ನಾವಿಂದು ನೆನಪಿಸಿಕೊಳ್ಳುತ್ತಿರುವ 'ಐ ಲವ್ ಯೂ' ವರ್ಮ್ ಎಂಬ ಗುಂಪಿಗೆ ಸೇರಿದ್ದು
ನಾವಿಂದು ನೆನಪಿಸಿಕೊಳ್ಳುತ್ತಿರುವ 'ಐ ಲವ್ ಯೂ' ವರ್ಮ್ ಎಂಬ ಗುಂಪಿಗೆ ಸೇರಿದ್ದು Design vector created by freepik - www.freepik.com
ಟೆಕ್‌ ಲೋಕ

ಕೊರೊನಾವೈರಸ್ ಅಲ್ಲ, ಇದು 'ಐ ಲವ್ ಯೂ' ಅಂದಿದ್ದ ವೈರಸ್ಸು!

ಟಿ. ಜಿ. ಶ್ರೀನಿಧಿ

ನಮ್ಮ ಜಗತ್ತಿನಲ್ಲಿ ಏನಾದರೂ ಹೊಸ ವಿದ್ಯಮಾನ ಘಟಿಸಿದರೆ ಅದನ್ನು ಕುರಿತ ಸಾವಿರಾರು ಹೊಸ ಸಂದೇಶಗಳು ವಾಟ್ಸ್‌ಆಪಿನಲ್ಲೂ ಫೇಸ್‌ಬುಕ್ಕಿನಲ್ಲೂ ಥಟ್ಟನೆ ಕಾಣಿಸಿಕೊಂಡುಬಿಡುತ್ತವೆ. ಒಂದೆರಡು ದಿನದ ವಿದ್ಯಮಾನಗಳದೇ ಈ ಕತೆಯಾಗಿರುವಾಗ ತಿಂಗಳುಗಟ್ಟಲೆ ಕಾಡುವ ಸಂಗತಿಗಳು ವಾಟ್ಸ್‌ಆಪ್-ಫೇಸ್‌ಬುಕ್‌ಗಳಲ್ಲೂ ದೀರ್ಘಸಮಯ ಓಡಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಕಳೆದ ಒಂದೆರಡು ತಿಂಗಳಲ್ಲಿ ಮಾಹಿತಿಯ ಇಂತಹ ಪ್ರವಾಹ ಸೃಷ್ಟಿಸಿದ್ದು ಕೋವಿಡ್-೧೯. ಈ ಪ್ರವಾಹದಲ್ಲಿ ಸತ್ಯ-ಸುಳ್ಳುಗಳ ಪ್ರಮಾಣ ಎಷ್ಟಿತ್ತೋ ಗೊತ್ತಿಲ್ಲ, ಆದರೆ ಅಲ್ಲಿ ಹರಿದುಬಂದ ಕೆಲ ತುಣುಕುಗಳಂತೂ ನಮ್ಮ ಕುತೂಹಲ ಕೆರಳಿಸಿದ್ದು ನಿಜ.

ಈ ಹಿಂದೆ ಯಾವ ವರ್ಷದಲ್ಲಿ ಯಾವ ವೈರಸ್ಸು ಕಾಟಕೊಟ್ಟಿತ್ತು ಎಂಬ ಪಟ್ಟಿ, ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್‌ಗಳಲ್ಲಿ ಕೆಲಕಾಲ ಕಾಣಿಸಿಕೊಂಡಿದ್ದು, ಇಂತಹ ಕುತೂಹಲಕರ ಮಾಹಿತಿಗೆ ಒಂದು ಉದಾಹರಣೆ.

