Image by Free-Photos from Pixabay
Image by Free-Photos from Pixabay
ಟೆಕ್‌ ಲೋಕ

ಮನೆಯಲ್ಲಿರಿ, ವೀಡಿಯೊ ನೋಡಿ, ಪಾರ್ಟಿ ಮಾಡಿ!

ಟಿ. ಜಿ. ಶ್ರೀನಿಧಿ

ವೀಕೆಂಡ್ ಬಂದಿದೆ, ಗೆಳೆಯರನ್ನು ಭೇಟಿಮಾಡಲು ಹೋಗುವ ಪರಿಸ್ಥಿತಿ ಇಲ್ಲ. ಸಿನಿಮಾ ಮಂದಿರಗಳೂ ಮುಚ್ಚಿವೆ. ಹೀಗಿದ್ದರೂ ನಮ್ಮ ಆಪ್ತರ ಜೊತೆ ಕುಳಿತು ವೀಡಿಯೊ ನೋಡುವುದು - ಅವರೊಡನೆ ಹರಟುವುದು ಸಾಧ್ಯವೇ? ಖಂಡಿತಾ ಸಾಧ್ಯ. ಒಂದು ಮನೆಯಲ್ಲಿರುವವರಷ್ಟೇ ಅಲ್ಲ, ಬೇರೆ ಊರು-ದೇಶಗಳಲ್ಲಿ ಇರುವವರೂ ನಮ್ಮ ಜೊತೆಯಲ್ಲಿ ಕುಳಿತು ನಾವು ನೋಡುತ್ತಿರುವ ವೀಡಿಯೊವನ್ನೇ ನೋಡುವುದನ್ನು, ನಮ್ಮೊಡನೆ ವಿಚಾರ ವಿನಿಮಯ ಮಾಡಿಕೊಳ್ಳುವುದನ್ನು ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಸಾಧ್ಯವಾಗಿಸಿವೆ. ಇಂತಹ ಸವಲತ್ತುಗಳಲ್ಲಿ ಪ್ರಮುಖವಾದ, ಎಲ್ಲರೂ ಕೇಳಿರಬಹುದಾದ ಹೆಸರು ಫೇಸ್‌ಬುಕ್‌ನ 'ವಾಚ್ ಪಾರ್ಟಿ'ಯದು. ವೀಕೆಂಡ್ ಇಜ್ಞಾನದ ಈ ಸಂಚಿಕೆಯಲ್ಲಿ ನಾವು ಇದರ ಬಗ್ಗೆ ಒಂದಷ್ಟು ವಿವರ ತಿಳಿದುಕೊಳ್ಳೋಣ.

ಏನಿದು ವಾಚ್ ಪಾರ್ಟಿ?

ಒಂದಷ್ಟು ಜನ ಫೇಸ್‌ಬುಕ್‌ನಲ್ಲಿ ಜೊತೆಗೂಡಿ ಒಟ್ಟಿಗೆ ವೀಡಿಯೊ ನೋಡುವ ಸೌಲಭ್ಯವೇ ವಾಚ್ ಪಾರ್ಟಿ

ರೆಕಾರ್ಡ್ ಮಾಡಿಟ್ಟ ಅಥವಾ ನೇರಪ್ರಸಾರದ (ಲೈವ್) ವೀಡಿಯೊವನ್ನು ಒಂದಷ್ಟು ಜನ ಜೊತೆಗೂಡಿ ಫೇಸ್‌ಬುಕ್‌ನಲ್ಲಿ ಒಟ್ಟಿಗೆ ನೋಡುವ ಸೌಲಭ್ಯವೇ ವಾಚ್ ಪಾರ್ಟಿ. ಒಟ್ಟಿಗೆ ನೋಡುವುದಷ್ಟೇ ಅಲ್ಲ, ವಾಚ್ ಪಾರ್ಟಿಗಾಗಿ ಜೊತೆಸೇರಿದ ಗುಂಪಿನಲ್ಲಿರುವವರು ತಾವು ನೋಡುತ್ತಿರುವ ವೀಡಿಯೊ ಬಗ್ಗೆ ಪರಸ್ಪರ ವಿಚಾರವಿನಿಮಯ - ಚರ್ಚೆಗಳನ್ನೂ ನಡೆಸಬಹುದು. ಟೀವಿ ಮುಂದೆ ಕುಳಿತು ಕುರುಕಲು ತಿಂಡಿ ತಿನ್ನುತ್ತ ಮಾತನಾಡಿಕೊಂಡ ಹಾಗೆಯೇ!

