ಆನ್‌ಲೈನ್ ವ್ಯವಹಾರಗಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸದಿದ್ದರೆ ನಮ್ಮ ಖಾಸಗಿ ಮಾಹಿತಿ ದುರ್ಬಳಕೆಯಾಗಬಹುದು!
ಆನ್‌ಲೈನ್ ವ್ಯವಹಾರಗಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸದಿದ್ದರೆ ನಮ್ಮ ಖಾಸಗಿ ಮಾಹಿತಿ ದುರ್ಬಳಕೆಯಾಗಬಹುದು! Image by Christoph Meinersmann from Pixabay
ಟೆಕ್‌ ಲೋಕ

ಆನ್‌ಲೈನ್ ಸುರಕ್ಷತೆಗೆ ಐದು ಸೂತ್ರಗಳು

ಟಿ. ಜಿ. ಶ್ರೀನಿಧಿ

ಹಣಕಾಸು ವ್ಯವಹಾರ, ಖಾಸಗಿ ಮಾಹಿತಿಯ ವಿನಿಮಯ ಸೇರಿದಂತೆ ಅದೆಷ್ಟೋ ಕೆಲಸಗಳಿಗೆ ನಾವು ಆನ್‌ಲೈನ್ ಸವಲತ್ತುಗಳನ್ನು ಬಳಸುತ್ತೇವೆ. ಇಂತಹ ವ್ಯವಹಾರಗಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸದಿದ್ದರೆ ನಮ್ಮ ಖಾಸಗಿ ಮಾಹಿತಿ ದುರ್ಬಳಕೆಯಾಗಬಹುದು, ಹಣಕಾಸಿನ ನಷ್ಟವೂ ಆಗಬಹುದು. ಅಂತಹ ಪರಿಸ್ಥಿತಿ ತಪ್ಪಿಸಲು ನಾವು ಏನೆಲ್ಲ ಮಾಡಬಹುದು? ಕೆಲವು ಸರಳ ಸಲಹೆಗಳು ಇಲ್ಲಿವೆ.

ಈ ಸಾಲಿಗೆ ಸೇರಬಲ್ಲ ಇನ್ನೂ ಕೆಲ ಸಲಹೆಗಳು ನಿಮ್ಮಲ್ಲಿದ್ದರೆ ಕಮೆಂಟ್ ಮಾಡುವ ಮೂಲಕ ಅವನ್ನು ನಮ್ಮೊಡನೆ ಹಂಚಿಕೊಳ್ಳಿ!

ಕುತಂತ್ರಾಂಶಗಳಿವೆ ಎಚ್ಚರಿಕೆ!

ನಿಮ್ಮ ಕಂಪ್ಯೂಟರ್ ಹಾಗೂ ಮೊಬೈಲಿನಲ್ಲಿ ಉತ್ತಮ ಆಂಟಿವೈರಸ್ ಹಾಕಿಕೊಳ್ಳಿ

ನಮ್ಮ ಕೆಲಸದಲ್ಲಿ ಸಹಾಯಮಾಡಲು ತಂತ್ರಾಂಶಗಳು (ಸಾಫ್ಟ್‌ವೇರ್) ಇರುವ ಹಾಗೆ ನಮಗೆ ತೊಂದರೆ ಕೊಡುವ ವೈರಸ್, ವರ್ಮ್ ಮುಂತಾದ ಕುತಂತ್ರಾಂಶಗಳು (ಮಾಲ್‌ವೇರ್) ಕೂಡ ಇವೆ. ಇವುಗಳಿಂದ ಪಾರಾಗಲು ನಿಮ್ಮ ಕಂಪ್ಯೂಟರ್ ಹಾಗೂ ಮೊಬೈಲಿನಲ್ಲಿ ಉತ್ತಮ ಆಂಟಿವೈರಸ್ ಹಾಕಿಕೊಳ್ಳಿ. ಯಾರೋ ಹೇಳಿದರೆಂದು ಸಿಕ್ಕಸಿಕ್ಕ ಆಪ್‌ಗಳನ್ನು, ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಬೇಡಿ. ಹಾಗೆಯೇ ಅಪರಿಚಿತರಿಂದ ಬರುವ ಮೆಸೇಜ್ ಅಥವಾ ಇಮೇಲ್‌ನಲ್ಲಿರುವ ಕೊಂಡಿಗಳ ಮೇಲೂ ಕ್ಲಿಕ್ ಮಾಡಬೇಡಿ, ಅದರಿಂದಲೂ ವೈರಸ್ ಬರಬಹುದು!

