ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್‌ಗಳಿದ್ದಷ್ಟೂ ಅದನ್ನು ಹೆಚ್ಚುಹೆಚ್ಚು ಹಿಗ್ಗಿಸಬಹುದು
ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್‌ಗಳಿದ್ದಷ್ಟೂ ಅದನ್ನು ಹೆಚ್ಚುಹೆಚ್ಚು ಹಿಗ್ಗಿಸಬಹುದುImage by Free-Photos from Pixabay

ಕ್ಯಾಮೆರಾ ಇಜ್ಞಾನ: ನಿಮ್ಮ ಫೋಟೋದಲ್ಲಿ ಎಷ್ಟು ಮೆಗಾಪಿಕ್ಸೆಲ್ ಇದೆ?

ಈಚಿನವರೆಗೂ ಹತ್ತು-ಹನ್ನೆರಡರ ಆಸುಪಾಸಿನಲ್ಲೇ ಇರುತ್ತಿದ್ದ ಮೆಗಾಪಿಕ್ಸೆಲ್ ಸಂಖ್ಯೆ ಇದೀಗ ದಿಢೀರನೆ ನಾಲ್ಕಾರು ಪಟ್ಟು ಜಾಸ್ತಿಯಾಗಿಬಿಟ್ಟಿದೆ!

ಕಳೆದ ಒಂದೆರಡು ದಶಕಗಳಲ್ಲಿ ಮೊಬೈಲ್ ಫೋನು ಯಾವೆಲ್ಲ ಸಾಧನಗಳನ್ನು ಮೂಲೆಗುಂಪು ಮಾಡಿದೆಯೆಂದು ತಿಳಿಸುವ ಸಂದೇಶಗಳು ಸಮಾಜ ಜಾಲಗಳಲ್ಲಿ ಆಗಿಂದಾಗ್ಗೆ ಕಾಣಸಿಗುತ್ತವೆ. ಟೆಲಿಫೋನ್ ಡೈರೆಕ್ಟರಿ, ಅಲಾರ್ಮ್ ಗಡಿಯಾರ, ಕ್ಯಾಲ್ಕ್ಯುಲೇಟರ್‌ಗಳೆಲ್ಲ ಇರುವ ಈ ಪಟ್ಟಿಯಲ್ಲಿ ಕ್ಯಾಮೆರಾಗೆ ಅಗ್ರಸ್ಥಾನ.

ಸಾಂಪ್ರದಾಯಿಕ ಕ್ಯಾಮೆರಾಗಳ ಸ್ಥಾನವನ್ನು ಹೆಚ್ಚೂಕಡಿಮೆ ಪೂರ್ತಿಯಾಗಿ ಆಕ್ರಮಿಸಿಕೊಂಡಿರುವುದು ಮಾತ್ರವೇ ಅಲ್ಲ, ಮೊಬೈಲ್ ಕ್ಯಾಮೆರಾಗಳು ತಮ್ಮ ತಾಂತ್ರಿಕತೆ ಹಾಗೂ ಸೆರೆಹಿಡಿಯುವ ಛಾಯಾಚಿತ್ರಗಳ ಗುಣಮಟ್ಟವನ್ನೂ ನಿರಂತರವಾಗಿ ಉತ್ತಮಪಡಿಸಿಕೊಳ್ಳುತ್ತಿವೆ.

ದುಬಾರಿ ಬೆಲೆಯ ಕ್ಯಾಮೆರಾಗಳಲ್ಲೂ ಇಲ್ಲದ ಅದೆಷ್ಟೋ ಸವಲತ್ತುಗಳನ್ನು ನಾವು ಇಂದಿನ ಮೊಬೈಲುಗಳಲ್ಲಿ ನೋಡಬಹುದು. ಮಾರುಕಟ್ಟೆಯಲ್ಲಿ ಸುದ್ದಿಯಾಗುವ ಹೊಸ ಮೊಬೈಲ್ ಫೋನುಗಳಲ್ಲಿ ಕ್ಯಾಮೆರಾಗೆ ಸಂಬಂಧಪಟ್ಟ ಒಂದಾದರೂ ವೈಶಿಷ್ಟ್ಯ ಇಲ್ಲದಿರುವುದು ಅಪರೂಪವೇ ಎನ್ನಬಹುದು.

