ಪ್ರಪಂಚದ ಮೊತ್ತಮೊದಲ ಮೊಬೈಲ್ ಕರೆ ಮಾಡಲಾಗಿದ್ದು ೧೯೭೩ರ ಏಪ್ರಿಲ್ ೩ರಂದು
ಪ್ರಪಂಚದ ಮೊತ್ತಮೊದಲ ಮೊಬೈಲ್ ಕರೆ ಮಾಡಲಾಗಿದ್ದು ೧೯೭೩ರ ಏಪ್ರಿಲ್ ೩ರಂದುImage by Pexels from Pixabay

ಮೊಬೈಲ್ ಫೋನಿಗೆ ಐವತ್ತು!

ನಾಲ್ಕು ಗೋಡೆಗಳೊಳಗೆ ಪ್ರತಿಷ್ಠಾಪನೆಯಾಗಿರುತ್ತಿದ್ದ ದೂರವಾಣಿ ಅಲ್ಲಿಂದ ಹೊರಬಂದು ಸಂಚಾರಿಯಾಗಿದ್ದು ಮನುಕುಲದ ಇತಿಹಾಸದ ಪ್ರಮುಖ ಮೈಲಿಗಲ್ಲು. ಆ ಸಾಧನೆಗೆ ಈಗ ಐವತ್ತು ವರ್ಷ!

ನಾಲ್ಕು ಗೋಡೆಗಳೊಳಗೆ ಪ್ರತಿಷ್ಠಾಪನೆಯಾಗಿರುತ್ತಿದ್ದ ದೂರವಾಣಿ ಅಲ್ಲಿಂದ ಹೊರಬಂದು ಸಂಚಾರಿಯಾಗಿದ್ದು ಅದರ ಇತಿಹಾಸದಲ್ಲಷ್ಟೇ ಅಲ್ಲ, ಮನುಕುಲದ ಇತಿಹಾಸದಲ್ಲೂ ಒಂದು ಪ್ರಮುಖ ಮೈಲಿಗಲ್ಲು.

ಅದು ೧೯೪೦ರ ದಶಕ. ಬಳಕೆದಾರರು ತಮಗೆ ಬೇಕಾದ ಕಡೆಗೆಲ್ಲ ಓಡಾಡುವಾಗ ಅವರ ದೂರವಾಣಿ ಮಾತ್ರ ಗೂಟಕ್ಕೆ ಕಟ್ಟಿದ ಕರುವಿನಂತೆ ಒಂದೇ ಕಡೆ ಏಕಿರಬೇಕು ಎಂದು ಕೆಲ ತಂತ್ರಜ್ಞರು ಯೋಚಿಸಿದರು. ಅವರ ಯೋಚನೆಯ ಫಲವಾಗಿ ರೂಪುಗೊಂಡಿದ್ದೇ ಕಾರ್ ಫೋನ್. ಹೆಸರೇ ಹೇಳುವಂತೆ ಈ ದೂರವಾಣಿಯನ್ನು ಕಾರುಗಳಲ್ಲಿ ಅಳವಡಿಸಿಕೊಂಡು ಬಳಸಬಹುದಾಗಿತ್ತು.

ಮನೆಯಲ್ಲಿ-ಕಚೇರಿಗಳಲ್ಲಿ ಇದ್ದ ಫೋನು ಕಾರಿಗೇನೋ ಬಂತು, ಕಾರಿನಿಂದ ಇಳಿದು ಪಾರ್ಕಿಗೆ ಹೋದಾಗ ಏನು ಮಾಡುವುದು?

ಕೆಲವು ದಶಕಗಳ ನಂತರ, ಈ ಪ್ರಶ್ನೆಗೂ ಉತ್ತರ ಸಿಕ್ಕಿತು.

