ಲಸಿಕೆ (ವ್ಯಾಕ್ಸಿನ್) ಎಂಬ ಹೆಸರು ನಮಗೆ ಹೊಸದೇನಲ್ಲ!!
ಲಸಿಕೆ (ವ್ಯಾಕ್ಸಿನ್) ಎಂಬ ಹೆಸರು ನಮಗೆ ಹೊಸದೇನಲ್ಲ!!
ಕೊರೊನಾಲಜಿ

ಲಸಿಕೆ (ವ್ಯಾಕ್ಸಿನ್) ಅಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಟಿ. ಜಿ. ಶ್ರೀನಿಧಿ

ಲಸಿಕೆ (ವ್ಯಾಕ್ಸಿನ್) ಎಂಬ ಹೆಸರು ನಮಗೆ ಹೊಸದೇನಲ್ಲ. ಮಗು ಹುಟ್ಟಿದಾಗಿನಿಂದಲೇ ಅದಕ್ಕೆ ಕಾಲಕಾಲಕ್ಕೆ ಲಸಿಕೆಗಳನ್ನು ನೀಡುವುದೂ ನಮಗೆ ಗೊತ್ತು.

ನಿರ್ದಿಷ್ಟ ರೋಗದ ವಿರುದ್ಧ ನಮ್ಮಲ್ಲಿ ರೋಗರಕ್ಷೆ (ಇಮ್ಯೂನಿಟಿ) ಬೆಳೆಸುವುದು ಅದಕ್ಕಾಗಿ ನೀಡಲಾಗುವ ಲಸಿಕೆಯ ಕೆಲಸ. ಆ ರೋಗದ ಸೋಂಕನ್ನು ಅನುಕರಿಸುವ ಮೂಲಕ ಅದು ಈ ಕೆಲಸವನ್ನು ಸಾಧಿಸುತ್ತದೆ.

ಹೀಗೆ ಸೋಂಕನ್ನು ಅನುಕರಿಸಲು ರೋಗಕಾರಕಗಳಲ್ಲಿರುವ ಪ್ರತಿಜನಕವನ್ನು (ಆಂಟಿಜೆನ್) ಲಸಿಕೆಗಳು ಸಣ್ಣ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಸೇರಿಸುತ್ತವೆ. ಇದರಿಂದ ಬಹಳಷ್ಟು ಸಾರಿ ನಮ್ಮಲ್ಲಿ ಅನಾರೋಗ್ಯವೇನೂ ಉಂಟಾಗುವುದಿಲ್ಲವಾದರೂ, ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಥೆ (ಇಮ್ಯೂನ್ ಸಿಸ್ಟಂ) ಆ ಪ್ರತಿಜನಕಕ್ಕೆ ಪ್ರತಿಯಾಗಿ ಪ್ರತಿಕಾಯಗಳನ್ನು (ಆಂಟಿಬಾಡಿ) ಉತ್ಪಾದಿಸುತ್ತದೆ.

ಉದ್ದೇಶಪೂರ್ವಕವಾದ ಈ ಸೋಂಕು ಬೇಗನೆ ವಾಸಿಯಾದರೂ, ಆ ಸೋಂಕಿನ ವಿರುದ್ಧ ನಡೆಸಿದ ಹೋರಾಟವನ್ನು ಪ್ರತಿರಕ್ಷಣ ವ್ಯವಸ್ಥೆ ನೆನಪಿಟ್ಟುಕೊಂಡಿರುತ್ತದೆ. ಇದಕ್ಕಾಗಿ ಅದು ನೆನಪಿನ ಕೋಶಗಳ (ಮೆಮೊರಿ ಸೆಲ್‌) ಸಹಾಯ ಪಡೆದುಕೊಳ್ಳುತ್ತದೆ. ಮುಂದೆ ಅದೇ ರೋಗಕಾರಕ ಪೂರ್ಣಪ್ರಮಾಣದ ದಾಳಿ ನಡೆಸಿದರೆ, ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಥೆಯು ಇದೇ ನೆನಪಿನ ಕೋಶಗಳ ನೇತೃತ್ವದಲ್ಲಿ ಕ್ಷಿಪ್ರ ಪ್ರತಿದಾಳಿ ಪ್ರಾರಂಭಿಸುತ್ತದೆ.

ರೋಗರಕ್ಷೆ ರೂಪುಗೊಳ್ಳಲು - ನೆನಪಿನ ಕೋಶಗಳು ಸಜ್ಜಾಗಲು ಕೆಲದಿನಗಳ ಸಮಯ ಬೇಕಾಗುವುದರಿಂದ, ಲಸಿಕೆ ಪಡೆದುಕೊಂಡ ತಕ್ಷಣದಲ್ಲೇ ರೋಗಕಾರಕದ ಸಂಪರ್ಕಕ್ಕೆ ಬಂದ ವ್ಯಕ್ತಿಗಳಲ್ಲಿ ರೋಗ ಕಾಣಿಸಿಕೊಳ್ಳುವುದು ಸಾಧ್ಯ. ಲಸಿಕೆಯ ರೂಪದಲ್ಲಿ ನೀಡಲಾದ ಪ್ರತಿಜನಕವೂ ಕೆಲವರಲ್ಲಿ ಜ್ವರದಂತಹ ಲಕ್ಷಣಗಳಿಗೆ ಕಾರಣವಾಗಬಹುದು.

ಪ್ರತಿಯೊಂದು ರೋಗಕಾರಕದ ಪ್ರತಿಜನಕವೂ ವಿಭಿನ್ನವಾಗಿರುವುದರಿಂದ, ಪ್ರತಿ ರೋಗದ ಲಸಿಕೆಯೂ ವಿಭಿನ್ನವಾಗಿರಬೇಕಾಗುತ್ತದೆ. ರೋಗಕಾರಕ ಹಾಗೂ ಪ್ರತಿಜನಕವನ್ನು ಸಮಗ್ರವಾಗಿ ಅಭ್ಯಸಿಸಿ ಹೊಸ ರೋಗಗಳಿಗೆ ಲಸಿಕೆ ಸಿದ್ಧಪಡಿಸಲು ಇದರಿಂದಾಗಿಯೇ ಹೆಚ್ಚಿನ ಸಮಯ ಬೇಕಾಗುತ್ತದೆ.

ಸೌಜನ್ಯ: ವಿಜಯ ಕರ್ನಾಟಕ