ಇಂತಹ ವೈಶಿಷ್ಟ್ಯಗಳನ್ನು ಪಟ್ಟಿಮಾಡಲು ಕುಳಿತರೆ ನಮ್ಮ ಗಮನವನ್ನು ಥಟ್ಟನೆ ಸೆಳೆಯುವುದು ಮೊಬೈಲ್ ಕ್ಯಾಮೆರಾಗಳ ಮೆಗಾಪಿಕ್ಸೆಲ್ ಸಾಮರ್ಥ್ಯ. ತೀರಾ ಈಚಿನವರೆಗೂ ಹತ್ತು-ಹನ್ನೆರಡರ ಆಸುಪಾಸಿನಲ್ಲೇ ಇರುತ್ತಿದ್ದ ಈ ಸಂಖ್ಯೆ ಇದೀಗ ದಿಢೀರನೆ ನಾಲ್ಕಾರು ಪಟ್ಟು ಜಾಸ್ತಿಯಾಗಿಬಿಟ್ಟಿದೆ. ದೊಡ್ಡ ಸಂಖ್ಯೆಯ ಮೆಗಾಪಿಕ್ಸೆಲ್ ಸಾಮರ್ಥ್ಯಕ್ಕೆ ಮೊಬೈಲ್ ಫೋನ್ ಜಾಹೀರಾತುಗಳಲ್ಲಿ ಪ್ರಮುಖ ಸ್ಥಾನವೂ ಸಿಗುತ್ತಿದೆ.

ಹೌದು, ಇಂದಿನ ಫೋನುಗಳಲ್ಲಿ ೪೮ ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಇರುವುದು ವಿಶೇಷ ಸಂಗತಿಯೇ ಅಲ್ಲ. ಅಷ್ಟೇ ಏಕೆ, ೬೪ ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾಗಳೂ ಮೊಬೈಲುಗಳಲ್ಲಿ ಈಗಾಗಲೇ ಕಾಣಿಸಿಕೊಳ್ಳುತ್ತಿವೆ. ೧೦೦ಕ್ಕೂ ಹೆಚ್ಚು ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾಗಳೂ ಮುಂಬರುವ ಮೊಬೈಲುಗಳಲ್ಲಿ ಇರಲಿವೆಯಂತೆ!

ಈ ಮೆಗಾಪಿಕ್ಸೆಲ್ ಎಂದರೇನು ಎನ್ನುವುದು ಅನೇಕ ಮೊಬೈಲ್ ಬಳಕೆದಾರರನ್ನು ಕಾಡುವ ಪ್ರಶ್ನೆ.

ಮನೆಯ ನೆಲಕ್ಕೆ ಟೈಲ್‌ಗಳನ್ನು ಅಂಟಿಸುವುದು ಸಾಮಾನ್ಯ ಅಭ್ಯಾಸ. ಒಂದು ಕೋಣೆಯ ವಿಸ್ತೀರ್ಣ ನೂರು ಚದರ ಅಡಿ ಇದೆ ಎಂದುಕೊಂಡರೆ ಆ ಕೋಣೆಯ ನೆಲದಲ್ಲಿ ಒಂದು ಅಡಿ ಉದ್ದ - ಒಂದು ಅಡಿ ಅಗಲದ ಒಟ್ಟು ಒಂದು ನೂರು ಟೈಲ್‌ಗಳನ್ನು ನಾವು ನೋಡಬಹುದು.

ಮೊಬೈಲಿನಲ್ಲಿ ಕ್ಲಿಕ್ಕಿಸಿದ ಚಿತ್ರಗಳಲ್ಲೂ ಇಂತಹವೇ ಚೌಕಗಳಿರುತ್ತವೆ - ನೆಲದ ಟೈಲ್‌ಗಳಿಗಿಂತ ಅವು ಬಹಳ, ಬಹಳ ಸಣ್ಣದಾಗಿರುತ್ತವೆ ಎನ್ನುವುದೊಂದೇ ವ್ಯತ್ಯಾಸ. ಬೇರೆಬೇರೆ ಬಣ್ಣದ ಈ ಚೌಕಗಳೆಲ್ಲ ಒಟ್ಟು ಸೇರಿ ಛಾಯಾಚಿತ್ರವನ್ನು ನಮ್ಮ ಕಣ್ಣೆದುರಿಗೆ ಕಟ್ಟಿಕೊಡುತ್ತವೆ.

