ವಿಜ್ಞಾನ ವಿಷಯಗಳ ಪರಿಚಯದ ಜೊತೆ ಆ ಪರಿಚಯ ಹೇಗಿರಬೇಕು ಎನ್ನುವುದರ ಮಾದರಿಯಾಗಿಯೂ ಈ ಸಂಕಲನವನ್ನು ನೋಡಬಹುದು
ವಿಜ್ಞಾನ ವಿಷಯಗಳ ಪರಿಚಯದ ಜೊತೆ ಆ ಪರಿಚಯ ಹೇಗಿರಬೇಕು ಎನ್ನುವುದರ ಮಾದರಿಯಾಗಿಯೂ ಈ ಸಂಕಲನವನ್ನು ನೋಡಬಹುದು ejnana.com
ವೈವಿಧ್ಯ

ಪುಸ್ತಕ ಪರಿಚಯ: ಸದ್ದು! ಸಂಶೋಧನೆ ನಡೆಯುತ್ತಿದೆ...

ಇಜ್ಞಾನ ತಂಡ

ವಿಜ್ಞಾನಿ-ವಿಜ್ಞಾನಲೇಖಕ ಸುಧೀಂದ್ರ ಹಾಲ್ದೊಡ್ಡೇರಿಯವರು ತಮ್ಮ ಅಂಕಣ ಬರಹಗಳಿಂದ ಕನ್ನಡದ ಓದುಗರಿಗೆ ಚಿರಪರಿಚಿತರು. ಕ್ಲಿಷ್ಟ ವಿಷಯಗಳನ್ನೂ ಬಹಳ ಸರಳವಾಗಿ ಅರ್ಥವಾಗುವಂತೆ, ಇಷ್ಟಪಟ್ಟು ಓದಲು ಸಾಧ್ಯವಾಗುವಂತೆ ಬರೆಯುವ ಕೆಲವೇ ಕನ್ನಡ ಲೇಖಕರ ಸಾಲಿನಲ್ಲಿ ಅವರದ್ದು ಮಹತ್ವದ ಸ್ಥಾನ.

ಅವರು ಬರೆದ ನಲವತ್ತೆರಡು ವಿಜ್ಞಾನ ಬರಹಗಳ ಸಂಕಲನವೇ 'ಸದ್ದು! ಸಂಶೋಧನೆ ನಡೆಯುತ್ತಿದೆ...'. ವಿಭಿನ್ನ ಹೆಸರಿನ ಈ ಸಂಕಲನದಲ್ಲಿ ಅಷ್ಟೇ ವಿಭಿನ್ನ ವಿಷಯಗಳನ್ನು ಕುರಿತು ಆಸಕ್ತಿಹುಟ್ಟಿಸುವ ಬರಹಗಳಿವೆ. ಅಷ್ಟೇ ಅಲ್ಲ, ವಿಜ್ಞಾನ ಸಾಹಿತ್ಯ ಪ್ರಕಾರದಲ್ಲಿ ೨೦೧೮ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಕೂಡ ಈ ಕೃತಿಗೆ ಲಭಿಸಿದೆ.

ಆಕ್ಸಿಟಾಸಿನ್ ಹಾರ್ಮೋನ್, ಗ್ಲುಟೆನ್-ಫ್ರೀ ಆಹಾರ, ಇಲೆಕ್ಟ್ರಾನಿಕ್ ನಾಸಿಕ ಮುಂತಾದ ಹಲವಾರು ಹೊಸ ವಿಷಯಗಳನ್ನು ಈ ಸಂಕಲನದಲ್ಲಿನ ಲೇಖನಗಳು ನಮಗೆ ಪರಿಚಯಿಸುತ್ತವೆ. ಹೊಸ ವಿಷಯಗಳ ಬಗ್ಗೆ ಹೇಳುವಾಗ ಅದಕ್ಕೆ ಬೇಕಾದ ಪ್ರಾಥಮಿಕ ಮಾಹಿತಿಯನ್ನೂ ಸರಳವಾಗಿ ವಿವರಿಸಿರುವುದು ಈ ಲೇಖನಗಳ ಹೆಗ್ಗಳಿಕೆ.

ಉದಾಹರಣೆಗೆ, ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದ ಹೊಸ ಬೆಳವಣಿಗೆಗಳ ಬಗ್ಗೆ ನಾವು ಅಲ್ಲಲ್ಲಿ ಓದುತ್ತಿರುತ್ತೇವೆ. ಆದರೆ ಅಂತಹ ಬಹುತೇಕ ಲೇಖನಗಳಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಎಂದರೇನು ಎಂಬ ವಿಷಯವೇ ಇರುವುದಿಲ್ಲ. ಆದರೆ ಸುಧೀಂದ್ರರ ಬರಹ ಆ ಗುಂಪಿಗೆ ಸೇರುವುದಿಲ್ಲ: ಕ್ವಾಂಟಮ್ ಕಂಪ್ಯೂಟಿಂಗ್‌ ಬಗ್ಗೆ ಸರಳ ಪರಿಚಯ ನೀಡಿದ ನಂತರವೇ ಅವರು ಆ ಕ್ಷೇತ್ರದ ಹೊಸ ಬೆಳವಣಿಗೆಯ ಬಗ್ಗೆ ಬೆಳಕುಚೆಲ್ಲುತ್ತಾರೆ.

ವಿಜ್ಞಾನ ವಿಷಯಗಳ ಪರಿಚಯ ಹಾಗಿರಲಿ, ಆ ಪರಿಚಯ ಹೇಗಿರಬೇಕು ಎನ್ನುವುದರ ಮಾದರಿಯಾಗಿಯೂ ಈ ಸಂಕಲನವನ್ನು ನೋಡಬಹುದು. ಹೊಸ ಪದಗಳನ್ನು ಬಳಸಿರುವ (ಉದಾ: ಹ್ಯಾಕರ್‌ಗೆ 'ಕೊಚ್ಚಪ್ಪ') ಪರಿಪಾಠವೂ ಅನುಕರಣೀಯವಾಗಿದೆ. ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ಬಯಸುವ ಓದುಗರು ಮಾತ್ರವಲ್ಲ, ತಿಳಿಸುವ ಆಸಕ್ತಿಯಿರುವ ಲೇಖಕರೂ ಓದಬೇಕಾದ ಕೃತಿ ಇದು.

ಸದ್ದು! ಸಂಶೋಧನೆ ನಡೆಯುತ್ತಿದೆ...

(ಬೆಳಕಿಂಡಿಯಲ್ಲಿ ಕಂಡ ವಿಜ್ಞಾನ ವಿಸ್ಮಯಗಳು)

ಲೇಖಕರು: ಸುಧೀಂದ್ರ ಹಾಲ್ದೊಡ್ಡೇರಿ

ಪ್ರಕಾಶಕರು: ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು

೧೬೦ ಪುಟಗಳು, ಬೆಲೆ: ರೂ. ೧೫೦