ಒಂದೇ ದಶಕದಲ್ಲಿ ಶೂನ್ಯದಿಂದ ನೂರು ಕೋಟಿ ಬಳಕೆದಾರರನ್ನು ತಲುಪಿದ್ದು ಯೂಟ್ಯೂಬ್ ಸಾಧನೆ!
ಒಂದೇ ದಶಕದಲ್ಲಿ ಶೂನ್ಯದಿಂದ ನೂರು ಕೋಟಿ ಬಳಕೆದಾರರನ್ನು ತಲುಪಿದ್ದು ಯೂಟ್ಯೂಬ್ ಸಾಧನೆ! Photo created by natanaelginting - freepik
ವೈವಿಧ್ಯ

ಯೂಟ್ಯೂಬ್‌ಗೆ ಹ್ಯಾಪಿ ಬರ್ತ್‌ಡೇ!

ಇಜ್ಞಾನ ತಂಡ

ಯೂಟ್ಯೂಬ್ 'ಇ-ಕಾಲದ' ಜನರಿಗೆ ತಾಯಿ ಇದ್ದಂತೆ. ಯೂಟ್ಯೂಬ್ ನಲ್ಲಿ ಬೆಳಿಗ್ಗೆ ಬೇಗ ಹೇಗೆ ಏಳಬೇಕು ಎನ್ನುವುದರಿಂದ ಹಿಡಿದು ಒಳ್ಳೆಯ ನಿದ್ದೆ ಹೇಗೆ ಮಾಡಬೇಕು ಎನ್ನುವ ತನಕ ಮಾನವ ಅರಿತ ಸಕಲ ಸೃಷ್ಟಿಯ ರಹಸ್ಯವೂ ಇದೆ. ಜ್ಞಾನದ ಭಂಡಾರ ಅದು. ಮಾಹಿತಿಯ ಸಾಗರ. ಹೌದು ಸಾಗರ ಎಂದಾಕ್ಷಣ ನೆನಪಾಯಿತು ಒಂದು ವಿಷಯ ಕೇಳಬೇಕಿತ್ತು, ಈ ಸುನಾಮಿ ಹಾಗೂ ಯುಟ್ಯೂಬ್ ಗೆ ಸಂಬಂಧ ಇದೆ ನಿಮಗಿದು ಗೊತ್ತಾ? ಯುಟ್ಯೂಬ್ ಹುಟ್ಟಿಕೊಳ್ಳುವುದಕ್ಕೆ ಒಂದು ಕಾರಣವೇ 2004ರ ಸುನಾಮಿ. ಸುನಾಮಿಯ ರಣಚಂಡಿ ಅವತಾರವನ್ನು ನೋಡಬೇಕು, ಎಲ್ಲಿ ಏನಾಯಿತು ಎಂದು ತಿಳಿಯಬೇಕು ಅಂದರೆ ಒಂದು ವಿಡಿಯೋ ಸಿಗುಲಿಲ್ಲ. ಟಿವಿಯ ಮೇಲೆಯೇ ಸಂಪೂರ್ಣ ಅವಲಂಬನೆ. ಟಿವಿ ತೋರಿಸಿದಾಗ ಮಾತ್ರ ನೋಡಬೇಕು. ಇದರಿಂದ ಬೇಸತ್ತು ಮೂರು ಜನ ಗೆಳೆಯರು ಸೇರಿ ಒಂದು ವೆಬ್ಸೈಟ್ ಸೃಷ್ಟಿಮಾಡುತ್ತಾರೆ. ಅದರಲ್ಲಿ ಯಾರೇ ಬೇಕಾದರೂ ತಾವು ಚಿತ್ರಿಸಿದ ವಿಡಿಯೋವನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಬಹುದು. ಫ್ರೀಯಾಗಿ! ಈ ಒಂದು ವಿಚಾರ ಇವತ್ತು ಯುಟ್ಯೂಬ್ ಎನ್ನುವ ಒಂದು ಬೃಹದಾಕಾರದ ಜಗತ್ತನ್ನು ಸೃಷ್ಟಿಸಿದೆ. ಇದಿಲ್ಲದೆ ಬದುಕನ್ನು ಕಲ್ಪಿಸಿಕೊಳ್ಳಿ ಒಂದು ಕ್ಷಣ!

