ರೋಗ ಹರಡುವುದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಏನಾಗುತ್ತದೆ?
ರೋಗ ಹರಡುವುದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಏನಾಗುತ್ತದೆ?

ವಕ್ರರೇಖೆಯೇಕೆ ಸಪಾಟಾಗಬೇಕು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ
Published on

ಒಂದು ಲಕ್ಷ ಜನರಿರುವ ಒಂದು ಊರಿನಲ್ಲಿ ಯಾವುದೋ ಸಾಂಕ್ರಾಮಿಕ ರೋಗ ಹರಡಲು ಪ್ರಾರಂಭವಾಗಿದೆ ಎಂದುಕೊಳ್ಳಿ. ಈ ಕಾಯಿಲೆ ತೀವ್ರಗೊಂಡರೆ ಬಹಳ ಜನರು ಆಸ್ಪತ್ರೆ ಸೇರಬೇಕಾಗುತ್ತದೆ. ಆ ಊರಿನ ಆಸ್ಪತ್ರೆಗಳಲ್ಲಿ ಏಕಕಾಲಕ್ಕೆ ಸುಮಾರು ಮುನ್ನೂರು ಜನರಿಗೆ ಮಾತ್ರ ಚಿಕಿತ್ಸೆ ನೀಡುವ ಸೌಲಭ್ಯ ಇದೆ.

ಹೀಗಿರುವಾಗ ರೋಗ ಹರಡುವುದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಏನಾಗುತ್ತದೆ? ಬಹಳ ಕಡಿಮೆ ಸಮಯದಲ್ಲಿ ಅದು ಬಹಳ ಹೆಚ್ಚು ಜನರಿಗೆ ಹರಡುತ್ತದೆ, ಮುನ್ನೂರಕ್ಕಿಂತ ಹೆಚ್ಚು ಜನರು ಒಟ್ಟಿಗೆ ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ!

ಗಣಿತದ ಪ್ರಾಥಮಿಕ ಪಾಠಗಳಲ್ಲಿ ಗ್ರಾಫ್ ಬಿಡಿಸುವುದನ್ನು ಕಲಿತಿದ್ದೇವಲ್ಲ, ಅದರಂತೆ ಈ ಅಂಕಿ ಅಂಶಗಳ ಗ್ರಾಫ್ ಬಿಡಿಸೋಣ: ಅಡ್ಡಲಾಗಿ (ಎಕ್ಸ್-ಅಕ್ಷ) ಸಮಯವನ್ನೂ ಲಂಬವಾಗಿ (ವೈ-ಅಕ್ಷ) ರೋಗಿಗಳ ಸಂಖ್ಯೆಯನ್ನೂ ತೆಗೆದುಕೊಂಡರೆ ಮೇಲೆ ಹೇಳಿದ ಸನ್ನಿವೇಶವನ್ನು ಬಿಂಬಿಸುವ ವಕ್ರರೇಖೆ (ಕರ್ವ್) ಒಂದು ಎತ್ತರದ ಪರ್ವತದಂತೆ ಕಾಣುತ್ತದೆ.

ಹೀಗಾಗಲು ಬಿಡುವ ಬದಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೆ, ರೋಗ ಹರಡುವುದು ನಿಧಾನವಾಗುತ್ತದೆ. ಆಗ ಆಸ್ಪತ್ರೆಗೆ ಹೋಗಬೇಕಾಗುವ ರೋಗಿಗಳ ಸಂಖ್ಯೆ ನಿಯಂತ್ರಣದಲ್ಲಿರುತ್ತದೆ, ಇರುವ ವೈದ್ಯಕೀಯ ಸೌಲಭ್ಯಗಳಲ್ಲೇ ಹೆಚ್ಚು ರೋಗಿಗಳಿಗೆ ಆರೈಕೆ ನೀಡುವುದೂ ಸಾಧ್ಯವಾಗುತ್ತದೆ.

ವಕ್ರರೇಖೆಯನ್ನು ಮಟ್ಟಸಗೊಳಿಸುವುದು ಹೀಗೆ...
ವಕ್ರರೇಖೆಯನ್ನು ಮಟ್ಟಸಗೊಳಿಸುವುದು ಹೀಗೆ...Siouxsie Wiles and Toby Morris / CC BY (https://creativecommons.org/licenses/by/4.0)

ಈ ಸನ್ನಿವೇಶದ ಗ್ರಾಫ್ ಬಿಡಿಸಿದರೆ, ಆ ವಕ್ರರೇಖೆ ಮೂಡಿಸುವ ಪರ್ವತದ ಎತ್ತರ ಗಣನೀಯವಾಗಿ ಕಡಿಮೆಯಾಗಿರುತ್ತದೆ. 'ವಕ್ರರೇಖೆಯನ್ನು ಮಟ್ಟಸಗೊಳಿಸುವುದು' (Flattening the Curve) ಎಂದು ಕರೆಯುವುದು ಇದನ್ನೇ. ಈ ಪರ್ವತದ ಎತ್ತರ (ಸದ್ಯ ಆಸ್ಪತ್ರೆ ಸೇರಬೇಕಾದವರ ಸಂಖ್ಯೆ) ಆಸ್ಪತ್ರೆಗಳಲ್ಲಿ ಲಭ್ಯವಿರುವ ಸಾಮರ್ಥ್ಯಕ್ಕಿಂತ ಕಡಿಮೆ ಇದ್ದರೆ, ಪರಿಸ್ಥಿತಿ ನಿಭಾಯಿಸುವುದು ಸುಲಭವಾಗುತ್ತದೆ. ಇದನ್ನು ಸಾಧ್ಯವಾಗಿಸುವುದೇ ಸೋಶಿಯಲ್ ಡಿಸ್ಟೆನ್ಸಿಂಗ್‌, ಲಾಕ್‌ಡೌನ್‌ ಮುಂತಾದವುಗಳ ಉದ್ದೇಶ.

ಸೌಜನ್ಯ: ವಿಜಯ ಕರ್ನಾಟಕ

logo
ಇಜ್ಞಾನ Ejnana
www.ejnana.com