ಟ್ಯಾಬ್ಲೆಟ್ ಕಂಪ್ಯೂಟರ್ ಎಂಬ ಹೆಸರು ಗೊತ್ತಿಲ್ಲದವರಿಗೂ ಇಂದು ಐಪ್ಯಾಡ್ ಹೆಸರು ಚಿರಪರಿಚಿತ
ಟ್ಯಾಬ್ಲೆಟ್ ಕಂಪ್ಯೂಟರ್ ಎಂಬ ಹೆಸರು ಗೊತ್ತಿಲ್ಲದವರಿಗೂ ಇಂದು ಐಪ್ಯಾಡ್ ಹೆಸರು ಚಿರಪರಿಚಿತ|Image by Free-Photos from Pixabay
ಗ್ಯಾಜೆಟ್ ಇಜ್ಞಾನ

ನುಂಗಲಾಗದ ಟ್ಯಾಬ್ಲೆಟ್ಟಿನ ಮರೆಯಲಾಗದ ಇತಿಹಾಸ

"ಕಂಪ್ಯೂಟರ್ ವಿನ್ಯಾಸ ಹಾಗೂ ಕಾರ್ಯನಿರ್ವಹಣೆಯ ವಿಕಾಸದಲ್ಲಿ ಇದೊಂದು ಬಹುಮುಖ್ಯ ಹೆಜ್ಜೆ" ಎಂದು ಬಿಲ್ ಗೇಟ್ಸ್ ಹೇಳಿದ್ದು ಯಾವುದರ ಬಗ್ಗೆ?

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನ ಇತಿಹಾಸದ ಬಗ್ಗೆ ಹೇಳಲು ಹೊರಟಾಗ ಬೇರೆ ಏನೂ ತೋಚದಿದ್ದರೆ "ಒಂದಾನೊಂದು ಕಾಲದಲ್ಲಿ, ಒಂದು ಕಂಪ್ಯೂಟರ್ ಇಡಲು ಪೂರ್ತಿ ಕೋಣೆಯೇ ಬೇಕಾಗುತ್ತಿತ್ತು" ಎಂದು ನಮ್ಮ ಬರಹವನ್ನು ಪ್ರಾರಂಭಿಸಬಹುದು. ಏಕೆಂದರೆ, ಹಳೆಯ ಕಂಪ್ಯೂಟರುಗಳು ನಿಜಕ್ಕೂ ಅಷ್ಟು ದೊಡ್ಡದಾಗಿರುತ್ತಿದ್ದವು. ಕೋಣೆಯ ಮಾತು ಹಾಗಿರಲಿ, ೧೯೪೬ರಲ್ಲಿ ಅನಾವರಣಗೊಂಡ ಇನಿಯಾಕ್ ಎಂಬ ಕಂಪ್ಯೂಟರನ್ನು ಇಡಲು ೨೦*೩೦ ವಿಸ್ತೀರ್ಣದ ಮೂರು ಸೈಟುಗಳೇ ಬೇಕಾಗುತ್ತಿದ್ದವಂತೆ!

ಕಂಪ್ಯೂಟರುಗಳು ಎಷ್ಟು ಉಪಯುಕ್ತ ಎನ್ನುವುದು ಸ್ಪಷ್ಟವಾದಂತೆ, ಅವುಗಳ ಕಾರ್ಯಕ್ಷಮತೆ ಹೆಚ್ಚಿಸುವುದರ ಜೊತೆಗೆ ವಿಜ್ಞಾನಿಗಳು ಕಂಪ್ಯೂಟರ್ ಗಾತ್ರವನ್ನು ಕುಗ್ಗಿಸುವ ಕೆಲಸವನ್ನೂ ಶುರುಮಾಡಿದರು. ಕೋಣೆಗಾತ್ರದ ಕಂಪ್ಯೂಟರುಗಳು ಮೇಜಿನ ಮೇಲಿಡುವ ಗಾತ್ರದ ಡೆಸ್ಕ್‌ಟಾಪ್‌ ಕಂಪ್ಯೂಟರುಗಳಾಗಿ ರೂಪಾಂತರಗೊಂಡಿದ್ದು ಹೀಗೆ.