ಈ ಯುಟ್ಯೂಬ್ ಜಗತ್ತಿನ ಆ ಬ್ರಹ್ಮ, ವಿಷ್ಣು, ಹಾಗೂ ಮಹೇಶ್ವರರೇ ಸ್ಟೀವ್ ಚೆನ್, ಜಾವೇದ್ ಕರೀಮ್ ಮತ್ತು ಚಾಡ್ ಹರ್ಲಿ. ಇವರು ಇದಕ್ಕೂ ಮುನ್ನ ಪೇ ಪಾಲ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದವರು. ಅವರು ಪ್ರಾರಂಭಿಸಿದ ಯೂಟ್ಯೂಬ್‌ನಲ್ಲಿ ಇಂದಿಗೆ ಹದಿನೈದು ವರ್ಷಗಳ ಹಿಂದೆ, ಅಂದರೆ 2005 ರ ಎಪ್ರಿಲ್ 23ರಂದು ಮೊದಲ ವಿಡಿಯೋ ಅಪ್ಲೋಡ್ ಆಗಿತ್ತು.

'ಮೀ ಆ್ಯಟ್ ಜೂ' ಎಂಬ ಈ ಮೊದಲ ವಿಡಿಯೋವನ್ನು ಜಾವೇದ್ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದೇ ವರ್ಷ ಯೂಟ್ಯೂಬ್ ಅನ್ನು 1.6 ಬಿಲಿಯನ್ ಡಾಲರ್ ಕೊಟ್ಟು ಗೂಗಲ್ ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಒಂದೇ ದಶಕದಲ್ಲಿ ಶೂನ್ಯದಿಂದ ನೂರು ಕೋಟಿ ಬಳಕೆದಾರರನ್ನು ತಲುಪಿದ್ದು ಯೂಟ್ಯೂಬ್ ಸಾಧನೆ. ಇಂದು ಹದಿನೈದು ವರ್ಷಗಳ ಪಯಣದ ನಂತರ ಯೂಟ್ಯೂಬ್ ನೋಡದ ದೇಶವಿಲ್ಲ, ಜಾತಿಯಿಲ್ಲ, ಧರ್ಮವಿಲ್ಲ, ಭಾಷೆಯಿಲ್ಲ. ಆರು ತಿಂಗಳ ಮಗುವಿಗೂ ತುತ್ತು ಉಣ್ಣುವಾಗ ಯೂಟ್ಯೂಬ್ ಬೇಕು, ಹಾಗೆಯೇ ತೊಂಬತ್ತರ ತಾತನಿಗೂ ಸಮಯ ಕಳೆಯಲು. ಎಲ್ಲರ ಮನವನ್ನು ಆವರಿಸಿದೆ. ಕಲೆ, ಸಾಹಿತ್ಯ, ವಿಜ್ಞಾನ, ಭಾಷೆ, ರಾಜಕೀಯ, ಆರ್ಥಿಕತೆ, ನಿಮಗೆ ಏನು ಬೇಕೋ ಎಲ್ಲದರ ಮಾಹಿತಿಯೂ ವಿಡಿಯೋ ಮುಖಾಂತರವೇ ಸಿಗುತ್ತದೆ.

ಯೂಟ್ಯೂಬ್ ನಲ್ಲಿ ಒಂದು ಸೆಕೆಂಡಿಗೆ 80,000 ಕ್ಕೂ ಹೆಚ್ಚು ವಿಡಿಯೋ ನೋಡಲ್ಪಡುತ್ತದೆ!

