ಓದಿ+ನೋಡಿ: ಕ್ಯಾಪ್ಚಾ ಅಂದರೆ ಏನು?

ಹಲವು ಜಾಲತಾಣಗಳು 'ನಾನು ರೋಬಾಟ್ ಅಲ್ಲ' ಎಂದು ಸ್ವಯಂಘೋಷಣೆ ಮಾಡಿಕೊಳ್ಳುವಂತೆ ಕೇಳುತ್ತವಲ್ಲ, ಅದು ಯಾಕೆ?

ನಾವು ಅನೇಕ ಕೆಲಸಗಳಿಗೆ ವರ್ಲ್ಡ್ ವೈಡ್ ವೆಬ್, ಅಂದರೆ ವಿಶ್ವವ್ಯಾಪಿ ಜಾಲವನ್ನು ಬಳಸುತ್ತೇವೆ. ಅದನ್ನು ಬಳಸುವಾಗ ಒಂದಲ್ಲ ಒಂದು ರೀತಿಯ ಮಾಹಿತಿಯನ್ನು ಅದರ ಮೂಲಕ ಕಳಿಸುತ್ತಲೂ ಇರುತ್ತೇವೆ. ಆನ್‌ಲೈನ್ ಫಾರ್ಮ್‌, ಅಂದರೆ ನಮೂನೆಗಳನ್ನು ಭರ್ತಿಮಾಡುವುದು ಇದಕ್ಕೆ ಒಂದು ಉದಾಹರಣೆ.

ಇಂತಹ ಬಹಳಷ್ಟು ನಮೂನೆಗಳನ್ನು ಭರ್ತಿಮಾಡಿ ಮುಗಿಸಿದಾಗ ಆ ಜಾಲತಾಣಗಳು ನಮಗೊಂದು ಸಮಸ್ಯೆಯನ್ನು ತೋರಿಸಿ ಅದನ್ನು ಬಿಡಿಸುವಂತೆ ಕೇಳುತ್ತವೆ. 453ರಿಂದ 50 ಕಳೆದರೆ ಎಷ್ಟು ಎಂದು ಕೇಳುವುದು, ಗೋಜಲಾಗಿರುವ ಅಕ್ಷರ-ಅಂಕಿಗಳನ್ನು ತೋರಿಸಿ ಅವನ್ನು ಸರಿಯಾಗಿ ಗುರುತಿಸುವಂತೆ ಹೇಳುವುದು, 'ನಾನು ರೋಬಾಟ್ ಅಲ್ಲ' ಎಂದು ದೃಢೀಕರಿಸುವಂತೆ ಹೇಳುವುದು, ಇವೆಲ್ಲ ಇದರ ಉದಾಹರಣೆಗಳು.

ನಮ್ಮ ಕುತೂಹಲ ಕೆರಳಿಸುವ, ಬಹಳ ಸಾರಿ ಕಿರಿಕಿರಿಗೂ ಕಾರಣವಾಗುವ ಈ ಅನುಭವಗಳ ಹಿಂದೆ ಕ್ಯಾಪ್ಚಾ (CAPTCHA) ಎಂಬ ತಾಂತ್ರಿಕ ಪರಿಕಲ್ಪನೆ ಕೆಲಸ ಮಾಡುತ್ತದೆ. ಇದು, Completely Automated Public Turing test to tell Computers and Humans Apart ಎನ್ನುವುದರ ಸಂಕ್ಷೇಪ. ಹೆಸರೇ ಹೇಳುವಂತೆ, ನಿರ್ದಿಷ್ಟ ಜಾಲತಾಣವನ್ನು ಬಳಸುತ್ತಿರುವುದು ಮನುಷ್ಯನೋ ಅಥವಾ ಕಂಪ್ಯೂಟರಿನ ತಂತ್ರಾಂಶವೋ ಎಂದು ಪರೀಕ್ಷಿಸುವುದು ಈ ಪರಿಕಲ್ಪನೆಯ ಉದ್ದೇಶ. ಆಧುನಿಕ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹ ಅಲನ್ ಟ್ಯೂರಿಂಗ್ ಪ್ರತಿಪಾದಿಸಿದ್ದ ಟ್ಯೂರಿಂಗ್ ಟೆಸ್ಟ್ ಎಂಬ ಪ್ರಯೋಗ, ಈ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಬಳಕೆಯಾಗುತ್ತದೆ.

