COVID-19ಗೆ ಕಾರಣವಾಗಿರುವುವ ವೈರಸ್  ಜೊತೆ ಹೋರಾಡಲು ಶರೀರದ ರಕ್ಷಕ ವ್ಯವಸ್ಥೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ.
COVID-19ಗೆ ಕಾರಣವಾಗಿರುವುವ ವೈರಸ್ ಜೊತೆ ಹೋರಾಡಲು ಶರೀರದ ರಕ್ಷಕ ವ್ಯವಸ್ಥೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. Image by Наркологическая Клиника from Pixabay
ವೈವಿಧ್ಯ

ಕರೋನಾವೈರಸ್ ನಿಯಂತ್ರಣಕ್ಕೆ ಲಾಕ್-ಡೌನ್ ಏಕೆ?

ಡಾ. ವಿ. ಎಸ್. ಕಿರಣ್

ಕರೋನಾವೈರಸ್ ವಿರುದ್ಧದ ತೀವ್ರ ಸಮರ ಆರಂಭವಾಗಿದೆ. ರೋಗ ಹರಡುವುದನ್ನು ತಡೆಗಟ್ಟಲೇಬೇಕು ಎನ್ನುವ ಉದ್ದೇಶದಿಂದ ನಮ್ಮ ದೇಶದಲ್ಲಿ ಹಿಂದೆಂದೂ ಕಾಣದ ಕ್ರಮಗಳ ನಿಯೋಜನೆಯಾಗಿದೆ. ಕರ್ಫ್ಯೂನಂತಹ ಕಟ್ಟುನಿಟ್ಟು ಬಂದಿರುವುದು ಏಕೆ? ಅದನ್ನು ಅರ್ಥಮಾಡಿಕೊಳ್ಳಲು ಕೊಂಚ ವೈಜ್ಞಾನಿಕ ಹಿನ್ನೆಲೆ ತಿಳಿಯಬೇಕು.