ಇಷ್ಟು ಅನುಕೂಲಕರವಾಗಿರುವುದರಿಂದಲೇ ಹಲವು ಫೇಸ್‌ಬುಕ್ ಬಳಕೆದಾರರಿಗೆ ವಾಚ್ ಪಾರ್ಟಿ ಅಚ್ಚುಮೆಚ್ಚು. ಇಂತಿಂಥವರು ಇಂತಿಂಥ ವೀಡಿಯೊ ನೋಡಲು ವಾಚ್ ಪಾರ್ಟಿ ಶುರುಮಾಡಿದ್ದಾರೆ ಎಂಬ ಸಂದೇಶ ನಮ್ಮ ಪುಟದಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತದಲ್ಲ, ಅದಕ್ಕೆ ಕಾರಣ ಇಂತಹ ಬಳಕೆದಾರರೇ.

ವಾಚ್ ಪಾರ್ಟಿ ಶುರುಮಾಡುವುದು ಹೇಗೆ?

ವಾಚ್ ಪಾರ್ಟಿ ಶುರುಮಾಡುವುದು ಬಹಳ ಸುಲಭದ ಕೆಲಸ!

ಅದು ಬಹಳ ಸುಲಭದ ಕೆಲಸ. ಫೇಸ್‌ಬುಕ್ ತೆರೆದ ಕೂಡಲೇ "ಇಲ್ಲಿ ಏನಾದರೂ ಬರೆಯಿರಿ..." ಎನ್ನುವುದೊಂದು ಕಿಟಕಿ ಕಾಣಿಸಿಕೊಳ್ಳುತ್ತದಲ್ಲ, ಆ ಕಿಟಕಿಯ ಮೂಲಕ ನಮಗೆ ದೊರಕುವ ಆಯ್ಕೆಗಳಲ್ಲಿ ವಾಚ್ ಪಾರ್ಟಿಯ ಆಯೋಜನೆಯೂ ಒಂದು.

ವಾಚ್ ಪಾರ್ಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಕೂಡಲೆ ನಮ್ಮ ಪಾರ್ಟಿಯಲ್ಲಿ ಪ್ರದರ್ಶಿಸಬೇಕಾದ ವೀಡಿಯೊಗಳನ್ನು ಆರಿಸಿಕೊಳ್ಳುವ ಪರದೆ ತೆರೆದುಕೊಳ್ಳುತ್ತದೆ. ನಾವು ಈ ಹಿಂದೆ ನೋಡಿದ, ಉಳಿಸಿಟ್ಟುಕೊಂಡ ವೀಡಿಯೊಗಳ ಜೊತೆಗೆ ಫೇಸ್‌ಬುಕ್ ನಮಗಾಗಿ ಆರಿಸಿದ ವೀಡಿಯೊಗಳೂ ಇರುತ್ತವೆ. ಆ ಪೈಕಿ ನಮಗಿಷ್ಟವಾದ ಒಂದು ಅಥವಾ ಹೆಚ್ಚಿನ ಸಂಖ್ಯೆಯ ವೀಡಿಯೊಗಳನ್ನು ಆರಿಸಿಕೊಂಡು ನಮ್ಮ ವಾಚ್ ಪಾರ್ಟಿ ಪ್ರಾರಂಭಿಸುವುದು ಸಾಧ್ಯ.

