ಫೋನಿನ ಪ್ರಾಥಮಿಕ ಕ್ಯಾಮೆರಾವನ್ನೇ ನಮ್ಮಕಡೆ ತಿರುಗಿಸಿಕೊಂಡು ಸೆಲ್ಫಿ ತೆಗೆದುಕೊಳ್ಳಲು ಫ್ಲಿಪ್ ಕ್ಯಾಮೆರಾ ನೆರವಾಗುತ್ತದೆ.
ಫೋನಿನ ಪ್ರಾಥಮಿಕ ಕ್ಯಾಮೆರಾವನ್ನೇ ನಮ್ಮಕಡೆ ತಿರುಗಿಸಿಕೊಂಡು ಸೆಲ್ಫಿ ತೆಗೆದುಕೊಳ್ಳಲು ಫ್ಲಿಪ್ ಕ್ಯಾಮೆರಾ ನೆರವಾಗುತ್ತದೆ.ASUS ZenTalk

ಸೆಲ್ಫಿ ಕ್ಯಾಮೆರಾಗಳ ಸ್ಥಳಾಂತರ ಪರ್ವ

ಸೆಲ್ಫಿ ಕ್ಯಾಮೆರಾಗಳನ್ನು ಮೊಬೈಲ್ ಪರದೆಯ ಅಂಚಿನಲ್ಲೇ ಏಕೆ ಇಡಬೇಕು?

ಸ್ಮಾರ್ಟ್ ಆಗುವ ಮೊದಲು ಮೊಬೈಲ್ ಫೋನುಗಳ ಸ್ವರೂಪ ಬಹಳ ಸರಳವಾಗಿರುತ್ತಿತ್ತು. ಒಂದು ಕೀಲಿಮಣೆ, ಪುಟ್ಟದೊಂದು ಪರದೆ - ಮೊಬೈಲ್ ಮೇಲ್ಮೈಯಲ್ಲಿ ಆಗ ನಮಗೆ ಕಾಣುತ್ತಿದ್ದದ್ದು ಇಷ್ಟೇ!

ಈಗ, ಮೊಬೈಲ್ ಫೋನುಗಳೆಲ್ಲ ಸ್ಮಾರ್ಟ್ ಫೋನುಗಳಾಗಿ ಬದಲಾದ ಮೇಲೆ, ಅವುಗಳಲ್ಲಿ ಅದೆಷ್ಟೋ ಬದಲಾವಣೆಗಳಾಗಿವೆ. ಅದೆಷ್ಟೋ ಹೊಸ ಸವಲತ್ತುಗಳು ಈ ಸಾಧನದಲ್ಲಿ ಸಿಗುತ್ತಿದೆ. ಹೀಗಿದ್ದರೂ ಇಂದಿನ ಮೊಬೈಲುಗಳನ್ನು ನೋಡಿದರೆ ಅವು ಹಿಂದಿಗಿಂತಲೂ ಸರಳವಾಗಿ ಕಾಣುತ್ತವೆ. ಏಕೆಂದರೆ ಅಲ್ಲಿ ನಮಗೆ ಕಾಣಸಿಗುವುದು ಒಂದೇ - ಮೊಬೈಲಿನ ಮೇಲ್ಮೈಯನ್ನು ಪೂರ್ತಿಯಾಗಿ ಆವರಿಸಿಕೊಂಡ ಸ್ಪರ್ಶಸಂವೇದಿ ಪರದೆ (ಟಚ್‌ಸ್ಕ್ರೀನ್)!

