ಒಂದು ಗುಂಪಿನ ಬಹಳಷ್ಟು ವ್ಯಕ್ತಿಗಳು ನಿರ್ದಿಷ್ಟ ಸೋಂಕಿನ ವಿರುದ್ಧ ರೋಗರಕ್ಷೆಯನ್ನು (ಇಮ್ಯೂನಿಟಿ) ಬೆಳೆಸಿಕೊಂಡರೆ?
ಒಂದು ಗುಂಪಿನ ಬಹಳಷ್ಟು ವ್ಯಕ್ತಿಗಳು ನಿರ್ದಿಷ್ಟ ಸೋಂಕಿನ ವಿರುದ್ಧ ರೋಗರಕ್ಷೆಯನ್ನು (ಇಮ್ಯೂನಿಟಿ) ಬೆಳೆಸಿಕೊಂಡರೆ?
ಕೊರೊನಾಲಜಿ

ಹರ್ಡ್ ಇಮ್ಯೂನಿಟಿ

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಟಿ. ಜಿ. ಶ್ರೀನಿಧಿ

ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ರೋಗಕಾರಕಗಳ ಸೋಂಕು ತಟ್ಟದಂತೆ ನೋಡಿಕೊಳ್ಳುವ ಪ್ರತಿರಕ್ಷಣ ವ್ಯವಸ್ಥೆ (ಇಮ್ಯೂನ್ ಸಿಸ್ಟಂ) ಯಾರಲ್ಲಿ ಬಲಶಾಲಿಯಾಗಿರುವುದಿಲ್ಲವೋ ಅಂತಹವರಿಗೆ ರೋಗ ತಗಲುವ ಸಾಧ್ಯತೆ ಹೆಚ್ಚು. ಯಾವ ಗುಂಪುಗಳಲ್ಲಿ ಇಂತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಿರುತ್ತದೋ ಅಲ್ಲಿ ರೋಗ ಹರಡುವ ಪ್ರಮಾಣವೂ ಜಾಸ್ತಿ ಇರುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಒಂದು ಗುಂಪಿನ ಬಹಳಷ್ಟು ವ್ಯಕ್ತಿಗಳು ನಿರ್ದಿಷ್ಟ ಸೋಂಕಿನ ವಿರುದ್ಧ ರೋಗರಕ್ಷೆಯನ್ನು (ಇಮ್ಯೂನಿಟಿ) ಬೆಳೆಸಿಕೊಂಡರೆ? ಅಂತಹ ಗುಂಪುಗಳಲ್ಲಿ ರೋಗ ಹರಡುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಗುಂಪಿನ ಬಹಳಷ್ಟು ಜನರಲ್ಲಿ ರೋಗರಕ್ಷೆ ಉತ್ತಮವಾಗಿರುವುದರಿಂದ, ಇನ್ನುಳಿದವರ ಪ್ರತಿರಕ್ಷಣ ವ್ಯವಸ್ಥೆ ದುರ್ಬಲವಾಗಿದ್ದರೂ ಅವರಿಗೆ ರೋಗ ತಗಲುವ ಸಾಧ್ಯತೆ ಕಡಿಮೆಯೇ ಆಗಿರುತ್ತದೆ. ಸೋಂಕಿತರು ಹಾಗೂ ಪ್ರತಿರಕ್ಷಣ ವ್ಯವಸ್ಥೆ ದುರ್ಬಲವಾಗಿರುವವರ ನಡುವೆ ಉತ್ತಮ ರೋಗರಕ್ಷೆಯಿರುವ ವ್ಯಕ್ತಿಗಳು ಪ್ರತಿಬಂಧದಂತೆ (ಬ್ಯಾರಿಯರ್) ಕೆಲಸಮಾಡುವುದರಿಂದ ರೋಗ ಸುಲಭವಾಗಿ ಹರಡುವುದಿಲ್ಲ.

ಜನರ ಗುಂಪುಗಳಲ್ಲಿ ಹೀಗೆ ರೋಗವೊಂದರ ವಿರುದ್ಧ ಕಾಣಿಸಿಕೊಳ್ಳುವ ರೋಗರಕ್ಷೆಯನ್ನು 'ಹರ್ಡ್ ಇಮ್ಯೂನಿಟಿ' ಅಥವಾ 'ಹರ್ಡ್ ಪ್ರೊಟೆಕ್ಷನ್' ಎಂದು ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ಗುಂಪುರಕ್ಷೆ ಎನ್ನಬಹುದು. ಗುಂಪಿನ ಸದಸ್ಯರಿಗೆ ಇದು ನಿರ್ದಿಷ್ಟ ರೋಗದ ವಿರುದ್ಧ ಪರೋಕ್ಷ ರಕ್ಷಣೆಯನ್ನು ಒದಗಿಸುತ್ತದೆ.

ಗುಂಪಿನ ಬಹಳಷ್ಟು ಮಂದಿಗೆ ಸೋಂಕು ತಗಲಿ, ಆನಂತರ ಅವರು ಚೇತರಿಸಿಕೊಂಡಿದ್ದರೆ ಅಲ್ಲಿ ಸ್ವಾಭಾವಿಕವಾಗಿಯೇ ಗುಂಪುರಕ್ಷೆ ಕಾಣಿಸಿಕೊಳ್ಳಬಹುದು. ಗುಂಪಿನ ಬಹಳಷ್ಟು ಜನ ನಿರ್ದಿಷ್ಟ ರೋಗಕ್ಕೆ ಲಸಿಕೆ ಹಾಕಿಸಿಕೊಂಡಿದ್ದರೆ ಅದರಿಂದಲೂ ಆ ರೋಗದ ವಿರುದ್ಧ ಗುಂಪುರಕ್ಷೆ ರೂಪುಗೊಳ್ಳುವುದು ಸಾಧ್ಯ. ಕೋವಿಡ್-೧೯ರಂತಹ ಹೊಸ ರೋಗಗಳ ಸಂದರ್ಭದಲ್ಲಿ ಇವೆರಡೂ ತಕ್ಷಣಕ್ಕೆ ಆಗುವ ಕೆಲಸಗಳಲ್ಲ; ಹಾಗಾಗಿ ಅದರ ವಿರುದ್ಧ ಗುಂಪುರಕ್ಷೆ ಕಾಣಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ.

ಸೌಜನ್ಯ: ವಿಜಯ ಕರ್ನಾಟಕ