<div class="paragraphs"><p>ವಿಜ್ಞಾನಕ್ಕೇ ಮೀಸಲಾದ ಭಾರತದ ಏಕೈಕ ಓಟಿಟಿ ಚಾನೆಲ್ 'ಇಂಡಿಯಾ ಸೈನ್ಸ್'</p></div>

ವಿಜ್ಞಾನಕ್ಕೇ ಮೀಸಲಾದ ಭಾರತದ ಏಕೈಕ ಓಟಿಟಿ ಚಾನೆಲ್ 'ಇಂಡಿಯಾ ಸೈನ್ಸ್'

 

indiascience.in

ವೈವಿಧ್ಯ

ಇಂಡಿಯಾ ಸೈನ್ಸ್: ವಿಜ್ಞಾನ ವೀಡಿಯೋಗಳಿಗೆ ಭಾರತದ್ದೇ ಓಟಿಟಿ!

ಇಜ್ಞಾನ ತಂಡ

ಭಾರತದ ಏಕೈಕ ವಿಜ್ಞಾನದ್ದೇ ಓಟಿಟಿ ಚಾನೆಲ್ ಇಂಡಿಯಾ ಸೈನ್ಸ್‌ಗೆ (www.indiascience.in) ಇಂದು ಮೂರು ವರ್ಷ. ಒಂದು ಕಾಲವಿತ್ತು. ಟೆಲಿವಿಷನ್‌ ಚಾನೆಲ್ಲುಗಳಲ್ಲಿ ವಿಜ್ಞಾನ ಎಂದರೆ ವಾರದಲ್ಲಿ ಅರ್ಧ ಗಂಟೆಯೋ, ಕಾಲು ಗಂಟೆಯೋ ಅವಕಾಶ ದೊರೆಯುತ್ತಿತ್ತು. ಸುದ್ದಿಗಳಲ್ಲಿಯೂ ಅವಕಾಶ ಇರುತ್ತಿರಲಿಲ್ಲ. ಇದೀಗ ಹೊಸ ತಂತ್ರಜ್ಞಾನದ ನೆರವಿನಿಂದ ಬೇಕೆಂದಾಗ ವಿಜ್ಞಾನದ ವಿಚಾರಗಳನ್ನು ತಿಳಿಯಲು ಅನುವು ಮಾಡುವ ಇಂಡಿಯಾ ಸೈನ್ಸ್‌ ಓಟಿಟಿ ಆರಂಭವಾಗಿ ಮೂರು ವರ್ಷಗಳು ಕಳೆದಿವೆ.

ಇಂಡಿಯಾ ಸೈನ್ಸ್‌ ನವದೆಹಲಿಯ ವಿಜ್ಞಾನ ಪ್ರಸಾರ್‌ ಸಂಸ್ಥೆಯ ಸಾಹಸ. ಸಾಧನೆ ಎನ್ನಬಹುದು. ವಿಜ್ಞಾನದ ಚಲನಚಿತ್ರಗಳು ಹಾಗೂ ವೀಡಿಯೋಗಳಲ್ಲಿ ಭಾರತೀಯ ವಿಜ್ಞಾನದ ಹೊಳಹು ಬಹಳ ಕ್ಷೀಣವಾಗಿರುವುದನ್ನು ಕಂಡು ಈ ಪ್ರಯತ್ನಕ್ಕೆ ವಿಜ್ಞಾನ ಪ್ರಸಾರ್‌ ಸಂಸ್ಥೆ ಕೈ ಹಾಕಿತು. ಕಳೆದ ಮೂರು ವರ್ಷಗಳಲ್ಲಿ ಈ ಚಾನೆಲ್ಲಿನಲ್ಲಿ ಏನಿಲ್ಲವೆಂದರೂ ಮೂರು ಸಾವಿರ ವೀಡಿಯೋಗಳನ್ನು ಕೂಡಿಡಲಾಗಿದೆ.

ಇದೇನೂ ಕಡಿಮೆ ಸಾಧನೆಯಲ್ಲ. ಏಕೆಂದರೆ ಇಲ್ಲಿರುವ ಪ್ರತಿಯೊಂದು ವೀಡಿಯೋ ಕೂಡ ಭಾರತೀಯ ವಿಜ್ಞಾನದ ಗತಿ, ಸ್ಥಿತಿ ಹಾಗೂ ನಡೆ, ನುಡಿಗಳನ್ನು ದಾಖಲಿಸುತ್ತವೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಪರಿಕಲ್ಪನೆಗಳನ್ನು ಶ್ರುತಗೊಳಿಸುವ ವೀಡಿಯೋಗಳು, ಕೊರೊನಾ ಸಾಂಕ್ರಾಮಿಕತೆಯ ಬಗ್ಗೆ ಕಾಲಕಾಲಕ್ಕೆ ಹೊಸ ವಿವರಗಳ ದಾಖಲಾತಿ, ವಿವಿಧ ವಿಜ್ಞಾನ ಸಂಸ್ಥೆಗಳ ಪರಿಚಯ. ಸುಪ್ರಸಿದ್ಧ ಹಾಗೂ ಸಾಧಕ ವಿಜ್ಞಾನಿಗಳ ಜೀವನ ಚರಿತ್ರೆ, ಪರಿಚಯ ಮುಂತಾಗಿ ಕೇವಲ ಭಾರತೀಯ ವಿಷಯಗಳೇ ಕೇಂದ್ರವಾಗಿರುವ ನೂರಾರು ವೀಡಿಯೋಗಳು ಇಲ್ಲಿವೆ.

