ಮಿಂಚುಹುಳಗಳ ಮಿಂಚಿನ ಹಿಂದಿರುವುದು ಒಂದು ರಾಸಾಯನಿಕ ರಹಸ್ಯ! 
ಪ್ರಶ್ನೆ-ಉತ್ತರ

ಮಿಂಚು ಹುಳ ಮಿಂಚುವುದೇಕೆ?

ಮಿಂಚು ಹುಳುಗಳು ಹೇಗೆ ಮಿಂಚುತ್ತವೆ ಎಂಬುದು ಅತ್ಯಂತ ರೋಚಕ.

ವಿನಾಯಕ ಕಾಮತ್

ಯಾವುದೋ ಒಂದು ಸುಂದರ ರಾತ್ರಿ. ಅಕಸ್ಮಾತ್ ಕರೆಂಟ್ ಹೋಗಿ ಬಿಟ್ಟಿದೆ. ಸುಮ್ಮನೆ ಹೊರಗೆ ಬಂದು ನಿಂತರೆ, ಬಗಲಿಗೆ ಎಲ್‌ಇಡಿ ಬಲ್ಬ್ ಕಟ್ಟಿಕೊಂಡಂತೆ ಹುಳಗಳು ಹಾರುತ್ತಿವೆ!

ಮಿಂಚು ಹುಳಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಕವಿಗಳಿಗಂತೂ ಅವು ಸುಲಭವಾಗಿ ಸಿಗುವ ಬೆರಗುಗಳು. ಇತ್ತೀಚಿಗೆ ನಾನು ಸಂಗೀತ ಪ್ರಧಾನವಾದ ಮರಾಠಿ ಚಲನಚಿತ್ರ ಒಂದನ್ನು ನೋಡಿದ್ದೆ. ಅದರಲ್ಲಂತೂ ಹಾಡುಗಾರ ಸಂಗೀತದ ಮೂಲಕವೇ ಮಿಂಚು ಹುಳಗಳ ದೊಂದಿ ತಯಾರಿಸಿಬಿಡುತ್ತಾನೆ. ಒಟ್ಟಿನಲ್ಲಿ ವಿಸ್ಮಯಗಳ ಮೂಟೆಯೇ ಆಗಿರುವ ನಿಸರ್ಗದ ಸುಂದರ ಸೃಷ್ಟಿ ಈ ಮಿಂಚು ಹುಳುಗಳು.

ಈ ಮಿಂಚು ಹುಳುಗಳು 'ಲ್ಯಾಂಪೆರಿಡೇ' ಎಂಬ ಕುಟುಂಬಕ್ಕೆ ಸೇರಿದ ಕೀಟಗಳು. ಹೆಚ್ಚಿನವು ನಿಶಾಚರಿಗಳು. ನಿಶಾಚರಿಗಳಾಗಿರುವುದರಿಂದಲೋ ಏನೋ, ತಮಗೆ ಬೇಕಾದ ಬೆಳಕಿನ ವ್ಯವಸ್ಥೆಯನ್ನು ತಾವೇ ಮಾಡಿಕೊಂಡು ಬಿಟ್ಟಿವೆ. ಆದರೆ ಇವು ಮಿಂಚುವುದು ಬೆಳಕಿಗಾಗಿ ಅಲ್ಲ. ಬದಲಾಗಿ ತಮ್ಮ ಆಹಾರವಾದ ಇತರೆ ಹುಳುಗಳನ್ನು ಆಕರ್ಷಿಸಲು, ಇನ್ನೂ ಮುಖ್ಯವಾಗಿ ತಮ್ಮ ಸಂಗಾತಿಗಳನ್ನು ಆಕರ್ಷಿಸಲು.

