮೊಬೈಲಿನಲ್ಲಿ ವೀಡಿಯೋ ನೋಡುವುದು, ಆನ್‌ಲೈನ್ ಅಂಗಡಿಗಳಲ್ಲಿ ಶಾಪಿಂಗ್ ಮಾಡುವುದು, ಆಪ್ ಬಳಸಿ ಟ್ಯಾಕ್ಸಿ ಕರೆಸುವುದು, ಎಟಿಎಂ‌ನಿಂದ ಹಣ ತೆಗೆಯುವುದು, ಬಸ್ಸಿನ ಕಂಡಕ್ಟರು ನಮ್ಮ ಟಿಕೆಟ್ ಮುದ್ರಿಸಿ ನೀಡುವುದು - ಇವೆಲ್ಲವೂ ಇದಕ್ಕೆ ಉದಾಹರಣೆ.

ಇಂತಹ ಪ್ರತಿಯೊಂದು ಕೆಲಸ ಮಾಡಿದಾಗಲೂ ಒಂದಷ್ಟು ವಿವರಗಳು ಸಂಬಂಧಪಟ್ಟ ವ್ಯವಸ್ಥೆಯಲ್ಲಿ ದಾಖಲಾಗುತ್ತವೆ, ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾವಣೆಯಾಗುತ್ತವೆ. ಮೊಬೈಲಿನಲ್ಲಿ ವೀಕ್ಷಿಸಿದ ವೀಡಿಯೋಗಳು, ಆನ್‌ಲೈನ್ ಅಂಗಡಿಯಲ್ಲಿ ನೋಡಿದ ಹಾಗೂ ಖರೀದಿಸಿದ ವಸ್ತುಗಳು, ಟ್ಯಾಕ್ಸಿ ಬರಬೇಕಾದ ವಿಳಾಸ, ಗೂಗಲ್‌ನಲ್ಲಿ ಹುಡುಕಿದ ವಿಷಯ, ಎಟಿಎಂನಿಂದ ಪಡೆದ ಹಣದ ಮೊತ್ತ, ಬಸ್ಸಿನಲ್ಲಿ ಪ್ರಯಾಣಿಸಿದ ದೂರ - ಹೀಗೆ.

ಕಂಪ್ಯೂಟರಿನಲ್ಲಿ ಸಂಸ್ಕರಿಸಲು ಸಾಧ್ಯವಾಗುವ ರೂಪದಲ್ಲಿ ಸಂಗ್ರಹಿಸುವ ಇಂತಹ ವಿವರಗಳಿಗೆ ಐಟಿ ಭಾಷೆಯಲ್ಲಿ ಡೇಟಾ ಎಂದು ಹೆಸರು. ಇದನ್ನು ಕನ್ನಡದಲ್ಲಿ ದತ್ತಾಂಶ ಎಂದು ಕರೆಯಬಹುದು. ಮನುಷ್ಯನ ದೇಹದಲ್ಲಿ ರಕ್ತ ಹೇಗೋ ಐಟಿ ಕ್ಷೇತ್ರದಲ್ಲಿ ದತ್ತಾಂಶವೂ ಅಷ್ಟೇ ಮುಖ್ಯ. ಇದನ್ನು ಪ್ರಪಂಚದ ಅತ್ಯಂತ ಮಹತ್ವದ ಸಂಪನ್ಮೂಲ ಎಂದು ಕರೆಯುವವರೂ ಇದ್ದಾರೆ. ಹಲವು ಸಂಸ್ಥೆಗಳ ಇಡೀ ವ್ಯವಹಾರ ನಿಂತಿರುವುದೇ ದತ್ತಾಂಶದ ಮೇಲೆ!

ಆದ್ದರಿಂದಲೇ ಐಟಿ ಜಗತ್ತಿನಲ್ಲಿ ದತ್ತಾಂಶ ಸಂಗ್ರಹಣೆಗೆ ಎಲ್ಲಿಲ್ಲದ ಮಹತ್ವ. ಜಾಲತಾಣದಲ್ಲಿ ನಾವು ಏನೇನು ಮಾಡುತ್ತೇವೆ, ಮ್ಯಾಪ್ ಹಾಕಿಕೊಂಡು ಎಲ್ಲೆಲ್ಲಿ ಹೋಗುತ್ತೇವೆ, ಸಮಾಜಜಾಲಗಳಲ್ಲಿ ಏನು ಹೇಳುತ್ತೇವೆ ಎನ್ನುವುದೆಲ್ಲ ದತ್ತಾಂಶದ ರೂಪದಲ್ಲಿ ಒಂದಲ್ಲ ಒಂದುಕಡೆ ಸಂಗ್ರಹವಾಗುತ್ತಿರುತ್ತದೆ. ಸಣ್ಣ-ದೊಡ್ಡ ಸಂಸ್ಥೆಗಳ ಕಾರ್ಯಾಚರಣೆ, ಆದಾಯ, ಲಾಭ-ನಷ್ಟಗಳ ವಿವರಗಳೂ ಇಂತಹ ದತ್ತಾಂಶದ ನೆರವಿನಿಂದಲೇ ರೂಪುಗೊಳ್ಳುತ್ತವೆ.

