ಜ್ವರ, ಸುಸ್ತು ಹಾಗೂ ಒಣ ಕೆಮ್ಮು ಕೋವಿಡ್-೧೯ರ ಸಾಮಾನ್ಯ ರೋಗಲಕ್ಷಣಗಳು.
ಜ್ವರ, ಸುಸ್ತು ಹಾಗೂ ಒಣ ಕೆಮ್ಮು ಕೋವಿಡ್-೧೯ರ ಸಾಮಾನ್ಯ ರೋಗಲಕ್ಷಣಗಳು.

ರೋಗಲಕ್ಷಣ ಇಲ್ಲದ ರೋಗಿಗಳು!

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಜ್ವರ ಬಂದಿರಬಹುದು ಅನ್ನಿಸಿದಾಗ ಹಣೆ ಮುಟ್ಟಿ ನೋಡುವುದು ನಮ್ಮಲ್ಲಿ ಅನೇಕರ ಅಭ್ಯಾಸ. ಹಣೆ ಬೆಚ್ಚಗಿರುವುದು ಜ್ವರದ ರೋಗಲಕ್ಷಣ ಅಥವಾ 'ಸಿಂಪ್ಟಮ್'. ಇದೇ ರೀತಿ ಜ್ವರ, ಸುಸ್ತು ಹಾಗೂ ಒಣ ಕೆಮ್ಮು ಕೋವಿಡ್-೧೯ರ ಸಾಮಾನ್ಯ ರೋಗಲಕ್ಷಣಗಳು.

ಯಾವುದೇ ವ್ಯಕ್ತಿಯಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡರೆ ಆತನನ್ನು 'ಸಿಂಪ್ಟಮ್ಯಾಟಿಕ್' (ರೋಗಲಕ್ಷಣ ಪ್ರದರ್ಶಿಸುವ) ರೋಗಿಯೆಂದು ಗುರುತಿಸಲಾಗುತ್ತದೆ. ಇಂತಹವರಿಗೆ ಸೂಕ್ತ ಚಿಕಿತ್ಸೆ ನೀಡಲು ಅವರಲ್ಲಿ ಕಾಣಸಿಗುವ ರೋಗಲಕ್ಷಣಗಳು ವೈದ್ಯರಿಗೆ ನೆರವಾಗುತ್ತವೆ. ಇಂತಹ ವ್ಯಕ್ತಿಗಳಿಂದ ಇತರರಿಗೆ ರೋಗದ ಸೋಂಕು ಹರಡಿದರೆ ಅದನ್ನು 'ಸಿಂಪ್ಟಮ್ಯಾಟಿಕ್ ಟ್ರಾನ್ಸ್‌ಮಿಶನ್' ಎಂದು ಗುರುತಿಸಲಾಗುತ್ತದೆ.

ಸೋಂಕಿನಿಂದ ಬಾಧಿತರಾದರೂ ಕೆಲವು ರೋಗಿಗಳಲ್ಲಿ ಯಾವ ರೋಗಲಕ್ಷಣವೂ ಕಾಣಿಸದಿರಬಹುದು. ಇಂತಹ 'ಎಸಿಂಪ್ಟಮ್ಯಾಟಿಕ್' (ರೋಗಲಕ್ಷಣ ಪ್ರದರ್ಶಿಸದ) ರೋಗಿಗಳಿಗೆ ಸೋಂಕು ತಗುಲಿರುವ ವಿಷಯ ತಿಳಿಯುವುದು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಟ್ಟಾಗ ಮಾತ್ರವೇ. ಅಕಸ್ಮಾತ್ ಇಂತಹ ವ್ಯಕ್ತಿಗಳಿಂದಲೂ ಇತರರಿಗೆ ಸೋಂಕು ಹರಡಿದರೆ, ಅಂತಹ ಪ್ರಸಾರಣೆಯನ್ನು 'ಎಸಿಂಪ್ಟಮ್ಯಾಟಿಕ್ ಟ್ರಾನ್ಸ್‌ಮಿಶನ್' ಎಂದು ಕರೆಯುತ್ತಾರೆ.

ಅಂದಹಾಗೆ ಸೋಂಕು ತಗುಲಿದ ನಂತರ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಕೊಂಚ ಸಮಯ ಬೇಕಾಗಬಹುದು. ಈ ಸಮಯದಲ್ಲೂ ಸೋಂಕು ಇತರರಿಗೆ ಹರಡುವುದು ಸಾಧ್ಯ. ಇದಕ್ಕೆ 'ಪ್ರಿ-ಸಿಂಪ್ಟಮ್ಯಾಟಿಕ್ ಟ್ರಾನ್ಸ್‌ಮಿಶನ್' ಎಂದು ಹೆಸರು.

ಕೋವಿಡ್-೧೯ ಸೋಂಕು ತಗುಲಿದ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳಲು ೧ರಿಂದ ೧೪ ದಿನಗಳ ಅವಧಿ ಬೇಕಾಗಬಹುದು (ಸರಾಸರಿ ೫-೬ ದಿನಗಳು) ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹಲವು ಸನ್ನಿವೇಶಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ರೋಗಪತ್ತೆ ಪರೀಕ್ಷೆಯಿಂದ ಸೋಂಕನ್ನು ಪತ್ತೆಹಚ್ಚಲಾಗಿದೆ. ಕೆಮ್ಮು - ಸೀನು ಮುಂತಾದ ರೋಗಲಕ್ಷಣಗಳು ಇಲ್ಲದ ಎಸಿಂಪ್ಟಮ್ಯಾಟಿಕ್ ರೋಗಿಗಳಿಂದ ಕೊರೊನಾವೈರಸ್ ಹರಡುವ ಸಾಧ್ಯತೆ ತೀರಾ ಕಡಿಮೆ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com