ಕೀಟ ಪ್ರಪಂಚದ ವೈವಿಧ್ಯಕ್ಕೆ ಎಣೆಯುಂಟೆ? ಅಂತೆಯೇ ಈ ಮಿಂಚು ಹುಳಗಳಲ್ಲೂ ಹಲವು ವೈಶಿಷ್ಟ್ಯಗಳಿವೆ. ಕೆಲವು ಮಿಂಚು ಹುಳಗಳು ಹಳದಿ ಬಣ್ಣದಲ್ಲಿ ಮಿಂಚಿದರೆ, ಇನ್ನು ಕೆಲವು ತಿಳಿ-ಹಸಿರು ಬಣ್ಣದಲ್ಲಿ ಮಿಂಚುತ್ತವೆ. ಕೆಲವು ತೀಕ್ಷ್ಣವಾಗಿ ಮಿಂಚಿದರೆ (ಹೆಚ್ಚಾಗಿ ಹೆಣ್ಣು ಹುಳುಗಳು) ಇನ್ನು ಕೆಲವು ಮಂದವಾಗಿ ಮಿಂಚುತ್ತವೆ. ಕೆಲವು ವೈವಿಧ್ಯದಲ್ಲಿ ಹೆಣ್ಣುಗಳ ಹಾರಾಟ ಬಲು ಜೋರು. ಆದರೆ ಗಂಡು ಹುಳಗಳದ್ದು ಎಲ್ಲೋ ಅಲ್ಪ ಸ್ವಲ್ಪ ಹಾರಾಟ.

ನಮಗೆ ಬರಿಯ ಮಿಂಚಿನಂತೆ ತೋರುವ ಈ ಬೆಳಕಿನ ರೂಪಿಕೆ, ನಾವಂದುಕೊಂಡಷ್ಟು ಸುಲಭವಲ್ಲ. ಪ್ರತಿಯೊಂದು ಜಾತಿಯ ಮಿಂಚು ಹುಳಗಳೂ ತಮ್ಮದೇ ಆದ ಮಾದರಿಯಲ್ಲಿ ಮಿಂಚುತ್ತವೆ. ಈ ಮಿಂಚುವ ಮಾದರಿಯ ಮೂಲಕವೇ ಗಂಡು-ಹೆಣ್ಣನ್ನು, ಹೆಣ್ಣು-ಗಂಡನ್ನು ಗುರುತಿಸುತ್ತವೆ. ಈ ಮಿಂಚುವ ಮಾದರಿ ಹೊಂದಾಣಿಕೆಯಾದರೆ ಮಾತ್ರ ಮಿಲನ!

ಮಿಂಚು ಹುಳುಗಳು ಹೇಗೆ ಮಿಂಚುತ್ತವೆ ಎಂಬುದು ಅತ್ಯಂತ ರೋಚಕ. ಈ ಮಿಂಚು, ಶಾಖದೊಂದಿಗೆ ಉತ್ಪತ್ತಿಯಾಗುವ ಸಾಮಾನ್ಯ ಬೆಳಕಲ್ಲ. ಬದಲಾಗಿ 'cold luminescence' ಎಂದು ಕರೆಯಲ್ಪಡುವ 'ತಂಬೆಳಕು'. ಈ ಬೆಳಕನ್ನು ಉತ್ಪಾದಿಸಲೆಂದೇ ಈ ಹುಳಗಳ ಕೆಳ ಹೊಟ್ಟೆಯ ಭಾಗದಲ್ಲಿ ವಿಶೇಷ ಅಂಗಾಂಗಗಳಿವೆ. ಇಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯೇ ಅವು ಉತ್ಪಾದಿಸುವ ತಂಬೆಳಕಿನ ಮೂಲ.

ಮಿಂಚು ಹುಳುಗಳು ತಮ್ಮಲ್ಲಿ 'ಲ್ಯುಸಿಫೆರೇಸ್' ಎಂಬ ಕಿಣ್ವವನ್ನು ಉತ್ಪಾದಿಸಬಲ್ಲವು. ಈ ಕಿಣ್ವ ಲ್ಯುಸಿಫೆರಿನ್ ಎಂಬ ರಾಸಾಯನಿಕವನ್ನು 'ಆಕ್ಸಿಲ್ಯುಸಿಫೆರಿನ್' ಎಂಬ ಇನ್ನೊಂದು ರಾಸಾಯನಿಕವಾಗಿ ಬದಲಾಯಿಸಬಲ್ಲದು. ಈ ಕ್ರಿಯೆಯಲ್ಲಿ ಬೆಳಕೂ ಸಹ ಒಂದು ಉತ್ಪನ್ನದಂತೆ ಬಿಡುಗಡೆಗೊಳ್ಳುತ್ತದೆ. ಅದು ಹೇಗೆ ಎಂಬುದನ್ನು ಈ ಕೆಳಗಿನಂತೆ ವಿವರಿಸಬಹುದು.

