ಪ್ರತಿನಿತ್ಯ ನಮ್ಮ ಸಂಪರ್ಕಕ್ಕೆ ಬರುವ ಹಲವು ವಸ್ತುಗಳ ಮೇಲ್ಮೈಯಲ್ಲಿ ರೋಗಕಾರಕಗಳು ಇರಬಹುದು!
ಪ್ರತಿನಿತ್ಯ ನಮ್ಮ ಸಂಪರ್ಕಕ್ಕೆ ಬರುವ ಹಲವು ವಸ್ತುಗಳ ಮೇಲ್ಮೈಯಲ್ಲಿ ರೋಗಕಾರಕಗಳು ಇರಬಹುದು!

ಸೋಂಕುನಾಶಕ ಎಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಪ್ರತಿನಿತ್ಯ ನಮ್ಮ ಸಂಪರ್ಕಕ್ಕೆ ಬರುವ ಹಲವು ವಸ್ತುಗಳ ಮೇಲ್ಮೈಯಲ್ಲಿ ರೋಗಕಾರಕಗಳು ಇರಬಹುದು. ಕೋವಿಡ್-೧೯ ಉದಾಹರಣೆಯನ್ನೇ ನೋಡಿದರೆ ಬಾಗಿಲಿನ ಹಿಡಿ, ಅಂಗಡಿಯ ಕಪಾಟು, ಲಿಫ್ಟಿನ ಗುಂಡಿ, ಎಟಿಎಂ ಪರದೆ ಮುಂತಾದ ಯಾವುದೇ ಮೇಲ್ಮೈಯಲ್ಲಿ ಕೊರೊನಾವೈರಸ್ ಇರುವುದು ಸಾಧ್ಯ.

ಇಂತಹ ಮೇಲ್ಮೈಗಳನ್ನು ಸ್ವಚ್ಛಗೊಳಿಸಲು ಸೋಂಕುನಾಶಕಗಳು (ಡಿಸ್‌ಇನ್‌ಫೆಕ್ಟೆಂಟ್) ನಮಗೆ ನೆರವಾಗುತ್ತವೆ. ಹೆಸರು ಸೋಂಕುನಾಶಕವೆಂದಿದ್ದರೂ ಇವು ನಿಜವಾಗಿ ನಾಶಪಡಿಸುವುದು ಸೋಂಕು ಉಂಟುಮಾಡುವ ರೋಗಕಾರಕಗಳನ್ನು. ಮೇಲೆ ಹೇಳಿದಂತಹ ಯಾವುದೇ ಜಡ (ಇನರ್ಟ್) ಮೇಲ್ಮೈಯಲ್ಲಿ ಇರಬಹುದಾದ ಸೂಕ್ಷ್ಮಜೀವಿಗಳನ್ನು ನಾಶಪಡಿಸುವ ಮೂಲಕ ಇವು ಆ ಜೀವಿಗಳಿಂದ ಸೋಂಕು ಹರಡುವ ಸಾಧ್ಯತೆಯನ್ನು ಕಡಿಮೆಮಾಡುತ್ತವೆ.

ಮನೆಯನ್ನು ಶುಚಿಗೊಳಿಸುವುದರಿಂದ ಪ್ರಾರಂಭಿಸಿ ಆಸ್ಪತ್ರೆಗಳನ್ನು ಸೋಂಕುಮುಕ್ತವಾಗಿರಿಸುವವರೆಗೆ ಬೇರೆಬೇರೆ ಉದ್ದೇಶಗಳಿಗೆ ಬೇರೆಬೇರೆ ರೀತಿಯ ಸೋಂಕುನಾಶಕಗಳು ಬಳಕೆಯಾಗುತ್ತವೆ. ನೆಲ ಒರೆಸುವಾಗ ಬಳಸುವ ಫಿನಾಯಿಲ್, ನೀರಿನ ಶುದ್ಧೀಕರಣದಲ್ಲಿ ಉಪಯೋಗಿಸುವ ಬ್ಲೀಚಿಂಗ್ ಪೌಡರ್ ಇವೆಲ್ಲ ಸೋಂಕುನಾಶಕಗಳೇ.

ನಮ್ಮ ಸ್ವಚ್ಛತೆಗೆ ಸೋಪು-ನೀರು ಅಥವಾ ಸ್ಯಾನಿಟೈಸರ್ ಬಳಸಿದ ಹಾಗೆ ಜಡ ಮೇಲ್ಮೈಗಳ ಸ್ವಚ್ಛತೆಗೆ ಸೋಂಕುನಾಶಕಗಳನ್ನು ಬಳಸಲಾಗುತ್ತದೆ. ಸೋಪು-ಸ್ಯಾನಿಟೈಸರ್‌ಗಳ ಹೋಲಿಕೆಯಲ್ಲಿ ಸೋಂಕುನಾಶಕಗಳು ಹೆಚ್ಚು ತೀಕ್ಷ್ಣವಾಗಿರುವುದರಿಂದ ಅವು ನಮ್ಮ ಚರ್ಮದ ಮೇಲೆ ದುಷ್ಪರಿಣಾಮ ಉಂಟುಮಾಡಬಲ್ಲವು. ಆಕಸ್ಮಿಕವಾಗಿಯೋ ಉದ್ದೇಶಪೂರ್ವಕವಾಗಿಯೋ ಅವನ್ನು ಸೇವಿಸುವುದು ಅಪಾಯಕಾರಿಯೂ ಆಗಬಹುದು.

ಸಾಮಾನ್ಯ ಉದ್ದೇಶದ ಸೋಂಕುನಾಶಕಗಳನ್ನು ಮೊಬೈಲ್ ಫೋನಿನಂತಹ ಸೂಕ್ಷ್ಮ ಮೇಲ್ಮೈಗಳಲ್ಲಿ ಬಳಸುವುದು ಕೂಡ ಒಳ್ಳೆಯದಲ್ಲ. ಅವುಗಳಲ್ಲಿರುವ ಕಟು ರಾಸಾಯನಿಕಗಳು ನಿಮ್ಮ ಫೋನನ್ನು ಹಾಳುಮಾಡಬಹುದು. ಹಾಗೆ ಉಪಯೋಗಿಸಲೇಬೇಕೆಂದರೆ ಇದಕ್ಕಾಗಿಯೇ ಸಿಗುವ ವಿಶೇಷ ಉತ್ಪನ್ನಗಳನ್ನು - ಫೋನಿನ ನಿರ್ಮಾತೃಗಳ ಸಲಹೆಗೆ ಅನುಸಾರವಾಗಿ - ಬಳಸುವುದು ಒಳ್ಳೆಯದು. ಅದಕ್ಕಿಂತಲೂ ನಮ್ಮ ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಹಾಗೂ ಫೋನನ್ನು ಇತರರೊಡನೆ ಹಂಚಿಕೊಳ್ಳದಿರುವಂತಹ ಕ್ರಮಗಳೇ ಹೆಚ್ಚು ಪರಿಣಾಮಕಾರಿ!

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com