ಇದರ ಜನಪ್ರಿಯತೆ ಎಷ್ಟು ಅಂದರೆ ಜಗತ್ತಿನಾದ್ಯಂತ ಒಂದು ಸೆಕೆಂಡಿಗೆ 80,000 ಕ್ಕೂ ಹೆಚ್ಚು ವಿಡಿಯೋ ನೋಡಲ್ಪಡುತ್ತದೆ, 10 ತಾಸಿನ ವಿಡಿಯೋ ಅಪ್ಲೋಡ್ ಆಗುತ್ತದೆ, 25 ಸಾವಿರಕ್ಕೂ ಹೆಚ್ಚು ತಾಸಿನ ವಿಡಿಯೋ ವೀಕ್ಷಣೆಯಾಗುತ್ತದೆ. ಫೇಸ್ಬುಕ್ ನಂತರ ಅತೀ ಜನಪ್ರಿಯತೆ ಪಡೆದ ಆ್ಯಪ್ ಅಂದರೆ ಯುಟ್ಯೂಬ್. 79% ಅಂತರ್ಜಾಲ ಬಳಕೆದಾರರು ಪ್ರತ್ಯೇಕ ಯುಟ್ಯೂಬ್ ಖಾತೆಯನ್ನು ಹೊಂದಿದ್ದಾರೆ. ಒಟ್ಟೂ ಇನ್ನೂರು ಕೋಟಿ ಆ್ಯಕ್ಟಿವ್ ಬಳಕೆದಾರರಿದ್ದಾರೆ! ಎಂಬತ್ತು ಬೇರೆ ಬೇರೆ ಭಾಷೆಯಲ್ಲಿದೆ. 80 ಭಾಷೆಗಳು ಜಗತ್ತಿನ 95% ಅಂತರ್ಜಾಲ ಬಳಕೆದಾರರನ್ನು ತಲುಪುತ್ತದೆ. ಸಾಮಾಜಿಕ ಜಾಲತಾಣಕ್ಕೆ ಅದರದ್ದೇ ಆದ ಒಂದು ವಯಸ್ಸಿನ ಗ್ರಾಹಕರಿದ್ದಾರೆ, ಆದರೆ ಇಲ್ಲಿ ಹಾಗಲ್ಲ - ಮಕ್ಕಳಿಂದ ಹಿಡಿದು ಮುದುಕರ ತನಕ 90% ಇಂಟರ್ನೆಟ್ ಬಳಕೆದಾರರಿಗೆ ಯುಟ್ಯೂಬ್ ಚಿರಪರಿಚಿತ.

ಮೊಬೈಲ್ ಇಂಟರ್ನೆಟ್ ಬಂದಾಗಿನಿಂದ ಯೂಟ್ಯೂಬ್ ಬಳಕೆ ಸಿಕ್ಕಾಪಟ್ಟೆ ಹೆಚ್ಚಿದೆ. ಒಂದು ದಿನಕ್ಕೆ ಒಂದು ನೂರು ಕೋಟಿ ತಾಸುಗಳ ವಿಡಿಯೋ ಈ ಜಗತ್ತು ನೋಡುತ್ತದೆ. ಟಿವಿಯನ್ನ ಅಂಗೈಯಲ್ಲಿ ಕೊಟ್ಟಂತೆ ಅಲ್ಲವೆ? ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಗಿಂತ ಮೊಬೈಲ್ ನಲ್ಲಿ ಯುಟ್ಯೂಬ್ ನೋಡುವವರೇ ಹೆಚ್ಚು. 70:30 ರ ಅನುಪಾತ. ಪ್ರತಿ ದಿನ ಒಂದು ನೂರು ಕೋಟಿ ತಾಸುಗಳ ವೀಕ್ಷಣೆಯಾಗುತ್ತದೆ.

ಇಷ್ಟೆಲ್ಲಾ ಜನಪ್ರಿಯತೆ ಗಳಿಸಲು ಹಲವಾರು ಕಾರಣಗಳಿವೆ. ಜನರಿಗೆ ಓದುವುದಕ್ಕಿಂತ ವಿಡಿಯೋ ನೋಡುವುದೇ ಇಷ್ಟ, ಇದು ಯುಟ್ಯೂಬ್ ನ ಜನಪ್ರಿಯತೆಗೆ ಮೂಲ ಕಾರಣ. ಇದರ ಹೊರತಾಗಿ ತುಂಬಾ ಸುಲಭವಾಗಿ ದೊರೆಯುತ್ತದೆ. ಬಳಕೆಗೆ ಸರಳ. ಹೆಚ್ಚಾಗಿ ಎಲ್ಲ ಭಾಷೆಯ, ಎಲ್ಲರ ಆಸಕ್ತಿಯ ವಿಷಯವೂ ಇದೆ. ಫ್ರೀ. ಹವ್ಯಾಸಕ್ಕೂ ಬಳಸಬಹುದು, ಬಿಸಿನೆಸ್‌ಗೂ ಸಹ ಸರಿ.

