ಸೂರ್ಯನ ಸುತ್ತ ಸುತ್ತುವ ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹ ಧೂಮಕೇತುಗಳೇ ಮೊದಲಾದವನ್ನು ಒಟ್ಟಾಗಿ ಸೌರಮಂಡಲವೆಂದು ಕರೆಯುತ್ತಾರೆ
ಸೂರ್ಯನ ಸುತ್ತ ಸುತ್ತುವ ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹ ಧೂಮಕೇತುಗಳೇ ಮೊದಲಾದವನ್ನು ಒಟ್ಟಾಗಿ ಸೌರಮಂಡಲವೆಂದು ಕರೆಯುತ್ತಾರೆ Image by WikiImages from Pixabay
ವೈವಿಧ್ಯ

ಸೌರಮಂಡಲದ ಬಗ್ಗೆ ನಿಮಗೆಷ್ಟು ಗೊತ್ತು?

ಇಜ್ಞಾನ ತಂಡ

ಸೂರ್ಯನ ಸುತ್ತಲೂ ಸುತ್ತುವ ಗ್ರಹಗಳು, ಅವುಗಳ ಉಪಗ್ರಹಗಳು, ಕ್ಷುದ್ರಗ್ರಹ ಧೂಮಕೇತುಗಳೇ ಮೊದಲಾದವನ್ನು ಒಟ್ಟಾಗಿ ಸೌರಮಂಡಲವೆಂದು ಕರೆಯುವುದು ನಮಗೆ ಗೊತ್ತೇ ಇದೆ. ಈ ಸೌರಮಂಡಲದ ಬಗ್ಗೆ ಐದು ಕುತೂಹಲಕರ ಸಂಗತಿಗಳು ಇಲ್ಲಿವೆ. ಹಿರಿಯ ವಿಜ್ಞಾನ ಲೇಖಕ ಡಾ. ಟಿ. ಆರ್. ಅನಂತರಾಮು ಈ ಹಿಂದೆ ಪ್ರಜಾವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದ 'ವಿಸ್ಮಯ' ಸರಣಿಯಿಂದ ಸಂಗ್ರಹಿಸಲಾದ ಈ ಮಾಹಿತಿಯನ್ನು ಲೇಖಕರ ಅನುಮತಿಯೊಡನೆ ಪ್ರಕಟಿಸಲಾಗಿದೆ.

ಒಳಗ್ರಹಗಳು ಮತ್ತು ಹೊರಗ್ರಹಗಳು

ಸೌರಮಂಡಲದಲ್ಲಿ ಗ್ರಹಗಳ ಹಂಚಿಕೆಯಲ್ಲಿ ಒಂದು ಕ್ರಮವಿದೆ. ಭೂಮಿಯಿಂದ ಸೂರ್ಯನ ಕಡೆಗೆ ಇರುವ ಗ್ರಹಗಳು ಒಳಗ್ರಹಗಳು-ಬಂಡೆಯಿಂದಾಗಿವೆ. ಭೂಮಿ, ಶುಕ್ರ ಮತ್ತು ಬುಧ ಈ ವರ್ಗದಲ್ಲಿ ಬರುತ್ತವೆ. ಮಂಗಳನಿಂದ ಹಿಡಿದು ನೆಪ್ಚೂನ್‌ವರೆಗೆ ಇರುವುವು ಹೊರಗ್ರಹಗಳು. ಬಹುತೇಕ ಅನಿಲ/ಗಟ್ಟಿ ಹಿಮದಿಂದಾಗಿವೆ.

ವರ್ಷಕ್ಕಿಂತಲೂ ದಿನವೇ ದೀರ್ಘ!

ಬುಧ ಗ್ರಹ ಸೂರ್ಯನನ್ನು ಪರಿಭ್ರಮಿಸಲು ೮೮ ದಿನಗಳು ಬೇಕು. ಆದರೆ ಸೂರ್ಯೋದಯದಿಂದ ಸೂರ್ಯೋದಯದವರೆಗೆ ತನ್ನ ಅಕ್ಷದ ಮೇಲೆ ಆವರ್ತಿಸಲು ೧೭೬ ದಿನಗಳು ಬೇಕು. ಅಲ್ಲಿ ವರ್ಷಕ್ಕಿಂತಲೂ ದಿನವೇ ದೀರ್ಘ.

ಈ ಗ್ರಹದ ಮೇಲೆ ಉಲ್ಕೆಗಳು ಅಪ್ಪಳಿಸಿ ಉಂಟಾದ ಕುಳಿಗಳಿಗೆ ಪ್ರಸಿದ್ಧ ಲೇಖಕರ, ಸಂಗೀತಗಾರರ, ಕಲಾವಿದರ ಹೆಸರನ್ನಿಡುವುದು ರೂಢಿಯಲ್ಲಿದೆ. ಅಲ್ಲಿನ ಒಂದು ಕುಳಿಗೆ ವ್ಯಾಸ ಎಂಬ ಹೆಸರಿದೆ. ಇನ್ನೊಂದು ಕುಳಿ ಕಾಳಿದಾಸ, ಮತ್ತೊಂದು ವಾಲ್ಮೀಕಿ. ಬೈರನ್, ಕೀಟ್ಸ್, ಬೆತೋವೆನ್ ಮತ್ತು ಷೇಕ್ಸ್‌ಪಿಯರ್ ಹೆಸರಿನ ಕುಳಿಗಳು ಅಲ್ಲಿವೆ.

