ಓದಿ+ನೋಡಿ: ಕುಕಿ ಅಂದರೆ ಏನು?

ಕುಕಿ ಅಂದರೆ ಸಣ್ಣ ಸಿಹಿರೊಟ್ಟಿ ಅಥವಾ ಬಿಸ್ಕತ್ತು. ವೆಬ್‌ಸೈಟಿನಲ್ಲಿ ಬಿಸ್ಕತ್ತಿಗೇನು ಕೆಲಸ?

"ನಾವು ಕುಕಿಗಳನ್ನು ಬಳಸುತ್ತೇವೆ" ಎನ್ನುವ ಸಂದೇಶವನ್ನು ನೀವು ಹಲವು ಜಾಲತಾಣ, ಅಂದರೆ ವೆಬ್‌ಸೈಟ್‌ಗಳಲ್ಲಿ ನೋಡಿರಬಹುದು.

ಕುಕಿ ಎಂದರೇನು ಎಂದು ನಿಘಂಟಿನಲ್ಲಿ ಹುಡುಕಿದರೆ "ಸಣ್ಣ ಸಿಹಿರೊಟ್ಟಿ ಅಥವಾ ಬಿಸ್ಕತ್ತು" ಎಂಬ ಅರ್ಥ ಸಿಗುತ್ತದೆ. ವೆಬ್‌ಸೈಟಿನಲ್ಲಿ ಬಿಸ್ಕತ್ತಿಗೇನು ಕೆಲಸ? ಇದೇ ಈ ಸಂಚಿಕೆಯ ವಿಷಯ.

ಹೆಸರು ರುಚಿಕರವಾಗಿದ್ದರೂ ಈ ಕುಕಿ ಎನ್ನುವುದು ಒಂದು ಸಾಮಾನ್ಯ ಕಡತ, ಅಂದರೆ ಫೈಲ್. ನಾವು ಭೇಟಿಕೊಡುವ ಜಾಲತಾಣಗಳು ಈ ಕಡತವನ್ನು ನಮ್ಮ ಕಂಪ್ಯೂಟರಿನಲ್ಲಿ (ಅಥವಾ ಸ್ಮಾರ್ಟ್‌ಫೋನಿನಲ್ಲಿ) ಉಳಿಸಿಡುತ್ತವೆ. ಆ ಜಾಲತಾಣದಲ್ಲಿ ನಮ್ಮ ಚಟುವಟಿಕೆಗಳ ಬಗ್ಗೆ ಒಂದಷ್ಟು ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವುದು ಕುಕಿಯ ಕೆಲಸ. ಮುಂದಿನ ಬಾರಿ ಅದೇ ತಾಣಕ್ಕೆ ಭೇಟಿಕೊಟ್ಟಾಗ ಕುಕಿಯಲ್ಲಿ ಏನು ಮಾಹಿತಿ ಇದೆ ಎಂದು ನೋಡುವ ತಾಣ, ನಮ್ಮ ವೀಕ್ಷಣೆಯ ಅನುಭವ ಹೇಗಿರಬೇಕು ಎನ್ನುವುದನ್ನು ನಿರ್ಧರಿಸುತ್ತದೆ.

ಲಾಗ್‌ಔಟ್ ಆಗದೆ ಬಿಟ್ಟ ಇಮೇಲ್ ತಾಣವನ್ನು ಮುಂದಿನ ಬಾರಿ ಅದೇ ಕಂಪ್ಯೂಟರಿನಲ್ಲಿ ತೆರೆದರೆ ಅದು ಪಾಸ್‌ವರ್ಡ್ ಕೇಳದೆಯೇ ತೆರೆದುಕೊಳ್ಳುತ್ತದೆ. ಅದೇ ರೀತಿ ಯಾವುದೋ ತಾಣ ಕನ್ನಡದಲ್ಲೇ ಕಾಣಬೇಕು ಅಂತ ನಾವು ಆಯ್ಕೆ ಮಾಡಿದ್ದರೆ ಮುಂದಿನ ಸಲವೂ ಅದು ಕನ್ನಡದಲ್ಲೇ ಕಾಣಿಸುತ್ತದೆ. ಯಾವುದೋ ಅಂತಾರಾಷ್ಟ್ರೀಯ ಮಟ್ಟದ ಶಾಪಿಂಗ್ ತಾಣದಲ್ಲಿ ಬೆಲೆಗಳು ರೂಪಾಯಿಯಲ್ಲೇ ಕಾಣಬೇಕು ಅಂತ ಹೇಳಿದ್ದರೆ ಅದೂ ಹಾಗೆಯೇ ಇರುತ್ತದೆ. ಇದೆಲ್ಲ ಸಾಧ್ಯವಾಗುವುದು ಕುಕಿಗಳ ಸಹಾಯದಿಂದ.