ಈಗ ಕೆಲವು ವರ್ಷಗಳ ಹಿಂದೆ, ಸ್ಮಾರ್ಟ್ ಫೋನ್ ಬಂದಮೇಲೂ, ಪರಿಸ್ಥಿತಿ ಹೀಗಿರಲಿಲ್ಲ. ಅಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಪರ್ಶಸಂವೇದಿ ಪರದೆಯೇ ಇದ್ದರೂ ಅದರ ಸುತ್ತ ಒಂದಷ್ಟು ಜಾಗ (ಬೆಜ಼ೆಲ್) ಇರುತ್ತಿತ್ತು. ಮೇಲುತುದಿಯಲ್ಲಿ ಸೆಲ್ಫಿ ಕ್ಯಾಮೆರಾವನ್ನೂ ಕೆಳಭಾಗದಲ್ಲಿ ಮೈಕ್ ಇತ್ಯಾದಿಗಳನ್ನೂ ಅಳವಡಿಸಲು ಆ ಜಾಗ ಬಳಕೆಯಾಗುತ್ತಿತ್ತು.

ಆದರೆ ಸ್ಮಾರ್ಟ್‌ಫೋನ್ ಬಳಕೆ ಜಾಸ್ತಿಯಾದಂತೆ ಪರದೆ ಎಷ್ಟು ದೊಡ್ಡದಿದ್ದರೂ ಸಾಲದು ಎನ್ನಿಸಲು ಶುರುವಾಯಿತು. ಪರದೆಯ ಸುತ್ತಲಿನ ಅಂಚನ್ನು ಸಂಪೂರ್ಣವಾಗಿ ಹೋಗಲಾಡಿಸಿ ಬೆಜ಼ೆಲ್-ಲೆಸ್ ಫೋನುಗಳನ್ನು ತಯಾರಿಸುವ ಪ್ರಯತ್ನ ಶುರುವಾದದ್ದು ಹಾಗೆ.

ಪರದೆಯ ಸುತ್ತ ಜಾಗ ಇರಬಾರದು ಅಂದರೆ ಸಾಮಾನ್ಯವಾಗಿ ಆ ಜಾಗವನ್ನು ಬಳಸಿಕೊಳ್ಳುತ್ತಿದ್ದ ಘಟಕಗಳನ್ನು ಅಲ್ಲಿಂದ ಎತ್ತಂಗಡಿ ಮಾಡಬೇಕು. ಈಗ ಕೆಲಸಮಯದಿಂದ ಮೊಬೈಲ್ ವಿನ್ಯಾಸಕರನ್ನು ಕಾಡುತ್ತಿರುವ ದೊಡ್ಡ ಸವಾಲು ಇದೇ. ಆ ಸವಾಲನ್ನು ಸಮರ್ಥವಾಗಿ ಎದುರಿಸಲಾಗುತ್ತಿದೆಯೆಂದು ನಮಗೆ ಹೇಳುತ್ತಿರುವುದೇ ಇಂದಿನ ಮೊಬೈಲುಗಳ ಮೇಲ್ಮೈಯನ್ನು ಪೂರ್ತಿಯಾಗಿ ಆವರಿಸಿಕೊಂಡ ಸ್ಪರ್ಶಸಂವೇದಿ ಪರದೆಗಳು!

ಈ ಪರಿವರ್ತನೆಯ ಮೊದಲ ಅಂಗವಾಗಿ ಮೊಬೈಲಿನ ಇಯರ್‌ಪೀಸ್, ಮೈಕ್ ಮೊದಲಾದ ಭಾಗಗಳನ್ನು ಪರದೆಯ ಮೂಲೆಗಳಿಗೆ ಸರಿಸಲಾಯಿತು. ಪ್ರಾಕ್ಸಿಮಿಟಿ ಸೆನ್ಸರ್‌, ಫಿಂಗರ್‌ಪ್ರಿಂಟ್ ಸೆನ್ಸರ್‌ನಂತಹ ಭಾಗಗಳನ್ನು ಸಾಧ್ಯವಾದಲ್ಲೆಲ್ಲ ಪರದೆಯಡಿಗೆ ಕಳುಹಿಸಲಾಯಿತು. ಯಾವ ಭಾಗಗಳ ಸ್ಥಳಾಂತರ ಸಾಧ್ಯವಾಗಲಿಲ್ಲವೋ ಅವುಗಳಿಗೆ ಪರದೆಯಂಚಿನಲ್ಲಿ ಒಂದು ಭಾಗವನ್ನು ಕತ್ತರಿಸಿ ('ನಾಚ್') ಸ್ಥಳಾವಕಾಶ ಮಾಡಿಕೊಡಲಾಯಿತು.

