ನಿತ್ಯದ ಬದುಕಿನ ಬಹುತೇಕ ಕೆಲಸಗಳಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸುವುದು ಇದೀಗ ಸಾಮಾನ್ಯ
ನಿತ್ಯದ ಬದುಕಿನ ಬಹುತೇಕ ಕೆಲಸಗಳಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸುವುದು ಇದೀಗ ಸಾಮಾನ್ಯImage by Pexels from Pixabay

ಮೊಬೈಲ್ ಮತ್ತು ಮನಃಶಾಂತಿ

ಇಂಟರ್‌ನೆಟ್ ಸಂಪರ್ಕವಿರುವ ಮೊಬೈಲ್ ಇದೆಯೆಂದ ತಕ್ಷಣ ಅದು ಲೇಟೆಸ್ಟ್ ವೆಬ್ ಸೀರೀಸ್ ನೋಡಲಷ್ಟೇ ಬಳಕೆಯಾಗಬೇಕು ಎಂದೇನೂ ಇಲ್ಲ, ಮನಃಶಾಂತಿಯ ಹುಡುಕಾಟಕ್ಕೂ ಅದು ಮಾರ್ಗದರ್ಶನ ಮಾಡಬಹುದು!

ನಿತ್ಯದ ಬದುಕಿನ ಬಹುತೇಕ ಕೆಲಸಗಳಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸುವುದು ಇದೀಗ ಸಾಮಾನ್ಯವಾಗಿರುವ ಸಂಗತಿ. ಮನೆಯ ದಿನಸಿ ತರಿಸುವುದಿರಲಿ, ವಿದ್ಯುತ್ ಸಂಪರ್ಕದ ಶುಲ್ಕ ಪಾವತಿಸುವುದಿರಲಿ, ಮುಂದೆಂದೋ ಹೋಗಬಹುದಾದ ಪ್ರವಾಸವನ್ನು ಯೋಜಿಸುವುದೇ ಇರಲಿ - ಎಲ್ಲದಕ್ಕೂ ನಾವು ಈಗ ಮಾಹಿತಿ ತಂತ್ರಜ್ಞಾನದ ಮೊರೆಹೋಗುತ್ತೇವೆ.

ಕೆಲಸಗಳನ್ನು ಸುಲಭವಾಗಿಸುವುದು, ಬೇಕಾದ್ದನ್ನೆಲ್ಲ ಕುಳಿತ ಕಡೆಗೇ ತಂದು ತಲುಪಿಸುವುದು - ಈ ಸವಲತ್ತುಗಳ ವೈಶಿಷ್ಟ್ಯ ಇಷ್ಟಕ್ಕೇ ಸೀಮಿತವೇನಲ್ಲ. ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದನ್ನು, ನಮಗೆ ಅನುಕೂಲವಾದ ಸಮಯವನ್ನು ನಮಗಿಷ್ಟವಾದ ಕೆಲಸಗಳಿಗೆ ವಿನಿಯೋಗಿಸುವುದನ್ನೂ ಇವು ಸಾಧ್ಯವಾಗಿಸಿವೆ. ಮನರಂಜನೆಯಿಂದ ಮನಃಶಾಂತಿಯವರೆಗೆ ನಾವಿಲ್ಲಿ ಯಾವುದರ ಹುಡುಕಾಟದಲ್ಲಾದರೂ ತೊಡಗಿಕೊಳ್ಳಬಹುದು.

ಇವತ್ತಿನ ಜಗತ್ತಿನಲ್ಲಿ ಮಾನಸಿಕ ಒತ್ತಡ ಮಿತಿಮೀರಿರುವುದರಿಂದಲೋ, ಸಹಜವಾಗಿ ಮೂಡಿದ ಕುತೂಹಲದಿಂದಲೋ ಬಹಳಷ್ಟು ಜನ ಆಧ್ಯಾತ್ಮದತ್ತ ಮುಖಮಾಡಿರುವುದನ್ನು ನಾವು ಇದೀಗ ನೋಡಬಹುದು. ಅದರ ಜೊತೆಗೆ ದೈಹಿಕ ಆರೋಗ್ಯವನ್ನೂ ಚೆನ್ನಾಗಿಟ್ಟುಕೊಳ್ಳಲು ಹಲವು ಮಂದಿ ಯೋಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಧ್ಯಾನ-ಪ್ರಾಣಾಯಾಮಗಳನ್ನೂ ಮಾಡುತ್ತಿದ್ದಾರೆ.

ಯಾವುದಕ್ಕೂ ಟೈಮೇ ಇಲ್ಲ ಎನ್ನುವ ಜನರು ಈ ಹೊಸ ಆಸಕ್ತಿಗಳಿಗೆ ಸಮಯ ಹೊಂದಿಸುವುದು ಹೇಗೆ? ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಈ ಪ್ರಶ್ನೆಗೂ ಉತ್ತರ ಹೇಳುತ್ತಿವೆ.

