ಯಾವುದೇ ರೋಗಕ್ಕೆ ಚಿಕಿತ್ಸೆ ನೀಡುವಾಗ ಅದು ಯಾವ ರೋಗಕಾರಕದಿಂದ ಉಂಟಾಗಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಸೂಕ್ತವಾದ ಔಷಧಗಳನ್ನು ನೀಡಲಾಗುತ್ತದೆ.
ಯಾವುದೇ ರೋಗಕ್ಕೆ ಚಿಕಿತ್ಸೆ ನೀಡುವಾಗ ಅದು ಯಾವ ರೋಗಕಾರಕದಿಂದ ಉಂಟಾಗಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಸೂಕ್ತವಾದ ಔಷಧಗಳನ್ನು ನೀಡಲಾಗುತ್ತದೆ.
ಕೊರೊನಾಲಜಿ

ಆಂಟಿವೈರಲ್ ಡ್ರಗ್ ಅಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಟಿ. ಜಿ. ಶ್ರೀನಿಧಿ

ಕೋವಿಡ್-೧೯ ರೋಗವನ್ನು ಉಂಟುಮಾಡುವುದು 'severe acute respiratory syndrome coronavirus 2 (SARS-CoV-2)' ಎಂಬ ರೋಗಕಾರಕ. ಹೆಸರೇ ಹೇಳುವಂತೆ ಇದೊಂದು ವೈರಸ್. ಇದೇ ರೀತಿ ಬ್ಯಾಕ್ಟೀರಿಯಾ, ಫಂಗಸ್ ಮುಂತಾದ ಬೇರೆಬೇರೆ ರೋಗಕಾರಕಗಳು ಬೇರೆಬೇರೆ ರೋಗಗಳಿಗೆ ಕಾರಣವಾಗಬಲ್ಲವು.

ಯಾವುದೇ ರೋಗಕ್ಕೆ ಚಿಕಿತ್ಸೆ ನೀಡುವಾಗ ಅದು ಯಾವ ರೋಗಕಾರಕದಿಂದ ಉಂಟಾಗಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಸೂಕ್ತವಾದ ಔಷಧಗಳನ್ನು ನೀಡಲಾಗುತ್ತದೆ. ನಮಗೆಲ್ಲ ಪರಿಚಯವಿರುವ 'ಆಂಟಿಬಯಾಟಿಕ್' ಔಷಧಗಳು ಬ್ಯಾಕ್ಟೀರಿಯಾದಿಂದ ಉಂಟಾದ ಸೋಂಕುಗಳ ಚಿಕಿತ್ಸೆಯಲ್ಲಿ ಬಳಕೆಯಾಗುತ್ತವೆ.

ಇದೇರೀತಿ ವೈರಸ್‌ನಿಂದ ಉಂಟಾಗುವ ಸೋಂಕುಗಳಿಗೆ ನೀಡುವ ಔಷಧಗಳನ್ನು 'ಆಂಟಿವೈರಲ್ ಡ್ರಗ್ಸ್' ಎಂದು ಕರೆಯುತ್ತಾರೆ. ರೋಗಕಾರಕ ವೈರಸ್‌ಗಳ ಬೆಳವಣಿಗೆಯನ್ನು ತಡೆಯುವ ಮೂಲಕ ಈ ಔಷಧಗಳು ಕೆಲಸಮಾಡುತ್ತವೆ,

ಬಹುತೇಕ ಆಂಟಿವೈರಲ್ ಔಷಧಗಳು ನಿರ್ದಿಷ್ಟ ವೈರಸ್‌ನ ವಿರುದ್ಧ ಕೆಲಸ ಮಾಡುತ್ತವೆ. ಒಂದು ವಿಧದ ವೈರಸ್‌‌ ಅನ್ನು ಗುರಿಯಾಗಿಟ್ಟುಕೊಂಡು ರೂಪಿಸಲಾದ ಔಷಧ ಬೇರೆಯ ವೈರಸ್‌ಗಳ ವಿರುದ್ಧ ಪರಿಣಾಮಕಾರಿಯಾಗಲಾರದು. ಒಂದಕ್ಕಿಂತ ಹೆಚ್ಚಿನ ವೈರಸ್‌ಗಳ ವಿರುದ್ಧವೂ ಪರಿಣಾಮಕಾರಿಯಾಗಬಲ್ಲ ಔಷಧಗಳಿಗೆ ಬ್ರಾಡ್-ಸ್ಪೆಕ್ಟ್ರಮ್ ಆಂಟಿವೈರಲ್‌ಗಳೆಂದು ಹೆಸರು.

ವೈರಸ್‌ಗಳು ತಮ್ಮ ಬೆಳವಣಿಗೆಗೆ ರೋಗಿಯ ದೇಹದ ಕೋಶಗಳನ್ನು ಬಳಸಿಕೊಳ್ಳುವುದರಿಂದ, ಅವುಗಳನ್ನು ನಿವಾರಿಸುವ ಪ್ರಯತ್ನದಲ್ಲಿ ದೇಹದ ಕೋಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಇದರ ಜೊತೆ ವೈರಸ್‌ಗಳಲ್ಲಿ ಕಂಡುಬರುವ ಬದಲಾವಣೆಗಳು (ವೈರಲ್ ವೇರಿಯೇಶನ್) ಕೂಡ ಅವುಗಳ ವಿರುದ್ಧದ ಹೋರಾಟವನ್ನು ಸಂಕೀರ್ಣವಾಗಿಸುತ್ತದೆ. ಈ ಎರಡೂ ಕಾರಣಗಳಿಂದಾಗಿ ಆಂಟಿವೈರಲ್ ಔಷಧಗಳನ್ನು ಸಿದ್ಧಪಡಿಸಲು ಸಾಕಷ್ಟು ಸಮಯ ಬೇಕಾಗುತ್ತದೆ.

ಸದ್ಯ ಕೋವಿಡ್-೧೯ಕ್ಕೆ ಯಾವುದೇ ನಿರ್ದಿಷ್ಟ ಔಷಧ ಅಥವಾ ಚಿಕಿತ್ಸೆ ಇಲ್ಲ. ಆದರೆ ಈಗಾಗಲೇ ಲಭ್ಯವಿರುವ ಕೆಲವು ಆಂಟಿವೈರಲ್ ಔಷಧಗಳನ್ನು ಕೋವಿಡ್-೧೯ ಚಿಕಿತ್ಸೆಯಲ್ಲಿ ಪರೀಕ್ಷಾರ್ಥವಾಗಿ ಬಳಸಲಾಗುತ್ತಿದೆ.

ಸೌಜನ್ಯ: ವಿಜಯ ಕರ್ನಾಟಕ