ಹೀಗಾಗಿ ದತ್ತಾಂಶದ ಸಂಗ್ರಹಣೆ, ಸಂಸ್ಕರಣೆ ಮತ್ತು ಬಳಕೆ ಇಂದು ಮಾಹಿತಿ ತಂತ್ರಜ್ಞಾನದ ಪ್ರಮುಖ ಶಾಖೆಗಳಲ್ಲೊಂದಾಗಿ ಬೆಳೆದಿದೆ. ದತ್ತಾಂಶವನ್ನು ಸಂಗ್ರಹಿಸಿ ಸೂಕ್ತವಾಗಿ ಶೇಖರಿಸಿಡುವ ಡೇಟಾ ಇಂಜಿನಿಯರಿಂಗ್, ಸಂಗ್ರಹಿಸಿಟ್ಟ ದತ್ತಾಂಶವನ್ನು ವಿಶ್ಲೇಷಿಸಿ ಅರ್ಥೈಸುವ ಡೇಟಾ ಸೈನ್ಸ್ - ಇವೆಲ್ಲ ಈ ಶಾಖೆಯಡಿಯಲ್ಲಿ ಬರುತ್ತವೆ. ದತ್ತಾಂಶ ರೂಪುಗೊಂಡ ಕ್ಷಣದಿಂದ ಪ್ರಾರಂಭಿಸಿ ವಿಭಿನ್ನ ಉದ್ದೇಶಗಳಿಗಾಗಿ ಬಳಕೆಯಾಗುವವರೆಗೂ ಅದರ ಮೇಲ್ವಿಚಾರಣೆ ನೋಡಿಕೊಳ್ಳುವುದು ಇವುಗಳ ಕೆಲಸ.

ಇಲ್ಲಿ ಕೆಲಸಮಾಡುವ ತಜ್ಞರು ಪ್ರತಿ ಕ್ಷಣದಲ್ಲೂ ಅಗಾಧ ಪ್ರಮಾಣದ ದತ್ತಾಂಶವನ್ನು ನಿಭಾಯಿಸುತ್ತಿರುತ್ತಾರೆ. ಅವರು ನಿಭಾಯಿಸುವ ದತ್ತಾಂಶ ಹಲವು ರೂಪಗಳಲ್ಲಿರಬಹುದು: ಅಂಗಡಿಯಲ್ಲೋ ಬ್ಯಾಂಕಿನಲ್ಲೋ ಸಂಗ್ರಹವಾಗುವ ದತ್ತಾಂಶ ನಿರ್ದಿಷ್ಟ ಸ್ವರೂಪದಲ್ಲಿದ್ದರೆ ಸಮಾಜಜಾಲಗಳಲ್ಲಿ ಹರಿದಾಡುವ ಸಂದೇಶಗಳು ಹೇಗೆ ಬೇಕಾದರೂ ಇರುವುದು ಸಾಧ್ಯ. ಇಂತಹ ಯಾವುದನ್ನೇ ಆದರೂ ಸರಿಯಾಗಿ ಸಂಗ್ರಹಿಸುವುದು, ಶೇಖರಿಸಿಡುವುದು, ಬಳಕೆಗೆ ಒದಗಿಸುವುದು ತಜ್ಞರ ಕೆಲಸ.