ಹೌದು, ಟ್ರಾಫಿಕ್ ಜಾಮಿನಲ್ಲಿ ಸಿಲುಕಿರುವ ಬಸ್ಸಿನಲ್ಲಿ ಕುಳಿತಿದ್ದಾಗಲೂ ಆಧ್ಯಾತ್ಮ ಚಿಂತನೆ ಮಾಡುವುದನ್ನು ಸಾಧ್ಯವಾಗಿಸಿದ್ದು ಇದೇ ಮಾಹಿತಿ ತಂತ್ರಜ್ಞಾನ. ಕೈಯಲ್ಲೊಂದು ಮೊಬೈಲು, ಅದಕ್ಕೆ ಅಂತರಜಾಲ ಸಂಪರ್ಕ ಇದ್ದರೆ ಸಾಕು, ಈ ವಿಷಯದ ಬಗ್ಗೆ ಹಲವು ಖ್ಯಾತನಾಮರು ರೂಪಿಸಿರುವ ಸಾಲುಸಾಲು ವೀಡಿಯೊಗಳನ್ನು ಯೂಟ್ಯೂಬಿನಲ್ಲಿ ನೋಡಬಹುದು. ೪೭ ಲಕ್ಷ ಚಂದಾದಾರರಿರುವ ಸದ್ಗುರು, ೮ ಲಕ್ಷ ಚಂದಾದಾರರಿರುವ ಶ್ರೀ ಶ್ರೀ ರವಿಶಂಕರ್ ಮುಂತಾದವರ ಯೂಟ್ಯೂಬ್ ಖಾತೆಗಳನ್ನು ನೋಡಿದರೆ ಈ ಮಾಧ್ಯಮದಲ್ಲಿ ಆಧ್ಯಾತ್ಮ ಕುರಿತ ಮಾಹಿತಿ ಎಷ್ಟು ಜನಪ್ರಿಯವೆನ್ನುವುದು ಅರಿವಾಗುತ್ತದೆ.

ಸಮಯ ಹಾಳುಮಾಡುವ ದಾರಿಯೆಂಬ ಅಪಖ್ಯಾತಿಗೆ ಗುರಿಯಾಗಿರುವ ಫೇಸ್‌ಬುಕ್‌ನಲ್ಲೂ ಈ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಗಳು - ಸಂಸ್ಥೆಗಳು ಸಕ್ರಿಯರಾಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಫೇಸ್‌ಬುಕ್ ಪುಟವನ್ನು ಇಷ್ಟಪಟ್ಟಿರುವವರ ಸಂಖ್ಯೆ ಇಪ್ಪತ್ತಮೂರು ಲಕ್ಷಕ್ಕೂ ಹೆಚ್ಚು! ಈ ಹಿಂದೆಯೇ ಸಿದ್ಧಪಡಿಸಿದ ಮಾಹಿತಿಯ ಪ್ರಕಟಣೆ ಮಾತ್ರವಲ್ಲದೆ ಫೇಸ್‌ಬುಕ್ ಹಾಗೂ ಯೂಟ್ಯೂಬ್ ವೇದಿಕೆಗಳು ಹೊಸ ಕಾರ್ಯಕ್ರಮಗಳ ನೇರಪ್ರಸಾರಕ್ಕೂ ಬಳಕೆಯಾಗುತ್ತಿರುವುದು ವಿಶೇಷ. ಇವೆರಡು ವೇದಿಕೆಗಳಷ್ಟೇ ಅಲ್ಲದೆ ಇನ್ಸ್‌ಟಾಗ್ರಾಮ್, ಟ್ವಿಟರ್, ಲಿಂಕ್ಡ್‌ಇನ್, ಹೆಲೋ ಮುಂತಾದ ವೇದಿಕೆಗಳಲ್ಲೂ ಆಧ್ಯಾತ್ಮಕ್ಕೆ ಸಂಬಂಧಿಸಿದ ಖಾತೆಗಳು-ಪುಟಗಳು ಸಾಕಷ್ಟು ಹೆಸರುಮಾಡಿವೆ.

ಇಷ್ಟೆಲ್ಲ ಜನರು ಆಸಕ್ತರಾಗಿದ್ದಾರೆ ಎಂದೇ ಈ ಕ್ಷೇತ್ರದಲ್ಲಿ ಕೆಲವು ನವೋದ್ಯಮಗಳೂ (ಸ್ಟಾರ್ಟಪ್) ಪ್ರಾರಂಭವಾಗಿವೆ. ಧ್ಯಾನ, ಪ್ರಾಣಾಯಾಮ, ಯೋಗಾಭ್ಯಾಸಗಳಿಂದ ಪ್ರಾರಂಭಿಸಿ ಅವೆಲ್ಲವೂ ಸೇರಿದ ಸಂಪೂರ್ಣ ಫಿಟ್ನೆಸ್ ಪ್ಯಾಕೇಜುಗಳವರೆಗೆ ಈ ನವೋದ್ಯಮಗಳು ಹಲವು ವಿಧದ ಸೇವೆಗಳನ್ನು ಒದಗಿಸುತ್ತಿರುವುದು ವಿಶೇಷ.