ಮನುಷ್ಯರನ್ನು ಕಾಡಿದ, ಕಾಡುತ್ತಿರುವ ಜೈವಿಕ ವೈರಸ್ಸುಗಳ ಹಾಗೆ ತಂತ್ರಾಂಶರೂಪಿ ವೈರಸ್ಸುಗಳು ಐಟಿ ಜಗತ್ತನ್ನೂ ಕಾಡುತ್ತವೆ. ಕೊಟ್ಟ ತೊಂದರೆಯ ಪ್ರಮಾಣಕ್ಕೆ ಅನುಗುಣವಾಗಿ ಅಂತಹ ವೈರಸ್ಸುಗಳ ಸಾರ್ವಕಾಲಿಕ ಪಟ್ಟಿಯನ್ನು ಯಾರಾದರೂ ಮಾಡಿದರೆ ಆ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳುವುದು 'ಐ ಲವ್ ಯೂ' ಎಂಬ ಕುತಂತ್ರಾಂಶ. ಕೊರೊನಾ ವೈರಸ್ಸಿನ ಸುದ್ದಿಯನ್ನೇ ಕೇಳಿ ಸಾಕಾಗಿರುವ ಸಂದರ್ಭದಲ್ಲಿ ಟೆಕ್ ಲೋಕದ ಈ ಸಂಚಿಕೆ, ಎರಡು ದಶಕಗಳ ಹಿಂದೆ ವಿಪರೀತ ತೊಂದರೆ ಕೊಟ್ಟಿದ್ದ ಈ ಕುತಂತ್ರಾಂಶವನ್ನು ನೆನಪಿಸಿಕೊಳ್ಳುತ್ತಿದೆ.

ಕುತಂತ್ರಾಂಶಗಳನ್ನೆಲ್ಲ ನಾವು ಸಾರಾಸಗಟಾಗಿ ವೈರಸ್ ಎಂದು ಗುರುತಿಸುತ್ತೇವಾದರೂ ಅದರಲ್ಲಿ ಬೇರೆಬೇರೆ ವಿಧಗಳಿವೆ. ಈ ಪೈಕಿ ನಾವಿಂದು ನೆನಪಿಸಿಕೊಳ್ಳುತ್ತಿರುವ 'ಐ ಲವ್ ಯೂ' ವರ್ಮ್ ಎಂಬ ಗುಂಪಿಗೆ ಸೇರಿದ್ದು. ಒಂದು ಕಂಪ್ಯೂಟರನ್ನು ಸೇರಿದ ಮೇಲೆ ಅದಕ್ಕೆ ತೊಂದರೆ ಉಂಟುಮಾಡುವ ಜೊತೆಗೆ ಅದರ ಸಂಪರ್ಕದಲ್ಲಿರುವ ಇನ್ನಿತರ ಕಂಪ್ಯೂಟರುಗಳಿಗೂ ಹರಡುವುದು, ಈ ಸರಣಿಯನ್ನು ಮುಂದುವರೆಸಿಕೊಂಡು ಹೋಗುವುದು ಅದರ ಕಾರ್ಯವಿಧಾನ.

ಅದೆಲ್ಲ ಸರಿ, ಈ ಕುತಂತ್ರಾಂಶಕ್ಕೆ 'ಐ ಲವ್ ಯೂ' ಎಂಬ ಚೆಂದದ ಹೆಸರು ಬಂದಿದ್ದು ಏಕೆ?

ಏಕೆಂದರೆ ಈ ಕುತಂತ್ರಾಂಶ ಬಳಕೆದಾರರ ಇಮೇಲ್‌ನಲ್ಲಿ ಯಾರೋ ಕಳಿಸಿದ ಪ್ರೇಮಪತ್ರದಂತೆ ಕಾಣಿಸಿಕೊಳ್ಳುತ್ತಿತ್ತು. ಸಬ್ಜೆಕ್ಟ್ ಲೈನಿನಲ್ಲೇ ಐ ಲವ್ ಯೂ ಎಂದು ಶುರುವಾಗುತ್ತಿದ್ದ ಇಮೇಲಿನಲ್ಲಿ ನಾನು ಬರೆದ ಪ್ರೇಮಪತ್ರ ಇಲ್ಲಿದೆ ನೋಡಿ ಎನ್ನುವ ಒಕ್ಕಣೆ ಇರುತ್ತಿತ್ತು. ಜೊತೆಯಲ್ಲಿ ಲವ್ ಲೆಟರ್ ಫಾರ್ ಯೂ ಎಂಬ ಕಡತ!

