ಔಷಧ ಸಿದ್ಧಪಡಿಸಿದ್ದೇವೆ ಎಂದು ಯಾರಾದರೂ ಹೇಳಿದರೆ ಆ ಔಷಧದ ಬಳಕೆಯನ್ನು ಥಟ್ಟನೆ ಪ್ರಾರಂಭಿಸುವಂತಿಲ್ಲ.
ಔಷಧ ಸಿದ್ಧಪಡಿಸಿದ್ದೇವೆ ಎಂದು ಯಾರಾದರೂ ಹೇಳಿದರೆ ಆ ಔಷಧದ ಬಳಕೆಯನ್ನು ಥಟ್ಟನೆ ಪ್ರಾರಂಭಿಸುವಂತಿಲ್ಲ.
ಕೊರೊನಾಲಜಿ

ಕ್ಲಿನಿಕಲ್ ಟ್ರಯಲ್ ಅಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಟಿ. ಜಿ. ಶ್ರೀನಿಧಿ

ಯಾವುದೇ ರೋಗಕ್ಕೆ ಲಸಿಕೆಯಾಗಲೀ ಚಿಕಿತ್ಸೆಯಾಗಲೀ ಇಲ್ಲ ಎಂದರೆ ಅಂತಹ ರೋಗಗಳ ಬಗ್ಗೆ ಭೀತಿಯುಂಟಾಗುವುದು ಸಹಜ. ಕೋವಿಡ್-೧೯ ಸಂದರ್ಭದಲ್ಲಿ ಆಗುತ್ತಿರುವುದು ಇದೇ. ಈ ಭೀತಿಯನ್ನು ದೂರವಾಗಿಸುವ ಉದ್ದೇಶದಿಂದ ವಿಶ್ವದೆಲ್ಲೆಡೆಯ ವೈದ್ಯವಿಜ್ಞಾನಿಗಳು ಕೋವಿಡ್-೧೯ ತಡೆಯುವ ಹಾಗೂ ವಾಸಿಮಾಡುವ ಔಷಧಗಳನ್ನು ತಯಾರಿಸುವ ಪ್ರಯತ್ನಗಳಲ್ಲಿ ತೊಡಗಿಕೊಂಡಿದ್ದಾರೆ.

ಹೀಗೆ ಔಷಧ ಸಿದ್ಧಪಡಿಸಿದ್ದೇವೆ ಎಂದು ಯಾರಾದರೂ ಹೇಳಿದರೆ ಆ ಔಷಧದ ಬಳಕೆಯನ್ನು ಥಟ್ಟನೆ ಪ್ರಾರಂಭಿಸುವಂತಿಲ್ಲ. ಅದರ ಬಳಕೆಗೆ ಅನುಮತಿ ದೊರಕುವುದು ಕೂಲಂಕಷ ಪರೀಕ್ಷೆಗಳು ನಡೆದ ನಂತರವೇ. ಚಿಕಿತ್ಸಾತ್ಮಕ ಪ್ರಯೋಗಗಳು (ಕ್ಲಿನಿಕಲ್ ಟ್ರಯಲ್ಸ್) ಎಂದು ಕರೆಯುವುದು ಇದನ್ನೇ.

ಔಷಧಗಳ ಪರೀಕ್ಷೆ ಹಲವು ಹಂತಗಳಲ್ಲಿ ನಡೆಯುತ್ತದೆ. ರೋಗಕಾರಕಗಳ ಮೇಲೆ ಅದು ಯಾವ ಪರಿಣಾಮ ಬೀರುತ್ತದೆ, ಔಷಧ ಪರಿಣಾಮಕಾರಿಯಾಗಲು ಅದನ್ನು ಎಷ್ಟು ಸಾರಿ ಯಾವ ಪ್ರಮಾಣದಲ್ಲಿ ಎಷ್ಟು ಸಮಯದವರೆಗೆ ಕೊಡಬೇಕು, ರೋಗಿಗಳ ಮೇಲೆ ಅದು ಉಂಟುಮಾಡಬಹುದಾದ ಅಡ್ಡಪರಿಣಾಮಗಳು ಯಾವುವು - ಹೀಗೆ ಅನೇಕ ವಿಷಯಗಳನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಪರೀಕ್ಷೆಗಳ ಕೊನೆಯ ಹಂತವೇ ಮನುಷ್ಯರ ಮೇಲಿನ ಪ್ರಯೋಗ.

ಇಂತಹ ಎಲ್ಲ ಪರೀಕ್ಷೆಗಳ ನಂತರ ಔಷಧ ಸುರಕ್ಷಿತವಾಗಿದೆ, ಪರಿಣಾಮಕಾರಿಯಾಗಿದೆ ಮತ್ತು ನಿರೀಕ್ಷಿತ ಪ್ರತಿಕ್ರಿಯೆಯನ್ನು ಮಾತ್ರ ಉಂಟುಮಾಡುತ್ತಿದೆ ಎನ್ನುವುದು ಖಚಿತವಾದಾಗಲಷ್ಟೇ ಅದರ ಬಳಕೆಗೆ ಅನುಮತಿ ನೀಡಲಾಗುತ್ತದೆ. ಕ್ಲಿನಿಕಲ್ ಟ್ರಯಲ್‌ಗಳು ಸಾಮಾನ್ಯವಾಗಿ ದೀರ್ಘ ಅವಧಿಯವರೆಗೆ ನಡೆಯುತ್ತವಾದರೂ ತುರ್ತು ಪರಿಸ್ಥಿತಿಯಲ್ಲಿ ಇದನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತದೆ.

ಔಷಧವನ್ನು ಅಭಿವೃದ್ಧಿಪಡಿಸಿದವರು ಯಾರೇ ಆಗಿದ್ದರೂ ಕ್ಲಿನಿಕಲ್ ಟ್ರಯಲ್‍ಗಳ ಫಲಿತಾಂಶ ಆಧರಿಸಿ ಅವುಗಳ ಬಳಕೆಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ವಿಶ್ವದೆಲ್ಲೆಡೆ ಸರಕಾರಗಳೇ ನಿಯಂತ್ರಿಸುತ್ತವೆ. ಭಾರತದಲ್ಲಿ ಈ ಪ್ರಕ್ರಿಯೆಯ ಜವಾಬ್ದಾರಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯದು (CDSCO).

ಸೌಜನ್ಯ: ವಿಜಯ ಕರ್ನಾಟಕ

ಇಜ್ಞಾನ Ejnana
www.ejnana.com