ಅಂತರಜಾಲ ಹಾಗೂ ವಿಶ್ವವ್ಯಾಪಿ ಜಾಲಗಳ ಮಾತು ಬಂದಾಗ ಬಹಳಷ್ಟು ಸಾರಿ ಅವುಗಳಲ್ಲಿ ನಮ್ಮ ಗೋಪ್ಯತೆಯನ್ನು (ಪ್ರೈವೆಸಿ) ಕಾಪಾಡಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಚರ್ಚೆಯಾಗುತ್ತದೆ. ನಾವು ಎಲ್ಲಿ ಏನು ಮಾಡುತ್ತಿದ್ದೇವೆ, ಏನನ್ನು ಇಷ್ಟಪಡುತ್ತೇವೆ - ಇಷ್ಟಪಡುವುದಿಲ್ಲ ಎನ್ನುವುದನ್ನೆಲ್ಲ ನಾವೇ ಧಾರಾಳವಾಗಿ ಹಂಚಿಕೊಳ್ಳುವ ಈ ದಿನಗಳಲ್ಲಿ ಈ ಪ್ರಶ್ನೆಯ ಔಚಿತ್ಯವಾದರೂ ಏನು ಎಂಬ ಮರುಪ್ರಶ್ನೆ ಕೂಡ ಕೆಲವೊಮ್ಮೆ ಬರುವುದುಂಟು. ನಾವು ಉದ್ದೇಶಪೂರ್ವಕವಾಗಿ ಕೊಡದಿದ್ದರೂ ಸಂಸ್ಥೆಗಳೇ ಸಾಕಷ್ಟು ಮಾಹಿತಿ ಕಲೆಹಾಕುತ್ತವೆಂದು ದೂರುವವರೂ ಇದ್ದಾರೆ.
ಹೀಗಿರುವಾಗ ಖಾಸಗಿತನದ ತಂಟೆಯೇ ಬೇಡವೆಂದು ಸುಮ್ಮನಿದ್ದರೆ ಆದೀತೇ? ಅಷ್ಟು ಬೇಗ ಸೋಲೊಪ್ಪಬಾರದು ಎಂದೇ ಹಲವು ಸಂಸ್ಥೆಗಳು ತಮ್ಮ ಪ್ರಯತ್ನಗಳನ್ನು ನಡೆಸಿಕೊಂಡು ಬಂದಿವೆ. 'ಟಾರ್ ಪ್ರಾಜೆಕ್ಟ್' ಎನ್ನುವುದು ಅಂತಹ ಸಂಸ್ಥೆಗಳಲ್ಲೊಂದು. ಇಲ್ಲಿ ಟಾರ್ (Tor) ಎನ್ನುವುದು 'ದಿ ಆನಿಯನ್ ರೌಟರ್' ಎಂಬ ಹೆಸರಿನ ಸಂಕ್ಷೇಪ.
ಜಾಲಲೋಕದಲ್ಲಿ ಗೋಪ್ಯತೆ ಕಾಪಾಡಿಕೊಳ್ಳುವುದಕ್ಕೂ ಈರುಳ್ಳಿಗೂ ಏನು ಸಂಬಂಧ ಎಂದು ಯೋಚಿಸುವ ಮುನ್ನ ಕೆಲವು ಪ್ರಾಥಮಿಕ ವಿಷಯಗಳ ಬಗ್ಗೆ ಗಮನಹರಿಸುವುದು ಒಳ್ಳೆಯದು. ನೀವು ಯಾವುದೇ ಜಾಲತಾಣವನ್ನು ತೆರೆದಾಗ ಆ ಜಾಲತಾಣದ ಸರ್ವರ್ ಹಾಗೂ ನೀವು ಬಳಸುತ್ತಿರುವ ಸಾಧನದ (ಉದಾ: ಕಂಪ್ಯೂಟರ್, ಮೊಬೈಲ್) ನಡುವೆ ಸಂಪರ್ಕ ಏರ್ಪಡುತ್ತದೆ. ಸರ್ವರಿನಲ್ಲಿರುವ ಮಾಹಿತಿ ನಿಮ್ಮ ಸಾಧನಕ್ಕೆ ವರ್ಗಾವಣೆಯಾಗಿ ನಿಮ್ಮ ಕಣ್ಣೆದುರು ಕಾಣಿಸಿಕೊಳ್ಳಲು ಈ ಸಂಪರ್ಕ ಅತ್ಯಗತ್ಯ. ನಿಮ್ಮ ಸಾಧನ ಬಳಸಿ ನೀವು ಏನನ್ನೆಲ್ಲ ವೀಕ್ಷಿಸುತ್ತಿದ್ದೀರಿ ಎನ್ನುವ ವಿವರಗಳೂ ಈ ಸಂಪರ್ಕದ ಪರಿಣಾಮವಾಗಿ ಬೇರೆಬೇರೆ ಕಡೆ ಸಂಗ್ರಹವಾಗುತ್ತ ಹೋಗುತ್ತವೆ.