ಮಿಂಚು ಹುಳುಗಳು ಲ್ಯುಸಿಫೆರಿನ್ ಎಂಬ ರಾಸಾಯನಿಕವನ್ನು ಆಕ್ಸಿಲ್ಯುಸಿಫೆರಿನ್ ಆಗಿ ಬದಲಾಯಿಸುತ್ತದೆ ಎಂದೆನಷ್ಟೇ? ಈಗ ಅದರ ವಿರುದ್ಧ ಪ್ರತಿಕ್ರಿಯೆಯನ್ನು ಪರಿಗಣಿಸೋಣ. ಅಂದರೆ ಆಕ್ಸಿಲ್ಯುಸಿಫೆರಿನ್, ಲ್ಯುಸಿಫೆರಿನ್ ಆಗಿ ಬದಲಾಗುವ ಪ್ರಕ್ರಿಯೆ. ಇದು 'ಪೆರಿಸಾಯಕ್ಲಿಕ್ ಪ್ರಕ್ರಿಯೆ' ಎಂದು ಕರೆಯಲ್ಪಡುವ ವಿಶೇಷ ರಾಸಾಯನಿಕ ಪ್ರಕ್ರಿಯೆ. ಇಂತಹ ಪ್ರಕ್ರಿಯೆಗಳಲ್ಲಿ, ಕೆಲವು ಉತ್ಪನ್ನಗಳನ್ನು ತಯಾರಿಸಲು ಬೆಳಕಿನ ಸಹಾಯ ಬೇಕೇ ಬೇಕು. ಬೆಳಕನ್ನು ಹೀರಿಕೊಂಡ ರಾಸಾಯನಿಕ, ತನ್ನ ಎಲೆಕ್ಟ್ರಾನ್‌ಗಳನ್ನು ಹೆಚ್ಚಿನ ಶಕ್ತಿಯ ಮಟ್ಟಕ್ಕೆ ಕಳುಹಿಸುತ್ತದೆ. ಆಕ್ಸಿಲ್ಯುಸಿಫೆರಿನ್ ಬೆಳಕನ್ನು ಹೀರಿಕೊಂಡು, ಲ್ಯುಸಿಫೆರಿನ್ ಆಗಿ ಬದಲಾಗುವುದೂ ಸಹ ಹೀಗೆಯೇ ನಡೆಯುವ ಒಂದು ಪ್ರಕ್ರಿಯೆ.

ಇಂತಹ ಪ್ರಕ್ರಿಯೆಗಳು ಹಿಮ್ಮುಖವಾಗಿ ನಡೆದರೆ (ಅಂದರೆ, ಮಿಂಚು ಹುಳಗಳಲ್ಲಿ ನಡೆಯುವಂತೆ, ಲ್ಯುಸಿಫೆರಿನ್ ಎಂಬ ರಾಸಾಯನಿಕ ಆಕ್ಸಿಲ್ಯುಸಿಫೆರಿನ್ ಆಗಿ ಬದಲಾದರೆ) ಹೆಚ್ಚಿನ ಶಕ್ತಿ ಮಟ್ಟದಲ್ಲಿರುವ ಎಲೆಕ್ಟ್ರಾನ್ ಪುನಃ ತನ್ನ ಮೊದಲಿನ ಶಕ್ತಿಯ ಮಟ್ಟಕ್ಕೆ ಬರಲೇ ಬೇಕು. ಹೀಗಾಗಬೇಕಾದರೆ, ರಾಸಾಯನಿಕ ಈ ಮೊದಲು ಹೀರಿಕೊಂಡ ಬೆಳಕನ್ನು ಬಿಟ್ಟುಕೊಡಲೇ ಬೇಕು. ಇದು ರಸಾಯನ ವಿಜ್ಞಾನದ ಒಂದು ಸರಳ ಹಾಗೂ ಮೂಲ ತತ್ವ. ಈ ತತ್ವದ ಪ್ರಕಾರ ಲ್ಯುಸಿಫೆರಿನ್, ಆಕ್ಸಿಲ್ಯುಸಿಫೆರಿನ್ ಆಗಿ ಬದಲಾಗುವಾಗ ಆಗುವ ಶಕ್ತಿಯ ವ್ಯತ್ಯಯವನ್ನು, ಬೆಳಕಿನ ಮೂಲಕ ಹೊರ ಹಾಕಲೇ ಬೇಕು. ಇದೇ ಮಿಂಚುಹುಳಗಳ ಮಿಂಚಿನ ಹಿಂದಿರುವ ರಾಸಾಯನಿಕ ರಹಸ್ಯ!