ನೀರಾಗದ ಬರ್ಫ

ಘನರೂಪದ ಕಾರ್ಬನ್ ಡೈ ಆಕ್ಸೈಡನ್ನು ಶುಷ್ಕ ಬರ್ಫ ಎನ್ನುತ್ತಾರೆ. ಅದು ಕರಗಿದಾಗ ನೀರಾಗದೆ ನೇರವಾಗಿ ಬಾಷ್ಪವಾಗುತ್ತದೆ. ಮಂಗಳ ಗ್ರಹದ ಧ್ರುವಗಳಲ್ಲಿರುವುದು ಘನರೂಪಿ ಕಾರ್ಬನ್ ಡೈ ಆಕ್ಸೈಡ್.

ಈ ಗ್ರಹದ ಮೇಲಿರುವ ಒಲಂಪಸ್ ಮಾನ್ಸ್ ಎಂಬ ಜ್ವಾಲಾಮುಖಿ ಎಷ್ಟು ದೊಡ್ಡದೆಂದರೆ, ನಮ್ಮ ಎವರೆಸ್ಟ್ ಶಿಖರಕ್ಕಿಂತಲೂ ಸುಮಾರು ಮೂರು ಪಟ್ಟು ಹೆಚ್ಚು ಎತ್ತರ. ಸೌರಮಂಡಲದಲ್ಲಿ ಇದಕ್ಕೆ ಸಾಟಿ ಇಲ್ಲ.

ಚಂಡಮಾರುತದ ನರ್ತನ ಶಾಲೆ

ಸೌರಮಂಡಲದಲ್ಲಿ ಮಹಾದೈತ್ಯ ಗ್ರಹ ಗುರು. ಇದರಲ್ಲಿ ಮತ್ತೊಂದು ದೈತ್ಯ ಶನಿಗ್ರಹವನ್ನು ಸೇರಿದಂತೆ ಉಳಿದ ಎಲ್ಲ ಗ್ರಹಗಳನ್ನು ಅದರೊಳಗಿಟ್ಟರೂ ಇನ್ನೂ ಶೇ. ೩೦ ಭಾಗ ಖಾಲಿ ಇರುತ್ತದೆ. ಖಗೋಳ ವಿಜ್ಞಾನಿಗಳು ಹೇಳುವ ಮಾತೆಂದರೆ ಸೌರವ್ಯೂಹದಲ್ಲಿ ಸೂರ್ಯ, ಗುರು ಮತ್ತು ಇತರೆ ಚಿಲ್ಲರೆ ಗ್ರಹ- ಉಪಗ್ರಹಗಳಿವೆ.

ಗುರುಗ್ರಹದ ಸಮಭಾಜಕ ವೃತ್ತದ ೨೨ ಡಿಗ್ರಿ ದಕ್ಷಿಣಕ್ಕಿರುವ ಮಹಾಕೆಂಪು ಕಲೆ ಚಂಡಮಾರುತದ ನರ್ತನ ಶಾಲೆ. ಇದು ಅಪ್ರದಕ್ಷಿಣಾ ಪಥದಲ್ಲಿ ಸುತ್ತುತ್ತ ಏಳು ದಿನಗಳಲ್ಲಿ ಒಂದು ಸುತ್ತು ಮುಗಿಸುತ್ತದೆ. ಈ ಕಲೆ ಎಷ್ಟು ದೊಡ್ಡದು ಎಂದರೆ ಅದರಲ್ಲಿ ಮೂರು ಭೂಮಿಗಳನ್ನು ತೂರಿಸಬಹುದು. ೪೦೦ ವರ್ಷಗಳಿಂದ ಅದು ಹೆಚ್ಚೇನು ಬದಲಾವಣೆ ತೋರಿಲ್ಲ.

ಮಂಕಾಗಿ ಕಾಣುವ ಸೂರ್ಯ

೨೦೦೬ರ ನಂತರ ಕುಬ್ಜ ಗ್ರಹದ ಪಟ್ಟಿಯನ್ನು ಸೇರಿರುವ ಪ್ಲೂಟೋ ಸೂರ್ಯನಿಂದ ೪.೪ ರಿಂದ ೭.೪ ಶತಕೋಟಿ ಕಿಲೋ ಮೀಟರ್ ದೂರದಲ್ಲಿದೆ. ಆ ಕಾಯದಲ್ಲಿ ನಿಂತು ಸೂರ್ಯನನ್ನು ವೀಕ್ಷಿಸಿದರೆ ಸೂರ್ಯ, ಭೂಮಿಯಲ್ಲಿ ಕಾಣುವುದಕ್ಕಿಂತ ೧೬೦೦ ಪಟ್ಟು ಮಂಕಾಗಿ ಕಾಣಿಸುತ್ತದೆ.