ಕೋವಿಡ್-೧೯ರಿಂದಾಗಿ ನಿಧನರಾದ ಹಲವು ವ್ಯಕ್ತಿಗಳು ಅದರ ಹೊರತಾಗಿ ಬೇರೆ ಕಾಯಿಲೆಗಳಿಂದಲೂ ಬಳಲುತ್ತಿದ್ದರು ಎಂದು ಸುದ್ದಿಸಂಸ್ಥೆಗಳು ವರದಿಮಾಡಿರುವುದನ್ನು ನೀವು ನೋಡಿರಬಹುದು!
ಕೋವಿಡ್-೧೯ರಿಂದಾಗಿ ನಿಧನರಾದ ಹಲವು ವ್ಯಕ್ತಿಗಳು ಅದರ ಹೊರತಾಗಿ ಬೇರೆ ಕಾಯಿಲೆಗಳಿಂದಲೂ ಬಳಲುತ್ತಿದ್ದರು ಎಂದು ಸುದ್ದಿಸಂಸ್ಥೆಗಳು ವರದಿಮಾಡಿರುವುದನ್ನು ನೀವು ನೋಡಿರಬಹುದು!
ಕೊರೊನಾಲಜಿ

ಕೋಮಾರ್ಬಿಡಿಟಿ ಅಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಟಿ. ಜಿ. ಶ್ರೀನಿಧಿ

ಕೋವಿಡ್-೧೯ರಿಂದಾಗಿ ನಿಧನರಾದ ಹಲವು ವ್ಯಕ್ತಿಗಳು ಅದರ ಹೊರತಾಗಿ ಬೇರೆ ಕಾಯಿಲೆಗಳಿಂದಲೂ ಬಳಲುತ್ತಿದ್ದರು ಎಂದು ಸುದ್ದಿಸಂಸ್ಥೆಗಳು ವರದಿಮಾಡಿರುವುದನ್ನು ನೀವು ನೋಡಿರಬಹುದು. ಹೀಗೆ ಯಾವುದೇ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚು ಸಂಖ್ಯೆಯ ಆರೋಗ್ಯ ಸಂಬಂಧಿ ಸಮಸ್ಯೆಗಳು ಏಕಕಾಲದಲ್ಲೇ ಬಾಧಿಸುವುದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ comorbidity ಎಂದು ಹೆಸರು.

ನಿಘಂಟಿನಲ್ಲಿ morbid ಎಂಬ ಪದಕ್ಕೆ 'ರೋಗಸೂಚಕ ಲಕ್ಷಣಗಳಿರುವ' ಎಂಬ ಅರ್ಥ ದೊರಕುತ್ತದೆ. ಹೀಗಿರುವ ಪರಿಸ್ಥಿತಿ morbidity - ರೋಗಗ್ರಸ್ತತೆ ಅಥವಾ ಅಸ್ವಸ್ಥತೆ. ಒಬ್ಬ ವ್ಯಕ್ತಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ರೋಗಗಳಿಂದ ಅಸ್ವಸ್ಥನಾಗಿದ್ದರೆ ಅದೇ comorbidity. ಉದಾಹರಣೆಗೆ, ಒಬ್ಬ ವ್ಯಕ್ತಿಯಲ್ಲಿ ಅಧಿಕ ರಕ್ತದೊತ್ತಡ ಹಾಗೂ ಡಯಾಬಿಟಿಸ್ ಎರಡೂ ಇದ್ದರೆ ಅದು comorbidityಯ ಉದಾಹರಣೆ. ಈ ಪದವನ್ನು ಅಮೆರಿಕಾದ ವೈದ್ಯ ಆಲ್ವನ್ ರಿಚರ್ಡ್ ಫೈನ್‌ಸ್ಟೈನ್ ೧೯೭೦ರಲ್ಲಿ ಮೊದಲ ಬಾರಿಗೆ ಪರಿಚಯಿಸಿದರು ಎನ್ನಲಾಗಿದೆ.

ಈಗಾಗಲೇ ಅನಾರೋಗ್ಯಪೀಡಿತರಾಗಿರುವ ವ್ಯಕ್ತಿಗಳಲ್ಲಿ ರೋಗರಕ್ಷೆ ದುರ್ಬಲವಾಗಿರುವುದು ಸಾಧ್ಯ. ಮೊದಲೇ ಇದ್ದ ರೋಗದ ಜೊತೆಗೆ ಇನ್ನೊಂದು ರೋಗವೂ ಸೇರಿಕೊಂಡಾಗ ಅವು ಒಂದನ್ನೊಂದು ಪ್ರಭಾವಿಸುತ್ತಾ ಎರಡರ ಪರಿಣಾಮಗಳನ್ನೂ ತೀವ್ರಗೊಳಿಸಬಹುದು.

ಇತರ ಸಾಂಕ್ರಾಮಿಕ ಕಾಯಿಲೆಗಳಂತೆ ಕೋವಿಡ್-೧೯ಕ್ಕೂ ಇದು ಅನ್ವಯವಾಗುವುದರಿಂದ, ಅದು ಕೂಡ ಇಂತಹ ವ್ಯಕ್ತಿಗಳಿಗೆ ಹೆಚ್ಚಿನ ಅಪಾಯ ಉಂಟುಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಮೊದಲೇ ಅನಾರೋಗ್ಯಪೀಡಿತರಾಗಿರುವ ವ್ಯಕ್ತಿಗಳು ಕೋವಿಡ್-೧೯ ವಿಷಯದಲ್ಲಿ ಉಳಿದವರಿಗಿಂತ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ್ದು ಅನಿವಾರ್ಯ ಎಂದು ವೈದ್ಯರು ಹೇಳುತ್ತಾರೆ.

ಇಂತಹ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವಾಗ ಅವರನ್ನು ಬಾಧಿಸುತ್ತಿರುವ ಎಲ್ಲ ರೋಗಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕಾದ್ದರಿಂದ ಆ ಪ್ರಕ್ರಿಯೆ ಹೆಚ್ಚು ಸಂಕೀರ್ಣವಾಗಿರಬಹುದು. ಈ ರೀತಿಯ ರೋಗಿಗಳ ಚಿಕಿತ್ಸೆ ವೈದ್ಯರಿಗೆ ಅನೇಕ ಸವಾಲುಗಳನ್ನು ಒಡ್ಡುತ್ತದೆ.

ಸೌಜನ್ಯ: ವಿಜಯ ಕರ್ನಾಟಕ