ಗ್ಯಾಜೆಟ್ ಜಗತ್ತಿಗೂ ಉಂಟು ಗಣಿಗಾರಿಕೆಯ ನಂಟು
ಗ್ಯಾಜೆಟ್‌ಗಳ ಹಲವು ವೈಶಿಷ್ಟ್ಯಗಳ ಹಿಂದೆ 'ತಂತ್ರಜ್ಞಾನ ಲೋಹ'ಗಳದೇ ಕೈವಾಡ ಇರುತ್ತದೆ.

ಗ್ಯಾಜೆಟ್ ಜಗತ್ತಿಗೂ ಉಂಟು ಗಣಿಗಾರಿಕೆಯ ನಂಟು

ವಿದ್ಯುನ್ಮಾನ ಸಾಧನಗಳಲ್ಲಿ ನಾವು ಹೆಸರೇ ಕೇಳಿಲ್ಲದ ಲೋಹಗಳೆಲ್ಲ ಬಳಕೆಯಾಗುತ್ತವೆ

ನೀವು ಶಾಲೆ ಅಥವಾ ಕಾಲೇಜಿನಲ್ಲಿ ರಸಾಯನವಿಜ್ಞಾನದ ವಿದ್ಯಾರ್ಥಿಯಾಗಿದ್ದರೆ ಪೀರಿಯಾಡಿಕ್ ಟೇಬಲ್, ಅರ್ಥಾತ್ ಆವರ್ತ ಕೋಷ್ಟಕವೆಂಬ ಹೆಸರು ನಿಮಗೆ ನೆನಪಿರುವುದು ಸಾಧ್ಯ. ಜಗತ್ತಿನಲ್ಲಿರುವ ಅಷ್ಟೂ ಧಾತುಗಳನ್ನು (ಎಲಿಮೆಂಟ್ಸ್) ಕ್ರಮಬದ್ಧವಾಗಿ ಜೋಡಿಸಿಟ್ಟು ಅವುಗಳೆಲ್ಲದರ ಕುರಿತು ಪ್ರಾಥಮಿಕ ಮಾಹಿತಿ ನೀಡುವುದು ಈ ಕೋಷ್ಟಕದ ವೈಶಿಷ್ಟ್ಯ.

ಸಾಧಾರಣ ರಾಸಾಯನಿಕ ವಿಧಾನಗಳ ಮೂಲಕ ಇವನ್ನು ಇನ್ನಷ್ಟು ಸರಳ ಪದಾರ್ಥಗಳನ್ನಾಗಿ ವಿಭಜಿಸುವುದು ಸಾಧ್ಯವಾಗುವುದಿಲ್ಲ ಎನ್ನುವುದು ಧಾತುಗಳ ಪ್ರಮುಖ ಲಕ್ಷಣ. ಇವು ಲೋಹ, ಅಲೋಹ, ಅನಿಲ ಮುಂತಾದ ಹಲವಾರು ಗುಂಪುಗಳ ಪೈಕಿ ಯಾವುದಕ್ಕಾದರೂ ಸೇರಿರುವುದು ಸಾಧ್ಯ.

ಈ ಪೈಕಿ ಲೋಹಗಳೊಡನೆ (ಮೆಟಲ್) ನಮ್ಮ ಒಡನಾಟಕ್ಕೆ ದೊಡ್ಡ ಇತಿಹಾಸವೇ ಇದೆ. ಆಭರಣ, ಆಯುಧಗಳಿಂದ ಪ್ರಾರಂಭಿಸಿ ಯಂತ್ರೋಪಕರಣಗಳವರೆಗೆ ನಾವು ವಿವಿಧ ಲೋಹಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಲೇ ಬಂದಿದ್ದೇವೆ. ಚಿನ್ನದ ಸರ, ಕಬ್ಬಿಣದ ಸರಳು, ಅಲ್ಯೂಮಿನಿಯಂ ಪಾತ್ರೆ, ಬೆಳ್ಳಿಯ ಲೋಟ - ಹೀಗೆ ನಿತ್ಯದ ಬದುಕಿನ ಅನೇಕ ಸಾಧನ ಸಲಕರಣೆಗಳಲ್ಲಿ ನಾವು ಲೋಹಗಳನ್ನು ಬಳಸುತ್ತೇವೆ.