ನಿಮ್ಮ ಮಾಹಿತಿ ಜೋಪಾನ!

ಆನ್‌ಲೈನ್ ವ್ಯವಹಾರಗಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸದಿದ್ದರೆ ನಮ್ಮ ಖಾಸಗಿ ಮಾಹಿತಿ ದುರ್ಬಳಕೆಯಾಗಬಹುದು, ಹಣಕಾಸಿನ ನಷ್ಟವೂ ಆಗಬಹುದು.

ಬ್ಯಾಂಕು, ಆದಾಯ ತೆರಿಗೆ ಇಲಾಖೆ ಅಥವಾ ಕ್ರೆಡಿಟ್ ಕಾರ್ಡ್ ಸಂಸ್ಥೆಯ ಹೆಸರಿನಲ್ಲಿ ನಕಲಿ ಸಂದೇಶ ಕಳುಹಿಸಿ ನಿಮ್ಮ ಖಾತೆಯ ವಿವರಗಳನ್ನು ಕದಿಯಲು ದುಷ್ಕರ್ಮಿಗಳು ಪ್ರಯತ್ನಿಸುತ್ತಿರುತ್ತಾರೆ. ನಿಮ್ಮ ಪಾಸ್‌ವರ್ಡ್, ಪಿನ್ ಹಾಗೂ ಕಾರ್ಡ್ ವಿವರಗಳನ್ನು ಯಾರಿಗೂ ಕೊಡಬೇಡಿ. ಹಣಕಾಸಿನ ವ್ಯವಹಾರ ದೃಢೀಕರಿಸಲು ಮೊಬೈಲಿಗೆ ಬರುವ ಓಟಿಪಿಯನ್ನು ಬೇರೆ ಯಾರ ಜೊತೆಗೂ ಹಂಚಿಕೊಳ್ಳಬೇಡಿ. ಕೊಂಚವೇ ಸಂಶಯ ಬಂದರೂ ನಿಮ್ಮ ಬ್ಯಾಂಕನ್ನು ನೇರವಾಗಿ ಸಂಪರ್ಕಿಸಿ; ದೂರವಾಣಿ ಸಂಖ್ಯೆ ಬೇಕಿದ್ದರೆ ಅದನ್ನು ಅವರ ಅಧಿಕೃತ ತಾಣದಿಂದಲೇ ಪಡೆದುಕೊಳ್ಳಿ!

ಸಿಮ್ ಕಳ್ಳರಿದ್ದಾರೆ ಹುಷಾರು!

ಗ್ರಾಹಕರ ಸಿಮ್ ಕಾರ್ಡನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುವುದು 'ಸಿಮ್ ಸ್ವಾಪ್' ಹಗರಣದ ಉದ್ದೇಶ

ಗ್ರಾಹಕರನ್ನು ವಂಚಿಸಿ ಅವರ ಸಿಮ್ ಕಾರ್ಡನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುವ 'ಸಿಮ್ ಸ್ವಾಪ್' ಹಗರಣ ಸಾಕಷ್ಟು ವ್ಯಾಪಕವಾಗಿ ನಡೆಯುತ್ತಿದೆ. ಮೊಬೈಲ್ ಸಂಸ್ಥೆಯಿಂದ ಕರೆಮಾಡುತ್ತಿದ್ದೇವೆ, ನಾವು ಹೇಳಿದ ಹಾಗೆ ಎಸ್ಸೆಮ್ಮೆಸ್ ಕಳಿಸದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯವಾಗುತ್ತದೆ ಎಂದೆಲ್ಲ ನಿಮ್ಮನ್ನು ಯಾರಾದರೂ ಹೆದರಿಸಿದರೆ ಅವರನ್ನು ಉಪೇಕ್ಷಿಸಿಬಿಡಿ. ಅದರ ಬದಲು ಅವರು ಹೇಳಿದಂತೆ ಮೆಸೇಜ್ ಕಳಿಸಿದಿರೋ, ನಿಮ್ಮ ಸಿಮ್ ನಿಷ್ಕ್ರಿಯವಾಗುವುದಷ್ಟೇ ಅಲ್ಲ, ಹೊಸ ಸಿಮ್ ಮೂಲಕ ನಮ್ಮ ಖಾತೆಗಳ ನಿಯಂತ್ರಣ ಖದೀಮರ ಕೈಸೇರುವ ಸಾಧ್ಯತೆ ಇರುತ್ತದೆ!