COVID-19ಗೆ ಕಾರಣವಾಗಿರುವುದು ಜೆನೆಟಿಕ್ ಮಾರ್ಪಾಡು ಹೊಂದಿರುವ ವೈರಸ್. ಹಾಗಾಗಿ ಅದರ ಜೊತೆ ಹೋರಾಡಲು ಶರೀರದ ರಕ್ಷಕ ವ್ಯವಸ್ಥೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಈ ಅಧಿಕ ಕಾಲದಲ್ಲಿ ಕೆಲವರಲ್ಲಿ COVID-19 ಶರೀರದ ಮೇಲೆ ಘಾತಕ ಪರಿಣಾಮ ಬೀರಬಹುದು. ಶರೀರದ ರಕ್ಷಕ ವ್ಯವಸ್ಥೆ ಕುಂಠಿತವಾಗಿದ್ದವರಿಗೆ COVID-19 ಧಾಳಿಯನ್ನು ನಿಯಂತ್ರಿಸುವಷ್ಟು ಶಕ್ತಿಯಿರುವುದಿಲ್ಲ. “ಶರೀರದ ರಕ್ಷಕ ವ್ಯವಸ್ಥೆ ಇಂತಹವರಲ್ಲೇ ಕುಂಠಿತವಾಗಿದೆ; ಇಂತಹವರಲ್ಲಿ ಪೂರಾ ಚೆನ್ನಾಗಿದೆ” ಎಂದು ನಿಖರವಾಗಿ ಹೇಳಲಾಗದು. ಹೀಗಾಗಿ, COVID-19 ಅಧಿಕ ಅಪಾಯ ಗುಂಪುಗಳನ್ನು ಗುರುತಿಸಬಹುದು ಅಷ್ಟೇ. ಮುಖ್ಯವಾಗಿ ವಯಸ್ಸಾದವರು, ಸಣ್ಣಮಕ್ಕಳು, ಮಧುಮೇಹಿಗಳು, ಉಸಿರಾಟದ ಸಮಸ್ಯೆಯುಳ್ಳವರು, ಸ್ಟೀರಾಯ್ಡ್ ಔಷಧ ಬಳಸುವವರು ಇತ್ಯಾದಿ. ಉಳಿದವರೆಲ್ಲಾ ಸುರಕ್ಷಿತ ಎಂದೇನಲ್ಲ. ಹೊರನೋಟಕ್ಕೆ ಆರೋಗ್ಯವಂತರಾಗಿ ಕಾಣುವ ಎಷ್ಟೋ ಮಂದಿಯ ರಕ್ಷಕ ವ್ಯವಸ್ಥೆ ನಾಜೂಕಾಗಿ ಇರಬಹುದು. ರಕ್ಷಕ ವ್ಯವಸ್ಥೆ ಮೇಲುಗೈ ಸಾಧಿಸಿದರೆ ಅಂತಹವರಲ್ಲಿ COVID-19 ಪ್ರಭಾವ ತೋರದೇ ಹೋಗಬಹುದು. ಕೆಲವರಲ್ಲಿ ಫ್ಲೂ ಮಾದರಿಯ ರೋಗಲಕ್ಷಣ ಮಾತ್ರ ಕಾಣಬಹುದು. ಇಂತಹವರ ಸಂಖ್ಯೆ ಬೆಳೆದಂತೆಲ್ಲಾ ಒಟ್ಟಾರೆ ಸಮೂಹದ COVID-19 ನಿರೋಧಕ ಶಕ್ತಿ ಬೆಳೆಯುತ್ತದೆ. ಅಪಾಯ ಅಧಿಕವಾಗಿರುವವರ ಸಂಖ್ಯೆ ಭಾರತದಲ್ಲಿ ಬಹಳಷ್ಟಿದೆ; ಆದರೆ ಲಭ್ಯವಿರುವ ಆರೋಗ್ಯ ವ್ಯವಸ್ಥೆಯ ಸವಲತ್ತುಗಳು ತೀರಾ ಕಡಿಮೆ. ಹೀಗಾಗಿ ರೋಗವನ್ನು ನಿಯಂತ್ರಣ ಮಾಡುವುದೇ ಮೂಲಮಂತ್ರವಾಗಿರಬೇಕು. ಪರಿಸ್ಥಿತಿ ಉಲ್ಬಣವಾದರೆ ಹತ್ತಿಕ್ಕುವುದು ಅಸಾಧ್ಯ.

ಚಿಕಿತ್ಸೆಯಾಗಲೀ, ಲಸಿಕೆಯಾಗಲೀ ಇಲ್ಲದ ಕಾಯಿಲೆಯ ನಿಯಂತ್ರಣಕ್ಕೆ ಇರುವ ಒಂದೇ ಮಾರ್ಗವೆಂದರೆ ಅದರ ಹರಡುವಿಕೆಯನ್ನು ತಡೆಯುವುದು. ಇದನ್ನು ವಿವರಿಸುವುದಕ್ಕೆ ಒಂದು ಸರಳ ಉದಾಹರಣೆ ನೋಡೋಣ (ಇದು ಕೇವಲ ಉದಾಹರಣೆ ಮಾತ್ರ; ವಾಸ್ತವ ಚಿತ್ರಣ ಅಲ್ಲ).

ಒಂದು ಲಕ್ಷ ಜನಸಂಖ್ಯೆಯ ಊರಿನ ಏಕೈಕ ಆಸ್ಪತ್ರೆಯಲ್ಲಿ ಒಟ್ಟು ನೂರು ಮಂದಿಗೆ ಚಿಕಿತ್ಸೆ ನೀಡಲು ಸಾಧ್ಯವೆನ್ನೋಣ. ಆ ಊರಿನಲ್ಲಿ ಒಂದು ವ್ಯಕ್ತಿಗೆ COVID-19 ತಗುಲಿದೆ. ಆತ ಮೊದಲ ದಿನ ಇನ್ನೂ ನಾಲ್ಕು ಮಂದಿಗೆ ಸೋಂಕು ತಗುಲಿಸಿದ್ದಾನೆ . ಈ ಹಂತದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಮೊದಲ ದಿನ ಒಟ್ಟು ಐದು ಸೋಂಕಿತರು ಇರುತ್ತಾರೆ. ಇವರಲ್ಲಿ ಪ್ರತಿಯೊಬ್ಬರೂ ಒಂದೊಂದು ದಿನಕ್ಕೆ ತಲಾ ನಾಲ್ವರಿಗೆ ಸೋಂಕು ಹರಡುತ್ತಾ ಹೋದರೆ ಸೋಂಕಿತರ ಸಂಖ್ಯೆ ಎರಡನೆಯ ದಿನ 25; ಮೂರನೆಯ ದಿನ 125; ನಾಲ್ಕನೆಯ ದಿನ 625; ಐದನೆಯ ದಿನ 3125; ಆರನೆಯ ದಿನ 15625; ಏಳನೆಯ ದಿನ 78125 ಆಗುತ್ತದೆ. ಆರಂಭವಾದ 8 ದಿನಗಳಲ್ಲಿ ಸೋಂಕು ಇಡೀ ಊರನ್ನು ವ್ಯಾಪಿಸುತ್ತದೆ.