ಪಿಕ್ಸೆಲ್ ಎಂದು ಕರೆಯುವುದು ಈ ಚೌಕಗಳನ್ನೇ. ಈ ಹೆಸರು 'ಪಿಕ್ಚರ್ ಎಲಿಮೆಂಟ್' ಎನ್ನುವುದರ ಹ್ರಸ್ವರೂಪ. ಚಿತ್ರದಲ್ಲಿ ಇರುವ ಪಿಕ್ಸೆಲ್‌ಗಳ ಸಂಖ್ಯೆ ಜಾಸ್ತಿಯಾದಷ್ಟೂ ಅದರ ಸ್ಪಷ್ಟತೆ ಹೆಚ್ಚು. ಅಂದರೆ, ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್‌ಗಳಿದ್ದಷ್ಟೂ ಅದನ್ನು ಹೆಚ್ಚುಹೆಚ್ಚು ಹಿಗ್ಗಿಸಬಹುದು, ಚಿತ್ರದ ಗುಣಮಟ್ಟವನ್ನು ಹಾಗೆಯೇ ಉಳಿಸಿಕೊಂಡು ದೊಡ್ಡದಾಗಿ ಮುದ್ರಿಸಿಕೊಳ್ಳಲೂಬಹುದು.

ಹೆಚ್ಚು ಎಂದರೆ ಎಷ್ಟು ಎಂದು ಹೇಳಬೇಕಲ್ಲ, ಅದಕ್ಕೆ ಬಳಕೆಯಾಗುವುದೇ ಮೆಗಾಪಿಕ್ಸೆಲ್. ಒಂದು ಮೆಗಾಪಿಕ್ಸೆಲ್ ಎನ್ನುವುದು ಹತ್ತು ಲಕ್ಷ ಪಿಕ್ಸೆಲ್‌ಗಳಿಗೆ ಸಮಾನ. ಹತ್ತು ಮೆಗಾಪಿಕ್ಸೆಲ್ ಅಂದರೆ ಒಂದು ಕೋಟಿ ಪಿಕ್ಸೆಲ್. ನಲವತ್ತೆಂಟು ಮೆಗಾಪಿಕ್ಸೆಲ್ ಎಂದರೆ ೪.೮ ಕೋಟಿ ಪಿಕ್ಸೆಲ್!

ಒಂದು ಚಿತ್ರದಲ್ಲಿ ಇಷ್ಟೆಲ್ಲ ಪಿಕ್ಸೆಲ್‌ಗಳಿವೆ ಎಂದರೆ ಅದು ಚೆನ್ನಾಗಿದೆ ಎಂಬ ತೀರ್ಮಾನಕ್ಕೆ ಬರಬಹುದೇ? ಹಾಗೇನೂ ಇಲ್ಲ. ಹಾಗೆ ನೋಡಿದರೆ ಮೆಗಾಪಿಕ್ಸೆಲ್ ಎನ್ನುವುದು ಗಾತ್ರದ ಮಾನಕವೇ ಹೊರತು ಗುಣಮಟ್ಟದ್ದಲ್ಲ. ಹೆಚ್ಚು ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಬಳಸಿ ಕ್ಲಿಕ್ಕಿಸಿದ ಚಿತ್ರವನ್ನು ದೊಡ್ಡ ಗಾತ್ರದಲ್ಲಿ ಮುದ್ರಿಸಿಕೊಳ್ಳಬಹುದು ಎನ್ನುವುದೊಂದೇ ಖಾತರಿ!

ನಾವು ಸೆರೆಹಿಡಿಯುವ ಛಾಯಾಚಿತ್ರದ ಗುಣಮಟ್ಟ ಹೇಗಿರುತ್ತದೆ ಎನ್ನುವುದು ಇನ್ನೂ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಕ್ಯಾಮೆರಾದ ಸೆನ್ಸರ್, ಅದರಲ್ಲಿ ಬಳಕೆಯಾಗಿರುವ ಲೆನ್ಸ್, ಚಿತ್ರಗಳನ್ನು ಸಂಸ್ಕರಿಸುವ ತಂತ್ರಾಂಶ, ಹೊರಗಿನ ಬೆಳಕು ಮುಂತಾದವೆಲ್ಲ ಇದಕ್ಕೆ ಕೆಲ ಉದಾಹರಣೆಗಳು. ಕಡಿಮೆ ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಇದ್ದರೂ ಕೆಲ ಮೊಬೈಲುಗಳು ಅದ್ಭುತ ಚಿತ್ರಗಳನ್ನು ಸೆರೆಹಿಡಿಯುವುದಕ್ಕೆ ಇದೇ ಕಾರಣ.

