Photo by Tara Winstead
ವೈವಿಧ್ಯ

ಮ್ಯಾಜಿಕ್ ಮಾಡುವ ಲಾಜಿಕ್!

ಜನವರಿ ೧೪ ವಿಶ್ವ ಲಾಜಿಕ್ ದಿನ

ಟಿ. ಜಿ. ಶ್ರೀನಿಧಿ

ಸಂಜೆ ಹೊತ್ತಿಗೆ ಮನೆಯಲ್ಲಿ ಲೈಟ್ ಸ್ವಿಚ್ ಒತ್ತಿದಾಗ ಲೈಟು ಬೆಳಗಲಿಲ್ಲ ಎಂದುಕೊಳ್ಳಿ. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನಿರುತ್ತದೆ? ಮೊದಲಿಗೆ ಕರೆಂಟಿದೆಯೋ ಇಲ್ಲವೋ ಎಂದು ನೋಡುತ್ತೀರಿ. ಕರೆಂಟಿದ್ದರೆ ಬೇರೆ ಲೈಟುಗಳು ಉರಿಯುತ್ತಿವೆಯೇ ಇಲ್ಲವೋ ಪರೀಕ್ಷಿಸುತ್ತೀರಿ. ಎರಡೂ ಹೌದು ಎಂದಾದರೆ ಈ ಲೈಟು ಕೆಟ್ಟಿರಬಹುದು ಎಂದು ಊಹಿಸುತ್ತೀರಿ.

ನಮ್ಮ ಬದುಕಿನಲ್ಲಿ ತರ್ಕ (ಲಾಜಿಕ್) ವಹಿಸುವ ಪಾತ್ರಕ್ಕೆ ಇದೊಂದು ಸಣ್ಣ ಉದಾಹರಣೆ. ಇದು ತರ್ಕವೆಂದು ಯೋಚಿಸದೆಯೇ ನಾವು ತರ್ಕವನ್ನು ಬಳಸುತ್ತೇವೆ. ಯಾವುದೋ ವಿಷಯ ಸರಿಯಿಲ್ಲ ಎಂದಾಗ ಅದರ ಲಾಜಿಕ್ಕೇ ಸರಿಯಿಲ್ಲ ಎಂದುಕೊಳ್ಳುತ್ತೇವೆ.

ನಾವು ಮಾತ್ರವೇ ಅಲ್ಲ. ಕಂಪ್ಯೂಟರುಗಳು ಕೆಲಸಮಾಡುವುದೂ ತರ್ಕವನ್ನು ಆಧರಿಸಿಯೇ. ಕಂಪ್ಯೂಟರಿನಲ್ಲಿ, ಮೊಬೈಲ್ ಫೋನಿನಲ್ಲಿ, ಎಟಿಎಂ ಯಂತ್ರದಲ್ಲಿ ಯಾವ ಗುಂಡಿ ಒತ್ತಿದಾಗ ಏನು ಕೆಲಸವಾಗಬೇಕೆಂದು ತೀರ್ಮಾನಿಸುವುದೂ ಇದೇ ತರ್ಕ.

ಎಐ ತಂತ್ರಜ್ಞಾನದ ಕೆಲಸವೂ ತರ್ಕವನ್ನೇ ಆಧರಿಸಿರುತ್ತದೆ. ಮನೆಯ ಲೈಟನ್ನು ಪರೀಕ್ಷಿಸಲು ನಾವು ಬಳಸಿದ ಸರಳ ತರ್ಕಕ್ಕಿಂತ ಅಸಂಖ್ಯ ಪಟ್ಟು ಸಂಕೀರ್ಣವಾದ ತರ್ಕವನ್ನು ಬಳಸಿ ಎಐ ಕೆಲಸ ನಡೆಯುತ್ತದೆ. ಮಶೀನ್ ಲರ್ನಿಂಗ್ ಅಂಗವಾಗಿ ಪಡೆದುಕೊಂಡ ಅಗಾಧ ಪ್ರಮಾಣದ ಮಾಹಿತಿಯನ್ನು ಅದು ಬಳಸಿಕೊಳ್ಳುತ್ತದೆ. ಕಂಪ್ಯೂಟರಿನ ಪ್ರಾಸೆಸರಿನೊಳಗೆ, ಅದರ ಆಂತರಿಕ ಕಾರ್ಯಾಚರಣೆಯಲ್ಲಿ ಬಳಕೆಯಾಗುವ ಲಾಜಿಕ್ ಗೇಟುಗಳಿಗೂ ತರ್ಕವೇ ಜೀವಾಳ!

ನಾವು ದಿನವೂ ಮಾಡುವ ಸಣ್ಣ ಕೆಲಸಗಳಿಂದ ಪ್ರಾರಂಭಿಸಿ ಜಗತ್ತನ್ನೇ ಬದಲಿಸುತ್ತಿರುವ ಅತ್ಯಾಧುನಿಕ ತಂತ್ರಜ್ಞಾನಗಳವರೆಗೆ ಎಲ್ಲದಕ್ಕೂ ಅಡಿಪಾಯವಾಗಿರುವ ಈ ಆಲೋಚನಾ ಶಕ್ತಿಯನ್ನು ಗೌರವಿಸಲು ಯುನೆಸ್ಕೋ ಸಂಸ್ಥೆ ಜನವರಿ ೧೪ನೇ ತಾರೀಕನ್ನು ವಿಶ್ವ ಲಾಜಿಕ್ ದಿನವನ್ನಾಗಿ ಗುರುತಿಸಿದೆ. ಪ್ರಖ್ಯಾತ ತರ್ಕಶಾಸ್ತ್ರಜ್ಞರಾದ ಆಲ್ಫ್ರೆಡ್ ಟಾರ್ಸ್ಕಿ (Alfred Tarski) ಹಾಗೂ ಕುರ್ಟ್ ಗೋಡಲ್ (Kurt Gödel) ಅವರ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಟಾರ್ಸ್ಕಿಯವರು ಹುಟ್ಟಿದ್ದು (೧೯೦೧) ಹಾಗೂ ಗೋಡಲ್ ನಿಧನರಾಗಿದ್ದು (೧೯೭೮) ಇದೇ ದಿನ ಎನ್ನುವುದು ಗಮನಾರ್ಹ.

ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆಯ ಹೊರತಾಗಿಯೂ, ತರ್ಕದ ಮಹತ್ವದ ಬಗ್ಗೆ ಸಾರ್ವಜನಿಕ ಅರಿವು ಸೀಮಿತವಾದದ್ದು. ಅದರ ಇತಿಹಾಸ, ಮಹತ್ವ ಹಾಗೂ ಪರಿಣಾಮಗಳನ್ನು ವಿಶ್ವದೆಲ್ಲೆಡೆಯ ಸಾರ್ವಜನಿಕರ ಗಮನಕ್ಕೆ ತರುವುದು ಈ ದಿನಾಚರಣೆಯ ಉದ್ದೇಶ ಎಂದು ಯುನೆಸ್ಕೋ ಹೇಳಿದೆ. ತರ್ಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅದರ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಸಂಶೋಧನೆ-ಬೋಧನೆಗಳಲ್ಲಿ ತರ್ಕದ ಅಭಿವೃದ್ಧಿಯನ್ನು ಉತ್ತೇಜಿಸುವುದು, ಈ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸಂಸ್ಥೆಗಳ ಚಟುವಟಿಕೆಗಳನ್ನು ಬೆಂಬಲಿಸುವುದು, ಹಾಗೂ ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವ ಕ್ರಮಗಳ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.