ಕಂಪ್ಯೂಟರುಗಳು ಮೇಜಿನ ಮೇಲಿಡುವ ಗಾತ್ರಕ್ಕೆ ಬಂದಮೇಲೂ ಅವುಗಳ ಗಾತ್ರ ಸಂಪೂರ್ಣ ಸಮಾಧಾನಕರ ಎನ್ನುವಂತೇನೂ ಇರಲಿಲ್ಲ. ಡೆಸ್ಕ್‌ಟಾಪನ್ನೇನು ಬೇಕಾದ ಕಡೆ ಕೊಂಡೊಯ್ಯಲು ಸಾಧ್ಯವೇ? ಈ ಅಸಮಾಧಾನಕ್ಕೆ ಉತ್ತರವಾಗಿ ಲ್ಯಾಪ್‌ಟಾಪ್ ಕಂಪ್ಯೂಟರ್ ಬಂತು. ಮೇಜಿನ ಮುಂದೆ ಕುಳಿತಾಗ ಮಾತ್ರವೇ ಅಲ್ಲದೆ ರೈಲಿನಲ್ಲಿ ಪ್ರಯಾಣಿಸುವಾಗ, ಮನೆಯಲ್ಲಿ ಟೀವಿ ಮುಂದೆ ಕುಳಿತಾಗಲೆಲ್ಲ ಕಂಪ್ಯೂಟರ್ ಬಳಸುವುದನ್ನು ಇದು ಸಾಧ್ಯವಾಗಿಸಿತು.

ಗಾತ್ರದ ದೃಷ್ಟಿಯಿಂದ ನೋಡಿದರೆ ಲ್ಯಾಪ್‌ಟಾಪ್ ಕಂಪ್ಯೂಟರ್ ಕೂಡ ನೂರಕ್ಕೆ ನೂರು ಅನುಕೂಲಕರವೇನಲ್ಲ. ದೀರ್ಘಕಾಲ ತೊಡೆಯ ಮೇಲಿಟ್ಟಿಕೊಂಡು ಕೆಲಸಮಾಡಲು ಅದರ ತೂಕ ಅಡ್ಡಿಯಾಗುತ್ತದೆ, ದಿಂಬಿಗೆ ಒರಗಿ ಸಿನಿಮಾ ನೋಡುವೆನೆಂದರೆ ಅಗತ್ಯವಿಲ್ಲದಿದ್ದರೂ ಅದರ ಕೀಲಿಮಣೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ! ಹೀಗೆಲ್ಲ ಇರುವುದರಿಂದಲೇ ಲ್ಯಾಪ್‌ಟಾಪ್ ಬಂದ ನಂತರವೂ ಹೊಸ ರೂಪದ ಕಂಪ್ಯೂಟರುಗಳ ಅನ್ವೇಷಣೆ ಇನ್ನೂ ಮುಂದುವರೆದಿತ್ತು.

ಅನ್ವೇಷಣೆಯ ಈ ಹಾದಿಯಲ್ಲಿ ಮಹತ್ವದ ಘಟನೆಯೊಂದು ೨೦೦೦ನೇ ಇಸವಿಯಲ್ಲಿ ನಡೆಯಿತು. ಆ ವರ್ಷದ ನವೆಂಬರ್ ೧೨ರಂದು ಹೊಸ ಬಗೆಯ ಕಂಪ್ಯೂಟರೊಂದನ್ನು ಪ್ರದರ್ಶಿಸಿದ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್, "ಕಂಪ್ಯೂಟರ್ ವಿನ್ಯಾಸ ಹಾಗೂ ಕಾರ್ಯನಿರ್ವಹಣೆಯ ವಿಕಾಸದಲ್ಲಿ ಇದೊಂದು ಬಹುಮುಖ್ಯ ಹೆಜ್ಜೆ" ಎಂದು ಘೋಷಿಸಿದರು.