ಊರಿನಲ್ಲಿ ಪ್ರತಿಶತ ಇಬ್ಬರು ಅಧಿಕ ಅಪಾಯದ ವ್ಯಕ್ತಿಗಳು ಇದ್ದಾರೆನ್ನಿ; ಅವರಿಗೆ ಮಾತ್ರ COVID-19 ಸೋಂಕಿಗೆ ಆಸ್ಪತ್ರೆಯ ಚಿಕಿತ್ಸೆ ಬೇಕಾಗಿದೆಯೆನ್ನೋಣ. ಅಂದರೆ ಮೊದಲ ಎರಡು ದಿನ ಯಾರಿಗೂ ಆಸ್ಪತ್ರೆಯ ಆವಶ್ಯಕತೆ ಬಾರದಿರಬಹುದು. ಮೂರನೆಯ ದಿನ ಇಬ್ಬರು ಆಸ್ಪತ್ರೆ ಸೇರುತ್ತಾರೆ. ನಾಲ್ಕನೆಯ ದಿನ 12; ಐದನೆಯ ದಿನ 62; ಆರನೆಯ ದಿನ 312 ಮಂದಿಗೆ ಆಸ್ಪತ್ರೆಯ ಆವಶ್ಯಕತೆ ಬರುತ್ತದೆ. ಅಂದರೆ, ಆ ಊರಿನ ಆಸ್ಪತ್ರೆಯ ಸಾಮರ್ಥ್ಯವನ್ನು ಆರನೆಯ ದಿನವೇ ಮೀರಿದಂತೆ ಆಯಿತು. ಕೇವಲ ನೂರು ಮಂದಿಗೆ ಚಿಕಿತ್ಸೆ ನೀಡಲು ಸಾಧ್ಯವಿರುವ ಆಸ್ಪತ್ರೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ದಕ್ಕದೆ ಹೋಗುತ್ತದೆ. ತುರ್ತುಚಿಕಿತ್ಸೆಯ ಆವಶ್ಯಕತೆ ಇರುವ ರೋಗಿಗಳಿಗೆ ಆಸ್ಪತ್ರೆಯ ಸೌಲಭ್ಯ ದಕ್ಕದೆ ಮರಣಿಸುವವರ ಸಂಖ್ಯೆ ವಿಪರೀತವಾಗುತ್ತದೆ. ಯಾವುದೇ ರೀತಿಯ ನಿಯಂತ್ರಣವನ್ನು ಪಾಲಿಸದೇ ಹೋದರೆ ಹೀಗೆ ಪರಿಸ್ಥಿತಿ ವಿಪರೀತವಾಗುತ್ತದೆ.

