ವೆಂಟಿಲೇಟರ್ ಅಂದರೆ ಏನು?
ಆಕ್ಸಿಜನ್ ಸಾಕಷ್ಟು ಪ್ರಮಾಣದಲ್ಲಿ ದೊರಕದ ಸಂದರ್ಭದಲ್ಲಿ ಕೊಳವೆ ಅಥವಾ ಮಾಸ್ಕ್ ಮೂಲಕ ರೋಗಿಗಳಿಗೆ ಅದನ್ನು ಪೂರೈಸುವ ಅಭ್ಯಾಸ ಇದೆ!

ವೆಂಟಿಲೇಟರ್ ಅಂದರೆ ಏನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ವೆಂಟಿಲೇಟರ್ ಎನ್ನುವ ಪದಕ್ಕೆ ನಿಘಂಟಿನಲ್ಲಿ ಸಿಗುವ ಅರ್ಥ ಗವಾಕ್ಷಿ ಅಥವಾ ಗಾಳಿ ಕಿಟಕಿ. ಕೊಠಡಿಗಳ ಒಳಗೆ ಸರಾಗವಾಗಿ ಗಾಳಿಯಾಡುವಂತೆ ಮಾಡಲು ಕಟ್ಟಡಗಳಲ್ಲಿ ಇವುಗಳನ್ನು ರೂಪಿಸಿರುತ್ತಾರೆ. ಇದೇ ರೀತಿ ನಮ್ಮ ದೇಹಕ್ಕೆ ಅಗತ್ಯವಾದ ಆಕ್ಸಿಜನ್ ಪೂರೈಕೆ ಸರಾಗವಾಗಿರುವಂತೆ ನೋಡಿಕೊಳ್ಳುವುದು ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಾಗುವ, ಕೋವಿಡ್-೧೯ರ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಲ್ಲಿರುವ, 'ವೆಂಟಿಲೇಟರ್' ಎಂಬ ಯಂತ್ರದ ಉದ್ದೇಶ.

ನಾವು ಆರೋಗ್ಯವಾಗಿರುವಾಗ ಉಸಿರಾಟದ ಪ್ರಕ್ರಿಯೆ ಸರಾಗವಾಗಿ ನಡೆಯುವಂತೆ ನಮ್ಮ ದೇಹವೇ ನೋಡಿಕೊಳ್ಳುತ್ತದೆ. ಆದರೆ ನಾವು ಅನಾರೋಗ್ಯಕ್ಕೆ ತುತ್ತಾದಾಗ, ನಮ್ಮಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು ಮತ್ತು ದೇಹದ ಅಂಗಾಂಗಗಳಿಗೆ ಆಕ್ಸಿಜನ್ ಕೊರತೆ ಉಂಟಾಗಬಹುದು.

ಆಕ್ಸಿಜನ್ ಸಾಕಷ್ಟು ಪ್ರಮಾಣದಲ್ಲಿ ದೊರಕದ ಸಂದರ್ಭದಲ್ಲಿ ಕೊಳವೆ ಅಥವಾ ಮಾಸ್ಕ್ ಮೂಲಕ ರೋಗಿಗಳಿಗೆ ಅದನ್ನು ಪೂರೈಸುವ ಅಭ್ಯಾಸ ಇದೆ. ರೋಗಿ ಸ್ವತಂತ್ರವಾಗಿ ಉಸಿರಾಡಲು ಶಕ್ತನಾಗಿದ್ದರೆ ಮಾತ್ರ ಇಂತಹ ಕ್ರಮಗಳು ಉಪಯುಕ್ತವಾಗಬಲ್ಲವು. ಸ್ವತಃ ಉಸಿರಾಡುವುದೂ ಕಷ್ಟ ಎನ್ನುವಂತಹ ಸಂದರ್ಭಗಳಲ್ಲಿ ವೆಂಟಿಲೇಟರ್ ಅನ್ನು ಬಳಸಲಾಗುತ್ತದೆ. ಮೊದಲಿಗೆ ರೋಗಿಯ ದೇಹದೊಳಕ್ಕೆ ಒಂದು ಉಸಿರಾಟದ ಕೊಳವೆಯನ್ನು ಅಳವಡಿಸಿ, ಆ ಕೊಳವೆಯ ಮೂಲಕ ಆತನ ಉಸಿರಾಟವನ್ನು ಈ ಯಂತ್ರ ನಿರ್ವಹಿಸುತ್ತದೆ.

ಕೋವಿಡ್-೧೯ ಬಾಧಿತರಲ್ಲಿ ನಿಮೋನಿಯಾ ಹಾಗೂ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಅವರ ಆರೈಕೆಯಲ್ಲಿ ವೆಂಟಿಲೇಟರ್ ಬಳಕೆ ಅಗತ್ಯವಾಗುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ಈ ಸಂದರ್ಭದಲ್ಲಿ ಎಲ್ಲೆಡೆಯೂ ಈ ಯಂತ್ರಗಳಿಗಾಗಿ ಬೇಡಿಕೆ ಸೃಷ್ಟಿಯಾಗಿದೆ. ಹಾಗೆಂದು ಕೋವಿಡ್-೧೯ ಸೇರಿದಂತೆ ಯಾವ ರೋಗಕ್ಕೂ ವೆಂಟಿಲೇಟರುಗಳೇ ಚಿಕಿತ್ಸೆ ಅಲ್ಲ, ಇತರ ಚಿಕಿತ್ಸೆಗಳಿಂದಾಗಿ ರೋಗಿ ಚೇತರಿಸಿಕೊಳ್ಳುವವರೆಗೂ ಅವು ಆತನ ಉಸಿರಾಟಕ್ಕೆ ಅಗತ್ಯ ಬೆಂಬಲವನ್ನಷ್ಟೇ ನೀಡುತ್ತವೆ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
ಇಜ್ಞಾನ Ejnana
www.ejnana.com