'ಮೊಬೈಲ್ ಫೋನ್ ಪಿತಾಮಹ' ಮಾರ್ಟಿನ್ ಕೂಪರ್
'ಮೊಬೈಲ್ ಫೋನ್ ಪಿತಾಮಹ' ಮಾರ್ಟಿನ್ ಕೂಪರ್https://www.flickr.com/photos/itupictures/

೧೯೭೩ರ ಏಪ್ರಿಲ್ ೩ರಂದು ಅಮೆರಿಕಾದ ನ್ಯೂಯಾರ್ಕ್ ನಗರದ ಬೀದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಇಟ್ಟಿಗೆಯಷ್ಟು ದೊಡ್ಡ ಸಾಧನವನ್ನು ತಮ್ಮ ಕಿವಿಯ ಬಳಿ ಹಿಡಿದುಕೊಂಡು ಮಾತನಾಡುತ್ತಿದ್ದರು. ಮತ್ತು ಅವರ ಮಾತನ್ನು, ಅದೇ ಕ್ಷಣದಲ್ಲಿ, ನ್ಯೂಜೆರ್ಸಿ ನಗರದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕೇಳುತ್ತಿದ್ದರು.

ನ್ಯೂಯಾರ್ಕ್‌ನಲ್ಲಿದ್ದ ಆ ವ್ಯಕ್ತಿಯ ಹೆಸರು ಮಾರ್ಟಿನ್ ಕೂಪರ್, ಹಾಗೂ ಅವರ ಕೈಲಿದ್ದ ಇಟ್ಟಿಗೆಯಂಥ ಸಾಧನವೇ ಪ್ರಪಂಚದ ಮೊತ್ತಮೊದಲ ಮೊಬೈಲ್ ಫೋನ್. ಮೋಟರೋಲಾ ಸಂಸ್ಥೆಯ ಉದ್ಯೋಗಿಯಾಗಿದ್ದ ಮಾರ್ಟಿನ್ ಮಾತನಾಡಿದ್ದು ತಮ್ಮ ಪ್ರತಿಸ್ಪರ್ಧಿ ಬೆಲ್ ಲ್ಯಾಬ್ಸ್ ಸಂಸ್ಥೆಯ ಜೋಯೆಲ್ ಎಂಗೆಲ್‌ ಎನ್ನುವವರ ಜೊತೆ.

ಆ ದಿನ ಮಾರ್ಟಿನ್ ಬಳಸಿದ ಮೊಬೈಲ್ ಫೋನು ಸುಮಾರು ಒಂದು ಕೇಜಿ ತೂಕವಿತ್ತು. ದೂರವಾಣಿ ಕರೆ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಸೌಲಭ್ಯವೂ ಆ ಫೋನಿನಲ್ಲಿರಲಿಲ್ಲ. ಹತ್ತು ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಅದನ್ನು ಅರ್ಧಗಂಟೆ ಕಾಲ ಬಳಸುವುದು ಸಾಧ್ಯವಾಗುತ್ತಿತ್ತು!

ಅಂದಿನಿಂದ ಇಂದಿನವರೆಗೆ ಮೊಬೈಲಿನಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ನಮಗೆ ಗೊತ್ತೇ ಇದೆ. ಫೋನುಗಳ ಗಾತ್ರ ಕಡಿಮೆಯಾಗಿದೆ, ಅವು ಲಕ್ಷಾಂತರ ಜನರನ್ನು ತಲುಪಿವೆ, ಮೊಬೈಲ್ ಬಳಸಿ ನೂರೆಂಟು ಕೆಲಸಗಳನ್ನು ಮಾಡುವುದು ಸಾಧ್ಯವಾಗಿದೆ, ಸ್ಮಾರ್ಟ್‌ಫೋನ್ ಬೆಳವಣಿಗೆಯಿಂದಾಗಿ ಮೊಬೈಲಿಗೂ ಕಂಪ್ಯೂಟರಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಇಷ್ಟೆಲ್ಲ ಬದಲಾವಣೆಗಳ ಈ ಪಯಣ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದಷ್ಟೇ ಬೇಗನೆ ಅವಕ್ಕೆ ಉತ್ತರಗಳನ್ನೂ ಹುಡುಕಿಕೊಳ್ಳುತ್ತಿದೆ. ಅಲ್ಲಿಂದ ಇಲ್ಲಿಯವರೆಗೆ ಸಾಗಿಬಂದಿರುವ ದೂರವಾಣಿ ತನ್ನ ಪಯಣ ಮುಂದುವರೆಸಿಕೊಂಡು ಇಲ್ಲಿಂದ ಎಲ್ಲಿಗೆ ಹೋಗಬಹುದು? ಅರ್ಧಶತಮಾನಕ್ಕೂ ಕಡಿಮೆ ಅವಧಿಯಲ್ಲಿ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದಿರುವ ಮೊಬೈಲ್ ಫೋನ್ ಮುಂದಿನ ದಿನಗಳಲ್ಲಿ ಏನೆಲ್ಲ ಬದಲಾವಣೆಗಳನ್ನು ಕಾಣಬಹುದು?

