COVID-19 ಬಾರದಂತೆ ನೋಡಿಕೊಳ್ಳಲು ನಾವು ಪಾಲಿಸಬಹುದಾದ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ
COVID-19 ಬಾರದಂತೆ ನೋಡಿಕೊಳ್ಳಲು ನಾವು ಪಾಲಿಸಬಹುದಾದ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ

ಸೋಶಿಯಲ್ ಡಿಸ್ಟೆನ್ಸಿಂಗ್ ಏನು? ಏಕೆ?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ
Published on

COVID-19 ಬಾರದಂತೆ ನೋಡಿಕೊಳ್ಳಲು ನಾವು ಪಾಲಿಸಬಹುದಾದ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. "ಕೆಮ್ಮುತ್ತಿರುವ ಅಥವಾ ಸೀನುತ್ತಿರುವ ವ್ಯಕ್ತಿಗಳಿಂದ ಕನಿಷ್ಠ ೧ ಮೀಟರ್ (ಮೂರು ಅಡಿ) ಅಂತರ ಕಾಪಾಡಿಕೊಳ್ಳಿ" ಎನ್ನುವುದು ಈ ಕ್ರಮಗಳಲ್ಲೊಂದು.

ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಅವರ ಮೂಗು-ಬಾಯಿಗಳಿಂದ ಹೊರಬರುವ ಸಣ್ಣ ಹನಿಗಳಲ್ಲಿ ವೈರಸ್ ಇರುವುದು ಸಾಧ್ಯ. ಆ ಸಂದರ್ಭದಲ್ಲಿ ನಾವು ಅವರ ಸಮೀಪದಲ್ಲಿದ್ದರೆ ಆ ವೈರಸ್ ಶ್ವಾಸಮಾರ್ಗದ ಮೂಲಕ ನಮ್ಮ ದೇಹವನ್ನೂ ಪ್ರವೇಶಿಸಬಹುದು ಎನ್ನುವುದು ಈ ಮುನ್ನೆಚ್ಚರಿಕೆಗೆ ಕಾರಣ. ಹೊರಗೆ ಹೋದಾಗ ನಮ್ಮ ಹತ್ತಿರ ಬರುವವರ ಪೈಕಿ ಯಾರಿಗೆ ರೋಗವಿದೆ ಎಂದು ಪತ್ತೆಹಚ್ಚುವುದು ಕಷ್ಟವಾದ್ದರಿಂದ, ಅಂತಹ ಸಂದರ್ಭಗಳಲ್ಲಿ ಎಲ್ಲರಿಂದಲೂ ಅಂತರ ಕಾಪಾಡಿಕೊಳ್ಳುವುದೇ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಹೀಗೆ ಎಲ್ಲರೂ ಅಂತರ ಕಾಪಾಡಿಕೊಂಡಾಗ ಕರೋನಾವೈರಸ್ ಅಥವಾ ಬೇರಾವುದೇ ರೋಗಕಾರಕ ಒಬ್ಬರಿಂದ ಇನ್ನೊಬ್ಬರಿಗೆ ಹರಡಲಾರದು ಎನ್ನುವುದು ಇದರ ಉದ್ದೇಶ.

ಸೋಶಿಯಲ್ ಡಿಸ್ಟೆನ್ಸಿಂಗ್ ಎಂದು ಕರೆಯುವುದು ಇದನ್ನೇ. ರೋಗ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ನಿಧಾನಿಸಲು ಈ ತಂತ್ರವನ್ನು ಬಳಸಲಾಗುತ್ತದೆ.

ರೋಗ ಹರಡುವುದನ್ನು ನಿಧಾನಿಸುವುದರಿಂದ ಏನು ಉಪಯೋಗ? ಯಾವುದೇ ರೋಗ ವಿಪರೀತ ವೇಗವಾಗಿ ಹರಡಿಬಿಟ್ಟರೆ ಅದು ವೈದ್ಯಕೀಯ ಸೇವೆಗಳ ಮೇಲೆ ಭಾರೀ ಒತ್ತಡಕ್ಕೆ ಕಾರಣವಾಗಬಲ್ಲದು. ಹಾಗೇನಾದರೂ ಆದರೆ ಎಲ್ಲರಿಗೂ ಅಗತ್ಯ ಆರೈಕೆಯೇ ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗುವುದು ಸಾಧ್ಯ. ರೋಗ ಹರಡುವ ಗತಿ ನಿಧಾನವಾದಷ್ಟೂ ಇರುವ ವೈದ್ಯಕೀಯ ಸೌಲಭ್ಯಗಳನ್ನೇ ಬಳಸಿ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತದೆ. ಹೆಚ್ಚುವರಿ ವ್ಯವಸ್ಥೆ ಮಾಡಿಕೊಳ್ಳುವುದಕ್ಕೂ ಸ್ವಲ್ಪ ಸಮಯ ಸಿಗುತ್ತದೆ.

ಸೌಜನ್ಯ: ವಿಜಯ ಕರ್ನಾಟಕ

logo
ಇಜ್ಞಾನ Ejnana
www.ejnana.com