ಪೂಲ್ ಟೆಸ್ಟಿಂಗ್ ಅಂದರೇನು?
ಕೋವಿಡ್-೧೯ರಂತಹ ಜಾಗತಿಕ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ರೋಗಪತ್ತೆ ಪರೀಕ್ಷೆಯ ಪಾತ್ರ ಮಹತ್ವದ್ದು.

ಪೂಲ್ ಟೆಸ್ಟಿಂಗ್ ಅಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಕೋವಿಡ್-೧೯ರಂತಹ ಜಾಗತಿಕ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ರೋಗಪತ್ತೆ ಪರೀಕ್ಷೆಯ ಪಾತ್ರ ಮಹತ್ವದ್ದು. ಸಾಧ್ಯವಿದ್ದಷ್ಟೂ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟೂ ಹೆಚ್ಚು ಜನರನ್ನು ಪರೀಕ್ಷಿಸಿದರೆ ಮಾತ್ರ ಸೋಂಕಿತರನ್ನು ಪತ್ತೆಮಾಡುವುದು, ಚಿಕಿತ್ಸೆಯ ವ್ಯವಸ್ಥೆ ಮಾಡುವುದು, ಸೋಂಕು ಇನ್ನಷ್ಟು ಹರಡದಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತದೆ.

ಪರೀಕ್ಷಿಸಬೇಕಿರುವ ಜನರ ಸಂಖ್ಯೆಯ ಹೋಲಿಕೆಯಲ್ಲಿ ಟೆಸ್ಟಿಂಗ್ ಕಿಟ್‌ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದಿದ್ದರೆ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುವುದು ಕಷ್ಟ. ಹಾಗೆಯೇ, ಸಾವಿರಾರು ಜನರಿಂದ ಸಂಗ್ರಹಿಸಿದ ಮಾದರಿಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಲು ಸಾಕಷ್ಟು ಸಮಯವೂ ಬೇಕು.

ಇದಕ್ಕೆ ತಾತ್ಕಾಲಿಕ ಪರಿಹಾರವೇ 'ಪೂಲ್ ಟೆಸ್ಟ್'. ಕೋವಿಡ್-೧೯ ಸೋಂಕು ಅಷ್ಟೇನೂ ವ್ಯಾಪಕವಾಗಿ ಹರಡಿಲ್ಲದ ಪ್ರದೇಶಗಳಲ್ಲಿ, ಪರೀಕ್ಷೆಗೆ ಒಳಗಾಗುವ ಪ್ರತಿ ಐದು ಜನರ ಮಾದರಿಗಳನ್ನು ಒಟ್ಟಿಗೆ ಪರೀಕ್ಷಿಸುವುದು ಇದರ ಉದ್ದೇಶ. ಹೀಗೆ ಪರೀಕ್ಷಿಸಿದಾಗ ಒಟ್ಟಾರೆ ಫಲಿತಾಂಶ ನೆಗೆಟಿವ್ ಬಂದರೆ ಆ ಗುಂಪಿನಲ್ಲಿ ಯಾರಿಗೂ ಕೋವಿಡ್-೧೯ ಸೋಂಕು ತಗುಲಿಲ್ಲ ಎಂದುಕೊಳ್ಳಬಹುದು. ಪಾಸಿಟಿವ್ ಬಂದ ಸಂದರ್ಭದಲ್ಲಿ ಮಾತ್ರ ಅವರೆಲ್ಲರನ್ನೂ ಮತ್ತೆ, ಪ್ರತ್ಯೇಕವಾಗಿ ಪರೀಕ್ಷಿಸಬೇಕಾಗುತ್ತದೆ.

ಸೋಂಕು ವ್ಯಾಪಕವಾಗಿ ಹರಡಿಲ್ಲದ ಪ್ರದೇಶಗಳಲ್ಲಿ ಬಹಳಷ್ಟು ಜನ ನೆಗೆಟಿವ್ ಆಗಿರುವ ಸಾಧ್ಯತೆ ಹೆಚ್ಚು. ಈ ಅಂಶವನ್ನು ಆಧರಿಸಿ ಪರೀಕ್ಷೆಗಳನ್ನು ಕ್ಷಿಪ್ರವಾಗಿ ನಡೆಸಲು ಪೂಲ್ ಟೆಸ್ಟ್ ವಿಧಾನ ನೆರವಾಗುತ್ತದೆ. ಐದು ಜನರ ಮಾದರಿಯನ್ನು ಒಟ್ಟಿಗೆ ಪರೀಕ್ಷಿಸುವುದು ಪರಿಣಾಮಕಾರಿ ವಿಧಾನವೆಂದು ಪ್ರಯೋಗಗಳಿಂದ ಕಂಡುಕೊಳ್ಳಲಾಗಿದ್ದು, ಅದಕ್ಕಿಂತ ಹೆಚ್ಚಿನ ಮಾದರಿಗಳನ್ನು ಒಟ್ಟಿಗೆ ಪರೀಕ್ಷಿಸುವುದು ಅಪೇಕ್ಷಣೀಯವಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಹೇಳಿದೆ.

ಈ ವಿಧಾನವನ್ನು ರೋಗಲಕ್ಷಣಗಳಿಲ್ಲದ ವ್ಯಕ್ತಿಗಳ ಪರೀಕ್ಷೆಗಾಗಿ ಮಾತ್ರವೇ ಬಳಸಬಹುದಾಗಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದವರ ಮಾದರಿಗಳನ್ನು ಪ್ರತ್ಯೇಕವಾಗಿಯೇ ಪರೀಕ್ಷಿಸಬೇಕು.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
ಇಜ್ಞಾನ Ejnana
www.ejnana.com