ಈಗ ಇದೇ ಪರಿಸ್ಥಿತಿಯ ಮತ್ತೊಂದು ಸಾಧ್ಯತೆ ನೋಡೋಣ. ಮೊದಲ ರೋಗಿ ಪತ್ತೆಯಾದ ಕೂಡಲೇ “ಹೊರಗೆ ಹೋಗಬೇಡಿ. ಸಾಮಾಜಿಕ ಅಂತರ ಪಾಲಿಸಿ” ಎಂಬ ಸೂಚನೆ ನೀಡಿದರೂ ಅದನ್ನು ಪಾಲಿಸುವವರು ಅರ್ಧದಷ್ಟು ಮಂದಿ ಮಾತ್ರ. ಅಂದರೆ, ಮೊದಲ ದಿನ ಸೋಂಕು ಹತ್ತಿಸಿಕೊಂಡ ನಾಲ್ವರ ಪೈಕಿ ಇಬ್ಬರು ಸೂಚನೆ ಪಾಲಿಸದೇ ಹೊರಗೆಹೋಗಿ ತಲಾ ನಾಲ್ವರಿಗೆ ಹರಡುತ್ತಾರೆ. ಈ ಎಂಟು ಹೊಸ ಸೋಂಕಿತರಲ್ಲಿ ಮತ್ತೆ ನಾಲ್ಕು ಮಂದಿ ಸೂಚನೆ ಪಾಲಿಸುವುದಿಲ್ಲ. ಅವರೂ ತಲಾ ನಾಲ್ಕು ಮಂದಿಗೆ ಸೋಂಕು ಹರಡುತ್ತಾರೆ. ಎರಡನೆಯ ದಿನದ ಸೋಂಕಿತರ ಸಂಖ್ಯೆ 13; ಮೂರನೆಯ ದಿನ 37; ನಾಲ್ಕನೆಯ ದಿನ 109; ಐದನೆಯ ದಿನ 325; ಆರನೆಯ ದಿನ 973; ಏಳನೆಯ ದಿನ 2917; ಎಂಟನೆಯ ದಿನ 8749; ಒಂಬತ್ತನೆಯ ದಿನ 26245; ಹತ್ತನೆಯ ದಿನ 78733 ಆಗುತ್ತದೆ. ಅಂದರೆ, ಹನ್ನೊಂದನೆಯ ದಿನಕ್ಕೆ ಇಡೀ ಊರಿಗೆ ಸೋಂಕು ಹರಡಿರುತ್ತದೆ. ಆಸ್ಪತ್ರೆಯ ಆವಶ್ಯಕತೆ ಇರುವ ಗುಂಪಿನಲ್ಲಿ ಮೊದಲ ಮೂರು ದಿನ ಯಾರೂ ಇರಲಿಕ್ಕಿಲ್ಲ. ನಾಲ್ಕನೆಯ ದಿನ ಇಬ್ಬರು; ಐದನೆಯ ದಿನ 6; ಆರನೆಯ ದಿನ 19; ಏಳನೆಯ ದಿನ 58 ರೋಗಿಗಳು ಇರುತ್ತಾರೆ. ಎಂಟನೆಯ ದಿನ 175 ರೋಗಿಗಳು ಆದಾಗ ಆಸ್ಪತ್ರೆಯ ಸಾಮರ್ಥ್ಯ ಮೀರಿರುತ್ತದೆ. ಸೂಚನೆಗಳನ್ನು ಅರ್ಧದಷ್ಟು ಜನ ಮಾತ್ರ ಪಾಲಿಸಿದರೆ ಸ್ವಲ್ಪ ನಿರಾಳ ಆಗಬಹುದೇ ಹೊರತು ಕಾಲ ಕಳೆದಂತೆ ಅದೇ ಆಯೋಮಯದ ಪರಿಸ್ಥಿತಿ ಖಚಿತ.