ಆ ದಿನ ಅವರು ಪ್ರದರ್ಶಿಸಿದ್ದು ಟ್ಯಾಬ್ಲೆಟ್ ಕಂಪ್ಯೂಟರನ್ನು. ಹಿಂದಿನ ಕಾಲದ ಸ್ಲೇಟಿನಂತಹ ಈ ಸಾಧನ ಡೆಸ್ಕ್‌ಟಾಪಿನಷ್ಟು ದೊಡ್ಡದಾಗಿಯೂ ಇರಲಿಲ್ಲ, ಅದಕ್ಕೆ ಲ್ಯಾಪ್‌ಟಾಪಿನಲ್ಲಿರುವಂತಹ ಕೀಲಿಮಣೆಯೂ ಅಂಟಿಕೊಂಡಿರಲಿಲ್ಲ (ಅಂದಹಾಗೆ ಟ್ಯಾಬ್ಲೆಟ್ ಎಂದರೆ ಮಾತ್ರೆ ಮಾತ್ರವಲ್ಲ. ಅದಕ್ಕೆ ಹಲಗೆ ಎನ್ನುವ ಅರ್ಥವೂ ಇದೆ. ಇಲ್ಲಿ ಅದು ಬಳಕೆಯಾಗಿದ್ದು ಅದೇ ಅರ್ಥದಲ್ಲಿ). ಲ್ಯಾಪ್‌ಟಾಪಿನ ಅರ್ಧದಷ್ಟು ತೂಕ ಹಾಗೂ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಸೌಲಭ್ಯವಿದ್ದ ಈ ಸಾಧನವನ್ನು ಬಳಸುವುದು ನೋಟ್ ಪುಸ್ತಕ ಬಳಸಿದಷ್ಟೇ ಸರಳ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಆ ಸಂದರ್ಭದಲ್ಲಿ ಹೇಳಿತ್ತು. ಈ ಅನುಕೂಲಗಳೆಲ್ಲ ಸೇರಿ ಟ್ಯಾಬ್ಲೆಟ್ ಕಂಪ್ಯೂಟರಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲಿವೆ ಎನ್ನುವುದು ಅದರ ನಿರೀಕ್ಷೆಯಾಗಿದ್ದಿರಬೇಕು. ಮುಂದಿನ ಐದು ವರ್ಷಗಳಲ್ಲಿ ಕಂಪ್ಯೂಟರಿನ ಈ ಅವತಾರವೇ ಇಡೀ ಅಮೆರಿಕಾದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗಲಿದೆ ಎಂದು ಸ್ವತಃ ಬಿಲ್ ಗೇಟ್ಸ್ ಹೇಳಿದ್ದರು.

ಆದರೆ ನಿಜಕ್ಕೂ ಆಗಿದ್ದೇ ಬೇರೆ. ಡೆಸ್ಕ್‌ಟಾಪ್-ಲ್ಯಾಪ್‌ಟಾಪ್ ಕಂಪ್ಯೂಟರುಗಳ ಸವಲತ್ತುಗಳನ್ನೆಲ್ಲ ತನ್ನಲ್ಲಿ ತುಂಬಿಕೊಂಡಿದ್ದ ಈ ಸಾಧನಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆಯೇ ಬರಲಿಲ್ಲ. ದುಬಾರಿ ಬೆಲೆ, ಅಷ್ಟೇನೂ ಬಳಕೆದಾರ ಸ್ನೇಹಿಯಲ್ಲದ ವಿನ್ಯಾಸ, ಬಹಳಷ್ಟು ಕೆಲಸಗಳಿಗೆ ಪೆನ್ಸಿಲಿನಂತಹ ಕಡ್ಡಿಯನ್ನು (ಸ್ಟೈಲಸ್) ಬಳಸಲೇಬೇಕಾದ ಅನಿವಾರ್ಯತೆ, ಈ ಸಾಧನವನ್ನು ಬಳಸಿ ಏನೆಲ್ಲ ಮಾಡಬಹುದು ಎನ್ನುವುದರ ಬಗೆಗಿದ್ದ ಅಸ್ಪಷ್ಟತೆ - ಎಲ್ಲವೂ ಸೇರಿ ಮೈಕ್ರೋಸಾಫ್ಟಿನ ಟ್ಯಾಬ್ಲೆಟ್ಟು ವೈಫಲ್ಯದ ಅಂಚಿಗೆ ಬಂತು.

