"ಊರಿಗೆಲ್ಲ ಒಂದು ದಾರಿಯಾದರೆ ಎಡವಟ್ಟನಿಗೇ ಒಂದು ದಾರಿ"
"ಊರಿಗೆಲ್ಲ ಒಂದು ದಾರಿಯಾದರೆ ಎಡವಟ್ಟನಿಗೇ ಒಂದು ದಾರಿ"

ಕೋವಿಡಿಯಟ್ ಆಗದಿರೋಣ!

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ
Published on

"ಊರಿಗೆಲ್ಲ ಒಂದು ದಾರಿಯಾದರೆ ಎಡವಟ್ಟನಿಗೇ ಒಂದು ದಾರಿ" ಎನ್ನುವುದೊಂದು ಗಾದೆಮಾತು. ಎಲ್ಲರೂ ಒಪ್ಪುವುದನ್ನು ಒಪ್ಪದ, ಊರೆಲ್ಲ ಅನುಸರಿಸುವ ನಿಯಮಗಳನ್ನು ಅನುಸರಿಸದ ವಿಚಿತ್ರ ವ್ಯಕ್ತಿಗಳನ್ನು ಕುರಿತ ಮಾತು ಇದು. ಬೇರೆ ಸನ್ನಿವೇಶಗಳಲ್ಲಿ ಹೇಗಾದರೂ ಇರಬಹುದು, ಆದರೆ ಕೋವಿಡ್-೧೯ ತಂದಿಟ್ಟಿರುವ ಸದ್ಯದ ತುರ್ತುಪರಿಸ್ಥಿತಿಯಲ್ಲಿ ಇಂತಹ ವರ್ತನೆ ಅಪಾಯಕಾರಿಯಾಗಬಲ್ಲದು.

ಕೋವಿಡ್-೧೯ ಸೋಂಕಿನಿಂದ ಉಂಟಾಗಬಹುದಾದ ತೊಂದರೆಯನ್ನು ಸಾಧ್ಯವಾದಷ್ಟೂ ನಿಯಂತ್ರಿಸಲು ಸರಕಾರಗಳು ಹಲವು ನಿಯಮಗಳನ್ನು ರೂಪಿಸಿವೆ. ನಮ್ಮ ಎಚ್ಚರದಲ್ಲಿ ನಾವಿರಲು ಬೇಕಾದ ಸಲಹೆ-ಸೂಚನೆಗಳನ್ನು ವೈದ್ಯಕೀಯ ಪರಿಣತರೂ ಕೊಟ್ಟಿದ್ದಾರೆ. ಅನಗತ್ಯವಾಗಿ ಹೊರಗೆ ಓಡಾಡದಿರುವುದು, ಗುಂಪುಸೇರದಿರುವುದು, ಮಾಸ್ಕ್ ಬಳಸುವುದು, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದೇ ಮುಂತಾದ ಈ ಸೂಚನೆಗಳನ್ನು ಎಲ್ಲರೂ ಪಾಲಿಸುವುದು ಸಮುದಾಯದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

"ಇವು ಯಾವುದನ್ನೂ ನಾನು ಒಪ್ಪುವುದಿಲ್ಲ, ನನಗೆ ಬೇಕಾದ್ದನ್ನೇ ಮಾಡುತ್ತೇನೆ" ಎಂದು ಯಾರಾದರೂ ಹೇಳಿದರೆ? ಅದು ಮೂರ್ಖತನ ಎನಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಅಂತಹ ವರ್ತನೆ ಇಡೀ ಸಮುದಾಯವನ್ನೇ ಅಪಾಯಕ್ಕೆ ಈಡುಮಾಡುವ ಸಾಧ್ಯತೆಯೂ ಇರುತ್ತದೆ.

ಕೋವಿಡ್-೧೯ ಜಾಗತಿಕ ಸೋಂಕಿನ ಸಂದರ್ಭದಲ್ಲಿ ಜಗತ್ತಿನೆಲ್ಲೆಡೆಯ ಹಲವು ಮಂದಿ ಇಂತಹ ವರ್ತನೆ ತೋರುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ಅಜ್ಞಾನದಿಂದಲೋ ಅತಿಯಾದ ಆತ್ಮವಿಶ್ವಾಸದಿಂದಲೋ ಸಾಮಾಜಿಕ ಜವಾಬ್ದಾರಿಯನ್ನು ಮರೆಯುತ್ತಿರುವ ಇಂತಹ ವ್ಯಕ್ತಿಗಳಿಗೆ 'ಕೋವಿಡಿಯಟ್'ಗಳೆಂದು ನಾಮಕರಣ ಮಾಡಲಾಗಿದೆ. 'ಕೋವಿಡ್' ಮತ್ತು 'ಇಡಿಯಟ್' (ಅವಿವೇಕಿ) ಎಂಬ ಎರಡು ಪದಗಳನ್ನು ಹೊಸೆದು ಮಾಡಿರುವ ಹೊಸ ನಾಮಪದ ಇದು.

ಯಾವುದೇ ಕಾರಣಕ್ಕೂ ಕೋವಿಡಿಯಟ್ ಅನ್ನಿಸಿಕೊಳ್ಳದಂತೆ ನಡೆದುಕೊಳ್ಳುವುದು, ಸದ್ಯದ ತುರ್ತುಪರಿಸ್ಥಿತಿಯಿಂದ ಕ್ಷೇಮವಾಗಿ ಹೊರಬರಲು ನಾವು ಮಾಡಲೇಬೇಕಾದ ಕೆಲಸ. ನಾವೆಲ್ಲರೂ ಒಟ್ಟಾಗಿ ಅದನ್ನು ಮಾಡಿತೋರಿಸೋಣ, ಕ್ಷೇಮವಾಗಿರೋಣ!

ಸೌಜನ್ಯ: ವಿಜಯ ಕರ್ನಾಟಕ

logo
ಇಜ್ಞಾನ Ejnana
www.ejnana.com