ಡಾ. ನರಸಿಂಹನ್ ಚಿತ್ರಿಸಿರುವ ಸಂದೇಶಪತ್ರಗಳು
ಡಾ. ನರಸಿಂಹನ್ ಚಿತ್ರಿಸಿರುವ ಸಂದೇಶಪತ್ರಗಳು ejnana.com
ವೈವಿಧ್ಯ

ವನ್ಯಪ್ರೇಮ ಕಲಿಸುವ ಡಾಕ್ಟರು

ಇಜ್ಞಾನ ತಂಡ

ನಮ್ಮ ಪರಿಸರ ಸುಸ್ಥಿತಿಯಲ್ಲಿರಬೇಕಾದರೆ ಅದರ ಎಲ್ಲ ಅಂಗಗಳೂ ಸುಸ್ಥಿತಿಯಲ್ಲಿರಬೇಕಾದ್ದು ಅನಿವಾರ್ಯ. ಹಳ್ಳಿಗಳು - ನಗರಗಳು ಚೆನ್ನಾಗಿರಬೇಕು ಎಂದರೆ ನಮ್ಮ ನದಿಗಳು - ಕಾಡುಗಳು - ಪ್ರಾಣಿಪಕ್ಷಿಗಳೂ ಚೆನ್ನಾಗಿ ಇರಲೇಬೇಕು. ಪರಿಸರದ ಸಮತೋಲನ ಉಳಿಯುವುದು ಆಗಲೇ.

ಈಚಿನ ವರ್ಷಗಳಲ್ಲಿ ನಮ್ಮ ಕಾಳಜಿಯೆಲ್ಲ ನಮ್ಮ ಸುತ್ತಲೇ ಕೇಂದ್ರೀಕೃತವಾಗಿರುತ್ತದೆ: ನಮ್ಮ ಮನೆಯಲ್ಲಿ ವಿದ್ಯುತ್ ಇದೆಯಾ, ನಮ್ಮ ರಸ್ತೆ ಸ್ವಚ್ಛವಾಗಿದೆಯಾ, ನಮ್ಮ ಬಡಾವಣೆಗೆ ಬಸ್ಸು ಬರುತ್ತಿದೆಯಾ ಎನ್ನುವುದನ್ನೆಲ್ಲ ನೋಡಿಕೊಳ್ಳುವುದೇ ನಮ್ಮ ಗುರಿ. ಹೀಗಿರುವಾಗ ನದಿ - ಕಾಡು - ಪ್ರಾಣಿಪಕ್ಷಿಗಳ ಬಗ್ಗೆ ಯೋಚಿಸಲು ಸಮಯ ಎಲ್ಲಿದೆ?

ಬಿಡುವಿಲ್ಲದ ಸ್ವಾರ್ಥದ ನಡುವೆ ಅಪರೂಪಕ್ಕೊಮ್ಮೆಯಾದರೂ ನಾವೆಲ್ಲ ಅರಣ್ಯ ಮತ್ತು ವನ್ಯಜೀವನಗಳ ಬಗ್ಗೆ ಯೋಚಿಸುವಂತಾಗಲಿ ಎನ್ನುವ ಉದ್ದೇಶದಿಂದ ವಿಶ್ವದೆಲ್ಲೆಡೆಯ ಹಲವು ಸಹೃದಯರು ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪುಸ್ತಕಗಳು, ಪತ್ರಿಕಾ ಲೇಖನಗಳು, ವೀಡಿಯೋಗಳು - ಹೀಗೆ ಹಲವು ಮಾಧ್ಯಮಗಳ ಮೂಲಕ ಜ್ಞಾನಪ್ರಸಾರದ ಈ ಕೆಲಸ ನಡೆದಿದೆ.

ಬಣ್ಣದ ಚಿತ್ರಗಳಿರುವ ಪೋಸ್ಟ್ ಕಾರ್ಡುಗಳ ಮೂಲಕ ಈ ಕೆಲಸದಲ್ಲಿ ತೊಡಗಿರುವ ವಿಶಿಷ್ಟ ವ್ಯಕ್ತಿ ಡಾ. ಎಸ್. ವಿ. ನರಸಿಂಹನ್.