ಸೋಂಕಿನ ಹರಡುವಿಕೆಯ ವೇಗದ ಮೇಲೆ ನಿಯಂತ್ರಣದ ಪರಿಣಾಮ

ಮೂರನೆಯ ಸಾಧ್ಯತೆಯಲ್ಲಿ ಪ್ರತೀ ನಾಲ್ವರಲ್ಲಿ ಮೂವರು ಸೂಚನೆ ಪಾಲಿಸುತ್ತಾರೆ ಎಂದು ಊಹಿಸೋಣ. ಆಗ, ಮೊದಲ ದಿನ ಸೋಂಕು ಹತ್ತಿಸಿಕೊಂಡ ನಾಲ್ವರ ಪೈಕಿ ಒಬ್ಬರು ಮಾತ್ರ ಸೂಚನೆ ಪಾಲಿಸದೇ ಹೊರಗೆ ಹೋಗಿ ಇನ್ನೂ ನಾಲ್ವರಿಗೆ ಸೋಂಕು ಹರಡುತ್ತಾರೆ. ಈ ನಾಲ್ಕು ಹೊಸ ಸೋಂಕಿತರಲ್ಲಿ ಮತ್ತೊಬ್ಬರು ಸೂಚನೆ ಪಾಲಿಸುವುದಿಲ್ಲ. ಅವರು ಮತ್ತೆ ನಾಲ್ಕು ಮಂದಿಗೆ ಸೋಂಕು ಹರಡುತ್ತಾರೆ. ಆಗ ಎರಡನೆಯ ದಿನ ಸೋಂಕಿತರ ಸಂಖ್ಯೆ 9 ಆಗುತ್ತದೆ. ಮೂರನೆಯ ದಿನ 17; ನಾಲ್ಕನೆಯ ದಿನ 33; ಐದನೆಯ ದಿನ 65; ಆರನೆಯ ದಿನ 129; ಏಳನೆಯ ದಿನ 257; ಎಂಟನೆಯ ದಿನ 513; ಒಂಬತ್ತನೆಯ ದಿನ 1025; ಹತ್ತನೆಯ ದಿನ 2049; ಹನ್ನೊಂದನೆಯ ದಿನ 4097; ಹನ್ನೆರಡನೆಯ ದಿನ 8193; ಹದಿಮೂರನೆಯ ದಿನ 16385; ಹದಿನಾಲ್ಕನೆಯ ದಿನ 32769; ಹದಿನೈದನೆಯ ದಿನ 65537 ಆಗುತ್ತದೆ. ಅಂದರೆ, ಹದಿನಾರನೆಯ ದಿನದ ವೇಳೆಗೆ ಇಡೀ ಊರಿನಲ್ಲಿ ಸೋಂಕು ವ್ಯಾಪಿಸಿರುತ್ತದೆ. ಆಸ್ಪತ್ರೆಯ ಆವಶ್ಯಕತೆ ಇರುವ ಗುಂಪಿನಲ್ಲಿ ಮೊದಲ ನಾಲ್ಕು ದಿನ ಯಾರೂ ಇರುವುದಿಲ್ಲ. ಐದನೆಯ ದಿನ ಒಬ್ಬರು; ಆರನೆಯ ದಿನ 2; ಏಳನೆಯ ದಿನ 5; ಎಂಟನೆಯ ದಿನ 10; ಒಂಬತ್ತನೆಯ ದಿನ 20; ಹತ್ತನೆಯ ದಿನ 41; ಹನ್ನೊಂದನೆಯ ದಿನ 82 ರೋಗಿಗಳು ಇರುತ್ತಾರೆ. ಹನ್ನೆರಡನೆಯ ದಿನದ ವೇಳೆಗೆ ಆಸ್ಪತ್ರೆಯ ಸಾಮರ್ಥ್ಯ ಮೀರಿರುತ್ತದೆ.

ಇದೇ ಲೆಕ್ಕಾಚಾರದಂತೆ ಒಂದು ವೇಳೆ ಹತ್ತರಲ್ಲಿ ಒಂಬತ್ತು ಮಂದಿ ಸೂಚನೆಗಳನ್ನು ಪಾಲಿಸಿದರೆ ಆಗ ಇಡೀ ಊರಿಗೆ ಸೋಂಕು ಹರಡಲು ಒಟ್ಟು 108 ದಿನಗಳಾಗುತ್ತವೆ. ಸುಮಾರು 75 ದಿನಗಳವರೆಗೆ ಆಸ್ಪತ್ರೆಯ ಸೌಲಭ್ಯಗಳು ಅಗತ್ಯವಿರುವ ರೋಗಿಗಳ ಪಾಲಿಗೆ ದಕ್ಕುತ್ತವೆ. ಅಷ್ಟರಲ್ಲಿ ಗುಣವಾಗಿ ಬಿಡುಗಡೆಯಾದವರೂ ಇರುತ್ತಾರೆ. ಈ ಎರಡೂವರೆ ತಿಂಗಳಲ್ಲಿ ಸರಕಾರ ಆಸ್ಪತ್ರೆಯನ್ನು ಮೆಲ್ದರ್ಜೆಗೆ ಏರಿಸಿ ಹಾಸಿಗೆಗಳ ಸಂಖ್ಯೆ ಬೆಳೆಸಲು ಅನುಕೂಲ. ನಿರಾಳವಾಗಿ ಚಿಂತಿಸುವುದಕ್ಕೆ ವ್ಯವಸ್ಥೆಗೆ ಸಮಯ ದೊರೆತಂತಾಗುತ್ತದೆ.