ಇಲ್ಲಿ ಒಂದು ವಿಷಯ ಹೇಳಬೇಕು. ಎಷ್ಟೋ ಜನ ಯುಟ್ಯೂಬ್ ವಿಡಿಯೋ ಮಾಡಿ ಕೋಟ್ಯಾಂತರ ಹಣ ಗಳಿಸುತ್ತಿದ್ದಾರೆ. ಕಳೆದ ವರ್ಷದ ವಿಷಯ ಎಂಟು ವಯಸ್ಸಿನ ಹುಡುಗ ವಿಡಿಯೋ ಮಾಡಿ ಬರೋಬ್ಬರಿ 182 ಕೋಟಿ ಹಣ ಗಳಿಸುತ್ತಿದ್ದ. ಆತನ ಹೆಸರು ರಾಯನ್ ಕಜಿ. ಇಲ್ಲಿಯವರೆಗೆ ಅತೀ ಹೆಚ್ಚು ಹಣ ಸಂಪಾದಿಸಿದ ವ್ಯಕ್ತಿ ಆ ಪುಟಾಣಿ.

ಈಗಿನ ಕಾಲದಲ್ಲಿ ಮೊಬೈಲ್ ಇದ್ದರೆ ಸಾಕು, ಎಷ್ಟು ಚೆಂದದ ವಿಡಿಯೋ ಕೂಡ ಮಾಡಬಹುದು. ಯುಟ್ಯೂಬ್ ಜನರಿಗೆ ಇಷ್ಟವಾಗಲು ಕೃತಕ ಬುದ್ಧಿಮತ್ತೆ ಕೂಡ ಬಹಳ ಮುಖ್ಯ. ಹೆಚ್ಚಾಗಿ ಇದು ಗುರುತಿಸಲ್ಪಡುವುದಿಲ್ಲ. ಆಳವಾಗಿ ಇದನ್ನು ಅಧ್ಯಯನ ಮಾಡಿದರೆ ಕೃತಕ ಬುದ್ಧಿಮತ್ತೆಯಂತೂ ಇಲ್ಲಿ ಸೂಪರ್ ಆಗಿದೆ. ನಾವು ಅಂತರ್ಜಾಲವನ್ನು ಹೇಗೆ ಬಳಸುತ್ತೇವೆ ಎಂದು ಅರ್ಥ ಮಾಡಿಕೊಂಡು, ನಮ್ಮ ಅಭಿರುಚಿಗೆ ತಕ್ಕಂತೆ ನಮಗೆ ವಿಡಿಯೋಗಳು ಕಾಣುತ್ತಾ ಹೋಗುತ್ತವೆ. ಇದರಿಂದ ಯುಟ್ಯೂಬ್ ಬಳಸಲು ಇನ್ನಷ್ಟು ಖುಷಿ.