ಆಧುನಿಕ ಆವಿಷ್ಕಾರಗಳಾದ ಮೊಬೈಲ್ ಫೋನ್, ಟೀವಿ, ಕಂಪ್ಯೂಟರುಗಳಲ್ಲೆಲ್ಲ ಮೇಲ್ನೋಟಕ್ಕೆ ಪ್ಲಾಸ್ಟಿಕ್ - ಗಾಜು ಇತ್ಯಾದಿಗಳೇ ಹೆಚ್ಚಿರುವಂತೆ ಕಾಣುತ್ತದೆ, ನಿಜ. ಆದರೆ ಅವುಗಳಲ್ಲೂ ಲೋಹಗಳು ವ್ಯಾಪಕವಾಗಿ ಬಳಕೆಯಾಗುತ್ತವೆ. ಇಲ್ಲಿ ಬಳಕೆಯಾಗುವ ಲೋಹಗಳ ಸಾಲಿನಲ್ಲಿ ನಮಗೆಲ್ಲ ಪರಿಚಯವಿರುವ ತಾಮ್ರ, ಚಿನ್ನ ಇತ್ಯಾದಿಗಳ ಜೊತೆಗೆ ನಾವು ಹೆಸರೇ ಕೇಳಿಲ್ಲದ ನಿಯೋಡೈಮಿಯಂ, ಡಿಸ್‍ಪ್ರೋಸಿಯಂ ಮುಂತಾದವೂ ಇರುತ್ತವೆ (ಇವನ್ನು 'ತಂತ್ರಜ್ಞಾನ ಲೋಹಗಳು' ಎಂದೇ ಕರೆಯುವುದುಂಟು). ನೈಜವೆನಿಸುವ ಚಿತ್ರಗಳು ಪರದೆಯ ಮೇಲೆ ಕಾಣುವುದರ, ಅತ್ಯುತ್ತಮ ಗುಣಮಟ್ಟದ ಧ್ವನಿ ಪುಟಾಣಿ ಸ್ಪೀಕರುಗಳಿಂದ ಹೊರಡುವುದರ ಹಿನ್ನೆಲೆಯಲ್ಲೆಲ್ಲ ಇಂತಹ ಲೋಹಗಳದೇ ಕೈವಾಡ ಇರುತ್ತದೆ.

ಈ ಲೋಹಗಳೆಲ್ಲ ನಮಗೆ ದೊರಕುವುದು ಗಣಿಗಾರಿಕೆಯ ಮೂಲಕ. ಭೂಮಿಯ ಒಡಲನ್ನು ಬಗೆದು, ಅದಿರನ್ನು ಮೇಲಕ್ಕೆ ತೆಗೆದು ಸಂಸ್ಕರಿಸಿದಾಗಲಷ್ಟೇ ಲೋಹಗಳನ್ನು ನಾವು ಬಳಸುವುದು ಸಾಧ್ಯವಾಗುತ್ತದೆ. ಭೂಮಿಯ ಆಳದಲ್ಲಿರುವ ನಿಕ್ಷೇಪಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಪಡೆದುಕೊಳ್ಳುತ್ತೇವಲ್ಲ, ಇದೂ ಸರಿಸುಮಾರು ಅಂತಹುದೇ ಪ್ರಕ್ರಿಯೆ.