ಈ ಮಾಹಿತಿಯನ್ನು ತಿಳಿದುಕೊಂಡ ಯಾರು ಬೇಕಾದರೂ ನಮ್ಮ ಅಭ್ಯಾಸಗಳ ಬಗ್ಗೆ, ಇಷ್ಟಾನಿಷ್ಟಗಳ ಬಗ್ಗೆ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ, ಈ ಮಾಹಿತಿಯನ್ನು ಬಳಸಿ ನಮ್ಮ ಡಿಜಿಟಲ್ ಚಟುವಟಿಕೆಗಳನ್ನು ಗಮನಿಸಿಕೊಳ್ಳುವುದು, ನಮ್ಮ ಮೇಲೆ ಒಂದು ಕಣ್ಣಿಡುವುದೂ ಸಾಧ್ಯವಾಗುತ್ತದೆ.
ಈ ಪರಿಸ್ಥಿತಿಯನ್ನು ತಪ್ಪಿಸಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಟಾರ್ ಪ್ರಾಜೆಕ್ಟಿನ ಚಟುವಟಿಕೆಗಳಿಗೆ ಪ್ರೇರಣೆ. ಯಾವುದೇ ಜಾಲತಾಣವನ್ನು ತೆರೆಯಲು ಹೊರಟಾಗ ನಮ್ಮ ಮನವಿಯನ್ನು ಒಂದು ಜಾಲದ ಮೂಲಕ ರವಾನಿಸಿ, ಅಲ್ಲಿರುವ ವಿಶಿಷ್ಟ ಘಟಕಗಳ ಪೈಕಿ ಯಾವುದೋ ಒಂದರಿಂದ ಜಾಲತಾಣದ ಸರ್ವರ್‌ಗೆ ಅದನ್ನು ರವಾನಿಸುವ ವಿಶಿಷ್ಟ ತಂತ್ರಜ್ಞಾನವನ್ನು ಅದು ಅಭಿವೃದ್ಧಿಪಡಿಸಿದೆ. ಈ ಮೂಲಕ ನಾವು ಯಾವ ಸಾಧನ ಬಳಸುತ್ತಿದ್ದೇವೆ, ಅಂತರಜಾಲದಲ್ಲಿ ಏನು ಮಾಡುತ್ತಿದ್ದೇವೆ ಎನ್ನುವುದು ಮೂರನೆಯವರಿಗೆ ತಿಳಿಯದಂತೆ ಮಾಡುವುದು ಸಾಧ್ಯವಾಗುತ್ತದೆ.
ನಾವು ಬಳಸುವ ಸಾಧನ ಹಾಗೂ ತೆರೆಯಲು ಹೊರಟ ವೆಬ್‌ಸೈಟಿನ ಸರ್ವರ್ ನಡುವಿನ ಸಂವಹನ ಹಲವು ಪದರಗಳಲ್ಲಿ ನಡೆಯುತ್ತದೆ. ಇಂತಹ ಪ್ರತಿ ಪದರದಲ್ಲೂ ಟಾರ್ ರಿಲೇ ಎಂಬ ಘಟಕಗಳಿರುತ್ತವೆ ಮತ್ತು ಅವು ತಮ್ಮ ಅಕ್ಕಪಕ್ಕದ ಪದರಗಳಲ್ಲಿರುವ ತಮ್ಮಂತಹವೇ ಘಟಕಗಳ ಜೊತೆಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ. ಹೀಗೆ ಪ್ರತಿಬಾರಿ ವಿನಿಮಯ ನಡೆದಾಗಲೂ ಗೂಢಲಿಪಿಕರಣದ (ಎನ್‌ಕ್ರಿಪ್ಷನ್) ಮೂಲಕ ಮಾಹಿತಿಯ ಸುರಕ್ಷತೆಯನ್ನು ಕಾಪಾಡಿಕೊಳ್ಳಲಾಗುತ್ತದೆ.
ಈ ವ್ಯವಸ್ಥೆಯ ಪದರಗಳಿಗೆ ಸಾದೃಶ್ಯ ಹುಡುಕಲು ಹೊರಟಾಗ ನಮಗೆ ಸಿಗುವುದೇ ಈರುಳ್ಳಿ! ಈರುಳ್ಳಿಯಲ್ಲಿರುವಂತಹ ಪದರಗಳ ಮೂಲಕ ಮಾಹಿತಿಯನ್ನು ಕಳಿಸುತ್ತದಲ್ಲ, ಹಾಗಾಗಿಯೇ ಈ ತಂತ್ರಜ್ಞಾನ 'ದಿ ಆನಿಯನ್ ರೌಟರ್' (route = ನಿರ್ದಿಷ್ಟ ಮಾರ್ಗದಲ್ಲಿ ಕಳಿಸುವುದು).