ಅರೆ, ಟ್ಯಾಬ್ಲೆಟ್ಟುಗಳು ಈಗಲೂ ಇವೆಯಲ್ಲ, ಇದೇನಿದು ವೈಫಲ್ಯದ ಕತೆ ಎಂದುಕೊಂಡಿರಾ?

ಹೌದು, ಟ್ಯಾಬ್ಲೆಟ್ಟುಗಳು ಈಗಲೂ ಇವೆ. ಆದರೆ ಮೈಕ್ರೋಸಾಫ್ಟಿನ ಟ್ಯಾಬ್ಲೆಟ್ ಕಂಪ್ಯೂಟರ್ ಪ್ರದರ್ಶನಗೊಂಡ ನಂತರ ಪೂರ್ತಿ ಹತ್ತು ವರ್ಷಗಳವರೆಗೆ ಟ್ಯಾಬ್ಲೆಟ್ಟಿನ ಹೆಸರೇ ಹೆಚ್ಚು ಸುದ್ದಿಯಲ್ಲಿರಲಿಲ್ಲ. ಮಧ್ಯದಲ್ಲೊಂದು ಸಾರಿ ಬಣ್ಣದ ಪರದೆಯ ಟ್ಯಾಬ್ಲೆಟ್ ಪರಿಚಯಿಸುವ ಮೂಲಕ ಮೈಕ್ರೋಸಾಫ್ಟ್ ಸಂಸ್ಥೆ ಇನ್ನೊಂದು ಪ್ರಯತ್ನ ಮಾಡಿದರೂ ಅದರ ಫಲಿತಾಂಶ ಮಾತ್ರ ಹಿಂದಿನ ಬಾರಿಯಂತೆಯೇ ಇತ್ತು.

ಈ ಪರಿಸ್ಥಿತಿ ಬದಲಾಗಿದ್ದು ೨೦೧೦ರಲ್ಲಿ. ಆ ವರ್ಷ ಆಪಲ್ ಸಂಸ್ಥೆಯ ಸ್ಟೀವ್ ಜಾಬ್ಸ್ 'ಐಪ್ಯಾಡ್' ಎಂಬ ಹೊಸ ಸಾಧನವನ್ನು ಪರಿಚಯಿಸಿದರು.

ಕ್ಲೀಷೆಯ ಮಾತಲ್ಲೇ ಹೇಳುವುದಾದರೆ, ಆಮೇಲೆ ನಡೆದಿದ್ದೆಲ್ಲ ಇತಿಹಾಸ. ಅದ್ಭುತವಾಗಿ ಮಾರ್ಕೆಟಿಂಗ್ ಮಾಡಬಲ್ಲದಾಗಿದ್ದ, ಜೊತೆಗೆ ಬಳಕೆದಾರರ ಅನುಕೂಲವನ್ನೂ ಗಮನದಲ್ಲಿಟ್ಟುಕೊಂಡಿದ್ದ ಆಪಲ್ ತಂಡ ಐಪ್ಯಾಡ್ ಅನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಿತು. ಟ್ಯಾಬ್ಲೆಟ್ ಕಂಪ್ಯೂಟರ್ ಎಂಬ ಹೆಸರು ಗೊತ್ತಿಲ್ಲದವರಿಗೂ ಇಂದು ಐಪ್ಯಾಡ್ ಹೆಸರು ಚಿರಪರಿಚಿತ.

