ಕೋವಿಡ್-೧೯ ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ಅವರ ಮೂಗು-ಬಾಯಿಗಳಿಂದ ಹೊರಬರುವ ಸಣ್ಣ ಹನಿಗಳಲ್ಲಿ ಕೊರೊನಾವೈರಸ್ ಇರಬಹುದು!
ಕೋವಿಡ್-೧೯ ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ಅವರ ಮೂಗು-ಬಾಯಿಗಳಿಂದ ಹೊರಬರುವ ಸಣ್ಣ ಹನಿಗಳಲ್ಲಿ ಕೊರೊನಾವೈರಸ್ ಇರಬಹುದು!

ಕಮ್ಯೂನಿಟಿ ಟ್ರಾನ್ಸ್‌ಮಿಶನ್ ಅಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ
Published on

ಕೋವಿಡ್-೧೯ ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ಅವರ ಮೂಗು-ಬಾಯಿಗಳಿಂದ ಹೊರಬರುವ ಸಣ್ಣ ಹನಿಗಳಲ್ಲಿ ಕೊರೊನಾವೈರಸ್ ಇರಬಹುದು, ಮತ್ತು ನಮ್ಮ ಸಂಪರ್ಕಕ್ಕೆ ಬಂದಾಗ ಅದು ನಮ್ಮಲ್ಲೂ ರೋಗವನ್ನು ಉಂಟುಮಾಡಬಲ್ಲದು. ಹತ್ತಿರ ನಿಂತು ಮಾತನಾಡುವಾಗಲೂ ಹೀಗೆ ರೋಗ ಹರಡುವುದು ಸಾಧ್ಯ ಎನ್ನಲಾಗಿದೆ.

ಹೀಗೆ ಯಾವುದೋ ಒಂದು ಮಾರ್ಗದಲ್ಲಿ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡಿದ್ದು ಪತ್ತೆಯಾದಾಗ, ವೈದ್ಯರು ಮತ್ತು ಅಧಿಕಾರಿಗಳು ಅದು ಯಾರಿಂದ ಬಂದಿರಬಹುದು ಎಂದು ಪತ್ತೆಮಾಡಲು ಪ್ರಯತ್ನಿಸುತ್ತಾರೆ. 'ಕಾಂಟ್ಯಾಕ್ಟ್ ಟ್ರೇಸಿಂಗ್' ಪ್ರಕ್ರಿಯೆಯ ಮೂಲಕ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ಗುರುತಿಸಿ ಅವರ ಆರೋಗ್ಯದ ಮೇಲೆ ನಿಗಾ ಇಡುತ್ತಾರೆ.

ಕೋವಿಡ್-೧೯ ಸೋಂಕಿತರು ಹಾಗೂ ಶಂಕಿತರನ್ನು ಸಾಧ್ಯವಾದಷ್ಟೂ ಬೇಗ ಗುರುತಿಸುವ ಮೂಲಕ ರೋಗ ಹರಡುವುದನ್ನು ನಿಧಾನಿಸುವುದು ಈ ಪ್ರಕ್ರಿಯೆಯ ಉದ್ದೇಶ. ಸೋಂಕು ಎಲ್ಲಿಂದ ಬಂತೆಂದು ಪತ್ತೆಮಾಡಲು ಸಾಧ್ಯವಾದರೆ ಈ ಎಲ್ಲರನ್ನೂ ಬೇರ್ಪಡಿಸುವುದು, ಸೂಕ್ತ ಚಿಕಿತ್ಸೆ ನೀಡುವುದು, ಹಾಗೂ ಆ ಮೂಲಕ ಸೋಂಕಿನ ಸರಪಳಿಯನ್ನು ಮುರಿಯುವುದು ಸಾಧ್ಯವಾಗುತ್ತದೆ.

ಒಂದುವೇಳೆ ಸೋಂಕು ಇಡೀ ಸಮುದಾಯದಲ್ಲಿ ಹರಡಿ, ಯಾರಿಗೆ ಯಾರಿಂದ ಸೋಂಕು ತಗುಲಿದೆಯೆಂದು ಗುರುತಿಸಲು ಸಾಧ್ಯವಾಗದಿದ್ದರೆ ರೋಗ ಬಹಳ ಕ್ಷಿಪ್ರವಾಗಿ ಹರಡುವುದು ಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ಸೋಂಕಿತರ ನೇರ ಸಂಪರ್ಕಕ್ಕೆ ಬಂದಿಲ್ಲವೆಂದು ಭಾವಿಸುವವರಲ್ಲೂ ಸೋಂಕು ಕಾಣಿಸಿಕೊಳ್ಳುತ್ತದೆ, ಅವರಿಂದ ಅದು ಇನ್ನಷ್ಟು ಜನಕ್ಕೆ ಹರಡುತ್ತದೆ, ವೈದ್ಯಕೀಯ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುತ್ತದೆ ಹಾಗೂ ಒಟ್ಟಾರೆಯಾಗಿ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತದೆ.

ಈ ಆತಂಕಕಾರಿ ಪರಿಸ್ಥಿತಿಯನ್ನು ಸಮುದಾಯ ಪ್ರಸಾರಣೆ, ಅಥವಾ 'ಕಮ್ಯೂನಿಟಿ ಟ್ರಾನ್ಸ್‌ಮಿಶನ್' ಎಂದು ಗುರುತಿಸಲಾಗುತ್ತದೆ. ಇದು ಕೋವಿಡ್-೧೯ ಕಾಯಿಲೆ ಹರಡುವಿಕೆಯ ಮೂರನೇ ಹಂತ.

ಸೌಜನ್ಯ: ವಿಜಯ ಕರ್ನಾಟಕ

logo
ಇಜ್ಞಾನ Ejnana
www.ejnana.com