ಐ ಲವ್ ಯೂ ವೈರಸ್ ತರುತ್ತಿದ್ದ ಸಂದೇಶದ ಮಾದರಿ

ಇದನ್ನು ನೋಡಿ ಆಕರ್ಷಿತರಾದವರು ಆ ಕಡತವನ್ನು ತೆರೆದರೋ, ತಕ್ಷಣವೇ ಸಮಸ್ಯೆ ಶುರುವಾಗುತ್ತಿತ್ತು. ಕೈಗೆ ಸಿಕ್ಕ ಕಡತಗಳನ್ನೆಲ್ಲ ಈ ಕುತಂತ್ರಾಂಶ ಹಾಳುಮಾಡುತ್ತಿತ್ತು, ಔಟ್‌ಲುಕ್ ತಂತ್ರಾಂಶದಲ್ಲಿದ್ದ ಅಷ್ಟೂ ಇಮೇಲ್ ವಿಳಾಸಗಳಿಗೆ ಅದೇ ಪ್ರೇಮಪತ್ರವನ್ನು ಕಳುಹಿಸುತ್ತಿತ್ತು. ಆ ಪೈಕಿ ಕೆಲವರಾದರೂ ಇಮೇಲ್ ಜೊತೆಗಿದ್ದ ಕಡತವನ್ನು ತೆರೆಯುತ್ತಿದ್ದರು, ಐ ಲವ್ ಯೂ ಪಿಡುಗು ಇನ್ನಷ್ಟು ಕಂಪ್ಯೂಟರುಗಳಿಗೆ ವ್ಯಾಪಿಸುತ್ತಿತ್ತು.

ಈ ಕುತಂತ್ರಾಂಶ ಸೃಷ್ಟಿಯಾಗಿದ್ದು ಫಿಲಿಪೈನ್ಸ್‌ನಲ್ಲಿ ಎಂದು ಆನಂತರ ಪತ್ತೆಯಾಯಿತು. ೨೦೦೦ನೇ ಇಸವಿಯ ಮೇ ೫ರಂದು ಅಲ್ಲಿಂದ ಪಶ್ಚಿಮಾಭಿಮುಖವಾಗಿ ಹೊರಟ ಪ್ರೇಮಪತ್ರ ಪ್ರವಾಹ ಮೊದಲಿಗೆ ಹಾಂಗ್ ಕಾಂಗ್ ತಲುಪಿ ಅಲ್ಲಿಂದ ಮುಂದಕ್ಕೆ ಯುರೋಪಿನ ರಾಷ್ಟ್ರಗಳು ಹಾಗೂ ಅಮೆರಿಕಾದಲ್ಲಿ ಪಸರಿಸಿತು. ಮುಂದಿನ ಹತ್ತು ದಿನಗಳಲ್ಲಿ ಐದು ಕೋಟಿಗೂ ಹೆಚ್ಚು ಕಂಪ್ಯೂಟರುಗಳನ್ನು ಬಾಧಿಸಿದ ಈ ಕುತಂತ್ರಾಂಶದಿಂದ ಬ್ರಿಟಿಷ್ ಸಂಸತ್ತು, ಅಮೆರಿಕಾದ ಸಿಐಎ ಹಾಗೂ ಪೆಂಟಾಗನ್‌ನ ಇಮೇಲ್ ವ್ಯವಸ್ಥೆಗಳೂ ತೊಂದರೆಗೀಡಾಗಿದ್ದವು. ಈ ಕುತಂತ್ರಾಂಶದ ತೊಂದರೆಯಿಂದ ಪಾರಾಗಲು ಸುಮಾರು ಒಂದೂವರೆ ಸಾವಿರ ಕೋಟಿ ಡಾಲರುಗಳಷ್ಟು ವೆಚ್ಚ ತಗುಲಿತು ಎಂದು ಆನಂತರದ ಅಂದಾಜುಗಳು ಹೇಳಿದವು.