ಯಂತ್ರಾಂಶಗಳೇ ಮಾಡಬೇಕಿದ್ದ ಕೆಲವು ಕೆಲಸಗಳನ್ನು ಈಗ ತಂತ್ರಾಂಶಗಳ ಮೂಲಕವೇ ಮಾಡಿಕೊಳ್ಳುವುದು ಸಾಧ್ಯವಾಗಿದೆ
ಯಂತ್ರಾಂಶಗಳೇ ಮಾಡಬೇಕಿದ್ದ ಕೆಲವು ಕೆಲಸಗಳನ್ನು ಈಗ ತಂತ್ರಾಂಶಗಳ ಮೂಲಕವೇ ಮಾಡಿಕೊಳ್ಳುವುದು ಸಾಧ್ಯವಾಗಿದೆImage by PublicDomainPictures from Pixabay

ಮೊಬೈಲ್ ಫೋನ್ ತಂತ್ರಜ್ಞಾನದಲ್ಲಿ ಇನ್ನೂ ಯಾವೆಲ್ಲ ಬದಲಾವಣೆ ಬರಬಹುದು ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸುವ ಪ್ರಶ್ನೆ. ಈ ಪ್ರಶ್ನೆಗೆ ತಂತ್ರಜ್ಞರು ನೀಡುವ ಉತ್ತರಗಳೂ ಅಷ್ಟೇ ಕುತೂಹಲಕಾರಿ.

ಮುಂದಿನ ದಿನಗಳಲ್ಲಿ ಗಮನಾರ್ಹ ಬದಲಾವಣೆ ನಿರೀಕ್ಷಿಸಲಾಗಿರುವ ಸಂಗತಿಗಳಲ್ಲಿ ಪ್ರಮುಖವಾದದ್ದು ಮೊಬೈಲಿನ ಸ್ವರೂಪ.

'ಮೊಬೈಲ್ ಫೋನ್ ಪಿತಾಮಹ' ಮಾರ್ಟಿನ್ ಕೂಪರ್ ಬಳಸಿದರಲ್ಲ, ಅದು ಮತ್ತು ಆನಂತರ ಬಂದ ಇನ್ನು ಕೆಲ ಮೊಬೈಲುಗಳ ತೂಕ ಕೇಜಿ ಲೆಕ್ಕದಲ್ಲಿತ್ತು. ಇವು ಕಾರ್ ಫೋನಿಗಿಂತ ಚಿಕ್ಕದಾಗಿದ್ದವು ಎನ್ನುವುದೇನೋ ಸರಿ, ಆದರೆ ಇಷ್ಟೆಲ್ಲ ತೂಕದ ಫೋನನ್ನು ಎತ್ತಿಕೊಂಡು ಓಡಾಡುವುದು, ಕಿವಿಗೆ ಹಿಡಿದು ಮಾತನಾಡುವುದು ನಿಜಕ್ಕೂ ಒಂದು ಸಮಸ್ಯೆ ಎನ್ನುವುದು ಬಹಳ ಬೇಗ ತಂತ್ರಜ್ಞರ ಗಮನಕ್ಕೆ ಬಂತು. ಮೊಬೈಲಿನ ಗಾತ್ರ ಹಾಗೂ ತೂಕವನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಕೆಲಸ ಶುರುವಾದದ್ದು ಹಾಗೆ.