ಇವೆಲ್ಲದರ ಜೊತೆಗೆ ಚಿತ್ರ ಸೆರೆಹಿಡಿಯುವ ನಮ್ಮ ಸೃಜನಶೀಲತೆಯೂ ಛಾಯಾಚಿತ್ರದ ಗುಣಮಟ್ಟವನ್ನು ಪ್ರಭಾವಿಸುತ್ತದೆ. ನಿಮ್ಮಲ್ಲಿ ಅದು ಹೆಚ್ಚಿದ್ದರೆ ಸಾಕು, ಮೊಬೈಲಿನ ಮೆಗಾಪಿಕ್ಸೆಲ್ ಸಾಮರ್ಥ್ಯ ಕೊಂಚ ಕಡಿಮೆಯಿದ್ದರೂ ನಡೆಯುತ್ತದೆ!

ಅಕ್ಟೋಬರ್ ೩೦, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕ್ಯಾಮೆರಾ ಗುಣಮಟ್ಟ ತಿಳಿಯುವುದು ಹೇಗೆ?
ಎರಡು ಮೊಬೈಲುಗಳನ್ನು ಹೋಲಿಸುವಾಗ ಅವುಗಳ ಮೆಗಾಪಿಕ್ಸೆಲ್‌ ಸಾಮರ್ಥ್ಯವೊಂದನ್ನೇ ಗಮನಿಸಿ ಕ್ಯಾಮೆರಾ ಹೇಗಿದೆ ಎಂಬ ತೀರ್ಮಾನಕ್ಕೆ ಬರುವುದು ಕಷ್ಟ. ಸೆನ್ಸರ್, ಲೆನ್ಸ್, ತಂತ್ರಾಂಶಗಳೆಲ್ಲ ಎರಡು ಫೋನಿನಲ್ಲೂ ಒಂದೇ ಆಗಿದ್ದು, ಆ ಪೈಕಿ ಒಂದು ಫೋನಿನ ಮೆಗಾಪಿಕ್ಸೆಲ್ ಸಾಮರ್ಥ್ಯ ಇನ್ನೊಂದಕ್ಕಿಂತ ಹೆಚ್ಚಿದ್ದರೆ ಮಾತ್ರ ಅದು ಹೆಚ್ಚು ವಿವರಗಳುಳ್ಳ (ಡೀಟೇಲ್) ಚಿತ್ರವನ್ನು ಸೆರೆಹಿಡಿಯುತ್ತದೆ ಎನ್ನಬಹುದು. ನೆನಪಿಡಿ, ಕ್ಯಾಮೆರಾದಲ್ಲಿ ಎಷ್ಟು ಚೆಂದದ ಚಿತ್ರಗಳು ಮೂಡುತ್ತವೆ ಎನ್ನುವುದು ಬರಿಯ ಮೆಗಾಪಿಕ್ಸೆಲ್‌ಗಳನ್ನಷ್ಟೇ ಅವಲಂಬಿಸಿರುವುದಿಲ್ಲ. ಕ್ಯಾಮೆರಾದ ಸೆನ್ಸರ್ - ಲೆನ್ಸ್ ಇತ್ಯಾದಿಗಳೆಲ್ಲ ಎಷ್ಟು ಚೆನ್ನಾಗಿವೆ, ಕಡಿಮೆ ಬೆಳಕಿನಲ್ಲಿ ಎಷ್ಟು ಸಮರ್ಥವಾಗಿ ಕೆಲಸಮಾಡುತ್ತವೆ, ಚಿತ್ರವನ್ನು ಎಷ್ಟು ಚುರುಕಾಗಿ ಸೆರೆಹಿಡಿಯುತ್ತವೆ ಎನ್ನುವ ಅಂಶಗಳೆಲ್ಲ ಮೆಗಾಪಿಕ್ಸೆಲ್‌ನಷ್ಟು, ಅಥವಾ ಅದಕ್ಕಿಂತ ತುಸು ಹೆಚ್ಚೇ ಮುಖ್ಯವಾಗುತ್ತವೆ.
ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್‌ಗಳಿದ್ದಷ್ಟೂ ಅದನ್ನು ಹೆಚ್ಚುಹೆಚ್ಚು ಹಿಗ್ಗಿಸಬಹುದು
ಕ್ಯಾಮೆರಾ ಇಜ್ಞಾನ: ಮೆಗಾಪಿಕ್ಸೆಲ್ ಎಷ್ಟು ಮುಖ್ಯ?

Related Stories

No stories found.
logo
ಇಜ್ಞಾನ Ejnana
www.ejnana.com