ಹೆಸರಾಂತ ವೈದ್ಯರಾಗಿರುವ ಡಾ. ನರಸಿಂಹನ್ ಕೊಡಗಿನ ವಿರಾಜಪೇಟೆಯ ನಿವಾಸಿ. ಪ್ರತಿ ವರ್ಷ ಅಕ್ಟೋಬರ್ ಪ್ರಾರಂಭದಲ್ಲಿ ಆಚರಿಸಲಾಗುವ 'ವನ್ಯಜೀವಿ ಸಪ್ತಾಹ'ದ ಸಂದರ್ಭದಲ್ಲಿ ಅವರು ಸ್ವತಃ ಚಿತ್ರಿಸಿದ ಸಂದೇಶಪತ್ರಗಳನ್ನು ಆಸಕ್ತರಿಗೆ ಕಳುಹಿಸಿಕೊಡುತ್ತಾರೆ. ವನ್ಯಜೀವನದ ಮಹತ್ವ ಕುರಿತು ಮನಮುಟ್ಟುವ ಸಂದೇಶವಿರುವ ಈ ಕಾರ್ಡುಗಳಲ್ಲಿ ಡಾಕ್ಟರೇ ಚಿತ್ರಿಸಿದ ಪ್ರಾಣಿಪಕ್ಷಿಗಳ ಆಕರ್ಷಕ ಚಿತ್ರಗಳಿರುತ್ತವೆ.

ಸಿದ್ಧತೆಯ ಹಂತದಲ್ಲಿ ಸಂದೇಶಪತ್ರಗಳು. ಒಳಚಿತ್ರ: ಡಾ. ನರಸಿಂಹನ್ ದಂಪತಿ

ಪ್ರತಿವರ್ಷವೂ ಅವರು ನಿರ್ದಿಷ್ಟ ಪ್ರಾಣಿ-ಪಕ್ಷಿಗಳನ್ನು ವಿಶೇಷ ವನ್ಯಜೀವಿ ಸಂದೇಶವಾಹಕರಾಗಿ ಆರಿಸಿಕೊಳ್ಳುತ್ತಾರೆ. ಕಾರ್ಡಿನಲ್ಲಿರುವ ಸಂದೇಶವನ್ನು ಆ ಪ್ರಾಣಿ ಅಥವಾ ಪಕ್ಷಿಯೇ ಹೇಳುತ್ತಿರುವಂತೆ ಬರೆದಿರುವುದರಿಂದ ಅದರ ಪರಿಣಾಮ ಅಷ್ಟರ ಮಟ್ಟಿಗೆ ಹೆಚ್ಚು ಗಾಢವಾಗಿರುತ್ತದೆ. ಪ್ರಸ್ತುತ ವರ್ಷದಲ್ಲಿ (೨೦೨೦) ಸಂದೇಶವಾಹಕನ ಸ್ಥಾನ ದೊರೆತಿರುವುದು ರೆಡ್-ವಿಸ್ಕರ್ಡ್ ಬುಲ್‌ಬುಲ್, ಅಂದರೆ ಕೆಮ್ಮೀಸೆ ಪಿಕಳಾರಕ್ಕೆ.

ಕಳೆದ ಮೂವತ್ತಾರು ವರ್ಷಗಳಿಂದ ಈ ಹವ್ಯಾಸವನ್ನು ಮುಂದುವರೆಸಿಕೊಂಡು ಬಂದಿರುವ ಡಾ. ನರಸಿಂಹನ್ ಈವರೆಗೆ ೭೦ ಸಾವಿರಕ್ಕೂ ಹೆಚ್ಚು ಸಂದೇಶಪತ್ರಗಳನ್ನು ಕೈಯಲ್ಲೇ ಚಿತ್ರಿಸಿ ವಿಶ್ವದೆಲ್ಲೆಡೆಯ ಸುಮಾರು ೧೩ ಸಾವಿರ ಜನರಿಗೆ ಕಳುಹಿಸಿಕೊಟ್ಟಿದ್ದಾರೆ. ಆ ಮೂಲಕ ಅಸಂಖ್ಯ ಕಿರಿಯರು ಹಾಗೂ ಹಿರಿಯರಲ್ಲಿ ವನ್ಯಜೀವನದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ್ದಾರೆ.

