ಎಪಿಡೆಮಿಕ್, ಪ್ಯಾನ್‌ಡೆಮಿಕ್ ಇವು ರೋಗದ ಗುಣಲಕ್ಷಣಗಳ ಬಗ್ಗೆ ನಮಗೆ ಮಾಹಿತಿ ನೀಡಬಲ್ಲವು!
ಎಪಿಡೆಮಿಕ್, ಪ್ಯಾನ್‌ಡೆಮಿಕ್ ಇವು ರೋಗದ ಗುಣಲಕ್ಷಣಗಳ ಬಗ್ಗೆ ನಮಗೆ ಮಾಹಿತಿ ನೀಡಬಲ್ಲವು!

ಎಪಿಡೆಮಿಕ್, ಪ್ಯಾನ್‌ಡೆಮಿಕ್ ಇವೆಲ್ಲ ಏನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ರೋಗಗಳ ಬಗ್ಗೆ ಹೇಳುವಾಗ ಔಟ್‌ಬ್ರೇಕ್, ಎಪಿಡೆಮಿಕ್, ಪ್ಯಾನ್‌ಡೆಮಿಕ್ ಮುಂತಾದ ವಿಶೇಷಣಗಳು ಬಳಕೆಯಾಗುತ್ತವೆ. ಈ ಆಯಾ ರೋಗದ ಗುಣಲಕ್ಷಣಗಳ ಬಗ್ಗೆ ಇವು ನಮಗೆ ಮಾಹಿತಿ ನೀಡಬಲ್ಲವು.

ದೀಪಾವಳಿಯ ಹೂಕುಂಡದಿಂದ ಕಿಡಿಗಳು ಚಿಮ್ಮಿದ ಹಾಗೆ ಯಾವುದೇ ರೋಗ ಏಕಾಏಕಿ ಕಾಣಿಸಿಕೊಳ್ಳುವುದನ್ನು ಅದರ ಆಸ್ಫೋಟನೆ ಅಥವಾ 'ಔಟ್‌ಬ್ರೇಕ್' ಎಂದು ಕರೆಯುತ್ತಾರೆ. ಔಟ್‌ಬ್ರೇಕ್‌ಗಳ ಹಾವಳಿ ಸಾಮಾನ್ಯವಾಗಿ ಸೀಮಿತ ಭೌಗೋಳಿಕ ಪ್ರದೇಶದಲ್ಲಿ ಮಾತ್ರವೇ ಇರುತ್ತದೆ.

ರೋಗವೊಂದು ವಿಸ್ತಾರವಾದ ಪ್ರದೇಶದಲ್ಲಿ ವೇಗವಾಗಿ ಹರಡಿ ಹೆಚ್ಚಿನ ಜನರನ್ನು ಪ್ರಭಾವಿಸಿದರೆ ಅದನ್ನು 'ಎಪಿಡೆಮಿಕ್' (ಪ್ರಾದೇಶಿಕ ಸೋಂಕು) ಎನ್ನುತ್ತಾರೆ. ಈ ವ್ಯಾಪ್ತಿ ಹಲವು ಜಿಲ್ಲೆಗಳು, ಕೆಲವು ರಾಜ್ಯಗಳು ಅಥವಾ ಒಂದಕ್ಕಿಂತ ಹೆಚ್ಚಿನ ದೇಶಗಳನ್ನೂ ಒಳಗೊಂಡಿರಬಹುದು. ೨೦೦೩ರಲ್ಲಿ ಹತ್ತಾರು ದೇಶಗಳನ್ನು ಪ್ರಭಾವಿಸಿದ್ದ ಸಾರ್ಸ್, ಎಪಿಡೆಮಿಕ್‌ಗೆ ಒಂದು ಉದಾಹರಣೆ.

ರೋಗ ನಿಯಂತ್ರಣಕ್ಕೇ ಬಾರದೆ ಜಾಗತಿಕ ಮಟ್ಟದಲ್ಲಿ ಹರಡಿಬಿಟ್ಟರೆ? ಆಗ ಅದು 'ಪ್ಯಾನ್‌ಡೆಮಿಕ್' (ಜಾಗತಿಕ ಸೋಂಕು) ಎನಿಸಿಕೊಳ್ಳುತ್ತದೆ. ರೋಗವೊಂದನ್ನು ಪ್ಯಾನ್‌ಡೆಮಿಕ್ ಎಂದು ಕರೆದಾಗ ಅದು ಸರ್ವವ್ಯಾಪಿಯಾಗಿ ಹರಡುತ್ತಿದೆ ಎಂದು ಅರ್ಥ. ಹಿಂದಿನ ಹಂತಗಳನ್ನೆಲ್ಲ ಮೀರಿ ಆತಂಕಕಾರಿಯಾಗಿ ವ್ಯಾಪಿಸುತ್ತಿರುವ COVID-19 ಅನ್ನು ಕಳೆದ ಮಾರ್ಚ್ ೧೧ರಂದು ವಿಶ್ವ ಆರೋಗ್ಯ ಸಂಸ್ಥೆ ಪ್ಯಾನ್‌ಡೆಮಿಕ್ ಎಂದು ಗುರುತಿಸಿದೆ. ಯಾವುದೇ ಕೊರೊನಾವೈರಸ್‌ನಿಂದ ಹರಡಿರುವ ಮೊದಲ ಪ್ಯಾನ್‌ಡೆಮಿಕ್ ಇದು.

ಅಂದಹಾಗೆ COVID-19 ಒಂದು 'ಇನ್‌ಫೋಡೆಮಿಕ್' ಕೂಡ ಹೌದು ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆಯೇ ಹೇಳಿತ್ತು. ಈ ರೋಗದ ಬಗ್ಗೆ ಸತ್ಯ-ಸುಳ್ಳುಗಳೆರಡೂ ಸೇರಿದ ಮಾಹಿತಿ ವಿಪರೀತ ಪ್ರಮಾಣದಲ್ಲಿ ಸೃಷ್ಟಿಯಾಗಿ, ಹರಡಿ, ಉಂಟುಮಾಡುತ್ತಿರುವ ಅವಾಂತರಕ್ಕೆ (ಗಮನಿಸಿ, COVID-19 ರೋಗಕ್ಕಲ್ಲ) ಆ ಸಂಸ್ಥೆ ಕೊಟ್ಟಿರುವ ಹೆಸರು ಇದು.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com