ಇತರೆಲ್ಲ ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಮಾಡಿದ ಹಾಗೆ ನಮ್ಮ ಸಂದೇಶ ಸೇರಿಸುವುದು, ಗೆಳೆಯರನ್ನು ಟ್ಯಾಗ್ ಮಾಡುವುದು ಮುಂತಾದವನ್ನೆಲ್ಲ ಇಲ್ಲೂ ಮಾಡಬಹುದು. ನಮ್ಮ ವಾಚ್ ಪಾರ್ಟಿಯ ಸುದ್ದಿ ಯಾರಿಗೆಲ್ಲ ತಿಳಿಯಬೇಕು ಎನ್ನುವುದನ್ನೂ ಅಷ್ಟೇ, 'ಪೋಸ್ಟ್ ಪ್ರೈವಸಿ' ಆಯ್ಕೆಯಡಿ - ಬೇರೆಲ್ಲ ಪೋಸ್ಟ್‌ಗಳಿಗೆ ಮಾಡುವ ಹಾಗೆಯೇ - ನಿಗದಿಪಡಿಸಬಹುದು. ವಾಚ್ ಪಾರ್ಟಿ ಶುರುವಾದ ನಂತರ ನಮ್ಮ ಕ್ಯಾಮೆರಾ ಚಾಲೂ ಮಾಡಿಕೊಂಡು ಲೈವ್ ವೀಡಿಯೊ ಪ್ರಸಾರ ಮಾಡುವುದು ಕೂಡ ಸಾಧ್ಯ.

ವಾಚ್ ಪಾರ್ಟಿ ಪ್ರಾರಂಭಿಸುವ ಸೌಲಭ್ಯ ನಮ್ಮ ವೈಯಕ್ತಿಕ ಖಾತೆಯಲ್ಲಷ್ಟೇ ಅಲ್ಲದೆ ಫೇಸ್‌ಬುಕ್ ಪೇಜ್ ಹಾಗೂ ಗ್ರೂಪ್‌ಗಳಲ್ಲೂ ಸಿಗುತ್ತದೆ. ಹೊಸ ವೀಡಿಯೊ ನೋಡಲು ಹೊರಟಾಗ ಅದಕ್ಕಾಗಿಯೇ ಒಂದು ವಾಚ್ ಪಾರ್ಟಿ ಪ್ರಾರಂಭಿಸುವ ಅವಕಾಶವೂ ಫೇಸ್‌ಬುಕ್ ಕಡೆಯಿಂದ ನಮಗೆ ದೊರಕುತ್ತದೆ.

ಬೇರೊಬ್ಬರು ಪ್ರಾರಂಭಿಸಿದ ವಾಚ್ ಪಾರ್ಟಿಯನ್ನು ಸೇರುವುದೂ ಸುಲಭವೇ. ಇಂಥವರು ಇಂಥದ್ದೊಂದು ವಾಚ್ ಪಾರ್ಟಿ ಶುರುಮಾಡಿದ್ದಾರೆ, ಅದಕ್ಕೆ ನಿಮ್ಮನ್ನು ಆಮಂತ್ರಿಸಿದ್ದಾರೆ ಎನ್ನುವಂತಹ ಅಪ್‌ಡೇಟ್‌ಗಳು ಕಾಣಿಸುತ್ತವಲ್ಲ, ಅಂತಹ ಅಪ್‌ಡೇಟ್ ಮೇಲೆ ಒಂದು ಸಾರಿ ಕ್ಲಿಕ್ ಮಾಡಿದರೆ ಆಯಿತು, ಅಷ್ಟೇ!

ಒಮ್ಮೆ ವಾಚ್ ಪಾರ್ಟಿಯನ್ನು ಸೇರಿಕೊಂಡ ಮೇಲೆ ನಾವು ಅಲ್ಲಿ ಸಂದೇಶಗಳನ್ನು (ಕಮೆಂಟ್ಸ್) ಹಂಚಿಕೊಳ್ಳುವುದು ಸಾಧ್ಯವಾಗುತ್ತದೆ. ವಾಚ್ ಪಾರ್ಟಿ ಶುರುಮಾಡಿದವರು ನಿಮಗೆ ಜಂಟಿ ಆತಿಥೇಯರ (ಕೋ-ಹೋಸ್ಟ್) ಸ್ಥಾನ ಕೊಟ್ಟರಂತೂ ನೀವು ನಿಮ್ಮ ಇಷ್ಟದ ವೀಡಿಯೊಗಳನ್ನೂ ವಾಚ್ ಪಾರ್ಟಿಗೆ ಸೇರಿಸಬಹುದು. ನೀವು ಅಥವಾ ಆತಿಥೇಯರು ಸ್ವತಃ ಸೇರಿಸಿದ ವೀಡಿಯೊಗಳು ಒಂದಾದ ಮೇಲೆ ಒಂದರಂತೆ ಪ್ರಸಾರವಾಗುತ್ತವೆ. ಇಷ್ಟವಾಗದ ವೀಡಿಯೊಗಳನ್ನು ನಡುವೆಯೇ ನಿಲ್ಲಿಸಿ ಮುಂದಿನದನ್ನು ಶುರುಮಾಡುವುದು ಕೂಡ ಸಾಧ್ಯ.