ಒಂದೇಸಮನೆ ತೆಗೆದು ಬಳಸುತ್ತಿದ್ದರೆ ಪೆಟ್ರೋಲಿಯಂ ನಿಕ್ಷೇಪಗಳು ಬರಿದಾಗುತ್ತವೆ ಎನ್ನುತ್ತಾರಲ್ಲ, ಲೋಹಗಳದೂ ಅದೇ ಕತೆ. ನಾವು ವ್ಯಾಪಕವಾಗಿ ಬಳಸುವ ಲೋಹಗಳ ನಿಕ್ಷೇಪಗಳು ವಿಶ್ವದೆಲ್ಲೆಡೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ, ಅವುಗಳನ್ನು ಹೊರತೆಗೆದು ಬಳಕೆಗೆ ಸಿದ್ಧಗೊಳಿಸುವ ಪ್ರಕ್ರಿಯೆ ಸತತವಾಗಿ ನಡೆಯುತ್ತಲೇ ಇರುವುದರಿಂದ ಇವತ್ತಿಗೆ ಇದೊಂದು ದೊಡ್ಡ ಸಮಸ್ಯೆಯಂತೆ ಕಾಣುತ್ತಿಲ್ಲ, ಅಷ್ಟೇ.

ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಕೆಯಾಗುವ ಲೋಹಗಳ ಕತೆ ಇದಕ್ಕಿಂತ ಕೊಂಚ ಭಿನ್ನವಾದದ್ದು. ಕಬ್ಬಿಣದ ಅದಿರಿನಿಂದ ಕಬ್ಬಿಣ, ತಾಮ್ರದ ಅದಿರಿನಿಂದ ತಾಮ್ರ ಸಿಕ್ಕಂತೆ ಈ ಲೋಹಗಳು ನೇರವಾಗಿ ದೊರಕುವುದಿಲ್ಲವಾದ್ದರಿಂದ ಅವುಗಳ ಗಣಿಗಾರಿಕೆ - ಸಂಸ್ಕರಣೆ ಅಷ್ಟೇನೂ ಸರಳವಲ್ಲದ ಕೆಲಸ. ಹೀಗಾಗಿ ಅವುಗಳ ಲಭ್ಯತೆಯ ಪ್ರಮಾಣ ಕಡಿಮೆ. ಇನ್ನು ಇಂತಹ ಲೋಹಗಳ ಉತ್ಪಾದನೆಯೆಲ್ಲ ಕೆಲವೇ ರಾಷ್ಟ್ರಗಳ ಹಿಡಿತದಲ್ಲಿರುವುದರಿಂದ ಅವುಗಳ ಪೂರೈಕೆ ಹಾಗೂ ಬೆಲೆ ನಿಗದಿಯ ಹಿಂದೆ ಹಲವಾರು ಬಾರಿ ರಾಜಕೀಯ ಕಾರಣಗಳೂ ಕೆಲಸಮಾಡುತ್ತವೆ. ಬಹುತೇಕ 'ತಂತ್ರಜ್ಞಾನ ಲೋಹ'ಗಳ ಪೂರೈಕೆಗಾಗಿ ಚೀನಾ ದೇಶವನ್ನೇ ಅವಲಂಬಿಸಬೇಕಿರುವ ಪರಿಸ್ಥಿತಿಯಂತೂ ವಿಶ್ವದ ಉಳಿದೆಲ್ಲ ರಾಷ್ಟ್ರಗಳಿಗೆ ಉಗಿಯಲೂ ಆಗದ ನುಂಗಲೂ ಆಗದ ಬಿಸಿತುಪ್ಪ.