ಅದಿರಲಿ, ಯಾವುದೇ ಜಾಲತಾಣವನ್ನು ಕಂಪ್ಯೂಟರಿನ ತಂತ್ರಾಂಶ ಯಾಕೆ ಬಳಸುತ್ತದೆ, ಹಾಗೊಮ್ಮೆ ಬಳಸಿದರೂ ಅದರಿಂದ ಏನು ತೊಂದರೆ ಎಂದು ನೀವು ಕೇಳಬಹುದು. ತೊಂದರೆ ಇದೆ. ರೈಲು ಟಿಕೇಟು ಕಾದಿರಿಸುವ ತತ್ಕಾಲ್ ವ್ಯವಸ್ಥೆಯ ಉದಾಹರಣೆಯನ್ನೇ ನೋಡಿ. ಸೀಮಿತ ಸಂಖ್ಯೆಯ ಟಿಕೇಟುಗಳನ್ನು ನಿರ್ದಿಷ್ಟ ಅವಧಿಯಲ್ಲೇ ಕಾಯ್ದಿರಿಸಬೇಕಾದ ಈ ವ್ಯವಸ್ಥೆಯಲ್ಲಿ ತಂತ್ರಾಂಶಗಳೇನಾದರೂ ನಮ್ಮ ಜೊತೆ ಸ್ಪರ್ಧೆಗೆ ಬಂದರೆ ಏನಾಗಬಹುದು? ನಾವು ಲಾಗಿನ್ ಆಗುವಷ್ಟರಲ್ಲೇ ಅವು ಅಷ್ಟೂ ಟಿಕೇಟುಗಳನ್ನು ಬುಕ್ ಮಾಡಿಬಿಟ್ಟಿರುತ್ತವೆ!

ಇಂತಹ ಸನ್ನಿವೇಶಗಳನ್ನು ತಪ್ಪಿಸುವುದು ಕ್ಯಾಪ್ಚಾದ ಉದ್ದೇಶಗಳಲ್ಲೊಂದು. ಆನ್ ಲೈನ್ ನಮೂನೆಗಳ ಮೂಲಕ ಅನಗತ್ಯ ಹಾಗೂ ಅನುಪಯುಕ್ತವಾದ ಮಾಹಿತಿ – ಅಂದರೆ ಸ್ಪಾಮ್ – ಸಲ್ಲಿಕೆಯಾಗುವುದನ್ನೂ ಇದು ತಡೆಯುತ್ತದೆ.

ಪಠ್ಯವನ್ನು ಚಿತ್ರರೂಪದಲ್ಲಿ ತೋರಿಸುವ ಮೂಲಕ, ಅಥವಾ ಅಕ್ಷರ-ಅಂಕಿಗಳ ಆಕಾರ ಬದಲಿಸುವ ಮೂಲಕ ತಂತ್ರಾಂಶಗಳು ಅದನ್ನು ಗುರುತಿಸಲಾಗದಂತೆ ಮಾಡುವುದು ಕ್ಯಾಪ್ಚಾದ ಕಾರ್ಯತಂತ್ರ. ಇದನ್ನೆಲ್ಲ ಗುರುತಿಸುವುದು ಮನುಷ್ಯರಿಗೆ ಅಷ್ಟೇನೂ ಕಷ್ಟವಲ್ಲ, ಹಾಗಾಗಿ ಪ್ರಶ್ನೆಗೆ ಸರಿಯುತ್ತರ ನೀಡುವವರು ಮನುಷ್ಯರೇ ಇರಬಹುದು ಎಂದು ಅದು ಊಹಿಸುತ್ತದೆ. ಹೇಳಿದ ಕೆಲಸವನ್ನು ಒಂದೇಸಮನೆ ಮಾಡುತ್ತಾ ಹೋಗುವ ತಂತ್ರಾಂಶರೂಪಿ ರೋಬಾಟ್, ಅಂದರೆ 'ಬಾಟ್'ಗಳಿಗೆ ಪ್ರತಿಬಾರಿಯೂ ಬದಲಾಗುವ ಈ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ.

