ರೋಗಕಾರಕಗಳ ಪೈಕಿ ವೈರಸ್ ಕೂಡ ಒಂದು. ಅವುಗಳ ರಚನೆಯೇ ವಿಚಿತ್ರ!
ರೋಗಕಾರಕಗಳ ಪೈಕಿ ವೈರಸ್ ಕೂಡ ಒಂದು. ಅವುಗಳ ರಚನೆಯೇ ವಿಚಿತ್ರ!

ವೈರಸ್ ಅಂದರೆ ಏನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ನಮ್ಮ ಸುತ್ತಮುತ್ತ ಇರುವ ಅಸಂಖ್ಯ ಚಿಕ್ಕ-ದೊಡ್ಡ ಜೀವಿಗಳ ನಡುವೆ ನಮ್ಮ ಕಣ್ಣಿಗೆ ಕಾಣದಷ್ಟು ಸಣ್ಣದಾದ ಜೀವಿಗಳೂ ಇವೆ. ಮಣ್ಣಿಗೆ ಪೋಷಕಾಂಶಗಳನ್ನು ಸೇರಿಸುವುದು, ರುಚಿಯಾದ ಮೊಸರು ತಯಾರಿಸುವುದು, ಇಡ್ಲಿ ಮೃದುವಾಗಿರುವಂತೆ ನೋಡಿಕೊಳ್ಳುವುದು - ಹೀಗೆ ನಮಗೆ ಉಪಯುಕ್ತವಾದ ಹಲವು ಕೆಲಸಗಳನ್ನು ಇಂತಹ ಕೆಲವು ಜೀವಿಗಳು ಮಾಡಿಕೊಡುತ್ತವೆ. ಹಾಗೆಂದು ಕಣ್ಣಿಗೆ ಕಾಣದ ಜೀವಿಗಳೆಲ್ಲ ನಮ್ಮ ಸ್ನೇಹಿತರೇನಲ್ಲ. ಈ ಪೈಕಿ ಕೆಲವು ನಮಗೆ ರೋಗಗಳನ್ನೂ ಅಂಟಿಸಬಲ್ಲವು. ರೋಗಕಾರಕಗಳು (ಪ್ಯಾಥೋಜೆನ್ಸ್) ಎಂದು ಕರೆಯುವುದು ಇವನ್ನೇ.

ರೋಗಕಾರಕಗಳ ಪೈಕಿ ವೈರಸ್ ಕೂಡ ಒಂದು. ಅವುಗಳ ರಚನೆಯೇ ವಿಚಿತ್ರ. ಅವು ಬದುಕಬೇಕೆಂದರೆ ಯಾವುದಾದರೂ ಜೀವಂತ ಕೋಶವನ್ನು (ಸೆಲ್) ಅವಲಂಬಿಸಲೇಬೇಕು. ಹೀಗಾಗಿ ಅವು ಇತರ ಜೀವಿಗಳನ್ನು ಕಾಡುತ್ತವೆ. ಮನುಷ್ಯರ - ಪ್ರಾಣಿಪಕ್ಷಿಗಳ ದೇಹದೊಳಕ್ಕೆ, ಕಡೆಗೆ ಸೂಕ್ಷ್ಮಜೀವಿಗಳ ಒಳಗೂ ಅತಿಕ್ರಮ ಪ್ರವೇಶ ಮಾಡಬಲ್ಲ ವೈರಸ್‌ ಪ್ರಭೇದಗಳಿವೆ. ಒಮ್ಮೆ ಪ್ರವೇಶಿಸಿದರೆ ಆಯಿತು: ವೇಗವಾಗಿ ಹರಡುತ್ತ ಅವು ಅಲ್ಲಿನ ಜೀವಕೋಶಗಳನ್ನು ಹಾಳುಮಾಡುತ್ತವೆ, ಅನಾರೋಗ್ಯಕ್ಕೆ ಕಾರಣವಾಗುತ್ತವೆ.

ನೆಗಡಿ ಮತ್ತು ಜ್ವರದಂತಹ ಸಾಮಾನ್ಯ ಕಾಯಿಲೆಗಳಿಂದ ಪ್ರಾರಂಭಿಸಿ ಚಿಕುನ್‌ಗುನ್ಯಾ, ಡೆಂಗಿ, ಹಕ್ಕಿಜ್ವರ, ಸಾರ್ಸ್, ಏಡ್ಸ್ ಮುಂತಾದ ಹಲವು ರೋಗಗಳಿಗೆ ವೈರಸ್‌ ಕಾರಣ. ಬೇರೆಬೇರೆ ಬಗೆಯ ವೈರಸ್‌ ಬೇರೆಬೇರೆ ರೀತಿಯ ಕಾಯಿಲೆಗಳನ್ನು ಉಂಟುಮಾಡುತ್ತವೆ.

ಕೊರೊನಾವೈರಸ್ ಎನ್ನುವುದು ಒಂದು ಬಗೆಯ ವೈರಸ್‌ ಗುಂಪಿನ ಹೆಸರು. ಈ ಪೈಕಿ ಒಂದು ವಿಧದ ಕೊರೊನಾ‌ವೈರಸ್‌ ನೆಗಡಿಗೆ ಕಾರಣವಾದರೆ ಇನ್ನೊಂದು ಸಾರ್ಸ್ ಕಾಯಿಲೆ ತರುತ್ತದೆ. 'ಕೊರೊನಾವೈರಸ್ ಡಿಸೀಸ್ - ೨೦೧೯' (COVID-19) ಕೂಡ ಅಷ್ಟೇ, ತಳಿಗುಣ ರೂಪಾಂತರವಾಗಿರುವ ಒಂದು ಹೊಸ ವಿಧದ ಕೊರೊನಾವೈರಸ್ ಈ ರೋಗವನ್ನು ಹರಡುತ್ತಿದೆ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com