ಅಗತ್ಯ ಕೆಲಸಕ್ಕೆಂದು ಹೋದಾಗ ನಮ್ಮ ಸಂಪರ್ಕಕ್ಕೆ ಬರುವವರಲ್ಲಿ ಯಾರಾದರೂ ಕೋವಿಡ್-೧೯ ರೋಗಿಯಿದ್ದರೆ ಏನಾಗಬಹುದು?
ಅಗತ್ಯ ಕೆಲಸಕ್ಕೆಂದು ಹೋದಾಗ ನಮ್ಮ ಸಂಪರ್ಕಕ್ಕೆ ಬರುವವರಲ್ಲಿ ಯಾರಾದರೂ ಕೋವಿಡ್-೧೯ ರೋಗಿಯಿದ್ದರೆ ಏನಾಗಬಹುದು?
ಕೊರೊನಾಲಜಿ

ಮಾಸ್ಕ್ ಪಾತ್ರ ಏನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಟಿ. ಜಿ. ಶ್ರೀನಿಧಿ

ಅಗತ್ಯ ಕೆಲಸಕ್ಕೆಂದು ಹೋದಾಗ ನಮ್ಮ ಸಂಪರ್ಕಕ್ಕೆ ಬರುವವರಲ್ಲಿ ಯಾರಾದರೂ ಕೋವಿಡ್-೧೯ ರೋಗಿಯಿದ್ದರೆ ಏನಾಗಬಹುದು? ಕೆಮ್ಮಿದಾಗ ಅಥವಾ ಸೀನಿದಾಗ ಅವರ ಮೂಗು-ಬಾಯಿಯಿಂದ ಹೊರಬರುವ ಸಣ್ಣ ಹನಿಗಳಲ್ಲಿ ವೈರಸ್ ಇರಬಹುದು, ಮತ್ತು ಅದು ನಮ್ಮ ಶ್ವಾಸಮಾರ್ಗವನ್ನು ಪ್ರವೇಶಿಸಿದರೆ ನಮಗೂ ರೋಗ ಬರಬಹುದು. ಮೂಗು ಹಾಗೂ ಬಾಯಿಯನ್ನು ಸಂಪೂರ್ಣವಾಗಿ ಮುಚ್ಚುವ ಮುಖಗವಸು (ಮಾಸ್ಕ್) ಬಳಸಿ ಇಂತಹ ಸನ್ನಿವೇಶಗಳನ್ನು ತಪ್ಪಿಸಬಹುದೆಂದು ವೈದ್ಯರು ಹೇಳುತ್ತಾರೆ.

ನಾವು ಎಂತಹ ಮಾಸ್ಕ್ ಬಳಸಬೇಕು? ಶಸ್ತ್ರಚಿಕಿತ್ಸೆಯಂತಹ ಸಂದರ್ಭದಲ್ಲಿ ವೈದ್ಯರು ಬಳಸುವ ಮಾಸ್ಕ್‌ಗಳನ್ನೇ ನಾವೂ ಬಳಸಬೇಕೇ? ಹಾಗೇನೂ ಇಲ್ಲ. ಸ್ವಚ್ಛವಾದ ಹತ್ತಿಯ ಬಟ್ಟೆಯಿಂದ ನಮ್ಮ ಬಳಕೆಗೆ ಬೇಕಾದ ಮಾಸ್ಕ್‌ಗಳನ್ನು ನಾವು ಮನೆಯಲ್ಲೇ ತಯಾರಿಸಿಕೊಳ್ಳಬಹುದು, ಒಗೆದು ಮತ್ತೆಮತ್ತೆ ಬಳಸಲೂಬಹುದು. ಹೀಗೆ ಮಾಡುವುದರಿಂದ ಮಾಸ್ಕ್‌ಗಳು ಎಲ್ಲರಿಗೂ ಸುಲಭವಾಗಿ ಸಿಗುತ್ತವೆ, ವೈದ್ಯಕೀಯ ಸಿಬ್ಬಂದಿಗೆ ಬೇಕಾದ ಮಾಸ್ಕ್‌ಗಳ ಪೂರೈಕೆಯಲ್ಲಿ ಕೊರತೆಯೂ ಆಗುವುದಿಲ್ಲ.

ಆಗಿಂದಾಗ್ಗೆ ಸೋಪು ಹಚ್ಚಿ ಕೈತೊಳೆದುಕೊಳ್ಳುವ ಅಥವಾ ಸ್ಯಾನಿಟೈಸರ್ ಬಳಸುವ ಅಭ್ಯಾಸವೂ ಇದ್ದರೆ ಮಾತ್ರ ಮಾಸ್ಕ್‌ಗಳು ಪರಿಣಾಮಕಾರಿಯಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮೂಗಿನ ಹೊಳ್ಳೆ ಮತ್ತು ಬಾಯನ್ನು ಪೂರ್ಣವಾಗಿ ಮುಚ್ಚುವಂತೆ ಮಾಸ್ಕ್ ಧರಿಸುವುದು, ಮಾತನಾಡಲೆಂದು ಅದನ್ನು ತೆಗೆಯದಿರುವುದು, ಮಾಸ್ಕ್‌ನ ಹೊರಭಾಗವನ್ನು ಮುಟ್ಟದಿರುವುದು, ಮನೆಗೆ ಮರಳಿದ ತಕ್ಷಣ ಮಾಸ್ಕ್ ತೆಗೆದು ಕೈತೊಳೆಯುವುದು, ಬಹುಬಳಕೆಯ ಮಾಸ್ಕ್‌ ಆದರೆ ತಕ್ಷಣ ಶುಚಿಗೊಳಿಸುವುದು - ಇವೆಲ್ಲವನ್ನೂ ಕಡ್ಡಾಯವಾಗಿ ಪಾಲಿಸಬೇಕು. ಬಳಸಿ ಎಸೆವ ಮಾಸ್ಕ್‌ಗಳ ಸುರಕ್ಷಿತ ವಿಲೇವಾರಿಯೂ ಅತ್ಯಗತ್ಯ.

[ಮನೆಯಲ್ಲೇ ಮಾಸ್ಕ್ ತಯಾರಿಸುವ ಕೈಪಿಡಿಯನ್ನು ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಾರ್ಯಾಲಯ ಕನ್ನಡದಲ್ಲೂ ಪ್ರಕಟಿಸಿದೆ. ಈ ಕೈಪಿಡಿಯನ್ನು tinyurl.com/mask-kan ಕೊಂಡಿಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.]

ಸೌಜನ್ಯ: ವಿಜಯ ಕರ್ನಾಟಕ

ಇಜ್ಞಾನ Ejnana
www.ejnana.com