ಯಂತ್ರಾಂಶಗಳು (ಹಾರ್ಡ್‌ವೇರ್) ವಿಕಾಸವಾಗುತ್ತ ಹೋದಂತೆ ಅವುಗಳ ಗಾತ್ರ ಗಮನಾರ್ಹವಾಗಿ ಕಡಿಮೆಯಾಯಿತು. ಇದರ ನೇರ ಪ್ರಯೋಜನ ಪಡೆದುಕೊಂಡ ಸಾಧನಗಳಲ್ಲಿ ಮೊಬೈಲ್ ಫೋನ್ ಪ್ರಮುಖವಾದದ್ದು. ಒಂದೆರಡು ಕೇಜಿ ತೂಗುತ್ತಿದ್ದ ಫೋನುಗಳ ಜಾಗದಲ್ಲಿ ನೂರಿನ್ನೂರು ಗ್ರಾಮ್ ತೂಕದ ಫೋನುಗಳು ಬಂದದ್ದು ಹೀಗೆ. ಬಿಡಿಭಾಗಗಳು ಚಿಕ್ಕದಾದಂತೆ ಮೊಬೈಲ್ ಫೋನಿನ ಗಾತ್ರವೂ ಚಿಕ್ಕದಾಯಿತು. ಇಟ್ಟಿಗೆಯನ್ನು ನೆನಪಿಸುತ್ತಿದ್ದ ಮೊದಲ ಮೊಬೈಲುಗಳ ಹೋಲಿಕೆಯಲ್ಲಿ ಇಂದಿನ ಹೊಸ ಫೋನುಗಳು ಕೆಲವೇ ಮಿಲೀಮೀಟರ್ ದಪ್ಪ ಇರುತ್ತವೆ.

ಮುಂದೆ ಮೊಬೈಲ್ ಫೋನುಗಳು ಇನ್ನೂ ಸಣ್ಣದಾಗಲಿವೆ ಎನ್ನುವುದು ಸದ್ಯದ ನಿರೀಕ್ಷೆ. ಕೈಗಡಿಯಾರದಲ್ಲೇ ಮೊಬೈಲ್ ಸವಲತ್ತುಗಳನ್ನು ನೀಡುವ 'ಸ್ಮಾರ್ಟ್ ಫೋನ್ ವಾಚ್'‌ನಂತಹ ಪ್ರಯೋಗಗಳು ಈ ನಿರೀಕ್ಷೆ ನಿಜವಾಗುವ ಭರವಸೆಯನ್ನೂ ಮೂಡಿಸಿವೆ. ಯಂತ್ರಾಂಶಗಳೇ ಮಾಡಬೇಕಿದ್ದ ಕೆಲವು ಕೆಲಸಗಳನ್ನು ಈಗ ತಂತ್ರಾಂಶಗಳ ಮೂಲಕವೇ ಮಾಡಿಕೊಳ್ಳುವುದು ಸಾಧ್ಯವಾಗಿದೆಯಲ್ಲ (ಉದಾ: ಸಿಮ್ ಕಾರ್ಡ್ ಬದಲು ಇ-ಸಿಮ್), ಈ ಬೆಳವಣಿಗೆ ಕೂಡ ಮೊಬೈಲನ್ನು ಚಿಕ್ಕದಾಗಿಸುವಲ್ಲಿ ಕೈಜೋಡಿಸಲಿದೆ. ಇಂತಹ ಬದಲಾವಣೆಗಳೆಲ್ಲದರ ಪರಿಣಾಮವಾಗಿ ಮುಂದೊಂದು ದಿನ ಮೊಬೈಲ್ ಫೋನನ್ನು ನಮ್ಮ ದೇಹದೊಳಗೇ ಅಳವಡಿಸಿಕೊಂಡುಬಿಡುವುದು ('ಸೆಲ್ ಫೋನ್ ಇಂಪ್ಲಾಂಟ್') ಸಾಧ್ಯವಾಗಲಿದೆ ಎಂದು, ಬೇರೆ ಯಾರೋ ಅಲ್ಲ, ಸ್ವತಃ ಮಾರ್ಟಿನ್ ಕೂಪರ್ ಅವರೇ ನಂಬುತ್ತಾರೆ!