ಯುಟ್ಯೂಬ್ ಬಂದಾಗಿನಿಂದ ಜಗತ್ತೇ ಬದಲಾಗಿದೆ. ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಜ್ಞಾನವನ್ನು ಮುಟ್ಟಿಸುವ ಸೇತುವೆ ಇದಾಗಿದೆ. ಮೊನ್ನೆ ಉಪ್ಪಿನಕಾಯಿ ಹೇಗೆ ಮಾಡುವುದು ಎಂದು ನಾವು ಯುಟ್ಯೂಬ್ ನಲ್ಲಿ ನೋಡುತ್ತಿದ್ದೆವು. ಪ್ರತಿಯೊಬ್ಬರಿಗೂ ತಮ್ಮನ್ನು ವ್ಯಕ್ತಪಡಿಸುವ ಒಂದು ಮಾಧ್ಯಮ ಸಿಕ್ಕಿದೆ. ನೆನಪುಗಳು ಆಗರ ಇದಾಗಿದೆ. ಜಾಗಕ್ಕೆ ಮಿತಿಯಿಲ್ಲ. ಎಷ್ಟು ಬೇಕಾದರೂ ಅಪ್ಲೋಡ್ ಮಾಡಬಹುದು. ಹಣಕಾಸಿನ ವಿಷಯದಲ್ಲಿ ಕೂಡ ಎತ್ತಿದ ಕೈ. ಒಂದು ಪ್ರಾಡಕ್ಟ್ ನ್ನು ಮಾರಾಟ ಮಾಡಬೇಕು, ಅದರ ಬ್ಯಾಂಡಿಂಗ್ ಆಗಬೇಕು ಎಲ್ಲವೂ ಸಾಧ್ಯ. ನೆಟ್ ಫ್ಲಿಕ್ಸ್ ಅಥವಾ ಅಮೇಜಾನ್ ಪ್ರೈಮ್ ಇತ್ತೀಚೆಗೆ ಬಂದಿದ್ದು,‌ಮೊದಲೆಲ್ಲಾ ನಾವು ತಾಸುಗಟ್ಟಲೆ ಕೂತು ಸಿನೇಮಾ ನೋಡುತ್ತಿದ್ದಿದ್ದು ಯುಟ್ಯೂಬ್ ನಲ್ಲೇ ತಾನೆ?

ನಮಗೆ ಯುಟ್ಯೂಬ್ ಉಚಿತವಾಗಿ ದೊರಕುತ್ತದೆ. ಆದರೆ ವಿಶೇಷ ನೋಡಿ, ಇಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವುದರಿಂದ ಗೂಗಲ್ ಪ್ರತಿವರ್ಷವೂ 15 ಬಿಲಿಯನ್ ಡಾಲರ್ ಗಳಿಸುತ್ತದೆ. ಕೋಟಿ ಕೋಟಿ ವಿಡಿಯೋ ಗಳನ್ನು ನಮ್ಮ ಕೈಬೆರಳ ಮುಂದೆ ತಂದು ಕುಣಿಸಲು ಆ ಕಂಪನಿಗೆ ತಗಲುವ ವೆಚ್ಚ ಆರು ನೂರು ಕೋಟಿ. ಇತ್ತೀಚೆಗೆ ಅದು ಪೇಯ್ಡ್ ಸರ್ವೀಸ್ ಕೂಡ ಶುರುಮಾಡಿದೆ. ನೀವು ಹಣ ಕೊಟ್ಟು ಚಂದಾದಾರರಾದರೆ ವೀಕ್ಷಣೆಯ ನಡುವೆ ಜಾಹೀರಾತು ತೊಂದರೆ ಕೊಡುವುದಿಲ್ಲ.

ಸಮಾಜಕ್ಕೆ ಯುಟ್ಯೂಬ್ ಒಂದು ವರವೇ, ನೋ ಡೌಟ್. ಆದರೆ ಇಂತಹ ಒಂದು ಒಳ್ಳೆಯ ಸಾಧನವನ್ನು ಕೆಟ್ಟ ಕಾರ್ಯಕ್ಕೂ ಉಪಯೋಗಿಸಿಕೊಂಡವರಿದ್ದಾರೆ. ಅದು ಸಮಾಜದ ಪ್ರತಿಬಿಂಬ. ಅದಕ್ಕೇ ತಂತ್ರಜ್ಞಾನವನ್ನು ದೂಷಿಸಬಾರದು. ತಂತ್ರಜ್ಞಾನ ನಮ್ಮ‌ ಕುತೂಹಲಕ್ಕೆ, ಜಿಜ್ಞಾಸೆಗೆ ಕೊನೆ ಕಂಡುಕೊಳ್ಳಲು ನೆರವಾಗಲಿ ಎಂದಷ್ಟೇ ನಾವು ಹಾರೈಸಬಹುದು.

- ವಿಕ್ರಮ ಜೋಶಿ