ಕುಕಿ ಎನ್ನುವ ಒಂದೇ ಹೆಸರಿದ್ದರೂ ಇವುಗಳಲ್ಲಿ ಹಲವು ವಿಧಗಳನ್ನು ನಾವು ನೋಡಬಹುದು. ಅವು ನಮ್ಮ ಕಂಪ್ಯೂಟರಿನಲ್ಲಿ ಎಷ್ಟುಕಾಲ ಉಳಿದಿರುತ್ತವೆ, ಹಾಗೂ ಎಲ್ಲಿಂದ ಬಂದಿರುತ್ತವೆ ಎನ್ನುವ ಆಧಾರದ ಮೇಲೆ ಈ ವಿಧಗಳನ್ನು ಗುರುತಿಸುವುದು ಸಾಧ್ಯ.

ಕೆಲವು ಕುಕಿಗಳು ಸ್ವಲ್ಪ ಕಾಲದವರೆಗೆ ಮಾತ್ರವೇ ನಮ್ಮ ಕಂಪ್ಯೂಟರಿನಲ್ಲಿರುತ್ತವೆ. ಯಾವುದೋ ಜಾಲತಾಣಕ್ಕೆ ಭೇಟಿಕೊಟ್ಟಾಗ ಸೃಷ್ಟಿಯಾಗುತ್ತವೆ, ಬ್ರೌಸರ್ ಕಿಟಕಿಯನ್ನು ಮುಚ್ಚಿದ ತಕ್ಷಣ ಅಳಿಸಿಹೋಗುತ್ತವೆ. ಈ ಬಗೆಯ ಕುಕಿಗಳಿಗೆ ಸೆಶನ್ ಕುಕಿಗಳೆಂದು ಹೆಸರು.

ಇನ್ನು ಕೆಲವು ಕುಕಿಗಳು ನಾವು ಬ್ರೌಸರ್ ಮುಚ್ಚಿದ ಮೇಲೂ ನಮ್ಮ ಕಂಪ್ಯೂಟರಿನಲ್ಲೇ ಉಳಿದಿರುತ್ತವೆ. ಅದೇ ತಾಣಕ್ಕೆ ಇನ್ನೊಂದು ಸಲ ಭೇಟಿಕೊಟ್ಟಾಗ ನಮ್ಮನ್ನು ಆ ತಾಣ ನೆನಪಿಟ್ಟುಕೊಂಡಿದ್ದರೆ ಅದಕ್ಕೆ ಇಂತಹ ಕುಕಿಗಳೇ ಕಾರಣ. ಇವನ್ನು ಪರ್ಸಿಸ್ಟೆಂಟ್ ಕುಕಿ ಎಂದು ಕರೆಯುತ್ತಾರೆ.

ನಾವು ಯಾವ ತಾಣಕ್ಕೆ ಭೇಟಿಕೊಟ್ಟಿರುತ್ತೇವೋ ಅದೇ ತಾಣ ನಮ್ಮ ಕಂಪ್ಯೂಟರಿನಲ್ಲೊಂದು ಕುಕಿ ಉಳಿಸಿಟ್ಟರೆ ಅದಕ್ಕೆ ಫರ್ಸ್ಟ್ ಪಾರ್ಟಿ ಕುಕಿ ಎಂದು ಹೆಸರು. ಇಂತಹ ಕುಕಿಗಳು ಆ ತಾಣದಲ್ಲಿ ನಮ್ಮ ಚಟುವಟಿಕೆಗಳ ಬಗ್ಗೆ ಮಾತ್ರ ಮಾಹಿತಿ ಇಟ್ಟುಕೊಂಡಿರುತ್ತವೆ.