ನೋಡಬೇಕಾದ ಎಲ್ಲ ವೀಡಿಯೊಗಳು ಮುಗಿದಾಗ, ಅಥವಾ ವಾಚ್ ಪಾರ್ಟಿ ಸಾಕೆನಿಸಿದಾಗ, ಆತಿಥೇಯರು ಅದನ್ನು ಮುಕ್ತಾಯಗೊಳಿಸಬಹುದು. ಆ ವಾಚ್ ಪಾರ್ಟಿಯ ವಿವರಗಳನ್ನು ಟೈಮ್‌ಲೈನ್‌ನಲ್ಲಿ ಉಳಿಸಿಟ್ಟುಕೊಳ್ಳುವುದೂ ಸಾಧ್ಯ.

ವಾಚ್ ಪಾರ್ಟಿಗೂ ಫೇಸ್‌ಬುಕ್ ಲೈವ್‌ಗೂ ಏನು ವ್ಯತ್ಯಾಸ?

ಬೇರೆಲ್ಲೋ ನೋಡಿದ, ಇಷ್ಟಪಟ್ಟು ಉಳಿಸಿಟ್ಟುಕೊಂಡ ವೀಡಿಯೊಗಳ ಜೊತೆ ಲೈವ್ ವೀಡಿಯೊವನ್ನೂ ಹಂಚಿಕೊಳ್ಳಬಹುದು ಎನ್ನುವುದು ವಾಚ್ ಪಾರ್ಟಿಯ ಹೆಚ್ಚುಗಾರಿಕೆ

ನಮ್ಮ ತತ್‌ಕ್ಷಣದ ವೀಡಿಯೊಗಳನ್ನು ಸೆರೆಹಿಡಿದು ನೇರಪ್ರಸಾರ ಮಾಡುವ 'ಫೇಸ್‌ಬುಕ್ ಲೈವ್' ಸೌಲಭ್ಯವನ್ನು ಅನೇಕ ಬಳಕೆದಾರರು ಉಪಯೋಗಿಸುತ್ತಾರೆ. ಈ ಸೌಲಭ್ಯ ಬಳಸಿದಾಗ ನಮ್ಮ ಕ್ಯಾಮೆರಾ ಮೂಲಕ ಆ ಕ್ಷಣದಲ್ಲಿ ಸೆರೆಹಿಡಿದ ವೀಡಿಯೊಗಳನ್ನಷ್ಟೇ ಪ್ರಸಾರ ಮಾಡುವುದು ಸಾಧ್ಯವಾಗುತ್ತದೆ. ಆದರೆ ವಾಚ್ ಪಾರ್ಟಿ ಹಾಗಲ್ಲ. ಬೇರೆಲ್ಲೋ ನೋಡಿದ, ಇಷ್ಟಪಟ್ಟು ಉಳಿಸಿಟ್ಟುಕೊಂಡ ವೀಡಿಯೊಗಳನ್ನೆಲ್ಲ ನಾವು ಈ ಸೌಲಭ್ಯ ಬಳಸಿ ಆಪ್ತರ ಜೊತೆ ಹಂಚಿಕೊಳ್ಳುವುದು ಸಾಧ್ಯ. ಅಂತಹ ವೀಡಿಯೊಗಳ ಜೊತೆ ಲೈವ್ ವೀಡಿಯೊವನ್ನೂ ಹಂಚಿಕೊಳ್ಳಬಹುದು ಎನ್ನುವುದು ವಾಚ್ ಪಾರ್ಟಿಯ ಹೆಚ್ಚುಗಾರಿಕೆ.