ಗೋಜಲು ಅಕ್ಷರಗಳನ್ನು ಗುರುತಿಸುವುದೇ ಆದರೆ ಅದನ್ನು ಒಳ್ಳೆಯ ಉದ್ದೇಶಕ್ಕೂ ಬಳಸಬಹುದಲ್ಲ! 'ರೀಕ್ಯಾಪ್ಚಾ' ಎಂಬ ಸುಧಾರಿತ ಪರೀಕ್ಷೆ ರೂಪುಗೊಳ್ಳಲು ಕಾರಣವಾಗಿದ್ದು ಇದೇ ಆಲೋಚನೆ.

ಡಿಜಿಟಲ್ ರೂಪಕ್ಕೆ ಪರಿವರ್ತಿಸಲೆಂದು ಹಳೆಯ ಪುಸ್ತಕಗಳನ್ನು ಸ್ಕ್ಯಾನ್ ಮಾಡುವುದು ವಿಶ್ವದೆಲ್ಲೆಡೆ ಸಾಮಾನ್ಯವಾಗಿರುವ ಅಭ್ಯಾಸ. ಹೀಗೆ ಸ್ಕ್ಯಾನ್ ಮಾಡಿದ ಪುಟಗಳಲ್ಲಿರುವ ಪಠ್ಯವನ್ನು ಗುರುತಿಸಿ ಉಳಿಸಿಡಲು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ (ಓಸಿಆರ್) ತಂತ್ರಜ್ಞಾನ ಬಳಕೆಯಾಗುತ್ತದೆ. ಈ ತಂತ್ರಜ್ಞಾನದಿಂದ ಗುರುತಿಸಲು ಸಾಧ್ಯವಾಗದ ಅಕ್ಷರ ಅಥವಾ ಪದಗಳನ್ನು ಮನುಷ್ಯರ ಸಹಾಯ ಪಡೆದು ಗುರುತಿಸುವುದನ್ನು ರೀಕ್ಯಾಪ್ಚಾ ಪರಿಕಲ್ಪನೆ ಸಾಧ್ಯವಾಗಿಸಿತು.

ಕ್ಯಾಪ್ಚಾ ಅಂಗವಾಗಿ ಗೋಜಲಾದ ಅಂಕಿ-ಅಕ್ಷರಗಳನ್ನು ತೋರಿಸುವ ಜೊತೆಗೆ, ಓಸಿಆರ್ ಮೂಲಕ ಗುರುತಿಸಲಾಗದ ಪದಗಳನ್ನೂ ಇಲ್ಲಿ ಹೆಚ್ಚುವರಿಯಾಗಿ ತೋರಿಸಲಾಗುತ್ತಿತ್ತು. ಬಳಕೆದಾರರು ಮೊದಲ ಪದವನ್ನು ಗುರುತಿಸಿದ್ದು ಕ್ಯಾಪ್ಚಾ ಪರೀಕ್ಷೆಗೆ ಉತ್ತರವಾದರೆ, ಎರಡನೇ ಪದವನ್ನು ಗುರುತಿಸಿದ್ದು ಪುಸ್ತಕದ ಡಿಜಿಟಲ್ ಆವೃತ್ತಿಯಲ್ಲಿ ಬಳಕೆಯಾಗುತ್ತಿತ್ತು! ಜಾಲತಾಣಗಳಿಗೆ ಸುರಕ್ಷತೆ ಒದಗಿಸುವ ಜೊತೆಗೆ ಭಾರೀ ಸಂಖ್ಯೆಯ ಪುಸ್ತಕಗಳ ಡಿಜಿಟಲೀಕರಣವನ್ನೂ ಪೂರ್ಣಗೊಳಿಸಿದ್ದು ರೀಕ್ಯಾಪ್ಚಾದ ಹೆಗ್ಗಳಿಕೆ.

ತಂತ್ರಜ್ಞಾನ ಬೆಳೆದಂತೆ, ಮನುಷ್ಯ ಮಾತ್ರವೇ ಮಾಡಲು ಸಾಧ್ಯವಿದ್ದ ಕೆಲಸಗಳನ್ನೂ ತಂತ್ರಾಂಶಗಳು ಮಾಡುತ್ತಿವೆ. ಹೀಗಿರುವಾಗ ಕ್ಯಾಪ್ಚಾದ ಅಕ್ಷರ-ಅಂಕಿಗಳನ್ನು ಗುರುತಿಸುವುದನ್ನೂ ಅವು ಕಲಿತುಬಿಡಬಹುದು. ಅಲ್ಲದೆ ಅಕ್ಷರಗಳನ್ನು ಗುರುತಿಸುವುದು - ಅಂಕಿಗಳನ್ನು ಕೂಡಿ ಕಳೆಯುವುದೆಲ್ಲ ನಿಜವಾದ ಮನುಷ್ಯರಿಗೂ ಕಿರಿಕಿರಿ ಮಾಡುವ ಕೆಲಸಗಳು.