ಬೇಡಿಕೆಗೂ ಪೂರೈಕೆಗೂ ನಡುವಿನ ವ್ಯತ್ಯಾಸ ತಂತ್ರಜ್ಞಾನದ ನಾಗಾಲೋಟಕ್ಕೆ ಕಡಿವಾಣ ಹಾಕಿಬಿಡಬಹುದು ಎನ್ನುವ ಭೀತಿಯೂ ವ್ಯಾಪಕವಾಗಿದೆ. ವಿದ್ಯುತ್ ಚಾಲಿತ ವಾಹನಗಳು ಮುಂಬರುವ ವರ್ಷಗಳಲ್ಲಿ ವ್ಯಾಪಕ ಬಳಕೆಗೆ ಬರಲಿವೆಯೆಂಬ ನಿರೀಕ್ಷೆ ಇದೆಯಲ್ಲ, ಅವುಗಳ ಬ್ಯಾಟರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಲಿಥಿಯಂ ಲೋಹದ ಪೂರೈಕೆ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಹಾಗಾಗಿ ಕಳೆದ ಕೆಲ ವರ್ಷಗಳಲ್ಲಿ ಅದರ ಬೆಲೆ ಭಾರೀ ಏರಿಕೆ ಕಂಡಿದೆ; ಲಿಥಿಯಂಗೆ 'ಬಿಳಿ ಚಿನ್ನ'ವೆಂಬ ಅಡ್ಡಹೆಸರು ದೊರೆತಿದೆ. ಪರಿಣಾಮ: ವಿದ್ಯುತ್‌ಚಾಲಿತ ಕಾರುಗಳ ಬೆಲೆ ಇನ್ನೂ ದುಬಾರಿಯೆನಿಸುವ ಮಟ್ಟದಲ್ಲೇ ಉಳಿದುಕೊಂಡಿದೆ!

ವಿದ್ಯುನ್ಮಾನ ತ್ಯಾಜ್ಯ, ಅರ್ಥಾತ್ ಇ-ಕಸದ ಸಮರ್ಥ ವಿಲೇವಾರಿ ಈ ಸಮಸ್ಯೆಗೆ ಸೀಮಿತ ಪ್ರಮಾಣದಲ್ಲಾದರೂ ಪರಿಹಾರ ಒದಗಿಸಬಹುದು ಎಂದು ತಜ್ಞರು ಹೇಳುತ್ತಾರೆ. ಲೋಹಗಳೇ ಮೊದಲಾದ ಉಪಯುಕ್ತ ಅಂಶಗಳನ್ನು ಹಳೆಯ ಸಾಧನಗಳಿಂದ ಹೊರತೆಗೆದು ಮರುಬಳಕೆ ಮಾಡಿಕೊಂಡರೆ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯ, ಅಷ್ಟು ಲೋಹವನ್ನು ಹೊಸದಾಗಿ ಗಣಿಗಾರಿಕೆ ಮಾಡುವುದರಿಂದ ಉಂಟಾಗುವ ಮಾಲಿನ್ಯಗಳೆರಡೂ ತಪ್ಪಿ ಪರಿಸರದ ಮೇಲಿನ ಒತ್ತಡ ಕೊಂಚವಾದರೂ ಕಡಿಮೆಯಾಗುತ್ತದೆ ಎನ್ನುವುದು ಅವರ ನಿರೀಕ್ಷೆ.

ಇ-ಕಸದ ಸಮರ್ಥ ವಿಲೇವಾರಿ ಹಾಗೂ ಮರುಬಳಕೆಯ ಪ್ರಮಾಣ ಹೆಚ್ಚದಿದ್ದರೆ ಮುಂದಿನ ದಿನಗಳಲ್ಲಿ ಹೊಸ ಗ್ಯಾಜೆಟ್‌ಗಳ ಬೆಲೆ ಕಡಿಮೆಯಾಗಬಹುದೆಂಬ ನಿರೀಕ್ಷೆಯನ್ನೇ ಇಟ್ಟುಕೊಳ್ಳಲು ಸಾಧ್ಯವಾಗದಿರಬಹುದು. ಪದೇಪದೇ ಹೊಸ ಗ್ಯಾಜೆಟ್‌ಗಳನ್ನು ಕೊಳ್ಳುವ ನಮ್ಮ ಅಭ್ಯಾಸ ಆಗ, ಬಲವಂತವಾಗಿಯಾದರೂ, ಬದಲಾಗುತ್ತದೋ ಏನೋ!

ಅಕ್ಟೋಬರ್ ೨೯, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
ಇಜ್ಞಾನ Ejnana
www.ejnana.com