ಅಪಾಯದ ಗುಂಪಿನವರಲ್ಲಿ ಆಸ್ಪತ್ರೆಯ ಆವಶ್ಯಕತೆ ಮತ್ತು ಅದರಲ್ಲಿ ನಿಯಂತ್ರಣದ ಪರಿಣಾಮ

ಈ ನಾಲ್ಕೂ ಪರಿಸ್ಥಿತಿಗಳನ್ನು ನಕ್ಷೆಗಳ ಜೊತೆಯಲ್ಲಿ ಅವಲೋಕಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. COVID-19 ಹರಡುವಿಕೆಯನ್ನು ಆದಷ್ಟೂ ಶೀಘ್ರವಾಗಿ, ತೀವ್ರವಾಗಿ ನಿಯಂತ್ರಣ ಮಾಡಿದರೆ ಮಾತ್ರ ನಮ್ಮಲ್ಲಿ ಇರುವ ಸೀಮಿತ ವೈದ್ಯಕೀಯ ಸೌಲಭ್ಯಗಳು ಹೆಚ್ಚು ಜನರನ್ನು ಕಾಪಾಡಲು ಸಾಧ್ಯ. COVID-19 ಹರಡುವಿಕೆಯ ನಿಯಂತ್ರಣಕ್ಕೆ ಎರಡು ದಾರಿಗಳಿವೆ. ಒಂದು– ಜನರು ಅತ್ಯಧಿಕ ವೈಯಕ್ತಿಕ ಶಿಸ್ತನ್ನು ಪಾಲಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು, ಗುಂಪುಗೂಡದೇ ಇರಬೇಕು. ಎರಡು– ಜನರಿಗೆ ಇಂತಹ ಶಿಸ್ತು ಸಾಧ್ಯವಾಗದೆ ಹೋದರೆ ಸರಕಾರ ಅದನ್ನು ಬಲವಂತವಾಗಿ ಜನರ ಮೇಲೆ ಹೇರಬೇಕು. ಮೊದಲ ಆಯ್ಕೆ ಪಾಲಿಸದ ದೇಶದಲ್ಲಿ ಎರಡನೆಯದು ಮಾತ್ರ ಸಾಧ್ಯ. ಇದಕ್ಕೆ ಸರಕಾರವನ್ನು ದೂಷಿಸಲು ಆಗದು. ಆಶಿಸ್ತಿನ ಮುದ್ದೆಗಳಾದ ಕೆಲವು ಮಂದಿಯಿಂದ ಎಲ್ಲರೂ ಲಾಕ್-ಡೌನ್ ಸಂದರ್ಭವನ್ನು ಅನುಭವಿಸುವಂತಾಗಿದೆ. ಇದನ್ನು ಬಿಟ್ಟರೆ ನಮಗೆ ಗತ್ಯಂತರವಿಲ್ಲ. ಈಗಲೂ ಅಜಾಗರೂಕರಾದರೆ ಉಳಿಗಾಲವಿಲ್ಲ. ಹೇಗಾದರೂ ಸರಿ – ಸದ್ಯದ ವಿಪತ್ತನ್ನು ಗೆಲ್ಲುವುದು ಮುಖ್ಯ. ಅದಕ್ಕೆ ಏನೇ ಬೆಲೆ ತೆತ್ತರೂ ಸರಿ!

ಮಾರ್ಚ್ 28, 2020ರ ವಿಶ್ವವಾಣಿಯಲ್ಲಿ ಪ್ರಕಟವಾದ ಲೇಖನ