ಶಕ್ತಿಶಾಲಿ ಪಾಸ್‌ವರ್ಡ್ ಬಳಸಿ!

ಬೇರೆಬೇರೆ ಅಕೌಂಟುಗಳಿಗೆ ಬೇರೆಬೇರೆ ಪಾಸ್‌ವರ್ಡುಗಳನ್ನು ಇಟ್ಟುಕೊಳ್ಳಿ

ಬೇರೆಬೇರೆ ಬೀಗಗಳಿಗೆ ಬೇರೆಬೇರೆ ಕೀಲಿಕೈ ಇರುವಂತೆ ನಿಮ್ಮ ಬೇರೆಬೇರೆ ಅಕೌಂಟುಗಳಿಗೆ ಬೇರೆಬೇರೆ ಪಾಸ್‌ವರ್ಡುಗಳನ್ನು ಇಟ್ಟುಕೊಳ್ಳಿ. ಒಂದೊಮ್ಮೆ ಯಾವುದೋ ಒಂದು ಖಾತೆಯ ಪಾಸ್‌ವರ್ಡ್ ಕಳುವಾದರೂ ಇತರ ಖಾತೆಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಹಾಗೆಯೇ, ಸುಲಭವಾಗಿ ಊಹಿಸಬಹುದಾದ ಪದಗಳನ್ನು ಪಾಸ್‌ವರ್ಡ್ ಮಾಡಿಕೊಳ್ಳಬೇಡಿ. ಅಕ್ಷರ, ಅಂಕಿ ಹಾಗೂ ಲೇಖನಚಿಹ್ನೆಗಳನ್ನು ಬಳಸಿ ಸ್ಟ್ರಾಂಗ್ ಆದ ಪಾಸ್‌ವರ್ಡ್ ರೂಪಿಸಿಕೊಳ್ಳಿ. ಪಾಸ್‌ವರ್ಡನ್ನು ಆಗಾಗ್ಗೆ ಬದಲಿಸುತ್ತಿರುವುದೂ ಒಳ್ಳೆಯ ಅಭ್ಯಾಸವೇ!

ವೈ-ಫೈ ಬಗ್ಗೆ ಎಚ್ಚರವಿರಲಿ!

ಮನೆಯ ವೈ-ಫೈ ಸಂಪರ್ಕವನ್ನು ಸದೃಢ ಪಾಸ್‌ವರ್ಡ್ ಮೂಲಕ ಸುರಕ್ಷಿತಗೊಳಿಸಿಕೊಳ್ಳುವುದು ಅತ್ಯಗತ್ಯ

ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಸೌಲಭ್ಯ ಒದಗಿಸುವ ಅಭ್ಯಾಸ ಇದೀಗ ವ್ಯಾಪಕವಾಗುತ್ತಿದೆ. ಇಂತಹ ಸಂಪರ್ಕಗಳನ್ನು ಯಾರುಬೇಕಾದರೂ ಉಪಯೋಗಿಸಬಹುದಾದ್ದರಿಂದ ಅಲ್ಲಿ ಕುತಂತ್ರಿಗಳಿರುವ ಸಾಧ್ಯತೆ ಖಂಡಿತಾ ಇರುತ್ತದೆ. ಹಾಗಾಗಿ ಅಲ್ಲಿ ಹಣಕಾಸು ವ್ಯವಹಾರ, ಖಾಸಗಿ ಮಾಹಿತಿಯ ರವಾನೆ ಮುಂತಾದವನ್ನು ಮಾಡದಿರುವುದು ಒಳ್ಳೆಯದು. ಇನ್ನು ನಮ್ಮ ಮನೆಗಳಲ್ಲಿ ವೈ-ಫೈ ಸಂಪರ್ಕ ಇರುತ್ತದಲ್ಲ, ಅದನ್ನು ಸದೃಢ ಪಾಸ್‌ವರ್ಡ್ ಮೂಲಕ ಸುರಕ್ಷಿತಗೊಳಿಸಿಕೊಳ್ಳುವುದು ಅತ್ಯಗತ್ಯ. ಹಾಗೆಯೇ ಬೇರೆಯವರಿಂದ ಅದರ ದುರುಪಯೋಗ ಆಗದಂತೆ ನೋಡಿಕೊಳ್ಳಲು ನಮ್ಮ ಪಾಸ್‌ವರ್ಡ್ ಅನ್ನು ಜೋಪಾನ ಮಾಡಿಕೊಳ್ಳುವುದೂ ಅನಿವಾರ್ಯ.