ಸ್ಮಾರ್ಟ್‌ಫೋನ್ ಬಂದಮೇಲಂತೂ ಫೋನಿನ ಪರದೆಗೆ ಇನ್ನಿಲ್ಲದ ಪ್ರಾಮುಖ್ಯ ಸಿಕ್ಕಿದೆ
ಸ್ಮಾರ್ಟ್‌ಫೋನ್ ಬಂದಮೇಲಂತೂ ಫೋನಿನ ಪರದೆಗೆ ಇನ್ನಿಲ್ಲದ ಪ್ರಾಮುಖ್ಯ ಸಿಕ್ಕಿದೆImage by Niek Verlaan from Pixabay

ಮಾರ್ಟಿನ್ ಕೂಪರ್ ಬಳಸಿದ ಫೋನಿನಲ್ಲಿ ಪರದೆಯೇ (ಡಿಸ್ಪ್ಲೇ) ಇರಲಿಲ್ಲ. ಮುಂದೆ ಮೊಬೈಲಿನಲ್ಲಿ ಹೆಚ್ಚಿನ ಸೌಲಭ್ಯಗಳು ಬಂದಾಗ ಅದರಲ್ಲೊಂದು ಪರದೆ ಇರಬೇಕು ಎನ್ನಿಸಲು ಶುರುವಾಯಿತು: ನಾವು ಡಯಲ್ ಮಾಡಿದ ಸಂಖ್ಯೆ, ನಮಗೆ ಕರೆಮಾಡುತ್ತಿರುವವರ ವಿವರ, ಎಸ್ಸೆಮ್ಮೆಸ್ ಸಂದೇಶಗಳನ್ನೆಲ್ಲ ನೋಡಬೇಕಲ್ಲ! ಅದಕ್ಕಾಗಿಯೇ ಮೊಬೈಲುಗಳಲ್ಲೊಂದು ಪರದೆ ಕಾಣಿಸಿಕೊಂಡಿತು. ಮೊದಲಿಗೆ ತೀರಾ ಪುಟ್ಟದಾಗಿದ್ದ ಈ ಪರದೆ ಈ ಶತಮಾನದ ಪ್ರಾರಂಭದ ವೇಳೆಗೆ ಆಟಗಳನ್ನು ಆಡುವಷ್ಟರ ಮಟ್ಟಿಗೆ ಬೆಳೆದಿತ್ತು.

ಸ್ಮಾರ್ಟ್‌ಫೋನ್ ಬಂದಮೇಲಂತೂ ಫೋನಿನ ಪರದೆಗೆ ಇನ್ನಿಲ್ಲದ ಪ್ರಾಮುಖ್ಯ ಸಿಕ್ಕಿದೆ. ಮೊಬೈಲ್ ಮೇಲ್ಮೈಯಲ್ಲಿ ಸಿಗುವ ಜಾಗದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೂ ಪರದೆಗಾಗಿಯೇ ಮೀಸಲಿಡಬೇಕು ಎನ್ನುವುದು ಸದ್ಯ ಚಾಲ್ತಿಯಲ್ಲಿರುವ ಟ್ರೆಂಡ್. ಅಷ್ಟೂ ಸಾಲದು ಎಂದು ಮಡಚಬಹುದಾದ (ಫೋಲ್ಡಬಲ್) ಪರದೆಗಳನ್ನು ಪರಿಚಯಿಸಲಾಗಿದೆ. ಸುಮ್ಮನೆ ಮಡಚುವುದಷ್ಟೇ ಅಲ್ಲ, ಬಳುಕುವ (ಫ್ಲೆಕ್ಸಿಬಲ್) ಹಾಗೂ ಹಿಗ್ಗಿಸಿಕೊಳ್ಳಬಹುದಾದ (ಸ್ಟ್ರೆಚಬಲ್) ಪರದೆಗಳ ವಿನ್ಯಾಸ ಕೂಡ ಪ್ರಗತಿಯಲ್ಲಿದೆ. ಪರದೆಯ ಮೇಲೆ ಮಾತ್ರ ಏಕೆ, ಚಿತ್ರಗಳನ್ನು ಪರದೆಯಿಂದ ಹೊರಗೂ ಪ್ರದರ್ಶಿಸಬಲ್ಲ (ಹಾಲೋಗ್ರಾಫಿಕ್) ತಂತ್ರಜ್ಞಾನವೂ ಮೊಬೈಲ್ ಫೋನಿನತ್ತ ಬರಲಿದೆ ಎನ್ನುವುದು ತಜ್ಞರ ಅನಿಸಿಕೆ. ಛಾಯಾವಾಸ್ತವ (ವರ್ಚುಯಲ್ ರಿಯಾಲಿಟಿ, ವಿಆರ್) ಹಾಗೂ ಅತಿರಿಕ್ತ ವಾಸ್ತವದಂತಹ (ಆಗ್ಮೆಂಟೆಡ್ ರಿಯಾಲಿಟಿ, ಎಆರ್) ತಂತ್ರಗಳನ್ನು ಬಳಸಿ ಮೊಬೈಲ್ ಪರದೆಯ ಮೇಲೆ ಕಾಣುವ ಮಾಹಿತಿ - ಯಾವ ಪರದೆಯೂ ಇಲ್ಲದೆ - ನಮ್ಮ ಕಣ್ಣೆದುರೇ ಕಾಣಿಸುವಂತೆ ಮಾಡಬಹುದು ಎನ್ನುವುದನ್ನಂತೂ ತಂತ್ರಜ್ಞರು ಈಗಾಗಲೇ ತೋರಿಸಿದ್ದಾರೆ.