ಬಹುತೇಕ ವೀಡಿಯೋಗಳು ಹಿಂದೀ ಹಾಗೂ ಇಂಗ್ಲೀಷಿನಲ್ಲಿವೆ. “ಈ ಕೊರತೆಯ ಬಗ್ಗೆ ನಮಗೆ ಅರಿವಿದೆ. ಕನ್ನಡದಂತಹ ಬಾಷೆಗಳಲ್ಲಿ ಹೊಸ ವೀಡಿಯೋಗಳನ್ನು ತಯಾರಿಸಲು ಪ್ರೋತ್ಸಾಹ ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ವಿಜ್ಞಾನ ವೀಡಿಯೋ, ಚಲನಚಿತ್ರಗಳ ತಯಾರಿಕೆಯ ಬಗ್ಗೆ ಅಲ್ಪಾವಧಿಯ ತರಬೇತಿ ಕಾರ್ಯಕ್ರಮವನ್ನು ಕನ್ನಡದಲ್ಲಿ ಆಯೋಜಿಸಿದ್ದೆವು. ಈಗಾಗಲೇ ಕೂಡಿಟ್ಟಿರುವ ವೀಡಿಯೋಗಳ ಡಬ್ಬಿಂಗ್‌, ಸಬ್‌ ಟೈಟಲಿಂಗ್‌ ಮಾಡುವವರಿಗೂ ಸ್ವಾಗತ.” ಎನ್ನುತ್ತಾರೆ ಈ ಸಾಧನೆಯ ರೂವಾರಿ ವಿಜ್ಞಾನ ಪ್ರಸಾರ್‌ ಸಂಸ್ಥೆಯ ನಿರ್ದೇಶಕ ಡಾ ನಕುಲ್‌ ಪರಾಶರ್.‌

“ವಿಜ್ಞಾನಕ್ಕೆಂದೇ ಒಂದು ಟೆಲಿವಿಷನ್‌ ಚಾನೆಲ್‌ ಮಾಡುವ ಆಸೆ ಬಹಳ ದಿನಗಳಿಂದ ಇತ್ತು. ಆದರೆ ಅದು ನೆರವೇರಲಿಲ್ಲ. ಈಗ ಇಂಡಿಯಾ ಸೈನ್ಸ್‌ ಅದನ್ನು ನನಸಾಗಿಸಿದೆ.” ಎನ್ನುತ್ತಾರೆ ಟೆಲಿವಿಷನ್‌ ನಲ್ಲಿ ವಿಜ್ಞಾನದ ಸುದ್ದಿಗಳನ್ನು ವರದಿ ಮಾಡುತ್ತಿದ್ದ ಖ್ಯಾತ ಪತ್ರಕರ್ತ ಪಲ್ಲವ ಬಾಗ್ಲಾ. ಬಾಗ್ಲಾ ಅವರು ವಾರಕ್ಕೊಮ್ಮೆ ಇಂಡಿಯಾಸೈನ್ಸ್‌ ಚಾನೆಲ್ಲಿನಲ್ಲಿ ಲಿವಿಂಗ್‌ ವಿತ್‌ ಸೈನ್ಸ್‌ ಎನ್ನುವ ಸುದ್ದಿ ಪತ್ರಿಕೆ ಬಹಳಷ್ಟು ಪ್ರಸಿದ್ಧಿ ಪಡೆದಿದೆ.

ಇಂಡಿಯಾ ಸೈನ್ಸ್‌ ಅನ್ನು ಭಾರತೀಯ ಭಾಷೆಗಳೆಲ್ಲದರಲ್ಲೂ ತಯಾರಾಗುವ ವಿಜ್ಞಾನ ವೀಡಿಯೋಗಳ ನಿಧಿಯನ್ನಾಗಿಯೂ, ಅದನ್ನು ವಿತರಿಸುವ ಮಾಧ್ಯಮವನ್ನಾಗಿಯೂ ರೂಪಿಸುವುದು ವಿಜ್ಞಾನ ಪ್ರಸಾರದ ಕನಸು. ಈ ನಿಟ್ಟಿನಲ್ಲಿ ಇಂಡಿಯಾಸೈನ್ಸ್‌ ಎನ್ನುವ ಆಪ್‌ ಕೂಡ ಆಂಡ್ರಾಯಿಡ್‌ ಫೋನುಗಳಿಗೆ ಲಭ್ಯವಿದೆ. ಇದರ ಮೂಲಕ ಎಲ್ಲ ವೀಡಿಯೋಗಳನ್ನೂ ಬೇಕೆಂದಾಗ ನೋಡಬಹುದು.

ಕನ್ನಡದಲ್ಲಿ ಡಬಿಂಗ್‌ ಹಾಗೂ ಸಬ್‌ ಟೈಟಲಿಂಗ್‌ ಮಾಡಲು ಇಚ್ಚಿಸುವವರು ಕುತೂಹಲಿ ಯನ್ನು (kutuhalikannada@gmail.com) ಸಂಪರ್ಕಿಸಬಹುದು.