ರೋಗಕಾರಕದ ದಾಳಿ ನಡೆದಾಗ ಅವುಗಳ ವಿರುದ್ಧ ಹೋರಾಡುವುದು, ಸೋಂಕು ತಗಲದಂತೆ ನೋಡಿಕೊಳ್ಳುವುದು ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಥೆಯ (ಇಮ್ಯೂನ್ ಸಿಸ್ಟಂ) ಕೆಲಸ.
ರೋಗಕಾರಕದ ದಾಳಿ ನಡೆದಾಗ ಅವುಗಳ ವಿರುದ್ಧ ಹೋರಾಡುವುದು, ಸೋಂಕು ತಗಲದಂತೆ ನೋಡಿಕೊಳ್ಳುವುದು ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಥೆಯ (ಇಮ್ಯೂನ್ ಸಿಸ್ಟಂ) ಕೆಲಸ.

ಪ್ರತಿಕಾಯ ಅಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ನಮ್ಮಲ್ಲಿ ರೋಗಗಳನ್ನು ಉಂಟುಮಾಡುವ ವೈರಸ್, ಬ್ಯಾಕ್ಟೀರಿಯಾ ಮುಂತಾದ ರೋಗಕಾರಕಗಳಲ್ಲಿ (ಪ್ಯಾಥೋಜೆನ್) 'ಪ್ರತಿಜನಕ'ವೆಂಬ (ಆಂಟಿಜೆನ್) ಭಾಗವೂ ಇರುತ್ತದೆ. ರೋಗಕಾರಕವನ್ನು ನಮ್ಮ ದೇಹದ ಮೇಲೆ ದಾಳಿ ನಡೆಸುತ್ತಿರುವ ಶತ್ರುಸೈನಿಕ ಎಂದುಕೊಂಡರೆ, ಪ್ರತಿಜನಕವು ಆತನ ಸಮವಸ್ತ್ರ ಇದ್ದಹಾಗೆ. ಬೇರೆಬೇರೆ ದೇಶದ ಸೈನಿಕರಿಗೆ ಬೇರೆಬೇರೆ ಸಮವಸ್ತ್ರ ಇದ್ದಹಾಗೆ ಬೇರೆಬೇರೆ ರೋಗಕಾರಕಗಳಲ್ಲಿ ಬೇರೆಬೇರೆ ಪ್ರತಿಜನಕ ಇರುತ್ತದೆ.

ರೋಗಕಾರಕದ ದಾಳಿ ನಡೆದಾಗ ಅವುಗಳ ವಿರುದ್ಧ ಹೋರಾಡುವುದು, ಸೋಂಕು ತಗಲದಂತೆ ನೋಡಿಕೊಳ್ಳುವುದು ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಥೆಯ (ಇಮ್ಯೂನ್ ಸಿಸ್ಟಂ) ಕೆಲಸ. ರೋಗಕಾರಕದಲ್ಲಿರುವ ಪ್ರತಿಜನಕವನ್ನು ಗುರುತಿಸುವ ಮೂಲಕ ದಾಳಿ ಮಾಡಿರುವುದು ಯಾವ ರೋಗಕಾರಕವೆಂದು ಪತ್ತೆಮಾಡುವ ಈ ವ್ಯವಸ್ಥೆ, ಅದಕ್ಕೆ ತಕ್ಕುದಾದ ದೇಹರಕ್ಷಕ ಪದಾರ್ಥವನ್ನು ಉತ್ಪಾದಿಸುತ್ತದೆ. ಇದೇ ಪ್ರತಿಕಾಯ (ಆಂಟಿಬಾಡಿ). ಇದು ನಿರ್ದಿಷ್ಟ ರೋಗಕಾರಕದ ವಿರುದ್ಧ ಆಯುಧದಂತೆ ಕೆಲಸ ಮಾಡುತ್ತದೆ.

ಎಲ್ಲರ ದೇಹದ ಪ್ರತಿರಕ್ಷಣ ವ್ಯವಸ್ಥೆಯೂ ಒಂದೇ ರೀತಿ ಇರುವುದಿಲ್ಲ. ಈ ವ್ಯವಸ್ಥೆ ಸದೃಢವಾಗಿರುವವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಪ್ರತಿರಕ್ಷಣ ವ್ಯವಸ್ಥೆ ಕುಂಠಿತವಾಗಿರುವವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು.

ಸಾಮಾನ್ಯವಾಗಿ ಪ್ರತಿರಕ್ಷಣ ವ್ಯವಸ್ಥೆಯು ಬೇರೆಬೇರೆ ರೋಗಕಾರಕಗಳ ವಿರುದ್ಧ ನಡೆಸಿದ ಹೋರಾಟವನ್ನು ನೆನಪಿಟ್ಟುಕೊಂಡಿರುತ್ತದೆ, ಮತ್ತು ಅದೇ ರೋಗಕಾರಕ ಇನ್ನೊಮ್ಮೆ ದಾಳಿ ಮಾಡಿದಾಗ ಬೇಗನೆ ಪ್ರತಿದಾಳಿ ನಡೆಸುತ್ತದೆ. ಆದರೆ ಪ್ರತಿಯೊಂದು ರೋಗಕಾರಕದ ಪ್ರತಿಜನಕವೂ ವಿಭಿನ್ನವಾಗಿರುವುದರಿಂದ, ಒಂದು ರೋಗಕಾರಕದ ವಿರುದ್ಧವಾಗಿ ಉತ್ಪತ್ತಿಯಾದ ಪ್ರತಿಕಾಯ ಮತ್ತೊಂದರ ವಿರುದ್ಧ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ, ಹೊಸ ರೋಗಕಾರಕಗಳು ಕಾಣಿಸಿಕೊಂಡಾಗ ಅವುಗಳನ್ನು ಯಶಸ್ವಿಯಾಗಿ ವಿರೋಧಿಸುವ ಶಕ್ತಿ ಬೆಳೆಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಕೋವಿಡ್-೧೯ ರೋಗಕ್ಕೆ ಕಾರಣವಾದ ಕೊರೊನಾವೈರಸ್ ವಿಷಯದಲ್ಲಿ ಆಗುತ್ತಿರುವುದು ಇದೇ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com