ಕೆಲವು ತಾಣಗಳಲ್ಲಿ ಬೇರೆ ಇನ್ನೊಂದು ತಾಣದ ಸ್ವಲ್ಪ ಭಾಗವೂ ಅಡಕವಾಗಿರುವುದು ಸಾಧ್ಯ. ಉದಾಹರಣೆಗೆ, ಬಹುತೇಕ ಕಡೆ ಕಾಣಿಸಿಕೊಳ್ಳುವ ಜಾಹೀರಾತುಗಳು ಆ ಜಾಹೀರಾತು ಸಂಸ್ಥೆಯ ತಾಣದಿಂದ ಬರುತ್ತಿರುತ್ತವೆ. ಅಂದರೆ, ನೀವು ಯಾವುದೋ ತಾಣಕ್ಕೆ ಭೇಟಿಕೊಟ್ಟಿದ್ದು ಆ ತಾಣದ ಜೊತೆಗೆ ಅಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಈ ಬೇರೆಯ ತಾಣಕ್ಕೂ ತಿಳಿಯುವುದು ಸಾಧ್ಯ. ಇಂತಹ ತಾಣಗಳು ಕೂಡ ನಿಮ್ಮ ಕಂಪ್ಯೂಟರಿನಲ್ಲಿ ಕುಕಿಗಳನ್ನು ಉಳಿಸಿಡಬಹುದು. ಅಂತಹ ಕುಕಿಗಳನ್ನು ಥರ್ಡ್ ಪಾರ್ಟಿ ಕುಕಿ ಎಂದು ಕರೆಯುತ್ತಾರೆ.

ಕುಕಿಗಳು ನಮ್ಮ ಚಟುವಟಿಕೆಗಳನ್ನು ದಾಖಲಿಸಿಕೊಳ್ಳುತ್ತವೆ ಎಂದತಕ್ಷಣ ಅವು ಏನೇನೆಲ್ಲ ಉಳಿಸಿಟ್ಟುಕೊಳ್ಳುತ್ತವೆ, ಅದರಿಂದ ನಮ್ಮ ಖಾಸಗಿತನಕ್ಕೆ ತೊಂದರೆ ಆಗೋದಿಲ್ವಾ ಎನ್ನುವ ಪ್ರಶ್ನೆಗಳೆಲ್ಲ ಬರುವುದು ಸಹಜ.

ಯಾವುದೋ ವಿಷಯವನ್ನು ಸರ್ಚ್ ಮಾಡಿದ ಮೇಲೆ ಯಾವ ತಾಣಕ್ಕೆ ಹೋದರೂ ಅದಕ್ಕೆ ಸಂಬಂಧಪಟ್ಟ ಜಾಹೀರಾತುಗಳೇ ಕಾಣಲು ಶುರುವಾಗುತ್ತದಲ್ಲ, ಅದರ ಹಿಂದೆ ಕುಕಿಗಳದೇ ಕೈವಾಡ ಇರುತ್ತದೆ. ಈ ದೃಷ್ಟಿಯಿಂದ ನೋಡಿದರೆ ಥರ್ಡ್ ಪಾರ್ಟಿ ಕುಕಿಗಳು ಸುರಕ್ಷತೆ ಹಾಗೂ ಖಾಸಗಿತನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಸವಾಲು ಎಂದೇ ಹೇಳಬೇಕು.

ಇದರ ಹೊರತಾಗಿ, ವೈರಸ್‌, ವರ್ಮ್ ಮುಂತಾದ ಕುತಂತ್ರಾಂಶಗಳಿಗೆ ಹೋಲಿಸಿದರೆ ಕುಕಿಗಳು ಅಷ್ಟೇನೂ ಹಾನಿಮಾಡುವುದಿಲ್ಲ. ಆದರೆ ಅವು ನಮ್ಮ ಚಟುವಟಿಕೆಗಳನ್ನು ದಾಖಲಿಸಿಕೊಳ್ಳುವುದರಿಂದ ನಾವು ಎಲ್ಲಿ ಹೋಗುತ್ತಿದ್ದೇವೆ, ಏನು ಮಾಡುತ್ತಿದ್ದೇವೆ ಎನ್ನುವುದೆಲ್ಲ ಬೇರೆಯವರಿಗೆ ಗೊತ್ತಾಗುವ ಸಾಧ್ಯತೆ ಇರುತ್ತದೆ.