ವಾಚ್ ಪಾರ್ಟಿಯ ಅನುಕೂಲಗಳೇನು?

ಯಾವುದೇ ಕಾರಣದಿಂದ ಒಟ್ಟಿಗೆ ಸೇರಲಾರದ ಗುಂಪುಗಳಿಗೆ ವಾಚ್ ಪಾರ್ಟಿ ಒಂದು ಉತ್ತಮ ಆಯ್ಕೆ

ಯಾವುದೇ ಕಾರಣದಿಂದ ಒಟ್ಟಿಗೆ ಸೇರಲಾರದ ಗುಂಪುಗಳಿಗೆ ವಾಚ್ ಪಾರ್ಟಿ ಒಂದು ಉತ್ತಮ ಆಯ್ಕೆ. ಡಿಜಿಟಲ್ ಲೋಕದಲ್ಲಾದರೂ ಎಲ್ಲರೂ ಜೊತೆಸೇರುವುದನ್ನು, ಒಟ್ಟಿಗೆ ಸಮಯ ಕಳೆಯುವುದನ್ನು ಅದು ಸಾಧ್ಯವಾಗಿಸುತ್ತದೆ. ಮನರಂಜನೆಗಾಗಿ ಮಾತ್ರವೇ ಅಲ್ಲ, ಕಚೇರಿ ಕೆಲಸ ಅಥವಾ ಅಧ್ಯಯನಕ್ಕಾಗಿ ಯಾವುದೇ ವೀಡಿಯೊ ನೋಡುವ - ಅದರ ಬಗ್ಗೆ ಚರ್ಚಿಸುವ ಅಗತ್ಯವಿರುವವರು ಕೂಡ ವಾಚ್ ಪಾರ್ಟಿಯನ್ನು ಬಳಸಿಕೊಳ್ಳಬಹುದು, ಸಮರ್ಥವಾಗಿ ವಿಚಾರ ವಿನಿಮಯ ಮಾಡಿಕೊಳ್ಳಬಹುದು. ಲೈವ್ ವೀಡಿಯೊ ಹಂಚಿಕೊಳ್ಳುವ ಆಯ್ಕೆಯನ್ನೂ ಬಳಸಿಕೊಂಡರೆ ಅದು ಈ ವಿಚಾರ ವಿನಿಮಯಕ್ಕೆ ಇನ್ನಷ್ಟು ಪರಿಣಾಮಕಾರಿಯಾದ ಸ್ವರೂಪ ಕೊಡಬಲ್ಲದು.

ವಾಚ್ ಪಾರ್ಟಿ ಬಗ್ಗೆ ಎಚ್ಚರವಹಿಸಬೇಕಾದ ಸಂಗತಿಗಳೇನಾದರೂ ಇವೆಯೇ?

ಉಪಯುಕ್ತ ವೀಡಿಯೊಗಳ ವೀಕ್ಷಣೆಗೆ, ಅಪರೂಪಕ್ಕೊಮ್ಮೆ ಆಪ್ತರ ಜೊತೆ ಸೇರಿ ಸಂತೋಷಿಸುವುದಕ್ಕೆ ಮಾತ್ರ ಸೀಮಿತವಾಗಿದ್ದರೆ ವಾಚ್ ಪಾರ್ಟಿ ಒಳ್ಳೆಯ ಆಯ್ಕೆಯೇ.