ಮೊಬೈಲ್ ಪರದೆಯ ಅಂಚಿನಲ್ಲಿ ಕಚ್ಚುಮಾಡಿ 'ನಾಚ್' ರೂಪಿಸುವ ಅಭ್ಯಾಸ ವ್ಯಾಪಕವಾದಂತೆ ಅವುಗಳ ಸ್ವರೂಪದಲ್ಲೂ ಸಾಕಷ್ಟು ಬದಲಾವಣೆ ಕಂಡುಬಂತು. ಮೊದಲಿಗೆ ಅಗಲವಾಗಿದ್ದ ಇಂತಹ ಕಚ್ಚುಗಳು ನಿಧಾನಕ್ಕೆ ಸಣ್ಣದೊಂದು ವೃತ್ತದ ಆಕಾರಕ್ಕೆ ಬಂದು ತಲುಪಿದವು.

ಇಷ್ಟು ಬದಲಾವಣೆ ಆಗುವಷ್ಟರಲ್ಲಿ ಆ ವೃತ್ತದೊಳಗೆ ಉಳಿದದ್ದು ಒಂದೇ: ಸೆಲ್ಫಿ ಕ್ಯಾಮೆರಾ!

ಹಾಗಿದ್ದಮೇಲೆ ಅದನ್ನು ಪರದೆಯ ಅಂಚಿನಲ್ಲೇ ಏಕೆ ಇಡಬೇಕು? ಸೆಲ್ಫಿ ಕ್ಯಾಮೆರಾಗಳ ಸ್ಥಳಾಂತರ ಪರ್ವಕ್ಕೆ ಕಾರಣವಾಗಿರುವುದು ಇದೇ ಪ್ರಶ್ನೆ. ಈ ಪ್ರಶ್ನೆಗೆ ಮೊಬೈಲ್ ವಿನ್ಯಾಸಕರು ಕಂಡುಕೊಂಡಿರುವ ಉತ್ತರಗಳು ಸಾಕಷ್ಟು ಕುತೂಹಲಕರ ಫಲಿತಾಂಶಗಳನ್ನು ತಂದುಕೊಟ್ಟಿವೆ.

ಪರದೆಯ ಮೇಲ್ಭಾಗದ ಒಂದು ಬದಿಯಲ್ಲಿ ಸಣ್ಣ ರಂಧ್ರವೊಂದನ್ನು ಕೊರೆದು ಸೆಲ್ಫಿ ಕ್ಯಾಮೆರಾಗೆ ಜಾಗಮಾಡಿಕೊಟ್ಟಿರುವುದು ಇಂತಹ ಫಲಿತಾಂಶಗಳಲ್ಲೊಂದು. ಇದು ಕಾಗದದ ಮೇಲೆ ಪಂಚಿಂಗ್ ಯಂತ್ರದಿಂದ ಮಾಡಿದ ರಂಧ್ರದಂತೆಯೇ ಕಾಣುವುದರಿಂದ ಈ ಬಗೆಯ ಪರದೆಗಳಿಗೆ 'ಹೋಲ್ ಪಂಚ್ ಡಿಸ್‌ಪ್ಲೇ' ಎಂದು ಹೆಸರಿಡಲಾಗಿದೆ.

ಈ ಸಣ್ಣ ರಂಧ್ರವೂ ಬೇಡ ಎಂದರೆ? ಸೆಲ್ಫಿ ಕ್ಯಾಮೆರಾವನ್ನು ಪರದೆಯಿಂದ ದೂರವೇ ಇಡಬೇಕಾಗುತ್ತದೆ. ಮೊಬೈಲ್ ಮೇಲ್ಮೈಯ ಪೂರ್ಣಭಾಗವನ್ನು ಪರದೆಯೇ ಆಕ್ರಮಿಸಿಕೊಂಡಿರುವಾಗ ಇದಕ್ಕೆ ಜಾಗ ಎಲ್ಲಿಂದ ತರುವುದು?