ಇದನ್ನು ತಪ್ಪಿಸಲು ನಮ್ಮ ಮುಂದೆ ಹಲವು ಆಯ್ಕೆಗಳಿವೆ. ಬ್ರೌಸರ್‌ನಲ್ಲಿರುವ ಇನ್‌ಕಾಗ್ನಿಟೋ ಅಥವಾ ಪ್ರೈವೇಟ್ ಬ್ರೌಸಿಂಗ್ ಮೋಡ್ ಬಳಸಿದರೆ ಆಗ ಕುಕಿಗಳು ಉಳಿಯುವುದಿಲ್ಲ. ಉದಾಹರಣೆಗೆ, ನೀವು ಯಾವುದೋ ಊರಿಗೆ ಹೋಗಲು ಬಸ್ಸು ಅಥವಾ ವಿಮಾನದ ಟಿಕೆಟ್ ಹುಡುಕುತ್ತಿದ್ದರೆ, ಆ ಹುಡುಕಾಟವನ್ನು ಇನ್‌ಕಾಗ್ನಿಟೋ ಮೋಡ್‌ನಲ್ಲಿ ಮಾಡಿದರೆ ನಿಮಗೆ ಆನಂತರ ಅದೇ ಜಾಹೀರಾತುಗಳ ಕಾಟ ಇರುವುದಿಲ್ಲ.

ಇದರ ಜೊತೆಗೆ, ಯಾವ ಬಗೆಯ ಕುಕಿಗಳಿಗೆ ಅನುಮತಿ ನೀಡಬೇಕು, ಯಾವ ಬಗೆಯ ಕುಕಿಗಳಿಗೆ ಅನುಮತಿ ನೀಡಬಾರದು, ಕುಕಿಗಳನ್ನು ಎಷ್ಟು ಸಮಯ ಇಟ್ಟುಕೊಂಡಿರಬೇಕು ಎನ್ನುವುದನ್ನೆಲ್ಲ ತೀರ್ಮಾನಿಸುವ ಅಧಿಕಾರವನ್ನೂ ಬ್ರೌಸರ್‌ಗಳು ನಮಗೇ ಕೊಟ್ಟಿರುತ್ತವೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ನಿಮ್ಮ ಬ್ರೌಸರ್‌ನ ಹೆಲ್ಪ್ ವಿಭಾಗದಲ್ಲಿ ಅಥವಾ ಇಂಟರ್‌ನೆಟ್ ಸರ್ಚ್ ಮಾಡುವ ಮೂಲಕ ತಿಳಿದುಕೊಳ್ಳಬಹುದು. ಆ ಆಯ್ಕೆಗಳನ್ನು ಬಳಸಿಕೊಳ್ಳುವ ಮೂಲಕವೂ ನಾವು ಕುಕಿಗಳನ್ನು ನಿಭಾಯಿಸುವುದು ಸಾಧ್ಯ.

ಹಾಗೆಂದು ನಮಗೆ ಕುಕಿಗಳೇ ಬೇಡ ಎಂದರೆ ಜಾಲತಾಣಗಳನ್ನು ಬ್ರೌಸ್ ಮಾಡುವಾಗ ಸಾಕಷ್ಟು ಕಿರಿಕಿರಿ ಕೂಡ ಆಗಬಹುದು, ಮಾಡಿದ ಸೆಟಿಂಗ್‌ ಅನ್ನೇ ಪದೇ ಪದೇ ಮಾಡಬೇಕಾಗಿ ಬರಬಹುದು. ಅದನ್ನು ಕೂಡ ನೆನಪಿನಲ್ಲಿಟ್ಟುಕೊಂಡು ಮುಂದುವರೆಯುವುದು ಒಳ್ಳೆಯದು.

ಇದು, ಕುಕಿ ಎನ್ನುವ ತಿನ್ನಲಾಗದ ಬಿಸ್ಕತ್ತಿನ ಕತೆ. ನಿಮಗೆ ಹೇಗನ್ನಿಸ್ತು ತಿಳಿಸಿ.

ವೀಡಿಯೊ ಸೌಜನ್ಯ: ಸಂವಾದ

A cookie is a sweet biscuit. Why and how is it used in the world of Information Technology? Read the article, and watch the video! Brought to you in Kannada by ejnana.com, in association with Samvada.

Related Stories

No stories found.
logo
ಇಜ್ಞಾನ Ejnana
www.ejnana.com