ನೂರೆಂಟು ಕೆಲಸಗಳನ್ನು ಮಾಡುವ ಮೊಬೈಲ್ ಫೋನಿಗೆ ಬೇಕಾದಷ್ಟು ಶಕ್ತಿಯನ್ನು ಒದಗಿಸುವುದು ಅದರ ಬ್ಯಾಟರಿ. ಮೊಬೈಲಿನ ಸವಲತ್ತುಗಳು, ಅದರ ಕಾರ್ಯಕ್ಷಮತೆ ಹೆಚ್ಚಿದಂತೆಲ್ಲ ಬ್ಯಾಟರಿ ಕಾರ್ಯಕ್ಷಮತೆಯೂ ಹೆಚ್ಚಬೇಕಾದ್ದು ಅನಿವಾರ್ಯವಾಗಿದೆ. ಇದಕ್ಕಾಗಿಯೇ ಮೊಬೈಲ್ ಬ್ಯಾಟರಿಯ ಸಾಮರ್ಥ್ಯವನ್ನು ಹೆಚ್ಚಿಸುವ ಅನೇಕ ಪ್ರಯತ್ನಗಳು ನಡೆದಿವೆ. ಸುಮ್ಮನೆ ಬ್ಯಾಟರಿ ಸಾಮರ್ಥ್ಯ ಮಾತ್ರ ಹೆಚ್ಚಿದರೆ ಸಾಕಾಗುವುದಿಲ್ಲವಲ್ಲ, ಅದನ್ನು ಕ್ಷಿಪ್ರವಾಗಿ ಚಾರ್ಜ್ ಮಾಡಬಲ್ಲ ತಂತ್ರಜ್ಞಾನವೂ ಅಭಿವೃದ್ಧಿಯಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಫಾಸ್ಟ್ ಚಾರ್ಜರುಗಳು ಬಳಸುವುದು ಈ ತಂತ್ರಜ್ಞಾನವನ್ನೇ!