ಇಂದಿನ ದಿನಗಳಲ್ಲಿ ಬಳಕೆದಾರರ ಖಾಸಗಿತನದ ಬಗೆಗೆ ಸಾಕಷ್ಟು ಚರ್ಚೆ ಆಗುತ್ತಿರುತ್ತದೆ. ತಮ್ಮ ಬಳಕೆದಾರರ ಕುರಿತು ಸಂಸ್ಥೆಗಳು ಯಾವೆಲ್ಲ ದತ್ತಾಂಶವನ್ನು ಕಲೆಹಾಕಬಹುದು ಮತ್ತು ಕಲೆಹಾಕಬಾರದು ಎನ್ನುವ ಬಗ್ಗೆ ಕಾನೂನುಗಳೂ ರೂಪುಗೊಂಡಿವೆ. ಇಂತಹ ಕಾನೂನುಗಳನ್ನು ಅನುಸರಿಸುವುದು, ಸಂಗ್ರಹಿಸಿದ ದತ್ತಾಂಶ ದುಷ್ಕರ್ಮಿಗಳ ಕೈಸೇರದ ಹಾಗೆ ಜೋಪಾನ ಮಾಡಿಕೊಳ್ಳುವುದು ಮುಂತಾದವೂ ಕೂಡ ಈ ಕ್ಷೇತ್ರದಲ್ಲಿ ಕೆಲಸಮಾಡುವ ತಜ್ಞರ ಜವಾಬ್ದಾರಿಗಳಲ್ಲೇ ಸೇರಿವೆ.

ಇಂತಹ ತಜ್ಞರಿಗೆ ತಲೆನೋವು ತಂದೊಡ್ಡುವ ಸಂಗತಿಗಳೂ ಇವೆ. 'ಡಾರ್ಕ್ ಡೇಟಾ' ಎನ್ನುವುದು ಇಂತಹ ಸಂಗತಿಗಳಲ್ಲೊಂದು. ಸರಕಾರ, ಖಾಸಗಿ ಉದ್ದಿಮೆ, ಸ್ವಯಂಸೇವಾ ಸಂಸ್ಥೆ - ಹೀಗೆ ಯಾವ ಉದಾಹರಣೆ ತೆಗೆದುಕೊಂಡರೂ ಅಲ್ಲೆಲ್ಲ ಅನೇಕ ವಿಷಯಗಳಿಗೆ ಸಂಬಂಧಪಟ್ಟ ದತ್ತಾಂಶ ಅಪಾರ ಪ್ರಮಾಣದಲ್ಲಿ ಶೇಖರವಾಗುತ್ತಿರುತ್ತದೆ. ಇದನ್ನೆಲ್ಲ ಸರಿಯಾಗಿ ಬಳಸಿಕೊಂಡು ತನ್ನ ಕಾರ್ಯಾಚರಣೆಯನ್ನು ಉತ್ತಮಪಡಿಸಿಕೊಳ್ಳಬೇಕು ಎನ್ನುವ ಉದ್ದೇಶವೂ ಹಲವು ಕಡೆಗಳಲ್ಲಿರುತ್ತದೆ.

ಹೀಗೆ ಶೇಖರವಾಗುತ್ತದಲ್ಲ, ಆ ದತ್ತಾಂಶ ಸರಿಯಾದ ಸಮಯದಲ್ಲಿ ಸರಿಯಾದ ಉದ್ದೇಶಕ್ಕೆ ಬಳಕೆಯಾಗದೆ ಹಾಗೆಯೇ ಉಳಿದುಕೊಂಡುಬಿಟ್ಟರೆ ಅದರಿಂದ ಯಾವ ಉಪಯೋಗವೂ ಆಗುವುದಿಲ್ಲ. ಜೊತೆಗೆ ಅದನ್ನು ಸಂಗ್ರಹಿಸಿ ಸಂಸ್ಕರಿಸಲು ವ್ಯಯಿಸಿದ ಶ್ರಮವೂ ದಂಡ. ಹೀಗೆ ಉಳಿದುಕೊಳ್ಳುವ ದತ್ತಾಂಶವನ್ನೇ 'ಡಾರ್ಕ್ ಡೇಟಾ' ಎಂದು ಕರೆಯುತ್ತಾರೆ. ಇಂತಹ ನಿರುಪಯುಕ್ತ ದತ್ತಾಂಶದ ಪ್ರಮಾಣವನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಸಂಸ್ಥೆಗಳ - ತಜ್ಞರ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ.

ಮೇ ೮, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಂಪ್ಯೂಟರಿನಲ್ಲಿ ಸಂಸ್ಕರಿಸಲು ಸಾಧ್ಯವಾಗುವ ರೂಪದಲ್ಲಿ ಸಂಗ್ರಹಿಸುವ ವಿವರಗಳಿಗೆ ಐಟಿ ಭಾಷೆಯಲ್ಲಿ ಡೇಟಾ ಎಂದು ಹೆಸರು.
ಪರಿಸರ ರಕ್ಷಣೆ ಮತ್ತು ದತ್ತಾಂಶದ ವಿಜ್ಞಾನ

Related Stories

No stories found.
ಇಜ್ಞಾನ Ejnana
www.ejnana.com