ಐಪ್ಯಾಡ್ ಯಶಸ್ಸಿನ ನಂತರದಲ್ಲಿ ಇನ್ನೂ ಹಲವಾರು ಸಂಸ್ಥೆಗಳು ಟ್ಯಾಬ್ಲೆಟ್ ಕಂಪ್ಯೂಟರ್ ತಯಾರಿಕೆಯಲ್ಲಿ ತೊಡಗಿಕೊಂಡವು. ಸ್ವತಃ ಮೈಕ್ರೋಸಾಫ್ಟ್ ಕೂಡ ಹೊಸ ಟ್ಯಾಬ್ಲೆಟ್ಟುಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಯ ಜನಪ್ರಿಯತೆ ಕೂಡ ಟ್ಯಾಬ್ಲೆಟ್ ಕಂಪ್ಯೂಟರುಗಳಿಗೆ ಇನ್ನಷ್ಟು ಪ್ರೋತ್ಸಾಹ ಕೊಟ್ಟಿತು. ಇವೆಲ್ಲ ವಿದ್ಯಮಾನಗಳ ನಡುವೆ ಬರಿಯ ಐಪ್ಯಾಡ್ ಒಂದೇ ಒಟ್ಟು ೩೬ ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಯಿತು!

೨೦೦೦ನೇ ಇಸವಿಯ ನವೆಂಬರಿನಲ್ಲಿ ಬಿಲ್ ಗೇಟ್ಸ್‌ ಹೇಳಿದಷ್ಟು ಭಾರೀ ಪ್ರಮಾಣದ ಜನಪ್ರಿಯತೆ ಗಳಿಸದಿದ್ದರೂ, ಗಳಿಸಿದ ಜನಪ್ರಿಯತೆಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳದಿದ್ದರೂ, ಟ್ಯಾಬ್ಲೆಟ್ ಕಂಪ್ಯೂಟರಿನ ವಿಕಾಸ ಮಾತ್ರ ಮಾಹಿತಿ ತಂತ್ರಜ್ಞಾನ ಇತಿಹಾಸದ ಕುತೂಹಲಕರ ಅಧ್ಯಾಯಗಳಲ್ಲೊಂದು. ಆಲೋಚನೆ ಎಷ್ಟೇ ಚೆನ್ನಾಗಿರಲಿ, ಅದರ ಅನುಷ್ಠಾನವೂ ಅಷ್ಟೇ ಚೆನ್ನಾಗಿರಬೇಕಾದ್ದು ಅತ್ಯಗತ್ಯ ಎನ್ನುವ ಪಾಠಕ್ಕೆ ಇದೇ ಜೀವಂತ ಉದಾಹರಣೆ!

ನವೆಂಬರ್ ೨೦೧೯ರ ತುಷಾರದಲ್ಲಿ ಪ್ರಕಟವಾದ ಲೇಖನ

ಟಿಪ್ಪಣಿ: ಟ್ಯಾಬ್ಲೆಟ್ ಕಂಪ್ಯೂಟರನ್ನೇ ಹೋಲುವ ಇನ್ನೂ ಹಲವು ಸಾಧನಗಳು (ಉದಾ: ಪಾಮ್ ಪೈಲಟ್, ಮೆಸೇಜ್‌ಪ್ಯಾಡ್, ಗ್ರಿಡ್‍ಪ್ಯಾಡ್) ಆಗಿಹೋಗಿದ್ದರೂ ಕೂಡ ಅವುಗಳ ಇಂದಿನ ರೂಪಕ್ಕೆ ಅತ್ಯಂತ ಹತ್ತಿರದವೆಂದು ಪರಿಗಣಿಸಲಾಗುವುದು ಮೈಕ್ರೋಸಾಫ್ಟ್ ಹಾಗೂ ಆಪಲ್‌ ಸಂಸ್ಥೆಗಳು ಕ್ರಮವಾಗಿ ೨೦೦೦ ಹಾಗೂ ೨೦೧೦ರಲ್ಲಿ ಪರಿಚಯಿಸಿದ ಉತ್ಪನ್ನಗಳನ್ನೇ.

ಟಿ. ಜಿ. ಶ್ರೀನಿಧಿ

Tablet computers have had a brief but very interesting history. Learn more about the origins of the tablet computer, by reading this article in Kannada!
ಇಜ್ಞಾನ Ejnana
www.ejnana.com