ಚಾರ್ಜಿಂಗ್ ನಿಧಾನವಾಗಿ ಆಗುತ್ತದೋ ಬೇಗನೆ ಆಗುತ್ತದೋ, ಅದಕ್ಕಾಗಿ ಫೋನನ್ನು ಚಾರ್ಜರ್‌ಗೆ ಸಂಪರ್ಕಿಸಬೇಕಾದ್ದು ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ. ಈ ಪರಿಸ್ಥಿತಿಯನ್ನೂ ಬದಲಿಸುವ ಪ್ರಯತ್ನ ನಡೆದಿದೆ. ಅಡುಗೆಮನೆಯಲ್ಲಿ ಇಂಡಕ್ಷನ್ ಒಲೆ ಇರುತ್ತದಲ್ಲ, ಅಂಥದ್ದೊಂದು ಸಣ್ಣ ತಟ್ಟೆಯ ಮೇಲೆ ಮೊಬೈಲ್ ಇಟ್ಟರೆ ಅದು ಚಾರ್ಜ್ ಆಗುವ ನಿಸ್ತಂತು (ವೈರ್‌ಲೆಸ್) ಚಾರ್ಜಿಂಗ್ ವ್ಯವಸ್ಥೆ ಈಗಾಗಲೇ ಅಭಿವೃದ್ಧಿಯಾಗಿದ್ದು ಹಲವು ಮಾದರಿಯ ಫೋನುಗಳಲ್ಲಿ ಈ ಸೌಲಭ್ಯ ದೊರಕುತ್ತಿದೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆಹೋಗಿ, ಮೊಬೈಲನ್ನು ಚಾರ್ಜರ್ ಸುತ್ತಮುತ್ತ ಎಲ್ಲಿಯೇ ಇಟ್ಟರೂ ಅದು ಚಾರ್ಜ್ ಆಗುವಂತಹ ವ್ಯವಸ್ಥೆಯನ್ನು ಇದೀಗ ರೂಪಿಸಲಾಗುತ್ತಿದೆ. ಈ ಪ್ರಯೋಗ ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾದರೆ ಮೊಬೈಲ್ ಟವರ್‌ಗಳಂತೆ ಚಾರ್ಜಿಂಗ್ ಟವರ್‌ಗಳೂ ರೂಪುಗೊಳ್ಳುವುದು ಸಾಧ್ಯ ಎಂದು ತಜ್ಞರು ಹೇಳುತ್ತಾರೆ - ಮೊಬೈಲ್ ಸಂಕೇತಗಳು ಹೇಗೆ ಟವರ್‌ನಿಂದ ನಮ್ಮ ಮೊಬೈಲಿಗೆ ಬರುತ್ತವೋ ಅದೇ ರೀತಿಯ ಟವರ್‌ಗಳು ನಮ್ಮ ಮೊಬೈಲನ್ನೂ ಚಾರ್ಜ್ ಮಾಡಬಲ್ಲವು ಎನ್ನುವುದು ಅವರ ಅನಿಸಿಕೆ.

ನೂರೆಂಟು ಕೆಲಸಗಳನ್ನು ಮಾಡುವ ಮೊಬೈಲ್ ಫೋನಿಗೆ ಬೇಕಾದಷ್ಟು ಶಕ್ತಿಯನ್ನು ಒದಗಿಸುವುದು ಅದರ ಬ್ಯಾಟರಿ
ನೂರೆಂಟು ಕೆಲಸಗಳನ್ನು ಮಾಡುವ ಮೊಬೈಲ್ ಫೋನಿಗೆ ಬೇಕಾದಷ್ಟು ಶಕ್ತಿಯನ್ನು ಒದಗಿಸುವುದು ಅದರ ಬ್ಯಾಟರಿImage by JAEWON LYOO from Pixabay

ಮೊಬೈಲಿನೊಡನೆ ನಾವು ಸಂವಹನ ನಡೆಸುವ ರೀತಿ ಕೂಡ ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಮೊದಮೊದಲು ಬಂದ ಮೊಬೈಲುಗಳಲ್ಲಿ ಅಂಕಿಗಳಿದ್ದ ಕೀಲಿಮಣೆ ಮಾತ್ರವೇ ಇತ್ತು. ಕರೆಮಾಡಲು ಅಥವಾ ಸಂದೇಶಗಳನ್ನು ಟೈಪಿಸಲು ನಾವು ಆ ಕೀಲಿಗಳನ್ನೇ ಬಳಸಬೇಕಿತ್ತು. ಸ್ಪರ್ಶಸಂವೇದಿ ಪರದೆ (ಟಚ್‌ಸ್ಕ್ರೀನ್) ಬಂದಮೇಲೆ ಸುಮ್ಮನೆ ಪರದೆಯನ್ನು ಮುಟ್ಟುವ ಮೂಲಕವೇ ಮೊಬೈಲಿಗೆ ಬೇರೆಬೇರೆ ಆದೇಶಗಳನ್ನು ನೀಡುವುದು ಸಾಧ್ಯವಾಯಿತು. ಈಗ, ಧ್ವನಿ ಗುರುತಿಸುವ (ಸ್ಪೀಚ್ ರೆಕಗ್ನಿಶನ್) ತಂತ್ರಜ್ಞಾನದ ನೆರವಿನಿಂದ ನಾವು ಮೊಬೈಲಿಗೆ ಧ್ವನಿರೂಪದ ಆದೇಶಗಳನ್ನೂ ಕೊಡಬಹುದು, ಅವು ನಮ್ಮ ಅಂಗಸನ್ನೆಗಳನ್ನು (ಜೆಸ್ಚರ್) ಗುರುತಿಸಿ ಪ್ರತಿಕ್ರಿಯೆ ನೀಡುವಂತೆಯೂ ಮಾಡಬಹುದು.