ಈ ಪ್ರಶ್ನೆಗೆ ಉತ್ತರವಾಗಿ ಚಲಿಸುವ ಕ್ಯಾಮೆರಾಗಳು ರೂಪುಗೊಂಡಿವೆ. ಮೊಬೈಲಿನೊಳಗೆ ಅಡಗಿದ್ದು ಅಗತ್ಯಬಿದ್ದಾಗ ಮಾತ್ರ ಹೊರಬರುವ (ಪಾಪ್-ಅಪ್) ಸೆಲ್ಫಿ ಕ್ಯಾಮೆರಾಗಳು ಈಚೆಗೆ ಹಲವು ಮೊಬೈಲುಗಳಲ್ಲಿ ಕಾಣಿಸಿಕೊಂಡಿವೆ. ಎಟಿಎಂ ಯಂತ್ರದಿಂದ ಹಣ ಬಂದಂತೆ ಹೊರಬರುವ ಈ ಕ್ಯಾಮೆರಾಗಳು ಸೆಲ್ಫಿ ಕೆಲಸ ಮುಗಿದ ತಕ್ಷಣ ಮತ್ತೆ ತಮ್ಮ ಗೂಡುಸೇರಿಕೊಳ್ಳುವುದು ವಿಶೇಷ. ಹಿಂದಿನ ಕಾಲದ ಮೊಬೈಲುಗಳಲ್ಲಿ ಪರದೆಯನ್ನು ಜಾರಿಸಿದರೆ (ಸ್ಲೈಡ್) ಕೀಲಿಮಣೆ ಕಾಣಿಸಿಕೊಳ್ಳುತ್ತಿತ್ತಲ್ಲ, ಅದೇ ರೀತಿಯಲ್ಲಿ ಸೆಲ್ಫಿ ಕ್ಯಾಮೆರಾ ಹೊರತರಿಸುವ ವಿನ್ಯಾಸವನ್ನೂ ಇದೀಗ ಪರಿಚಯಿಸಲಾಗಿದೆ.

ಇಂತಹ ವಿನ್ಯಾಸಗಳಲ್ಲಿ, ಮೇಲ್ನೋಟಕ್ಕೆ ಕಾಣದೆ ಇದ್ದರೂ, ಸೆಲ್ಫಿಗೆಂದು ಪ್ರತ್ಯೇಕ ಕ್ಯಾಮೆರಾ ಇರಲೇಬೇಕು. ಅದರ ಬದಲು ಫೋನಿನ ಪ್ರಾಥಮಿಕ ಕ್ಯಾಮೆರಾವನ್ನೇ ನಮ್ಮಕಡೆ ತಿರುಗಿಸಿಕೊಂಡು (ಫ್ಲಿಪ್) ಸೆಲ್ಫಿ ಕ್ಲಿಕ್ ಮಾಡಿದರೆ? ಇಂತಹ ಸೌಲಭ್ಯವಿರುವ ಮೊಬೈಲುಗಳೂ ಇದೀಗ ಮಾರುಕಟ್ಟೆಗೆ ಬಂದಿವೆ. ಸೆಲ್ಫಿ ಆಯ್ಕೆ ಒತ್ತಿದ ತಕ್ಷಣ ಸ್ವಯಂಚಾಲಿತವಾಗಿ ನಮ್ಮೆಡೆ ತಿರುಗುವ ಕ್ಯಾಮೆರಾ ಕೆಲಸ ಮುಗಿದ ಕೂಡಲೇ ಆ ಬದಿಗೆ ತಿರುಗಿ ಪ್ರಾಥಮಿಕ ಕ್ಯಾಮೆರಾ ಜವಾಬ್ದಾರಿಗೆ ಸಿದ್ಧವಾಗುತ್ತದೆ. ಈ ವಿನ್ಯಾಸ ಸಾಲದು ಎನ್ನುವವರಿಗೆ ಸ್ಲೈಡ್ ಹಾಗೂ ಫ್ಲಿಪ್ ಎರಡೂ ಸೇರಿದ ವಿನ್ಯಾಸವಿರುವ (ಪರದೆಯನ್ನು ಜಾರಿಸಿದಾಗ ಮಾತ್ರ ತಿರುಗುವ ಕ್ಯಾಮೆರಾ) ಫೋನ್ ಕೂಡ ಇದೆ!

