SARI ಎನ್ನುವುದು 'ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಇನ್‌ಫೆಕ್ಷನ್' ಎಂಬ ಹೆಸರಿನ ಸಂಕ್ಷಿಪ್ತ ರೂಪ.
SARI ಎನ್ನುವುದು 'ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಇನ್‌ಫೆಕ್ಷನ್' ಎಂಬ ಹೆಸರಿನ ಸಂಕ್ಷಿಪ್ತ ರೂಪ.

SARI ಅಂದರೆ ಏನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಕೋವಿಡ್-೧೯ ಜಾಗತಿಕ ಸೋಂಕಿನ ಸಂದರ್ಭದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೆಸರುಗಳು-ಪದಗಳು ನಮಗೆ ಕೇಳಲು ಸಿಗುತ್ತಿವೆ. ಇಂತಹ ಹೆಸರುಗಳಿಗೆ SARI ಒಂದು ಉದಾಹರಣೆ.

SARI ಎನ್ನುವುದು 'ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಇನ್‌ಫೆಕ್ಷನ್' ಎಂಬ ಹೆಸರಿನ ಸಂಕ್ಷಿಪ್ತ ರೂಪ. ಹೆಸರೇ ಹೇಳುವಂತೆ ಇದು ಉಸಿರಾಟಕ್ಕೆ ತೊಂದರೆಮಾಡುವ ಗಂಭೀರ ಸೋಂಕು. ಹಲವು ಕೋವಿಡ್-೧೯ ಸೋಂಕಿತರ ಸಾವಿಗೆ ಕಾರಣವಾಗಿರುವ ಅಪಖ್ಯಾತಿಯೂ ಈ ಸೋಂಕಿಗೆ ಇದೆ.

ಜ್ವರ, ಒಣಕೆಮ್ಮು, ಮೈಕೈ ನೋವು ಮುಂತಾದ ಸಾಮಾನ್ಯ ರೋಗಲಕ್ಷಣಗಳು ಅನೇಕ ಬೇರೆಬೇರೆ ಕಾಯಿಲೆಗಳನ್ನು ಸೂಚಿಸಬಹುದು. ಹೀಗಾಗಿಯೇ ಇಂತಹ ರೋಗಲಕ್ಷಣಗಳು ಕಾಣಿಸಿಕೊಂಡಾಗ ಅಂತಹ ರೋಗಿಗೆ 'ಇನ್‌ಫ್ಲುಯೆಂಜ಼ಾದಂತಹ ಕಾಯಿಲೆ' (ಇನ್‌ಫ್ಲುಯೆಂಜ಼ಾ-ಲೈಕ್ ಇಲ್‌ನೆಸ್, ILI) ಇದೆ ಎನ್ನಲಾಗುತ್ತದೆ. ಈ ಕಾಯಿಲೆ ಸಾಮಾನ್ಯ ನೆಗಡಿ ಆಗಿರಬಹುದು, ಅಥವಾ ಇನ್‌ಫ್ಲುಯೆಂಜ಼ಾ ಕೂಡ ಆಗಿರಬಹುದು.

ILIಯ ರೋಗಲಕ್ಷಣಗಳ ಜೊತೆಗೆ ಉಸಿರಾಟದ ತೀವ್ರ ತೊಂದರೆಯೂ ಇದ್ದು, ರೋಗಿಯ ಉಸಿರಾಟ ಮುಂದುವರೆಸಲು ವೈದ್ಯಕೀಯ ನೆರವು ಪಡೆಯಬೇಕಾದ ಪರಿಸ್ಥಿತಿ ಸೃಷ್ಟಿಯಾದರೆ ಆಗ ಅದನ್ನು SARI ಎಂದು ಗುರುತಿಸಲಾಗುತ್ತದೆ. ಇನ್ನಿತರ ರೋಗಗಳಂತೆ ನಿಧಾನವಾಗಿ ಏರದೆ ತೀವ್ರಗತಿಯಲ್ಲಿ ವಿಷಮಿಸುವ ಅನಿಯಂತ್ರಿತ ಪರಿಸ್ಥಿತಿ ಇದು.

ಇಂತಹ ರೋಗಿಗಳ ಶುಶ್ರೂಷೆಯಲ್ಲಿ ಔಷಧೋಪಚಾರದ ಜೊತೆ ವೆಂಟಿಲೇಟರ್‌ನಂತಹ ಬಾಹ್ಯ ಸಾಧನಗಳನ್ನೂ ಬಳಸಲಾಗುತ್ತದೆ. ರೋಗರಕ್ಷೆ ದುರ್ಬಲವಾಗಿರುವ ಅಥವಾ ಸೂಕ್ತ ವೈದ್ಯಕೀಯ ನೆರವು ದೊರಕುವುದು ತಡವಾದ ಸಂದರ್ಭಗಳಲ್ಲಿ SARIಯಿಂದ ಸಾವು ಕೂಡ ಸಂಭವಿಸಬಹುದು.

ಇನ್‌ಫ್ಲುಯೆಂಜ಼ಾ-ಲೈಕ್ ಇಲ್‌ನೆಸ್ ಹಾಗೂ ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಇನ್‌ಫೆಕ್ಷನ್‌ಗಳಿಗೆ ಅನೇಕ ಕಾರಣಗಳಿರುವುದು ಸಾಧ್ಯ. ಇಂತಹ ಕಾರಣಗಳಲ್ಲಿ ಕೋವಿಡ್-೧೯ ಕೂಡ ಒಂದು. ಕೋವಿಡ್-೧೯ ಬಾಧಿತರೆಲ್ಲರಲ್ಲೂ SARI ಕಾಣಿಸಿಕೊಳ್ಳಬೇಕೆಂದಾಗಲೀ, SARI ಕಾಣಿಸಿಕೊಂಡಿರುವ ರೋಗಿಗಳಿಗೆಲ್ಲ ಕೋವಿಡ್-೧೯ ಬಂದಿರಬೇಕೆಂದಾಗಲೀ ಇಲ್ಲ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com