ಇದೆಲ್ಲದರ ಜೊತೆ ನಾವು ಮನಸಿನಲ್ಲಿ ಯೋಚಿಸಿಕೊಂಡಿದ್ದನ್ನು ಅರಿತುಕೊಳ್ಳುವ ಶಕ್ತಿ ಕೂಡ ಮೊಬೈಲ್ ಫೋನುಗಳಿಗೆ ದೊರಕಬಹುದು!

ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಪ್ರಯೋಗಗಳು ನಡೆದಿವೆ. ಪುಸ್ತಕಗಳನ್ನು ನಾವು ಸದ್ದಿಲ್ಲದೆ ಮನಸಿನಲ್ಲೇ ಓದಿಕೊಳ್ಳುತ್ತೇವಲ್ಲ, ಈ ಪ್ರಕ್ರಿಯೆಯಲ್ಲಿ ಮುಖದ ನರಗಳು ಹಾಗೂ ಸ್ನಾಯುಗಳಲ್ಲಿ ಕೆಲ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳನ್ನು ಗುರುತಿಸಿ ನಾವು ಏನು ಹೇಳುತ್ತಿದ್ದೇವೆ ಎಂದು ಗುರುತಿಸುವ 'ಆಲ್ಟರ್ ಇಗೋ' ಎಂಬ ತಂತ್ರಜ್ಞಾನವನ್ನು ಅಮೆರಿಕಾದ ಎಂ‌ಐಟಿಯಲ್ಲಿ ಭಾರತೀಯ ಮೂಲದ ವಿಜ್ಞಾನಿ ಅರ್ಣವ್ ಕಪೂರ್ ನೇತೃತ್ವದ ತಂಡ ರೂಪಿಸಿದೆ. ಇದು, ಮತ್ತು ಇಂಥದ್ದೇ ಇನ್ನಿತರ ತಂತ್ರಜ್ಞಾನಗಳನ್ನು ಬಳಸಿ ಮೊಬೈಲು-ಕಂಪ್ಯೂಟರುಗಳ ಜೊತೆ ನಿಶ್ಶಬ್ದ ಸಂವಹನ ನಡೆಸುವುದು ಸಾಧ್ಯವಾಗಲಿದೆ ಎನ್ನಲಾಗಿದೆ.

ಇಷ್ಟೇ ಅಲ್ಲ, 'ಬ್ರೈನ್-ಮಶೀನ್ ಇಂಟರ್‌ಫೇಸ್' ಎನ್ನುವ ಸಂವಹನ ವಿಧಾನ ಬಳಸಿ ನಮ್ಮ ಮೆದುಳು ಹಾಗೂ ಮೊಬೈಲ್ - ಕಂಪ್ಯೂಟರ್ ಮುಂತಾದ ಸಾಧನಗಳೊಡನೆ ನೇರ ಸಂಪರ್ಕ ಕಲ್ಪಿಸುವ ಪ್ರಯತ್ನ ಕೂಡ ನಡೆದಿದೆ. ಈ ಪರಿಕಲ್ಪನೆ ಕಾರ್ಯರೂಪಕ್ಕೆ ಬಂದಾಗ ನಾವು ಯೋಚಿಸಿಕೊಂಡ ಸಂಗತಿಯನ್ನೆಲ್ಲ ಮೊಬೈಲು ತನ್ನಷ್ಟಕ್ಕೆ ತಾನೇ ಟೈಪ್ ಮಾಡಿಡಲಿದೆ!

Related Stories

No stories found.
logo
ಇಜ್ಞಾನ Ejnana
www.ejnana.com