ವಾಚ್ ಪಾರ್ಟಿ ಬಗ್ಗೆ ಹುಷಾರಾಗಿರಬೇಕಾದ ಅಗತ್ಯವೂ ಇದೆ. ಬೇರೊಬ್ಬರು ಶುರುಮಾಡಿದ ವಾಚ್ ಪಾರ್ಟಿಗೆ ನೀವು ಸೇರಿದ್ದು ಇತರರಿಗೂ ಗೊತ್ತಾಗುವ ಸಾಧ್ಯತೆ ಇರುತ್ತದೆ. ಮನೆಯಿಂದಲೇ ಕೆಲಸ ಮಾಡುತ್ತಿದ್ದರೂ, ಕೆಲಸದ ಸಮಯದಲ್ಲಿ ಇದು ಅಪೇಕ್ಷಿತವೋ ಅಲ್ಲವೋ ಎನ್ನುವುದನ್ನು ನೀವೇ ತೀರ್ಮಾನಿಸಿಕೊಳ್ಳಬೇಕು. ನಾವೊಬ್ಬರೇ ಕುಳಿತು ಒಂದರ ಮೇಲೊಂದರಂತೆ ವೀಡಿಯೊಗಳನ್ನು ನೋಡುತ್ತಿದ್ದರೆ ಅದೇ ಸಮಯದ ಅಪವ್ಯಯವಾಗಿರಬಹುದು. ವಾಚ್ ಪಾರ್ಟಿ ಹೆಸರಿನಲ್ಲಿ ಇನ್ನಷ್ಟು ಜನರ ಜೊತೆ ಸೇರಿ ಅದೇ ಕೆಲಸ ಮಾಡುವುದು, ವೃಥಾ ಕಾಲಹರಣಕ್ಕೆ ಕಾರಣವಾಗುವುದು ಸೂಕ್ತವೋ ಅಲ್ಲವೋ ಎನ್ನುವುದು ಕೂಡ ನಮ್ಮದೇ ನಿರ್ಧಾರವಾಗಬೇಕು. ಉಪಯುಕ್ತ ವೀಡಿಯೊಗಳ ವೀಕ್ಷಣೆಗೆ, ಅಪರೂಪಕ್ಕೊಮ್ಮೆ ಆಪ್ತರ ಜೊತೆ ಸೇರಿ ಸಂತೋಷಿಸುವುದಕ್ಕೆ ಮಾತ್ರ ಸೀಮಿತವಾಗಿದ್ದರೆ ವಾಚ್ ಪಾರ್ಟಿ ಒಳ್ಳೆಯ ಆಯ್ಕೆಯೇ.

ಯಾರೋ ವಾಚ್ ಪಾರ್ಟಿ ಶುರುಮಾಡಿದ್ದಾರೆ ಎಂದು ಅಪ್‌ಡೇಟ್ ಬಂದಾಗ, ನಿಮಗೆ ಅದನ್ನು ಸೇರುವ ಉದ್ದೇಶ ಇಲ್ಲದಿದ್ದರೆ, ಆ ಅಪ್‌ಡೇಟ್ ಮೇಲೆ ಕ್ಲಿಕ್ ಮಾಡದಿರುವುದು ಉತ್ತಮ. ಏಕೆಂದರೆ ಅವರು ತಮ್ಮ ವಾಚ್ ಪಾರ್ಟಿಯಲ್ಲಿ ಆಕ್ಷೇಪಾರ್ಹವಾದ, ಅಶ್ಲೀಲ ವೀಡಿಯೊಗಳನ್ನು ಸೇರಿಸಿದ್ದರೆ - ನೀವು ಆಕಸ್ಮಿಕವಾಗಿ ಆ ವಾಚ್ ಪಾರ್ಟಿ ಸೇರಿದ್ದರೂ - ಮುಜುಗರಕ್ಕೆ ಈಡಾಗಬೇಕಾಗುತ್ತದೆ. ನೀವೇ ವಾಚ್ ಪಾರ್ಟಿ ಆಯೋಜಿಸುವಾಗಲೂ ಅಷ್ಟೇ, ಆಕ್ಷೇಪಾರ್ಹ ವೀಡಿಯೊಗಳನ್ನು ಸೇರಿಸಿದರೆ ಅದರ ಪರಿಣಾಮಗಳ ನೇರ ಹೊಣೆಗಾರಿಕೆ ನಿಮ್ಮದೇ ಆಗುತ್ತದೆ. ನಿಮ್ಮ ವಾಚ್‌ ಪಾರ್ಟಿಗೆ ಸಿಕ್ಕಸಿಕ್ಕವರನ್ನೆಲ್ಲ ಆಮಂತ್ರಿಸಿದರೆ ಅದರಿಂದ ಅವರಿಗೆಲ್ಲ ಉಂಟಾಗಬಹುದಾದ ಕಿರಿಕಿರಿಗೂ ನೀವೇ ಜವಾಬ್ದಾರರಾಗುತ್ತೀರಿ.

ನವೆಂಬರ್ ೨೭, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