ಪ್ರೇಮಪತ್ರ ಪ್ರವಾಹದ ಮೂಲ ಹುಡುಕಿದ್ದೂ ಸಾಕಷ್ಟು ಕುತೂಹಲಕರ ಕತೆಯೇ. ಈ ಕುತಂತ್ರಾಂಶವನ್ನು ಯಾರು ಹರಿಬಿಟ್ಟಿರಬಹುದು ಎಂದು ಹುಡುಕುತ್ತಾ ಹೋದ ಪೋಲೀಸರು ಫಿಲಿಪೈನ್ಸ್ ತಲುಪಿದ್ದು ಒಂದಷ್ಟು ತಪ್ಪುಹೆಜ್ಜೆಗಳ ನಂತರವೇ. ಅಲ್ಲಿನ ಇಬ್ಬರು ಯುವ ತಂತ್ರಜ್ಞರು - ರಿಯೊನೆಲ್ ರಾಮೋನ್ಸ್ ಮತ್ತು ಓನೆಲ್ ಡಿ ಗುಜ಼್‌ಮನ್ - ಈ ಕುತಂತ್ರಾಂಶವನ್ನು ಸೃಷ್ಟಿಸಿ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದ್ದರು ಎನ್ನುವುದು ವಿಚಾರಣೆಯ ನಂತರ ಗೊತ್ತಾಯಿತು. ದೇಶವಿದೇಶಗಳ ಇನ್ನಷ್ಟು ಕಿಡಿಗೇಡಿಗಳು ಇವರ ಸೃಷ್ಟಿಯನ್ನು ಮೂಲವಾಗಿ ಬಳಸಿ ಇದೇ ಕುತಂತ್ರಾಂಶದ ಹೊಸ ಆವೃತ್ತಿಗಳನ್ನೂ ರೂಪಿಸಿಬಿಟ್ಟಿದ್ದರು.

ತಮಾಷೆಯ ಸಂಗತಿಯೆಂದರೆ ಅಂದಿನ ಸೈಬರ್ ಕಾನೂನುಗಳು ಇನ್ನೂ ಇಂದಿನಷ್ಟು ಸ್ಪಷ್ಟವೂ ಬಲಿಷ್ಠವೂ ಆಗಿರಲಿಲ್ಲ. ಹೀಗಾಗಿ ಐ ಲವ್ ಯೂ ಸೃಷ್ಟಿಕರ್ತರಿಗೆ ಯಾವ ಶಿಕ್ಷೆಯೂ ಆಗಲಿಲ್ಲ. ಫಿಲಿಪೈನ್ಸ್ ದೇಶವೂ ಸೇರಿದಂತೆ ವಿಶ್ವದ ಹಲವೆಡೆ ಸೈಬರ್ ಅಪರಾಧಗಳ ವಿರುದ್ಧ ಕಾನೂನುಗಳು ರೂಪುಗೊಳ್ಳಲು ಈ ಘಟನೆ ಕಾರಣವಾಯಿತು. ಮೈಕ್ರೋಸಾಫ್ಟ್ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿದ್ದ ಹಲವು ಪಾರುಗಂಡಿಗಳನ್ನು (ಲೂಪ್‌ಹೋಲ್) ತೋರಿಸಿಕೊಟ್ಟ 'ಐ ಲವ್ ಯೂ', ಇಪ್ಪತ್ತು ವರ್ಷಗಳ ನಂತರವೂ ಅತಿಹೆಚ್ಚು ದುಷ್ಪರಿಣಾಮ ಬೀರಿದ ಕುತಂತ್ರಾಂಶಗಳ ಸಾರ್ವಕಾಲಿಕ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಮಾರ್ಚ್ ೧೧, ೨೦೨೦ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