ಅಂತರಜಾಲ ನಮ್ಮ ಬದುಕನ್ನು ಇಷ್ಟೆಲ್ಲ ವ್ಯಾಪಿಸಿಕೊಳ್ಳುವ ಮೊದಲು, ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಿದ್ದರೆ ವಿಶ್ವಕೋಶಗಳ ಮೊರೆಹೋಗುವುದು ಬಹಳ ಸಾಮಾನ್ಯವಾಗಿತ್ತು. ಅನೇಕ ಸಂಪುಟಗಳ, ದೊಡ್ಡ ಗಾತ್ರದ ಈ ಪುಸ್ತಕಗಳು ಪಕ್ಕದಲ್ಲಿದ್ದರೆ ವಿಶ್ವವೇ ನಮ್ಮ ಕೈಲಿರುವ ಭಾವನೆ!
ಅವು ಇಷ್ಟೆಲ್ಲ ಉಪಯುಕ್ತವಾಗಿದ್ದರೂ ಮುದ್ರಿತ ವಿಶ್ವಕೋಶಗಳನ್ನು ಬಳಸುವಲ್ಲಿ ಒಂದಷ್ಟು ಸಮಸ್ಯೆಗಳೂ ಇದ್ದವು. ಮುದ್ರಿತ ಪುಸ್ತಕಗಳ ಮಿತಿಯೊಳಗೆ ನಮಗೆ ಬೇಕಾಗಬಹುದಾದ ಎಲ್ಲ ವಿಷಯಗಳನ್ನೂ ಅಳವಡಿಸುವುದು ಕಷ್ಟವಾಗಿತ್ತು. ಪ್ರಪಂಚದಲ್ಲಿ ಬದಲಾವಣೆಗಳು ನಡೆಯುವ ವೇಗಕ್ಕೆ ಸಮನಾಗಿ ಹೊಸ ಆವೃತ್ತಿಗಳನ್ನು ತರುವುದಂತೂ ಅಸಾಧ್ಯವೇ ಆಗಿತ್ತು.
ವಿಶ್ವವ್ಯಾಪಿ ಜಾಲದ ಬೆಳವಣಿಗೆಯೊಂದಿಗೆ ಈ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನಗಳೂ ಶುರುವಾದವು. ಅಂಥದ್ದೊಂದು ಪ್ರಯತ್ನದ ಫಲವಾಗಿ ಅಮೆರಿಕಾದ ಜಿಮ್ಮಿ ವೇಲ್ಸ್ ಹಾಗೂ ಲ್ಯಾರಿ ಸ್ಯಾಂಗರ್ ೨೦೦೧ರಲ್ಲಿ ವಿಕಿಪೀಡಿಯವನ್ನು ಪ್ರಾರಂಭಿಸಿದರು. ವಿಕಿಪೀಡಿಯ ಶುರುವಾದ ಜನವರಿ ೧೫ನೇ ತಾರೀಕನ್ನೇ ಈಗ 'ವಿಕಿಪೀಡಿಯ ದಿನ'ವೆಂದು ಆಚರಿಸಲಾಗುತ್ತದೆ. ಇಂದು, ೨೦೨೬ರ ಜನವರಿ ೧೫, ವಿಕಿಪೀಡಿಯದ ಇಪ್ಪತ್ತೈದನೆಯ ಹುಟ್ಟುಹಬ್ಬ.
ವಿಕಿಮೀಡಿಯ ಫೌಂಡೇಶನ್ ಆಶ್ರಯದಲ್ಲಿ ನಡೆಯುವ ಈ ತಾಣ ಒಂದು ಸ್ವತಂತ್ರ ('ಫ್ರೀ') ವಿಶ್ವಕೋಶ. ಇದನ್ನು ಬಳಸಲು ಹಣ ಕೊಡಬೇಕಿಲ್ಲ, ಹಾಗೂ ಇದಕ್ಕೆ ಯಾರು ಬೇಕಾದರೂ ಮಾಹಿತಿ ಸೇರಿಸಬಹುದು. ಬಳಕೆದಾರರೇ ಮಾಹಿತಿ ಸೇರಿಸುವುದರಿಂದ ತಪ್ಪು ಮಾಹಿತಿಯೂ ಸೇರಿಕೊಳ್ಳಬಹುದಲ್ಲ, ಅಂತಹ ತಪ್ಪು ಮಾಹಿತಿಯನ್ನು ಗಮನಿಸಿದ ಯಾರೇ ಆದರೂ ಅದನ್ನು ತಕ್ಷಣ ತಿದ್ದಬಹುದು.