ಹೀಗೆ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಈಗಾಗಲೇ ಹಲವು ವಿಧಗಳಲ್ಲಿ ಬಳಸುತ್ತಿದ್ದ ಈ ಕ್ಷೇತ್ರ ಡಿಜಿಟಲ್ ಜಗತ್ತಿಗೆ ಇನ್ನಷ್ಟು ಹತ್ತಿರವಾಗಿದ್ದು ಕೋವಿಡ್-೧೯ ತಂದುಕೊಟ್ಟ ಲಾಕ್‌ಡೌನ್‌ ಸಂದರ್ಭದಲ್ಲಿ. ಓಡಾಟದ ಮೇಲಿನ ನಿಷೇಧದಿಂದ ನೇರ ತರಗತಿಗಳನ್ನು ನಡೆಸಲು ಸಾಧ್ಯವಾಗದಿದ್ದಾಗ, ಇನ್ನಿತರ ಕ್ಷೇತ್ರಗಳಂತೆ ಇಲ್ಲಿಯೂ ಆನ್‌ಲೈನ್ ತರಗತಿಗಳು ಪ್ರಾರಂಭವಾದವು. ಫೇಸ್‌ಬುಕ್ ಲೈವ್, ಯೂಟ್ಯೂಬ್ ಲೈವ್, ಗೂಗಲ್ ಹ್ಯಾಂಗೌಟ್ಸ್, ಜ಼ೂಮ್ ಮುಂತಾದ ಸವಲತ್ತುಗಳಷ್ಟೇ ಅಲ್ಲದೆ ವಾಟ್ಸಾಪ್ ವೀಡಿಯೋ ಕಾಲ್‌ನಂತಹ ಚಿರಪರಿಚಿತ ಮಾರ್ಗಗಳೂ ಆಸಕ್ತರ ನೆರವಿಗೆ ಬಂದವು.

ಈಗಾಗಲೇ ಕಲಿಯುತ್ತಿದ್ದವರಿಗೆ ಮುಂದಿನ ವಿಷಯಗಳನ್ನು ತಲುಪಿಸುವುದಷ್ಟೇ ಅಲ್ಲದೆ, ಲಾಕ್‌ಡೌನ್ ಸಂದರ್ಭದಲ್ಲಿ ಹೊಸತೇನಾದರೂ ಮಾಡಬೇಕು ಅಂದುಕೊಂಡವರಿಗೂ ಈ ಮಾರ್ಗಗಳು ತೆರೆದುಕೊಂಡಿದ್ದು ವಿಶೇಷ. ಕೋವಿಡ್-೧೯ರ ಸಂದರ್ಭದಲ್ಲಿ ಬೇರೆಬೇರೆ ವಿಷಯಗಳಿಗೆ ಸಂಬಂಧಪಟ್ಟ ವೆಬಿನಾರ್‌ಗಳು ದೊಡ್ಡಸಂಖ್ಯೆಯಲ್ಲಿ ನಡೆದದ್ದು ನಮಗೆಲ್ಲ ಗೊತ್ತೇ ಇದೆ. ಇದೇ ಸಂದರ್ಭದಲ್ಲಿ 'ಆನ್‌ಲೈನ್ ಬ್ರೆತ್ ಆಂಡ್ ಮೆಡಿಟೇಶನ್ ಪ್ರೋಗ್ರಾಮ್', 'ಪ್ರಾಣಾಯಾಮ ಪ್ರಾಕ್ಟೀಸ್', 'ಪವರ್ ಯೋಗ' ಮುಂತಾದ ಕಾರ್ಯಕ್ರಮಗಳೂ ಶುರುವಾಗಲು ಮಾಹಿತಿ ತಂತ್ರಜ್ಞಾನದ ಅದೇ ಸವಲತ್ತುಗಳು ನೆರವಾಗಿವೆ. ಇಂಟರ್‌ನೆಟ್ ಸಂಪರ್ಕವಿರುವ ಮೊಬೈಲ್ ಇದೆಯೆಂದ ತಕ್ಷಣ ಅದು ಲೇಟೆಸ್ಟ್ ವೆಬ್ ಸೀರೀಸ್ ನೋಡಲಷ್ಟೇ ಬಳಕೆಯಾಗಬೇಕು ಎಂದೇನೂ ಇಲ್ಲ, ಮನಃಶಾಂತಿಯ ಹುಡುಕಾಟಕ್ಕೂ ಅದು ಮಾರ್ಗದರ್ಶನ ಮಾಡಬಹುದೆಂದು ತೋರಿಸಿಕೊಟ್ಟಿವೆ.

ಮೇ ೯, ೨೦೨೦ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com