ಈ ತಂತ್ರಜ್ಞಾನವನ್ನು ಎಲ್ಲರೂ ಬಳಸಲು ಸಾಧ್ಯವಾಗಿಸುವ 'ಟಾರ್ ಬ್ರೌಸರ್' ತಂತ್ರಾಂಶ ಈ ಯೋಜನೆಯ ಜಾಲತಾಣದಲ್ಲಿ (torproject.org) ದೊರಕುತ್ತದೆ. ಈ ಬ್ರೌಸರ್ ಮೂಲಕವಷ್ಟೇ ತೆರೆಯಬಹುದಾದ ಜಾಲತಾಣಗಳೂ ಇವೆ. ನಾವೆಲ್ಲ ಬಳಸುವ ಜಾಲತಾಣಗಳ ವಿಳಾಸದಲ್ಲಿ .com, .net, .inಗಳೆಲ್ಲ ಇದ್ದಹಾಗೆ ಈ ತಾಣಗಳ ವಿಳಾಸ .onionನಿಂದ ಕೊನೆಯಾಗುವುದು ವಿಶೇಷ.
ಗೋಪ್ಯತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಸ್ತಿಯೇನೂ ತಲೆಕೆಡಿಸಿಕೊಳ್ಳದ, ಅಂತರಜಾಲದ ಸಾಮಾನ್ಯ ಬಳಕೆದಾರರಾದ ನಮ್ಮನಿಮ್ಮಂತಹವರಿಗೆ ಈ ತಂತ್ರಜ್ಞಾನ ಅಷ್ಟೇನೂ ಮಹತ್ವದ್ದೆನಿಸುವುದಿಲ್ಲ. ಆದರೆ ತಮ್ಮ ಕೆಲಸದ ಗೋಪ್ಯತೆಯನ್ನು ಕಾಪಾಡಿಕೊಳ್ಳಲೇಬೇಕಾದ ಸ್ಥಿತಿಯಲ್ಲಿ ಇರುವವರಿಗೆ ಇದು ಉಪಯುಕ್ತ ಎಂದು ಟಾರ್ ಪ್ರಾಜೆಕ್ಟಿನ ಜಾಲತಾಣ ಹೇಳಿಕೊಳ್ಳುತ್ತದೆ. 'ಅರಬ್ ವಸಂತ'ದಂತಹ ಜನಾಂದೋಲನಗಳಲ್ಲೂ ಇದು ವ್ಯಾಪಕವಾಗಿ ಬಳಕೆಯಾಗಿತ್ತಂತೆ.
ನಮ್ಮ ಚಟುವಟಿಕೆ ಬೇರೆಯವರಿಗೆ ಗೊತ್ತಾಗುವುದಿಲ್ಲ ಎಂದರೆ ಈ ತಂತ್ರಜ್ಞಾನ ಕಾನೂನು ವಿರೋಧಿ ಚಟುವಟಿಕೆಗಳಿಗೂ ಬಳಕೆಯಾಗಬಹುದಲ್ಲ! ಹೌದು, ಅಂತರಜಾಲದ ಕರಾಳ ಜಗತ್ತೆಂದೇ ಕುಖ್ಯಾತವಾದ ಡಾರ್ಕ್ ನೆಟ್‌ನ ಹಲವು ಚಟುವಟಿಕೆಗಳು ಇದನ್ನು ವ್ಯಾಪಕವಾಗಿ ಬಳಸುತ್ತವೆ. ಹಾಗೆಂದು ಯಾರೂ ಖುಷಿಪಡಬೇಕಿಲ್ಲ, ಏಕೆಂದರೆ ಈ ವ್ಯವಸ್ಥೆಯ ಮೇಲೂ ಒಂದು ಕಣ್ಣಿಟ್ಟಿರುವ ಕಾನೂನು ಪಾಲಕರು ಕಾಲಕಾಲಕ್ಕೆ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಮಟ್ಟಹಾಕುತ್ತಲೇ ಇದ್ದಾರೆ. ಆನ್‌ಲೈನ್ ಲೋಕದಲ್ಲಿ ಗೋಪ್ಯತೆಯೆಂಬ ಮರೀಚಿಕೆಯ ಹುಡುಕಾಟ ಇನ್ನೂ ನಡೆದೇ ಇದೆ!
ಡಿಸೆಂಬರ್ ೨೫, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