ರೀಕ್ಯಾಪ್ಚಾ ತಂತ್ರಜ್ಞಾನದ ಎರಡನೇ ಆವೃತ್ತಿ
ರೀಕ್ಯಾಪ್ಚಾ ತಂತ್ರಜ್ಞಾನದ ಎರಡನೇ ಆವೃತ್ತಿadmin

ಆದ್ದರಿಂದ ಕ್ಯಾಪ್ಚಾ ಪರಿಕಲ್ಪನೆಯನ್ನು ಇನ್ನಷ್ಟು ಸುಧಾರಿಸಿ 'ನಾನು ರೋಬಾಟ್ ಅಲ್ಲ' ಎಂಬ ಸ್ವಯಂಘೋಷಣೆ ಮಾಡಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಲಾಯಿತು. ಇದು ರೀಕ್ಯಾಪ್ಚಾ ತಂತ್ರಜ್ಞಾನದ ಎರಡನೇ ಆವೃತ್ತಿ.

ಲೆಕ್ಕ ಬಿಡಿಸುವ ಅಥವಾ ಅಕ್ಷರಗಳನ್ನು ಸರಿಯಾಗಿ ಗುರುತಿಸುವ ಬದಲು ಈ ಘೋಷಣೆಯ ಪಕ್ಕ ಇರುವ ಚೌಕದಲ್ಲಿ ಕ್ಲಿಕ್ ಮಾಡಿದರೆ ಸಾಕು, ಹಾಗೆ ಮಾಡಿದ್ದು ಮನುಷ್ಯರೋ ತಂತ್ರಾಂಶವೋ ಎಂದು ಆ ಜಾಲತಾಣಕ್ಕೆ ತಿಳಿಯುತ್ತದೆ. ಪರದೆಯ ಮೇಲೆ ನಾವು ಮೌಸ್ ಪಾಯಿಂಟರ್ ಅನ್ನು ಹೇಗೆ ಓಡಾಡಿಸುತ್ತೇವೆ ಎನ್ನುವುದರಿಂದ ಪ್ರಾರಂಭಿಸಿ ನಮ್ಮ ಐಪಿ ವಿಳಾಸದವರೆಗೆ ಹಲವು ವಿವರಗಳನ್ನು ಬಳಸುವ ಮೂಲಕ ಜಾಲತಾಣವನ್ನು ಬಳಸುತ್ತಿರುವುದು ಮನುಷ್ಯನೋ ತಂತ್ರಾಂಶವೋ ಎಂದು ಈ ವ್ಯವಸ್ಥೆ ಪತ್ತೆಮಾಡುತ್ತದಂತೆ.

ಇಷ್ಟೆಲ್ಲ ಸಾಧ್ಯವಿದ್ದರೆ ನಾನು ರೋಬಾಟ್ ಅಲ್ಲ ಎಂದು ಹೇಳಿಕೊಳ್ಳುವ ಅಗತ್ಯವಾದರೂ ಏನು? ಅದರ ಅಗತ್ಯವೂ ಇಲ್ಲದ ಕ್ಯಾಪ್ಚಾ ವ್ಯವಸ್ಥೆಯನ್ನೂ ತಜ್ಞರು ರೂಪಿಸಿದ್ದಾರೆ. ಈ ಹೊಸ ಆವೃತ್ತಿಯನ್ನು ಬಳಸುವ ಜಾಲತಾಣಗಳಲ್ಲಿ ಬಳಕೆದಾರರಿಂದ ಯಾವುದೇ ಹೆಚ್ಚುವರಿ ಮಾಹಿತಿಯನ್ನೂ ಪಡೆಯದೆ ಸುರಕ್ಷತೆಯ ಪರೀಕ್ಷೆಯನ್ನು ನಡೆಸಲಾಗುತ್ತದಂತೆ.

ವೀಡಿಯೊ ಸೌಜನ್ಯ: ಸಂವಾದ

Related Stories

No stories found.
logo
ಇಜ್ಞಾನ Ejnana
www.ejnana.com