ಚಲಿಸುವ ಹಾಗೂ ಹೊರಚಾಚಿಕೊಳ್ಳುವ ಭಾಗಗಳಿವೆ ಎಂದತಕ್ಷಣ ಅಂತಹ ಸಾಧನದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೇಳುವುದು ಸಹಜ. ಆಚೀಚೆ ಓಡಾಡಿಸುತ್ತಲೇ ಇದ್ದರೆ ಇದು ಕೆಟ್ಟುಹೋಗುವುದಿಲ್ಲವೇ ಎನ್ನುವುದು ಗ್ರಾಹಕರ ಮೊದಲ ಪ್ರಶ್ನೆ. ಹತ್ತಾರು ಸಾವಿರ ಬಾರಿ ಓಡಾಡಿಸಿದರೂ ನಮ್ಮ ಕ್ಯಾಮೆರಾ ಸುರಕ್ಷಿತ ಎನ್ನುವುದು ಈ ಪ್ರಶ್ನೆಗೆ ಬಹುತೇಕ ನಿರ್ಮಾತೃಗಳು ನೀಡುತ್ತಿರುವ ಉತ್ತರ. ಇದೇ ರೀತಿ ಕ್ಯಾಮೆರಾ ಹೊರಚಾಚಿದ್ದಾಗ ಮೊಬೈಲ್ ಕೈತಪ್ಪಿ ಬಿದ್ದರೆ ಏನು ಮಾಡುವುದು ಎನ್ನುವುದಕ್ಕೂ ಅವರು ಉತ್ತರ ಹುಡುಕಿದ್ದಾರೆ. ಮೊಬೈಲ್ ಫೋನು ಕೈಯಿಂದ ಜಾರಿದ್ದನ್ನು ಸೆನ್ಸರುಗಳ ಮೂಲಕ ಪತ್ತೆಹಚ್ಚಿ ಕ್ಯಾಮೆರಾವನ್ನು ತಕ್ಷಣವೇ ಸ್ವಸ್ಥಾನಕ್ಕೆ ಸೇರಿಸುವ ವ್ಯವಸ್ಥೆಯನ್ನು ಇಂತಹ ಹಲವು ಮೊಬೈಲುಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಚಲಿಸುವ ಭಾಗಗಳಿಗೆ ಧೂಳು ಸೇರದಂತೆ ನೋಡಿಕೊಳ್ಳುವ ಪ್ರಯತ್ನಗಳೂ ಸಾಗಿವೆ.

ಸೆಲ್ಫಿ ಕ್ಯಾಮೆರಾಗಳನ್ನು ಸ್ಥಳಾಂತರಿಸುವ ಈ ಹೊಸ ಪ್ರಯತ್ನಗಳು ಗ್ರಾಹಕರನ್ನು ಎಷ್ಟರಮಟ್ಟಿಗೆ ಮೆಚ್ಚಿಸಬಲ್ಲವು ಎನ್ನುವುದು ಕಾದುನೋಡಬೇಕಾದ ವಿಷಯ. ಈ ಸ್ಥಳಾಂತರ ತಾತ್ಕಾಲಿಕವೋ ಅಲ್ಲವೋ ಎನ್ನುವುದು ಆ ಉತ್ತರದ ಆಧಾರದ ಮೇಲೆಯೇ ನಿರ್ಧಾರವಾಗಬೇಕು.

ಜುಲೈ ೩೧, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com