ಮಾಹಿತಿಯನ್ನು ಮಾರ್ಪಡಿಸುವ ಹಾಗೂ ಹೊಸ ಮಾಹಿತಿಯನ್ನು ಸೇರಿಸುವ ಸ್ವಾತಂತ್ರ್ಯವನ್ನು ಓದುಗರಿಗೇ ನೀಡುವ ಜಾಲತಾಣಗಳನ್ನು 'ವಿಕಿ'ಗಳೆಂದು ಕರೆಯುತ್ತಾರೆ. ವಿಕಿ ಎಂಬ ಶಬ್ದ ಹವಾಯಿ ಭಾಷೆಯದ್ದು. ಆ ಭಾಷೆಯಲ್ಲಿ 'ವಿಕಿ ವಿಕಿ' ಎಂದರೆ 'ಬಹಳ ಚುರುಕಾದ' ಎಂದು ಅರ್ಥವಂತೆ. ಈ ಶಬ್ದವನ್ನೂ, ಎನ್‌ಸೈಕ್ಲೋಪೀಡಿಯ ಎಂಬ ಇಂಗ್ಲಿಷ್ ಪದವನ್ನೂ ಸೇರಿಸಿ ರೂಪಿಸಿದ್ದೇ ವಿಕಿಪೀಡಿಯದ ಹೆಸರು.
ಇಂತಹ ವಿಕಿಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ವಿಕಿಪೀಡಿಯ. ಕನ್ನಡ, ತುಳು ಸೇರಿದಂತೆ ೩೦೦ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವ ವಿಕಿಪೀಡಿಯದಲ್ಲಿ ಸದ್ಯ (ಜನವರಿ ೨೦೨೬) ಒಟ್ಟು ಆರೂವರೆ ಕೋಟಿಗೂ ಹೆಚ್ಚು ಬರಹಗಳಿದ್ದು, ಇಂಗ್ಲಿಷ್ ಆವೃತ್ತಿಯೊಂದರಲ್ಲೇ ಸುಮಾರು ಎಪ್ಪತ್ತು ಲಕ್ಷ ಬರಹಗಳಿವೆ.
ಜನರೇಟಿವ್ ಎಐ ಸಾಧನಗಳು ಬಂದಮೇಲೆ ವಿಕಿಪೀಡಿಯ ಬಳಕೆ ಕಡಿಮೆಯಾಗಿದೆ ಎನ್ನಿಸಿದರೂ, ಅಂತಹ ಬಹುತೇಕ ಸಾಧನಗಳು ವಿಕಿಪೀಡಿಯವನ್ನು ಮಾಹಿತಿಯ ಆಕರವನ್ನಾಗಿ ಬಳಸುತ್ತಿವೆ. ಅವು ನಮಗೆ ಒದಗಿಸುವ ಮಾಹಿತಿ, ನಮಗೆ ಗೊತ್ತಿಲ್ಲದಿದ್ದರೂ, ವಿಕಿಪೀಡಿಯದಿಂದಲೇ ಬಂದಿರುವುದು ಸಾಧ್ಯ. ಹಾಗಾಗಿ, ವಿಕಿಪೀಡಿಯದಂತಹ ತಾಣಗಳಿಗೆ ಹೊಸ ಮಾಹಿತಿ ಸೇರುತ್ತಲೇ ಇರಬೇಕಾದ್ದು ಅತ್ಯಗತ್ಯ.
ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಉಪಯೋಗಿಸುವಂತೆ ನಮಗೆ ಗೊತ್ತಿರುವ ವಿಷಯಗಳನ್ನು ಹಂಚಿಕೊಳ್ಳುವುದಕ್ಕೂ ವಿಕಿಪೀಡಿಯ ತಾಣವನ್ನು ವೇದಿಕೆಯಾಗಿ ಬಳಸಿದರೆ ಅದು ನಿಜಕ್ಕೂ ಒಳ್ಳೆಯ ಕೆಲಸವಾಗಬಲ್ಲದು. ಹಾಗೆ ಮಾಡುವುದು ವಿಕಿಪೀಡಿಯಕ್ಕೆ ನಾವು ನೀಡುವ ಹುಟ್ಟುಹಬ್ಬದ ಉಡುಗೊರೆಯೂ ಆದೀತು!
ಕನ್ನಡ ವಿಕಿಪೀಡಿಯ: kn.wikipedia.org
ತುಳು ವಿಕಿಪೀಡಿಯ: tcy.wikipedia.org