ಡಾ. ನರಸಿಂಹನ್ ಕಳಿಸುವ ಕಾರ್ಡುಗಳ ಜೊತೆಯಲ್ಲಿ ಅವರು ಬರೆದ ಒಂದು ಪತ್ರವೂ ಇರುತ್ತದೆ. ವನ್ಯಜೀವನದ ಮಹತ್ವ ಹಾಗೂ ಅದರ ಸಂರಕ್ಷಣೆಯ ಅಗತ್ಯಗಳನ್ನು ಕುರಿತ ಯಾವುದೋ ಒಂದು ವಿಷಯವನ್ನು ಈ ಪತ್ರ ಪ್ರತಿವರ್ಷವೂ ವಿವರವಾಗಿ ನಿರೂಪಿಸುತ್ತದೆ. ಈವರೆಗೆ ಡಾ. ನರಸಿಂಹನ್ ಕಳಿಸಿರುವ ಇಂತಹ ಪತ್ರಗಳ ಪಠ್ಯ ಮತ್ತು ಆಯಾವರ್ಷದ ವಿಶೇಷ ಕಾರ್ಡುಗಳ ಚಿತ್ರಗಳನ್ನು ನಾವು ಅವರ ಬ್ಲಾಗ್‌ನಲ್ಲಿ ನೋಡಬಹುದು.

ಅಂದಹಾಗೆ ಡಾ. ನರಸಿಂಹನ್‌ರ ವನ್ಯಪ್ರೇಮ ಈ ಕಾರ್ಡುಗಳಿಗೆ ಮಾತ್ರವೇ ಸೀಮಿತವೇನಲ್ಲ. ಪಕ್ಷಿವೀಕ್ಷಣೆಯಲ್ಲಿ ಅಪಾರ ಆಸಕ್ತಿಯಿರುವ ಅವರು ಆ ವಿಷಯದ ಕುರಿತು ಬರಹ-ಪುಸ್ತಕಗಳನ್ನು ಬರೆದಿದ್ದಾರೆ. ೩೦೫ ಪಕ್ಷಿಪ್ರಭೇದಗಳ ಸಚಿತ್ರ ವಿವರಣೆಯಿರುವ, ಕೊಡಗಿನ ಪಕ್ಷಿಸಂಕುಲವನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಅವರ ಕೃತಿ 'ಕೊಡಗಿನ ಖಗರತ್ನಗಳು' ಕನ್ನಡದ ಮಟ್ಟಿಗೆ ಅಪರೂಪದ ಕೃತಿಗಳಲ್ಲೊಂದು. ಈ ಕೃತಿಯ ಲೇಖಕ ಡಾ. ನರಸಿಂಹನ್ ಅವರೇ ಅದರಲ್ಲಿರುವ ಅಷ್ಟೂ ಚಿತ್ರಗಳನ್ನೂ ಬರೆದಿದ್ದಾರೆ. ಡಾ. ನರಸಿಂಹನ್ ಬರೆದ ಹಲವಾರು ಚಿತ್ರಗಳು ಇಜ್ಞಾನ ಬಳಗದ ಶ್ರೀ ಟಿ. ಎಸ್. ಗೋಪಾಲರ ಕೃತಿ 'ಕಾಡು ಕಲಿಸುವ ಪಾಠ'ದಲ್ಲೂ ಇವೆ.

ವನ್ಯಜೀವನದ ಕುರಿತು ಎಲ್ಲರಲ್ಲೂ ಆಸಕ್ತಿ ಮೂಡಿಸುವ ಅವರ ಪ್ರಯತ್ನಗಳು ಇನ್ನೂ ಹಲವಾರು ವರ್ಷಗಳ ಕಾಲ ಮುಂದುವರೆಯಲಿ, ಆ ಪ್ರಯತ್ನಗಳ ಫಲ ನಮ್ಮ ಪರಿಸರಕ್ಕೆ ದೊರಕುತ್ತಲೇ ಇರಲಿ ಎನ್ನುವುದು ಇಜ್ಞಾನ ತಂಡದ ಹೃತ್ಪೂರ್ವಕ ಹಾರೈಕೆ.